ಬೆಂಗಳೂರು: ಸಮ್ಮಿಶ್ರ ಸರ್ಕಾರ ಕೆಡವಿದ್ದು ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ʻಸರಕಾರ ಕೆಡವಿದ್ದು ಯಾರು ಎಂಬುದರ ಬಗ್ಗೆ ಯಾರು ಮಾತನಾಡಿದ್ದಾರೋ ಅವರನ್ನೇ ಹೋಗಿ ಕೇಳಿ. ಸಮ್ಮಿಶ್ರ ಸರ್ಕಾರ ಪತನ ಮುಗಿದ ಅಧ್ಯಾಯ. ಆ ಬಗ್ಗೆ ಚರ್ಚೆ ಮಾಡಲು ನನಗೆ ಯಾವುದೇ ಆಸಕ್ತಿ ಇಲ್ಲ ಎಂದರು ಹೇಳಿದರು.
ರಾಜ್ಯದ ಜನರ ಸೇವೆ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು, ಜನ ನಮಗೆ ಆಶೀರ್ವಾದ ಮಾಡಬೇಕು ಎಂಬುದರ ಮೇಲಷ್ಟೇ ನಾವು ಆಸಕ್ತಿ ವಹಿಸಿದ್ದೇವೆ ಎಂದರು.
ಡಿಸೈನ್ ಬಾಕ್ಸ್ ಅವರು ಸಹಾಯ ಮಾಡುತ್ತಿದ್ದರು:
ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ನಿರ್ವಹಣೆ ಮಾಡುತ್ತಿದ್ದ ಡಿಸೈನ್ ಬಾಕ್ಸ್ ಕಂಪನಿ ಮೇಲೆ ಇಂದು ಬೆಳಿಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಜೊತೆಗಿನ ಒಪ್ಪಂದವನ್ನು ಈ ಕಂಪನಿ ರದ್ದು ಮಾಡಿಕೊಂಡಿತ್ತು. ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಕಂಪನಿ ಮೇಲೆ ದಾಳಿ ಆಗಿದ್ದು, ಪಂಜಾಬ್, ದೆಹಲಿ, ರಾಜಸ್ಥಾನದಲ್ಲಿರುವ ಕಂಪನಿ ಕಚೇರಿಯಲ್ಲೂ ಶೋಧ ಕಾರ್ಯ ನಡಯುತ್ತಿದೆ.
ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಏಜೆನ್ಸಿ ಡಿಸೈನ್ ಬಾಕ್ಸ್ ಮೇಲೆ ಐಟಿ ದಾಳಿ ನಡೆದಿದೆಯಲ್ಲಾ ಎಂಬ ಮಾಧ್ಯಮದವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು ʻಯಾರು ಹೇಳಿದ್ದು ಅವರು ನನ್ನ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದ್ದಾರೆʼ ಎಂದು ಡಿ ಕೆ ಶಿವಕುಮಾರ್ ಮರುಪ್ರಶ್ನಿಸಿದರು.
ಅವರು ನನಗೆ ಸಹಾಯ ಮಾಡುತ್ತಿದ್ದರು. ಅಲ್ಲಿರುವವರು ವೃತ್ತಿಪರರು. ಅವರು ಐಟಿ ಅಧಿಕಾರಿಗಳಿಗೆ ಯಾವ ಉತ್ತರ ಕೊಡಬೇಕೋ ಕೊಡುತ್ತಾರೆ. ಅವರು ನಿನ್ನೆ ನನ್ನ ಜತೆ ಮಾತನಾಡಲು ಪ್ರಯತ್ನಿಸಿದರು. ಆದರೆ ನನಗೆ ಸಮಯ ಇರದ ಕಾರಣ ಅದು ಸಾಧ್ಯವಾಗಲಿಲ್ಲ. ಐಟಿ ದಾಳಿ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಆಮೇಲೆ ಮಾತನಾಡುತ್ತೇನೆ ಎಂದಷ್ಟೇ ಹೇಳಿದರು.
ಅದನ್ನು ಎದುರಿಸಲು ಸಿದ್ದರಿದ್ದೇವೆ: ಸಂಸದ ಡಿ.ಕೆ. ಸುರೇಶ್
ಕೆಪಿಸಿಸಿ ಸಾಮಾಜಿಕ ಮಾಧ್ಯಮ ಕಚೇರಿ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಸಂಸದ ಡಿ ಕೆ ಸುರೇಶ್ ʻರಾಜಕಾರಣ ಎಂದ ಮೇಲೆ ಅದೆಲ್ಲಾ ಇದ್ದದ್ದೇ, ಅದನ್ನೆಲ್ಲಾ ಎದುರಿಸಲು ಸಿದ್ಧರಿದ್ದೇವೆ. ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಹಾಗೇಯೇ ಈ ಹಿಂದಿನಿಂದಲೂ ಐಟಿ, ಇಡಿ ಗಳ ದಾಳಿ ನಡೆಯುತ್ತಲೇ ಇದೆ. ಈಗಲೂ ನಡೆಯುತ್ತಿದೆ, ಮುಂದೆಯೂ ನಡೆಯಬಹುದು. ಎಲ್ಲೊ ಒಂದುಕಡೆ ಕಾಂಗ್ರೆಸ್ ಮತ್ತು ಡಿಕೆಶಿ ಯವರ ಬೆಳವಣಿಗೆ ಬಿಜೆಪಿಗೆ ಆತಂಕ ಮೂಡಿಸಿರಬಹುದು. ಹೀಗಾಗಿ ಐಟಿ, ಇಡಿ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಹೇಳಿದರು.