ಚಾಮರಾಜನಗರ: ವಸತಿ ಸಚಿವ ವಿ. ಸೋಮಣ್ಣ ಅವರು ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಸಮಸ್ಯೆ ಹೇಳಲು ಬಂದ ವೇಳ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ(ಅಕ್ಟೊಬರ್ 22)ದಂದು 175 ಗ್ರಾಮಸ್ಥರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 3.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಸಚಿವರು ಆಗಮಿಸದಿರುವ ಕಾರಣ ಸಂಜೆ 6.30 ಆದರೂ ಇನ್ನೂ ಆರಂಭವಾಗಿರಲಿಲ್ಲ. ಈ ವೇಳೆ ಸಚಿವರು ಆಗಮಿಸಿದ ಸಂದರ್ಭದಲ್ಲಿ ಮಹಿಳೆ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಸಂಭವಿಸಿತ್ತು. ಇದೇ ವೇಳೆ ಮಹಿಳೆ ಸಚಿವರ ಬಳಿ ತೆರಳಿದ್ದ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಸಚಿವರು, ಮಹಿಳೆಯ ಕಪಾಳಕ್ಕೆ ಬಾರಿಸಿರುವ ಘಟನೆ ನಡೆದಿದೆ.
ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮಹಿಳೆಯು ನಿವೇಶನಕ್ಕಾಗಿ ಕಳೆದ 5 ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಆದರೂ ಆಕೆಗೆ ಹಕ್ಕು ಪತ್ರ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಳು. ಈ ವಿಚಾರವನ್ನು ಸಚಿವರ ಬಳಿಯೇ ನೇರವಾಗಿ ತಿಳಿಸುವ ನಿಟ್ಟಿನಲ್ಲಿ ಮುಂದಾದ ಸಂದರ್ಭದಲ್ಲಿ ಸಚಿವರು ತಾಳ್ಮೆ ಕಳೆದುಕೊಂಡು ಮಹಿಳೆಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಮಹಿಳೆಯು ತನ್ನ ಸಮಸ್ಯೆಗಳ ಬಗ್ಗೆ ಸಚಿವ ಕಾಲಿಗೆ ಬಿದ್ದು ಬೇಡಿಕೊಂಡು ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಮುಂದಾಗಿದ್ದಾರೆ. ಕಾಲಿಗೆ ನಮಸ್ಕರಿಸಲು ಬಂದ ಮಹಿಳೆಯ ವರ್ತನೆಯಿಂದ ಸಚಿವರು ಅಸಮಾಧಾನಗೊಂಡಿದ್ದಾರೆ.
ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಗೂ ತಡವಾಗಿ ಬಂದಿದ್ದ ಸಚಿವರು, ಮುಜುಗರ ಅನುಭವಿಸಿದ್ದರು. ಸೋಮಣ್ಣ ಅವರು ಕಾರ್ಯಕ್ರಮಕ್ಕೆ ಒಂದೂವರೆ ಗಂಟೆ ತಡವಾಗಿ ಆಗಮಿಸಿದ್ದ ಕಾರಣ ಸಚಿವ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ್ದ ರೈತ ಸಂಘದ ಮುಖಂಡರು, ಸಭೆ ಬಹಿಷ್ಕರಿಸಿದ್ದರು.