ಅಪೌಷ್ಠಿಕತೆ ನಿವಾರಣೆಗೆ ಯೋಜನೆ ರೂಪಿಸಿದರೆ ಸಾಲದು-ಅದರ ಸಮರ್ಪಕ ಅನುಷ್ಟಾನದ ಅವಶ್ಯಕತೆ ಬೇಕು

ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನ- ಹೊಸಪೇಟೆ, ವಿಜಯನಗರ

ನಾವು ಕೇವಲ ತಾಯಿ-ಮಗು ಆರೈಕೆಯ ಬಗ್ಗೆ ಅಷ್ಟೇ ಯೋಚಿಸುತ್ತಿಲ್ಲ. ಬದಲಾಗಿ ಈ ದೇಶವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವಲ್ಲಿ ನಮ್ಮ ಕಾರ್ಯ ಅಡಗಿದೆ. ದೇಶದ ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ಯಾವು ಯೋಚಿಸುತ್ತಿದ್ದೇವೆ. ಅಂಗನವಾಡಿ ನೌಕರರು ಇದರ ಭಾಗವಾಗಿ ಕೈಜೋಡಿಸಿ ಶ್ರಮಿಸುತ್ತಿದ್ದಾರೆ ಎಂದು ಅಂಗನವಾಡಿ ನೌಕರರ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎ.ಆರ್‌. ಸಿಂಧು ಹೇಳಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) 8ನೇ ರಾಜ್ಯ ಸಮ್ಮೇಳನವು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಭಾಗವಾಗಿ ಆಯೋಜಿಸಲಾಗಿದ್ದ ಬೃಹತ್‌ ಬಹಿರಂಗ ಸಭೆಯನ್ನು ಉದ್ಘಾಟಿಸಿ ಎ.ಆರ್‌.ಸಿಂಧು ಅವರು ಮಾತನಾಡಿದರು.

ಮಕ್ಕಳ ಮತ್ತು ಮಹಿಳೆಯರಿಗೆ ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಒತ್ತಾಯಿಸಿ ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನವು 2022ರ ಸೆಪ್ಟಂಬರ್‌ 9, 10, 11ರವರೆಗೆ ನಡೆಯುತ್ತಿದೆ.

ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎ.ಆರ್.‌ ಸಿಂಧು ಅವರು, ದೇಶದ ಭವಿಷ್ಯ ರೂಪಿಸುವವರು ನಾವು ಎಂದು ಹೇಳಿಕೊಳ್ಳುವ ರಾಜಕರಣಿಗಳು ಅದನ್ನು ಸಾಧಿಸಲು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ನಮ್ಮ ದೇಶದಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ, ಜಗತ್ತಿನಲ್ಲಿ ಅಪೌಷ್ಟಿಕತೆಯಿಂದಿರುವ ಮಕ್ಕಳಲ್ಲಿ ಭಾರತದಲ್ಲಿಯೇ ಆರ್ಧದಷ್ಟು ಮಕ್ಕಳು ಇದ್ದಾರೆ. ಈ ವಿಷಯವಾಗಿ  ಸರ್ಕಾರ ಕೇವಲ ಯೋಜನೆಗಳನ್ನು ರೂಪಿಸಿದರೆ ಸಾಲದು, ಸರಿಯಾದ ರೀತಿಯಲ್ಲಿ ಅವುಗಳನ್ನು ಅನುಷ್ಟಾನಗೊಳಿಸುವ  ನಿಟ್ಟಿನೆಡೆಗೆ ಕೆಲಸ ನಿರ್ವಹಿಸಬೇಕಾದದ್ದು ಆದ್ಯ ಕರ್ತವ್ಯವಾಗಿದೆ ಎಂದರು.

ಸರ್ಕಾರದ ನೀತಿಗಳು ಅನುಷ್ಠಾನಗೊಳ್ಳುವಲ್ಲಿ ಯಾವ ಮಟ್ಟದಲ್ಲಿ ಹಳ್ಳಕ್ಕೆ ಹಿಡಿದಿದೆ ಎಂದರೆ, ಹಲವು ಯೋಜನೆಗಳು ಜನರಿಗೆ ತಲುಪುವಲ್ಲಿ ವಿಫಲವಾಗುತ್ತಿವೆ. ನಾವು ನಮ್ಮ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ಕೊರೊನಾ ಸಮಯದಲ್ಲಿ ನಾವು ನಮ್ಮ ಜೀವದ ಬಗ್ಗೆ ಚಿಂತೆ ಬಿಟ್ಟು ಜನರ ಒಳಿತಿಗಾಗಿ ಕೆಲಸ ಮಾಡಿದ್ದೇವೆ. ಆದರೆ ಸರ್ಕಾರ ನಮಗೆ ಬೇಕಾದ ಯಾವುದೇ ಸರಿಯಾದ ಸಹಾಯ ಕೂಡ ಮಾಡಲ್ಲಿಲ್ಲ. ನಾವು ಅಂಗನವಾಡಿ ಕಾರ್ಯಕರ್ತೆಯರು ಕೇವಲ ನಮ್ಮ ಹಕ್ಕುಗಳಗಾಗಿ ಅಷ್ಟೇ ಅಲ್ಲದೇ, ಕಾರ್ಮಿಕ ರೈತರ ಹೋರಾಟಗಳಲ್ಲಿಯೂ ಜನರ ಹಕ್ಕುಗಳಿಗಾಗಿಯೂ ಸಹ ಹೋರಾಡಿದ್ದೇವೆ ಎಂದರು.

ದೇಶದ ಎಲ್ಲಾ ಭಾಗಗಳಲ್ಲೂ ನಾವು ಸಮ್ಮೇಳನಗಳನ್ನು ಮಾಡುತ್ತಿದ್ದೇವೆ. ನಮ್ಮ ದೌರ್ಬಬಲ್ಯಗಳೇನು ನಮ್ಮಲ್ಲಿರುವ ತೊಡಕುಗಳೇನು ಚರ್ಚಿಸಿ ಸರಿ ಮಾಡಿಕೋಳ್ಳಬೇಕಿದೆ. 14 ನವೆಂಬರ್ ಮಕ್ಕಳ ದಿನಾಚರಣೆಯಂದು ನಾವು ಸಾಮೂಹಿಕ ಪ್ರತಿಭಟನೆಗೆ ಕರೆ ಕೊಡುತ್ತಿದ್ದೇವೆ. ನಮಗೆ ಕೇವಲ ಭಾಷಣ ಬ್ಯಾಡ ನಮಗೆ ಊಟ ಬೇಕು ಅಂತ ನಾವು ಕೇಳಲಿದ್ದೇವೆ. ಸರ್ಕಾರದ ಬಜೆಟ್ಟು ಮಂಡನೆಯಲ್ಲಿ ನಮ್ಮನ್ನು ನಿರ್ಲಕ್ಷಿಸುತ್ತಿರುವುದನ್ನು ವಿರೋಧಿಸಿ ಭಾರತದ ಎಲ್ಲಾ ಕಡೆಗಳಲ್ಲಿ ಹೋರಾಟಗಳು ನಡೆಯಲಿವೆ. ನಾವು ಅಂಗನವಾಡಿ ಕಾರ್ಮಿಕರು ಭಾಗವಹಿಸುವುದರ ಮೂಲಕ ದೇಶದ ಜನರಲ್ಲಿ ಭರವಸೆ ಮೂಡಿಸಲಿದ್ದೇವೆ ಎಂದರು.

ಸರ್ಕಾರದ ನೌಕರ ವಿರೋಧಿ ನೀತಿಗಳ ವಿರುದ್ಧ ನಡೆಸಲಾಗುತ್ತಿರುವ ಹೋರಾಟಗಳಲ್ಲಿ ಅಂಗನವಡಿ ನೌಕರರೆಲ್ಲರು ಭಾಗವಹಿಸುವ ಮೂಲಕ ಗಟ್ಟಿಗೊಳಿಸಬೇಕೆಂದು ಮನವಿ ಮಾಡಿದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಿನಾಕ್ಷಿಸುಂದರಂ ಮಾತನಾಡಿ, 70 ವರ್ಷಗಳಿಂದ ಇಲ್ಲದ ಬದಲಾವಣೆಗಳನ್ನು ಈಗ ಸರ್ಕಾರ ತರಲು ಪ್ರಯತ್ನಿಸುತ್ತಿದೆ. ತೆರಿಗೆ ಎಲ್ಲರಿಗೂ ಒಂದೇ, ಅದು ಅಧಾನಿಯಾದರು ಮತ್ತು ಅಂಗನವಾಡಿ ಕಾರ್ಯಕರ್ತರಾದರೂ ಕೂಡ. ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಲು, ರಸ್ತೆ ಸರಿ ಮಾಡಲು ಶಾಲಾ ಕಟ್ಟಡಗಳನ್ನು ಸರಿ ಮಾಡಿಸಲು ಸರ್ಕಾರದ ಬಳಿ ದುಡ್ಡಿಲ್ಲ, ಆದರೆ ಕಪ್ಪು ಹಣ ಇಟ್ಟುಕೊಂಡಿರುವವರ ಕೆಲಸಗಳನ್ನು ಮಾಡಿಕೊಡಲು ಅವರ ಬಳಿ ದುಡ್ಡಿದೆ. ಕೇವಲ ದುಡ್ಡು ಇರುವವರು ಮಾತ್ರ ಬದುಕುವಂತ ಸಮಯ ದೇಶದಲ್ಲಿ ಬರಲಿದೆ. ಬಹುಜನರು ಬದುಕನ್ನು ಕಳೆದುಕೊಳ್ಳುವಂತ ಪರಿಸ್ಥಿತಿ ದೇಶದಲ್ಲಿ ನಿರ್ಮಾಣ ಆಗುತ್ತಿದೆ. ಬೆಲೆ ಏರಿಕೆ, ನಿರುದ್ಯೋಗಗಳು ಸರ್ಕಾರದಿಂದಲೇ ಅಗುತ್ತಿದೆ. ಇದೆಲ್ಲವೂ ನಮ್ಮ ಬೇಡಿಕೆಗಳಾಗಿರಬೇಕು ಎಂದು ಹೇಳಿದರು.

ರಾಜ್ಯ ಮುಖಂಡರು, ಗ್ರಾಮ ಪಂಚಾಯತ್‌ ನೌಕರರ ಸಂಘದ ಆರ್‌.ಎಸ್.‌ ಬಸವರಾಜ್‌ ಮಾತನಾಡಿ, ಯಾರು ನಮ್ಮ ಬದುಕನ್ನು ನಾಶ ಮಾಡಿತ್ತಿದ್ದಾರೋ ಅವರಿಗೆ ನಮ್ಮ ಸರ್ಕಾರ ಬೆಂಬಲಿಸುತ್ತಿದೆ. ನಾವು ಹೆಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.

ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಎಸ್.‌ ವರಲಕ್ಷ್ಮಿ ಮಾತನಾಡಿ, ನಮ್ಮ ಮುಂದಿರುವ ಪ್ರಮುಖ ಸವಾಲುಗಳು ಎಂದರೆ, ಅಂಗನವಾಡಿ ನೌಕರರಿಗೆ ಸರಿಯಾದ ಸವಲತ್ತುಗಳು ಸಿಗದಿರುವುದು ಮತ್ತು ಮಾನಸಿಕ ಮತ್ತು ದೈಹಿಕ ಹಿಂಸೆಗಳು ಹೆಚ್ಚಾಗುತ್ತಿವೆ. ಸರ್ಕಾರ ಜನರಿಗಾಗಿ ವೆಚ್ಚ ಮಾಡುತ್ತಿಲ್ಲ. ಬದಲಾಗಿ ಜನರಿಂದ ಕಿತ್ತುಕೊಳ್ಳುತ್ತಿದೆ. ಮುಂದಿನ ಜನಾಂಗದ ಮಕ್ಕಳಿಗಾಗಿ ಅವರ ಒಳಿತಿಗಾಗಿ ಸರ್ಕಾರ ಕೆಲಸ ಮಾಡಬೇಕಿದೆ. ಹೀಗಾಗಿ ಸರ್ಕಾರ ಹೆಚ್ಚಿನ ಹಣವನ್ನು ಈ ನಿಟ್ಟಿನಲ್ಲಿ ಖರ್ಚು ಮಾಡಬೇಕು ಎಂದು ಆಗ್ರಹಿಸಿದರು.

ಮಕ್ಕಳ ರಕ್ಷಣೆಯೇ ನಮ್ಮ ದೇಶದ ರಕ್ಷಣೆಯಾಗಿದೆ. ನಾವು ಬಡಜನಗಳು ನಿಮಗೆ ಭಾರತೀಯರಾಗಿ ಕಾಣಿಸುತ್ತಿಲ್ಲವೆ. ನಾವೇನು ಪಾಕಿಸ್ತಾನದಿಂದ ಬಂದಿದ್ದೇವೆಯೇ, ಸರ್ಕಾರಕ್ಕೆ ಇಂದು ದೇಶದ ಹೆಣ್ಣುಮಕ್ಕಳ ಕಷ್ಟಗಳನ್ನು ಕೇಳಲು ಪುರೊಸೊತ್ತಿಲ್ಲ. ಕೇವಲ ಮರಳು ಮಾತುಗಳನ್ನು ಆಡುವುದು ಮಾತ್ರ ಆಗಿದೆ. ಸುಪ್ರೀಂ ಕೋರ್ಟ್‌ ಕೊಟ್ಟಿರುವ ಆದೇಶವನ್ನು ಸರ್ಕಾರ ಜನವರಿ ಒಳಗೆ ಜಾರಿಗೆ ತರದಿದ್ದರೆ, ನಮ್ಮ ಆಟ ನಾವು ಆಡುತ್ತೇವೆ ನಿಮ್ಮ ಆಟ ನೀವು ಆಡಿಯೆಂದು ಹೇಳಿದರು.

ಸಭೆಯನ್ನು ಉದ್ದೇಶಿಸಿ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಸುನಂದಾ ಹೆಚ್‌.ಎಸ್‌. ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಭಾಸ್ಕರ ರೆಡ್ಡಿ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಮುಖಂಡರಾದ ಜೆ. ಕಮಲ, ಯಮುನಾ ಗಾಂವ್ಕರ್‌, ಸಮ್ಮೇಳನ ಸ್ವಾಗತ ಸಮಿತಿಯ ಕೆ. ನಾಗರತ್ನ, ಸತ್ಯಬಾಬು, ಭಾಸ್ಕರ ರೆಡ್ಡಿ, ಉಮಾದೇವಿ, ಮಲ್ಲಮ್ಮ ಮತ್ತಿತರರ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *