ಸಮಾಜದ ತಾರತಮ್ಯ ವಿರುದ್ಧ ವಿದ್ಯಾರ್ಥಿ ಚಳುವಳಿ ಬಲಿಷ್ಠಗೊಳಿಸಬೇಕು: ನಿತ್ಯಾನಂದ ಸ್ವಾಮಿ

ಹಾವೇರಿ: ನಗರದ ನೌಕರರ ಭವನದಲ್ಲಿ ನಡೆದ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್ಐ) 8ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಅವರು, ವಿದ್ಯಾರ್ಥಿಗಳು ಸಮಸ್ಯೆಗಳ ಪರಿಹಾರಕ್ಕಾಗಿ ಎಸ್ಎಫ್ಐ ಯೊಂದಿಗೆ ಹೋರಾಟ ರೂಪಸಿದಲ್ಲಿ ಮಾತ್ರ ಸರ್ಕಾರಗಳು ನಿಮ್ಮ ಹಕ್ಕುಗಳ ಕುರಿತು ಕಣ್ಣು ತೆರೆದು ನೋಡಲು ಸಾಧ್ಯ ಎಂದರು.

ನಮ್ಮ ಪರಿಶ್ರಮ ಬುದ್ಧಿವಂತಿಕೆಯಿಂದ ಜೀವನವನ್ನು ಬದಲಿಸಿಕೊಳ್ಳಬಹುದು. ಆದರೆ, ಸಮಾಜದಲ್ಲಿರುವ ಅಸಮಾನತೆ ಅನ್ಯಾಯದ ವಿರುದ್ಧ ಎಸ್ಎಫ್ಐ ಸಂಘಟನೆ ಮಾತ್ರ ನಿಜವಾಗಲೂ ನ್ಯಾಯದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುವುದು ಎಂದರು.

ಎಸ್ಎಫ್ಐನ ಶ್ವೇತ ಪತ್ರಿಕೆಯಲ್ಲಿರುವ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದಕ್ಕಾಗಿ ನೀವೆಲ್ಲರೂ ಶ್ರಮಿಸಬೇಕಾಗಿದೆ. ಆ ಮೂಲಕ ಬಡತನ ಹಣೆಬರಹ ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಇದೆ ಎಂದರು.

ಧ್ವಜಾರೋಹಣ ಮಾಡಿ, ಮಾತನಾಡಿದ ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೆಶ ಕಡಗದ, ವಿದ್ಯಾರ್ಥಿಗಳು ಹಕ್ಕುಗಳಿಗಾಗಿ ಆಲೋಚನೆ ಮಾಡಿ, ಯೋಚನೆ ಮಾಡಿ ಹೋರಾಟಕ್ಕೆ ಹೋಗಬೇಕಾಗಿದೆ ಸಮಾಜವನ್ನು ವಿಭಾಗ ಮಾಡುವಂತ ಕೆಲ ವಿಚ್ಛಿದ್ರಿಕಾರಿ ಶಕ್ತಿಗಳಿಂದ ದೂರ ಇರಬೇಕಾಗಿದೆ. ನಮ್ಮ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರ ಪರಿಣಾಮವಾಗಿ ನಾವು ಇಂದು ನೆಮ್ಮದಿಯಿಂದ ಬದುಕಲು, ಜೀವನ ಮಾಡಲು ಸಾಧ್ಯವಾಗಿದೆ.  ಅಂತಹ ಮಹಾನ್‌ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಆದರೆ ಅದನ್ನು ಇಂದು ನೆನಪಿಸಿಕೊಳ್ಳದೆ ರಾಜ್ಯದಲ್ಲಿ, ದೇಶದಲ್ಲಿ ಕೆಲವು ಕೋಮುವಾದಿ ಶಕ್ತಿಗಳು ವಿದ್ಯಾರ್ಥಿಗಳನ್ನು ಜನರನ್ನು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿನ ಜನರನ್ನು ವಿಭಾಗ ಮಾಡಲು ಹೊರಟಿರುವುದನ್ನು ಖಂಡಿಸುತ್ತದೆ ಎಂದರು.

ನಮಗೆ ಡಾ. ಬಿ.ಆರ್ ಅಂಬೇಡ್ಕರ ಬರೆದಿರಿವ ಸಂವಿಧಾನವೇ ಈ ದೇಶದ ಗ್ರಂಥವಾಗಿದೆ. ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ ನಮ್ಮೆಲ್ಲರಿಗೂ ಶಿಕ್ಷಣ ಕನಸಿನ ಮಾತಾಗಿರುತಿತ್ತು. ಏಕೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಪಟೇಲರು, ಗೌಡರು, ಜಮೀನ್ದಾರ ಮಕ್ಕಳಿಗೆ ಮಾತ್ರ ಶಿಕ್ಷಣ ಸಿಗುತ್ತಿತ್ತು. ಉಳಿದವರು ಅವರ ಗುಲಾಮರಾಗಿ ಜೀತದಾಳುಗಳಾಗಿ ಅವರ ಮನೆಯಲ್ಲಿ ಕೆಲಸ ಮಾಡಬೇಕಾಗಿತ್ತು. ಇಂದು ಶಿಕ್ಷಣ ಮೂಲಭೂತ ಹಕ್ಕುಗಳಲ್ಲಿ ಒಂದಾಗಿಲ್ಲದಿದ್ದಿದ್ದರೆ, ಸಂಪೂರ್ಣವಾಗಿ ಹಣವುಳ್ಳವರು ಕೈಯಲ್ಲಿ ಇದ್ದು ಬಡವರು, ದಲಿತರ, ಮಧ್ಯಮ ವರ್ಗದವರು ಕನಸು ನನಸಾಗುತ್ತ ಇರಲಿಲ್ಲ. ಅದಕ್ಕಾಗಿ ಇಂದು ಸಮಾಜದ ಸರ್ವ ಜನಾಂಗದ ವಿದ್ಯಾರ್ಥಿಗಳು ಅಂಬೇಡ್ಕರ, ಸಾವಿತ್ರಿ ಬಾಪುಲೆ ಅವರನ್ನು ನಾವು ನೆನಪು ಮಾಡಿಕೊಳ್ಳಬೇಕಾಗಿದೆ.

ಸರ್ವ ಜನಾಂಗದ ಶಾಂತಿಯ ತೋಟ ಎಂದು ನಮ್ಮ ನಾಡಗೀತೆಯಲ್ಲಿ ದಿನನಿತ್ಯ ಹಾಡುವಂತ ನಾವುಗಳು ಮತ್ತೆ ಸಮಾಜದಲ್ಲಿನ ಕೆಲ ವಿಚ್ಚಿದ್ರಕಾರಿ ಶಕ್ತಿಗಳಿಗೆ ಬಲಿಯಾಗುತ್ತಿದ್ದೇವೆ ಅದನ್ನು ನಾವೆಲ್ಲರು ಅರಿತುಕೊಳ್ಳಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರು, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್, ವಕೀಲರಾದ ನಾರಾಯಣ ಕಾಳೆ ಇತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *