ಪುರುಷೋತ್ತಮ ಬಿಳಿಮಲೆ
ದೇವನೂರು ಮಹಾದೇವರ ಪುಟ್ಟ ಪುಸ್ತಕಕ್ಕೆ ಆರ್ ಎಸ್ ಎಸ್ ಮತ್ತು ಅದರ ಬೆಂಬಲಿಗರು ಬೆಚ್ಚಿ ಬಿದ್ದ ರೀತಿಯನ್ನು ಗಮನಿಸಿದರೆ ಕರ್ನಾಟಕದ ಮಟ್ಟಿಗೆ ಅದರ ಆತ್ಮವಿಶ್ವಾಸ ಕುಸಿದಂತೆ ತೋರುತ್ತದೆ. ಸದಾ ಗುಪ್ತವಾಗಿಯೇ ಕಾರ್ಯ ನಿರ್ವಹಿಸುತ್ತಲೇ, ಶತಮಾನೋತ್ಸವದ ಅಂಚಿಗೆ ಬಂದು ನಿಂತಿರುವ ಸಂಘದ ಬಗ್ಗೆ ಈಗ ಬಹಿರಂಗ ಚರ್ಚೆಗಳು ಆರಂಭವಾಗಿರುವುದರಿಂದ ಅದು ಕಸಿವಿಸಿಗೊಂಡಂತಿದೆ. ಹಲವರು ಸಿಟ್ಟುಗೊಂಡಿದ್ದಾರೆ, ಕೆಲವರು ಅಗತ್ಯವಿಲ್ಲದಿದ್ದರೂ ಹತಾಶರಾಗಿದ್ದಾರೆ.
ಸಮಾಜವು ಮುಂದಕ್ಕೆ ಚಲಿಸುತ್ತಿದ್ದಂತೆ ಜನರನ್ನು ಹಿಂದಕ್ಕೆ ಕೊಂಡೊಯ್ಯುವ ಕೆಲಸವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಕಳೆದ ಒಂಬತ್ತು ದಶಕಗಳಿಂದ ಮಾಡುತ್ತಲೇ ಬರುತ್ತಿದೆ. ನಾವ್ಯಾರೂ ಬದುಕಿರದ ಒಂದು ಕಾಲದ ಬಗ್ಗೆ ಅದಕ್ಕೆ ಅದಮ್ಯ ವ್ಯಾಮೋಹ. ವರ್ತಮಾನದ ಚೌಕಟ್ಟಿನಲ್ಲಿ ಕಲ್ಪಿಸಿಕೊಂಡ ಇತಿಹಾಸ ಮತ್ತು ಕವಿಗಳು ಕಟ್ಟಿದ ಕಾಲಾತೀತ ಪುರಾಣಗಳ ಬಲೆಯಲ್ಲಿ ಸಿಲುಕಿಕೊಂಡ ಅದಕ್ಕೆ ಸಮಕಾಲೀನ ಸಮಾಜದಲ್ಲಿರುವ ಆರ್ಥಿಕ, ಸಾಮಾಜಿಕ, ಲೈಂಗಿಕ ಮತ್ತು ಧಾರ್ಮಿಕ ಅಸಮಾನತೆಗಳು ತಿಳಿಯದೇ ಹೋಗುತ್ತಿದೆ. ಯಾರಾದರೂ ಗೊತ್ತಿದ್ದವರು ಇವುಗಳ ಬಗೆಗೆ ಮಾತಾಡಿದರೆ ಅದು ತನ್ನ ಅಸಹನೆಯನ್ನು ಪ್ರಕಟಪಡಿಸುತ್ತದೆ, ದ್ವೇಷಿಸುತ್ತದೆ ಮಾತ್ರವಲ್ಲ ಅಂತ ಧ್ವನಿಗಳನ್ನು ಮಟ್ಟ ಹಾಕಲೂ ಪ್ರಯತ್ನಿಸುತ್ತದೆ. ನಮ್ಮ ದೇಶದ ದೌರ್ಬಲ್ಯಗಳಾದ ವರ್ಣಾಶ್ರಮ ಪದ್ಧತಿ, ಶ್ರೇಣೀಕೃತ ಜಾತಿವ್ಯವಸ್ಥೆ, ಅಸ್ಪೃಶ್ಯತೆ ಮೊದಲಾದುವುದಗಳ ಬಗ್ಗೆ ಮಾತಾಡುವುದು ದೇಶಕ್ಕೆ ಮಾಡುವ ಅವಮಾನವೆಂದು ಆರ್ ಎಸ್ ಎಸ್ ಸಾಮಾನ್ಯವಾಗಿ ಭಾವಿಸುತ್ತದೆ. ಹಿಂದುತ್ವವನ್ನು ಪ್ರಚುರ ಪಡಿಸುವ ತನ್ನ ಕೆಲಸಗಳನ್ನು ಹೊರತು ಪಡಿಸಿ, ಉಳಿದ ಯಾವುದೇ ಸಾಮಾಜಿಕ ಆಂದೋಲನಗಳನ್ನೂ ಅದು ಒಪ್ಪುವುದಿಲ್ಲ. ಇಂಥ ಕೆಲಸಗಳನ್ನು ಮಾಡಲು ಶ್ರೀ ಮೋಹನ್ ಭಾಗವತ್ ಹೇಳಿದಂತೆ, ಅದಕ್ಕೆ ತನ್ನದೇ ಆದ ಒಂದು ಸೈನ್ಯ ಇದೆ. ಈ ಸೈನ್ಯದ ಸೈನಿಕರು ಯಾರು ಎಂದು ಗುರುತಿಸುವುದು ಈಚಿನ ದಿನಗಳಲ್ಲಿ ಬಹಳ ಸುಲಭ. ವಾಟ್ಸಾಪ್ ಸಂದೇಶ, ಫೇಸ್ಬುಕ್ಕುಗಳಲ್ಲಿ ಬಳಸಲಾಗುತ್ತಿರುವ ಭಾಷೆಯನ್ನು ಗಮನಿಸಿದರೆ ಈ ಹೊಸ ಸೈನಿಕರನ್ನು ಅವರ ಹತ್ಯಾರಗಳ ಸಮೇತ ಪತ್ತೆ ಹಚ್ಚಬಹುದು. ಇವರ ಸೇನಾಧಿಪತಿಗಳು ಹೇಗೆಯೇ ಇರಲಿ, ಇವತ್ತು ಜನರನ್ನು ಮುಟ್ಟುವವರು ಇಂಥವರೇ ಆಗಿರುವುದರಿಂದ ದೇಶದಾದ್ಯಂತ ಆರ್ ಎಸ್ ಎಸ್ ವಿರುದ್ಧ ಜನರು ಸಂಘಟಿತರಾಗುತ್ತಿದ್ದಾರೆ.
ದೇಶಪ್ರೇಮ ಮತ್ತು ಹಿಂದುತ್ವ ಎಂಬ ಭಾವನಾತ್ಮಕ ವಿಷಯವನ್ನು ಮುಂದಿಟ್ಟುಕೊಂಡು 1925ರಿಂದ ತನ್ನ ಸಂಘಟನಾ ಬಲವನ್ನು ಹೆಚ್ಚಿಸಿಕೊಂಡು ಬರುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇವತ್ತ ಲಕ್ಷಾಂತರ ಸದಸ್ಯರನ್ನು ಹೊಂದಿರುವ ಬೃಹತ್ ಸಂಘಟನೆ. ಈ ಸಂಘಟನೆಯಲ್ಲಿ ತಯಾರಾದ ಹಲವರು ಆರ್ ಎಸ್ ಎಸ್ ಧೋರಣೆಯನ್ನು ಪ್ರಶ್ನಾತೀತವಾಗಿ ಅನುಸರಿಸುತ್ತಾ, ಅನೇಕ ಉಪಸಂಸ್ಥೆಗಳನ್ನೂ ಕಟ್ಟಿ ಬೆಳೆಸುತ್ತಿದ್ದಾರೆ. ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ, ಸೇವಾ ಭಾರತಿ, ರಾಷ್ಟ್ರ ಸೇವಿಕಾ ಸಮಿತಿ, ಶಿಕ್ಷಾ ಭಾರತಿ, ಸ್ವದೇಶೀ ಜಾಗರಣ ಮಂಚ್, ಸರಸ್ವತಿ ಶಿಶು ಮಂದಿರ್, ಭಜರಂಗ ದಳ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೊದಲಾದುವು ಕೆಲವು ಉದಾಹರಣೆಗಳು. ಇವುಗಳಲ್ಲಿ ಕೆಲಸ ಮಾಡುವ ಎಲ್ಲರನ್ನೂ ಗಮನಿಸಿದರೆ ಅವರ ಸಂಖ್ಯೆ ಕೆಲವು ಕೋಟಿಗಳನ್ನು ದಾಟಬಹುದು. ಈ ಉಪಸಂಘಟನೆಗಳು ಮಾಡುವ ಕೆಲಸಗಳ ಲಾಭವನ್ನು ಸಂಘ ತಗೆದುಕೊಳ್ಳುತ್ತದೆ. ತೊಂದರೆ ಆದರೆ ಮೌನವಾಗಿ ದೂರ ಸರಿಯುತ್ತದೆ.
ಇಷ್ಟು ಬೃಹತ್ತಾದ ಸಂಘಟನೆಯು ಹಲವಾರು ಆಂತರಿಕ ವೈರುಧ್ಯಗಳೊಂದಿಗೇ ಬೆಳೆಯುತ್ತಾ ಬಂದಿದೆ. ಈ ವೈರುಧ್ಯಗಳನ್ನು ಬಹಿರಂಗವಾಗಿ ಎತ್ತಿ ತೋರಿಸಿದಾಗಲೂ ಕೂಡಾ ಸಂಘವು ಅದಕ್ಕೆ ಸಮಾಧಾನಕರ ಉತ್ತರ ನೀಡಿಲ್ಲ. ಜೊತೆಗೆ ಸಾರ್ವಜನಿಕರ ಜೊತೆಗೆ, ಪತ್ರಕರ್ತರ ಜೊತೆಗೆ ಅದಕ್ಕೆ ಸಂವಾದ ಎಂಬುದಿಲ್ಲ. ಜಾತಿ, ಕೋಮು, ಮಹಿಳೆ, ಭಾಷೆ, ರಾಷ್ಟ್ರೀಯತೆ ಮೊದಲಾದ ವಿಷಯಗಳ ಕುರಿತು ತನ್ನ ಸದಸ್ಯರ ತಿಳಿವಳಿಕೆಗಳನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಯಾವುದೇ ಬೌದ್ಧಿಕ ಸಂಘಟನೆಗಳ ಅತಿ ದೊಡ್ಡ ಜವಾಬ್ದಾರಿ ಎಂಬುದನ್ನು ಆರ್ ಎಸ್ ಎಸ್ ನಂಬುವುದೇ ಇಲ್ಲ.ʼ ನಾವು ಸಂಘಟನೆಯೊಂದರ ಭಾಗವೆಂದು ಹೇಳಿ ಅದರ ಶಿಸ್ತನ್ನು ಒಪ್ಪಿದಾಗ ಜೀವನದಲ್ಲಿ ಆಯ್ಕೆಗಳ ಪ್ರಶ್ನೆ ಇರುವುದಿಲ್ಲ. ಹೇಳಿದಂತೆ ಮಾಡಿ, ಕಬಡ್ಡಿ ಆಡಲು ಹೇಳಿದರೆ ಕಬಡ್ಡಿ ಆಟ, ಸಭೆ ನಡೆಸಬೇಕೆಂದು ಹೇಳಿದರೆ ಸಭೆ ನಡೆಸಿʼ ಎಂಬುದು ಅವರ ಪ್ರಸಿದ್ಧ ಮಾತು. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಬೌದ್ಧಿಕ ಸಂವಾದಗಳನ್ನು ನಾವು ಪ್ರೋತ್ಸಾಹಿಸುತ್ತಿರಬೇಕು. ಆದರೆ ಸಂಘವು ಈ ಕೆಲಸ ಮಾಡದೆ, ತನ್ನದೇ ಆದ ಕೆಲವು ನಿಗದಿತ ಕ್ರಿಯಾ ಯೋಜನೆಗಳೊಂದಿಗೆ ಮುಂದುವರಿಯಬಯಸುತ್ತದೆ. ಪ್ರಾಚೀನ ಭಾರತದಲ್ಲಿ ಬ್ರಾಹ್ಮಣ್ಯ ಮಾಡಿದ್ದನ್ನೇ ಆರ್ ಎಸ್ ಎಸ್ ಇವತ್ತು ಮುಂದುವರಿಸುತ್ತಿದೆ. ಬ್ರಿಟಿಷ್ ಪೂರ್ವ, ಮುಘಲ್ ಪೂರ್ವ ಭಾರತವು ಸುವರ್ಣಯುಗವನ್ನು ಕಂಡಿತ್ತು ಎಂದು ಅದು ನಂಬುತ್ತದೆ. ʼಸುವರ್ಣಯುಗʼ ಯಾರಿಗೆ ಅಂತ ಕೇಳಿದರೆ ಅದು ಉತ್ತರಿಸುವುದಿಲ್ಲ.
ತೋರಿಕೆಗೆ ಇದು ‘ರಾಜಕೀಯೇತರವಾದ ಸಂಘ’. ಆದರೆ ಭಾರತದ ಚುನಾವಣೆಗಳನ್ನು ನಿಯಂತ್ರಿಸಿ, ಪರೋಕ್ಷವಾಗಿ ಅಧಿಕಾರಕ್ಕೆ ಬರಲು ಅದು ಸದಾ ಪ್ರಯತ್ನಿಸುತ್ತಲೇ ಬಂದಿದೆ. ಭಾರತೀಯ ಜನತಾ ಪಕ್ಷವು ಇದರ ರಾಜಕೀಯ ಮುಖವಾದ್ದರಿಂದಲೇ ಶ್ರೀಗಳಾದ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅದ್ವಾನಿ, ಮುರಳೀ ಮನೋಹರ ಜೋಷಿ, ನರೇಂದ್ರ ಮೋದಿ, ರಾಜನಾಥ ಸಿಂಗ್, ನಿತಿನ್ ಗಡ್ಕರಿ ಮೊದಲಾದವರು ಅಧಿಕಾರಕ್ಕೆ ಬಂದಾಗ ಆರ್ ಎಸ್ ಎಸ್ ಸಂಭ್ರಮಿಸುತ್ತದೆ, ಮಾತ್ರವಲ್ಲ ತನ್ನ ಕಾರ್ಯಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳಲು ನಿರ್ಲಜ್ಜವಾಗಿ ಅವರ ಸಹಾಯ ಪಡೆಯುತ್ತದೆ. ರಾಷ್ಟ್ರಪ್ರೇಮ ಎಂಬ ಭಾವನಾತ್ಮಕ ವಿಷಯವನ್ನು ಸಂಘವು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಇದಕ್ಕೆ ‘ಹಿಂದೂ’ ಎಂಬ ಕಲ್ಪಿತ ಪರಿಕಲ್ಪನೆಯನ್ನೂ ಬಲವಾಗಿ ಜೋಡಿಸಲಾಗಿದೆ. ಈಚಿನ ದಿನಗಳಲ್ಲಿ ಅದರೊಂದಿಗೆ ಬಂಡವಾಳವಾದವೂ ಸೇರಿಕೊಂಡು ವಿಚಿತ್ರ ಪರಿಸ್ಥಿತಿಯನ್ನು ನಿರ್ಮಾಣ ಮಾಡಕೊಳ್ಳಲಾಗಿದೆ.
ದೇಶಪ್ರೇಮದ ಗುತ್ತಿಗೆ ಹಿಡಿದಂತೆ ಮಾತಾಡುವ ಅದು ದೇಶದಲ್ಲಿ ವಾಸಿಸುವ ಎಲ್ಲರನ್ನೂ ಸಮಾನವಾಗಿ ಕಾಣಲು ಹಿಂದೇಟು ಹಾಕುತ್ತದೆ. ಈ ಮಣ್ಣಲ್ಲಿಯೇ ಬದುಕುತ್ತಿರುವ ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಅದು ‘ಹೊರಗಿನವರು’ ಎಂದು ಭಾವಿಸುತ್ತದೆ. ‘ಹಿಂದೂಗಳೆಲ್ಲರೂ ಒಂದು’ ಎಂಬ ಘೋಷಣೆ ಕೂಗಿದರೂ ಹಿಂದೂಗಳ ಒಳಗಿನ ಜಾತಿಗಳ ಶ್ರೇಣೀಕರಣವನ್ನು ತೊಡೆದು ಹಾಕಲು ಅದು ಯಾವ ಕಾರ್ಯಕ್ರಮಗಳನ್ನೂ ರೂಪಿಸುವುದಿಲ್ಲ. ಮೇಲಾಗಿ ಬ್ರಾಹ್ಮಣ್ಯದ ಪರಮಾಧಿಕಾರವನ್ನು ಅದು ಎಂದೂ ಪ್ರಶ್ನಿಸಿಲ್ಲ. ಎಲ್ಲ ಭಾರತೀಯರನ್ನೂ ಸಮಾನವಾಗಿ ನೋಡಲು ಕರೆಕೊಡುವ ಸಂವಿಧಾನವನ್ನು ಕೂಡಾ ಸಂಘ ಪರಿವಾರವು ಮನ:ಪೂರ್ತಿಯಾಗಿ ಒಪ್ಪಿಕೊಂಡೇ ಇಲ್ಲ. ’ದೇಸೀ’ ಚಿಂತನೆಗಳ ಬಗ್ಗೆ ಮಾತಾಡುತ್ತಾ ಅದು ವಿದೇಶದ ಕಡೆ ಮುಖ ಮಾಡಿ ನಡೆಯುತ್ತಿರುತ್ತದೆ. ಇತ್ತೀಚಿನ ವರದಿಗಳ ಪ್ರಕಾರ ʼಆತ್ಮನಿರ್ಭರ ಭಾರತʼವು 20 ಕೋಟಿ ತ್ರಿವರ್ಣ ಧ್ವಜಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಿದೆ!
ಮಹಿಳೆಯರ ಬಗೆಗೆ ಸಂಘಕ್ಕೆ ಭಯವಿದೆ. ಸಂಘದ ಸದಸ್ಯರಲ್ಲಿ ಮಹಿಳೆಯರಿಲ್ಲ. ಮಹಿಳಾ ಸಬಲೀಕರಣದ ಕೆಲವು ಯೋಜನೆಗಳನ್ನು ಅದು ರೂಪಿಸಿದೆಯಾದರೂ ಶಬರಿಮಲೆಯಂಥ ವಿಚಾರಗಳು ಬಂದಾಗ ಸಂಘ ಪೂರ್ತಿ ಹಿಂದೆ ಸರಿಯುತ್ತದೆ. ದಲಿತರ ಬಗ್ಗೆಯೂ ಸಂಘಕ್ಕೆ ಅಂತ ಸಹಾನುಭೂತಿ ಏನೂ ಇಲ್ಲವಾದ್ದರಿಂದ ಮೀಸಲಾತಿ ಬಗ್ಗೆ ಆಗಾಗ ಅದು ತನ್ನ ಅಸಹನೆಯನ್ನು ಪ್ರಕಟಿಸುತ್ತಲೇ ಬಂದಿದೆ. ವಿಜ್ಞಾನದ ಬಗೆಗೆ ಆರ್ ಎಸ್ ಎಸ್ ಏನು ಹೇಳುತ್ತದೆ ಎಂದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಅದು ಆಧುನಿಕ ತಂತ್ರಜ್ಞಾನದ ಎಲ್ಲ ಪ್ರಯೋಜನಗಳನ್ನೂ ಪಡೆದುಕೊಂಡು, ಇದೆಲ್ಲವೂ ಪ್ರಾಚೀನ ಭಾರತದಲ್ಲಿ ಇತ್ತು ಎಂದು ಜನರನ್ನು ನಂಬಿಸುತ್ತದೆ.ಇಂಥ ನಂಬುಗೆಗಳು ಎಷ್ಟು ಹಾಸ್ಯಾಸ್ಪದವಾಗಿರುತ್ತವೆ ಎಂಬುದನ್ನು ನಾವು ಹಲವರ ಹೇಳಿಕೆಗಳಲ್ಲಿ ಕಂಡಿದ್ದೇವೆ. ಇಷ್ಟೆಲ್ಲ ವಿರೋಧಾಭಾಸಗಳ ನಡುವೆಯೂ ತನ್ನನ್ನು ಪ್ರಬಲವಾಗಿ ರಕ್ಷಿಸಿಕೊಳ್ಳುವ ತಂತ್ರಗಾರಿಕೆಯನ್ನು ಸಂಘ ಪರಿವಾರವು ಜಾಣ್ಮೆಯಿಂದ ರೂಪಿಸಿಕೊಂಡಿದೆ. ಅದರ ಮೇಲೆ ಯಾವ ಆರೋಪವೂ ಇಲ್ಲ. ಈ ವಿಷಯದಲ್ಲಿ ಅದರ ಕಾರ್ಯತಂತ್ರ ಬಹಳ ಜಾಣ್ಮೆಯಿಂದ ಕೂಡಿದೆ. ಅದರ ಅನೇಕ ಗುಪ್ತ ಕಾರ್ಯಸೂಚಿಗಳು ಬಹಿರಂಗ ಚರ್ಚೆಗೆ ಬರುವುದೇ ಇಲ್ಲ. ಹೀಗಾಗಿ ಅನೇಕರು ಆರ್ ಎಸ್ ಎಸ್ ಬಗ್ಗೆ ಮಾತಾಡಲು, ಬರೆಯಲು ಹೆದರುತ್ತಾರೆ. ಆ ಸಂಘಟನೆಗೆ ಹಣ ಎಲ್ಲಿಂದ ಬರುತ್ತದೆ?, ಅದು ವಿದೇಶೀ ದೇಣಿಗೆ ಸ್ವೀಕರಿಸುತ್ತಿದೆಯೇ? ಪ್ರತಿ ವರ್ಷ ಅದರ ಲೆಕ್ಕ ಪರಿಶೋಧನೆ ನಡೆಯುತ್ತಿದೆಯೇ? ಅದರ ವಾರ್ಷಿಕ ಆರ್ಥಿಕ ವಹಿವಾಟು ಎಷ್ಟು? ಶತಮಾನ ಆಚರಣೆಗೆ ಸಿದ್ಧವಾಗುತ್ತಿರುವ ಸಂಘದಲ್ಲಿ ಒಮ್ಮೆಯೂ ಆರ್ಥಿಕ ಅವ್ಯವಹಾರ ನಡೆದೇ ಇಲ್ಲವೇ? ಇಂಥ ಹಲವು ಪ್ರಶ್ನೆಗಳಿಗೆ ಅತೀತವಾಗಿಯೇ ಸಂಘ ಬೆಳೆದಿದೆ. ಶ್ರೀ ಮೋದಿಯರು ಅಧಿಕಾರಕ್ಕೆ ಬಂದ ಮೇಲೆ ಅನೇಕ ಸರಕಾರೇತರ ಸಂಘ ಸಂಸ್ಥೆಗಳ ಮೇಲೆ ಕಣ್ಣಿಡಲಾಯಿತು. ಇದರಿಂದಲೂ ಸಂಘ ಪಾರಾಯಿತು. ಸಾಮಾನ್ಯವಾಗಿ ಎಲ್ಲದರ ಬಗ್ಗೆಯೂ ಉದಾರವಾಗಿ ಮಾತಾಡುವ ಭಾರತೀಯರು ಸಂಘದ ಬಗ್ಗೆ ಬಹಿರಂಗವಾಗಿ ಮಾತಾಡುವುದಿಲ್ಲ. ಒಂದು ವೇಳೆ ಮಾತಾಡಿದರೂ ಸ್ವರ ತಗ್ಗಿಸಿ ಹೆದರಿಕೊಂಡು ಮಾತಾಡುತ್ತಾರೆ. ಇಂತ ಭಯ ಹುಟ್ಟಿಸುವ ವಾತಾವರಣವನ್ನು ಅದು ಹುಟ್ಟು ಹಾಕಿದ್ದಂತೂ ನಿಜ.
ಆರ್ ಎಸ್ ಎಸ್ ಹಿಂದೂ ಧರ್ಮದ ರಕ್ಷಣೆಗೆ ಬದ್ಧವಾಗಿರುವ ಸಂಘಟನೆಯೆಂದು ದೇಶ ವಿದೇಶಗಳಲ್ಲಿ ಪ್ರಖ್ಯಾತವಾಗಿದೆ. ಅನೇಕರು ಅದನ್ನು ನಂಬಿದ್ದಾರೆ. ಹಿಂದೂ ಧರ್ಮಕ್ಕೆ ಆಧಾರ ಗ್ರಂಥ ಎನ್ನಲಾದ ಋಗ್ವೇದದಲ್ಲಿ ʼಆನೋ ಭದ್ರಾ: ಕೃತವೋ ಯಂತು ವಿಶ್ವತಃ’ (ವಿಶ್ವದೆಲ್ಲೆಡೆಯಿಂದ ಜ್ಞಾನದ ಬೆಳಕು ಹರಿದು ಬರಲಿ) ಎಂಬೊಂದು ಬಹಳ ಉದಾತ್ತವಾದ ಮಾತಿದೆ. ಜ್ಞಾನವು ಅಂತಾರಾಷ್ಟ್ರೀಕರಣ ಹೊಂದುತ್ತಿರುವ ಇಂದಿನ ಜಾಗತಿಕ ಸಂದರ್ಭದಲ್ಲಿ ಆ ಮಾತಿಗೆ ಬಹಳ ಬೆಲೆಯಿದೆ. ಆದರೆ ಹಿಂದೂ ಧರ್ಮದ ಬಗ್ಗೆಯೇ ಸಂಘದಲ್ಲಿ ಮುಕ್ತವಾದ ಓದು, ವಿಚಾರ ವಿನಿಮಯ ನಡೆಯುವುದಿಲ್ಲವೆಂದು ಅದರೊಳಗಿದ್ದು ಹೊರಗೆ ಬಂದವರೆಲ್ಲರೂ ಬರೆದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಉನ್ನತ ಹುದ್ದೆಗೇರಿದ ಹಲವರ ಮಾತುಗಳನ್ನು ಕೇಳುವಾಗ ಆಶ್ಚರ್ಯವಾಗುತ್ತದೆ. ಅದೇನು ಅವರಲ್ಲಿ ಅತ್ಯಾಧುನಿಕ ತಿಳಿವಳಿಕೆ ಇಲ್ಲವೋ ಅಥವಾ ಬೇರೆಯವರನ್ನು ಮೂರ್ಖರನ್ನಾಗಿಸಿಡಲು ಹಾಗೆ ಹೇಳುತ್ತಾರೋ ತಿಳಿಯದು. ಎಷ್ಟೋ ಬಾರಿ ಕೆಲವರ ಹೇಳಿಕೆಗಳು ಮುಜುಗರ ಹುಟ್ಟಿಸುವ ಸಂದರ್ಭ ಬಂದಾಗ ಆರ್ ಎಸ್ ಎಸ್ ತುಂಬ ಜಾಣತನದಿಂದ ನಡೆದುಕೊಳ್ಳುತ್ತದೆ. ಆ ಹೇಳಿಕೆಯಿಂದ ಲಾಭವಾಗುವಂತಿದ್ದರೆ, ಅದು ಸಂಭ್ರಮಿಸುತ್ತದೆ, ಪ್ರತಿಕೂಲವಾಗಿದ್ದರೆ ಮೌನವಾಗಿರುತ್ತದೆ. ಈ ಮಾತುಗಳು ಇನ್ನಷ್ಟು ಸ್ಪಷ್ಟವಾಗಲು ಯಾರಾದರೂ ಆರ್ ಎಸ್ ಎಸ್ ನ ಜಾಲತಾಣಕ್ಕೆ ಭೇಟಿಕೊಡಬೇಕು. ಜಗತ್ತಿನ ಅತಿ ದೊಡ್ಡ ಸಂಘವೊಂದರ ಜಾಲತಾಣದಲ್ಲಿ ವರ್ತಮಾನದ ಜಗತ್ತಿಗೆ ಬೇಕಾದ್ದು ಏನೂ ಇಲ್ಲ. ಅದರ ಕಾರ್ಯಸೂಚಿಯ ಬಗ್ಗೆ ಅಲ್ಲಿ ಮಹತ್ವದ ಮಾತುಗಳೇನೂ ಇಲ್ಲ. ಅಲ್ಲಿಗೆ ಒಮ್ಮೆ ಭೇಟಿಕೊಟ್ಟವರು ಇನ್ನೊಮ್ಮೆ ಭೇಟಿ ನೀಡಲಾರರು. ಇದು ಸಂಘದ ಆಶಯವೂ ಆಗಿರಬೇಕು. ಜನರು ಹೇಳಿದ್ದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ತನ್ನ ಕಾರ್ಯ ಸೂಚಿಯನ್ನು ಜ್ಯಾರಿಗೊಳಿಸುತ್ತ ಹೋಗುವುದು ಅದರ ಮೂಲ ಗುಣ.
ಬೌದ್ದಿಕ್ ಎಂಬ ಪದವನ್ನು ಸಂಘ ಬಳಸುತ್ತದೆ. ಆದರೆ ಅದಕ್ಕಿರುವ ಅರ್ಥ ಬಹಳ ಸೀಮಿತವಾದುದು. ಸಂಘದೊಳಗಿನ ಜ್ಞಾನಕ್ಕೆ ಪ್ರಮುಖರವರು. ನಾವು ಅಮೇರಿಕಾದ ರಾಜಕೀಯದ ಬಗ್ಗೆ ಮಾತಾಡಬಹುದು, ಆದರೆ ಅಮೇರಿಕಾದವರು ನಮ್ಮ ರಾಜಕೀಯದ ಬಗ್ಗೆ ಮಾತಾಡಬಾರದು ಎಂಬ ಸೀಮಿತವಾದ ಬೌದ್ದಿಕತೆಯದು. ಅಥವಾ ಆರ್ ಎಸ್ ಎಸ್ ರಾಮ ಜನ್ಮ ಭೂಮಿಗೆ ಆಂದೋಲನ ನಡೆಸಬಹುದು, ಆದರೆ ರೈತರು ಆಂದೋಲನ ನಡೆಸಬಾರದು ಎಂಬ ಸರ್ವಾಧಿಕಾರೀ ಧೋರಣೆಯ ಬೌದ್ದಿಕತೆಯದು. ಪ್ರಧಾನಿಗಳೇ ಅಸಹನೆಯಿಂದ ʼಆಂದೋಲನ ಜೀವಿಗಳುʼ ಎಂಬ ಪದವನ್ನು ಸಂಸತ್ತಿನಲ್ಲಿಯೇ ಬಳಸಿದರು. ಈ ಮಿತಿಗಳನ್ನು ಮೀರಿ, ಸೀಮಾತೀತವಾದ ಬೌದ್ದಿಕ ಬೆಳವಣಿಗೆ ಅಗಬೇಕಾದ್ದು ಇವತ್ತಿನ ಅಗತ್ಯ. ಅದು ಪ್ರಜಾಪ್ರಭುತ್ವದ ಬೆಳವಣಿಗೆಗೂ ಸಹಾಯ ಮಾಡುತ್ತದೆ. ಆದರೆ ಸಂಘ ಪರಿವಾರಕ್ಕೆ ಪ್ರಜಾಪ್ರಭುತ್ವದಲ್ಲಿ ಅಂಥ ವಿಶ್ವಾಸವಿಲ್ಲವೆಂಬುದನ್ನು ಅದುವೇ ಬೇರೆ ಬೇರೆ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತಾ ಬಂದಿದೆ.
97 ವರ್ಷಗಳ (1925-2022) ಇತಿಹಾಸವಿರುವ ಸಂಘವನ್ನು ಮುನ್ನಡೆಸಿದ ಅದರ ಅಧ್ಯಕ್ಷರ ಸಂಖ್ಯೆ ಕೇವಲ ಏಳು. ಇದರಲ್ಲಿ ಕೆ ಬಿ ಹೆಡ್ಗೆವಾರ್ ಅವರು 14 ವರ್ಷಗಳವರೆಗೂ, ಎಂ ಎಸ್ ಗೋಳ್ವಾಲಕರ್ ಅವರು 33 ವರ್ಷಗಳವರೆಗೂ, ದೇವರಸ್ ಅವರು 20 ವರ್ಷಗಳವರಗೂ ಅಧ್ಯಕ್ಷರಾಗಿದ್ದರು. ಕಳೆದ 12 ವರ್ಷಗಳಿಂದ ಮೋಹನ್ ಭಾಗವತರು ಸಂಘವನ್ನು ಮುನ್ನಡೆಸುತ್ತಿದ್ದಾರೆ. ಇಂಥದ್ದೊಂದು ಸಂಘಟನೆಯಿಂದ ಪ್ರಜಾಪ್ರಭುತ್ವವಾದೀ ನಿಲುವುಗಳನ್ನು ನಿರೀಕ್ಷಿಸುವುದೇ ತಪ್ಪು. ಸಂಘ ಪರಿವಾರದಲ್ಲಿ ತರಬೇತು ಪಡೆದು ಈಗ ಮಂತ್ರಿಗಳಾಗಿರುವ ಹಲವರಿಗೆ ಸಂವಿಧಾನದ ಮೇಲಾಗಲೀ, ಪ್ರಜಾಪ್ರಭುತ್ವವಾದೀ ಪ್ರಕ್ರಿಯೆಗಳ ಬಗೆಗಾಗಲೀ ನಂಬಿಕೆ ಇಲ್ಲದಿರುವುದನ್ನು ನಾವು ಆಗಾಗ ಗಮನಿಸುತ್ತಲೇ ಇದ್ದೇವೆ.
ನಾನು ಆರಂಭದಲ್ಲಿ ಹೇಳಿರುವಂತೆ, ಸಂಘದ ಪರವಾಗಿರುವವರೆಲ್ಲರೂ ಬ್ರಿಟಿಷ್ ಪೂರ್ವದ, ಮತ್ತೂ ಹಿಂದಕ್ಕೆ ಹೋಗಿ, ಇಸ್ಲಾಂ ಆಳ್ವಿಕೆಯ ಪೂರ್ವದ ಭಾರತವನ್ನು ತುಂಬ ಉದಾರವಾಗಿ ನೋಡುತ್ತಾರೆ. ಸಮಾನತೆಯನ್ನು ಸಾರುವ ಆಧುನಿಕ ʼಸಂವಿಧಾನವನ್ನು ಅದು ತೇಪೆ ಹಚ್ಚಿದ ಕೆಲಸʼವೆಂದು ಬಣ್ಣಿಸುತ್ತದೆ, ವರ್ಣಾಶ್ರಮ ಧರ್ಮ ಪ್ರತಿಪಾದನೆಯ ಮೂಲಕ ಬ್ರಾಹ್ಮಣ್ಯವನ್ನು ಎತ್ತಿಹಿಡಿವ ಮನುಸ್ಮೃತಿಯೇ ಹಿಂದೂ ಕಾಯಿದೆ ಎಂದು ಹೇಳುತ್ತದೆ. ಮಾತ್ರವಲ್ಲ ಆದರ ಆಧಾರದ ಮೇಲೆ ಹಿಂದೂ ರಾಷ್ಟ್ರವನ್ನು ಕಟ್ಟ ಬಯಸುತ್ತದೆ, ಒಕ್ಕೂಟ ಸರಕಾರದ ಕಲ್ಪನೆಯನ್ನು ಸಂಘ ನಿರಾಕರಿಸುತ್ತದೆ, ನಾಜಿ ಮತ್ತು ಫ್ಯಾಸಿಸ್ಟ್ ಸಿದ್ಧಾಂತಗಳನ್ನು ಸಂಘವು ಮೆಚ್ಚಿಕೊಳ್ಳುತ್ತದೆ, ಆ ಕಾಲದ ವೈದಿಕ ಕೇಂದ್ರಿತ ಮೌಲ್ಯಗಳನ್ನು ಆಧುನಿಕತೆಗೆ ಒಂದು ಪರಿಹಾರವೆಂದೂ ಅದು ವಾದಿಸುತ್ತದೆ. ವೈದಿಕೇತರ ಸಂಪ್ರದಾಯಗಳಿಗೆ ಅಲ್ಲಿ ಯಾವುದೇ ಜಾಗವಿಲ್ಲ. ಇದ್ದರೂ ಅವನ್ನು ʼಶುದ್ಧʼಗೊಳಿಸಿಯೇ ಒಳಗೊಳ್ಳಲಾಗುತ್ತದೆ. ಜಾತಿ ಪದ್ಧತಿ, ವರ್ಣಾಶ್ರಮ ಧರ್ಮ, ಕರ್ಮ ಸಿದ್ಧಾಂತ, ಅಸಮಾನತೆ ಮೊದಲಾದುವುಗಳನ್ನು ಒಂದಲ್ಲ ಒಂದು ರೀತಿಯಿಂದ ಸಮರ್ಥಿಸುವ ಈ ಜ್ಞಾನ ಸಂಪತ್ತಿನ ಬಗ್ಗೆ ಬಹುತೇಕ ಭಾರತೀಯರಿಗೆ ಏನೂ ತಿಳಿದಿಲ್ಲ. ಸಂಸ್ಕೃತವನ್ನು ದೇವ ಭಾಷೆ ಎಂದು ಘೋಷಿಸಿ ಮನುಷ್ಯರಿಂದ ದೂರ ಇರಿಸಿದ ಈ ಪಾರಂಪರಿಕ ಲೋಕದಲ್ಲಿನ ಬಹುತೇಕ ಅಂಶಗಳು ಇಂದಿನ ಭಾರತಕ್ಕೂ ವಿಶ್ವಕ್ಕೂ ಅನ್ವಯವಾಗುವುದೇ ಇಲ್ಲ. ಸೆಗಣಿಯಲ್ಲಿ ಚಿನ್ನವಿದೆ, ನವಿಲುಗಳು ಕೇವಲ ಕಣ್ಣೀರಿನಿಂದ ಮೊಟ್ಟೆಯಿಡುವ ಸಾಮರ್ಥ್ಯವನ್ನು ಹೊಂದಿವೆ, ಪ್ರಾಚೀನ ಕಾಲದಲ್ಲಿ ಅದಿತ್ತು, ಇದಿತ್ತು, ಎಂದೆಲ್ಲಾ ವಾದಿಸುವ ಕೆಲವು ನಕಲಿ ಪಂಡಿತರುಗಳಿಂದ ಇವತ್ತು ಭಾರತವು ವಿಶ್ವದಾದ್ಯಂತ ನಗೆ ಪಾಟಲಿಗೆ ಗುರಿಯಾಗುತ್ತಿದೆ. ಸಂಘದ ತಳಿವಿಜ್ಞಾನದ ಬಗ್ಗೆ ಆಸಕ್ತರು ಗಮನ ಹರಿಸಬೇಕು. ʼಒಳ್ಳೆಯ ಮಗು ಹುಟ್ಟಬೇಕಾದರೆ ಬೀಜ ಒಳ್ಳೆಯದಿರಬೇಕು” ಎಂದು ವಾದಿಸುವ ಈ ತಳಿವಿಜ್ಞಾನವು ಯಾರನ್ನು ಒಳ್ಳೆಯವರೆಂದು ಭಾವಿಸುತ್ತದೆ ಎಂಬುದನ್ನು ನಾನು ಹೇಳಬೇಕಾಗಿಲ್ಲವಲ್ಲ! ಸಂಘದ ಶ್ರೇಷ್ಠತೆಯ ವ್ಯಸನವು ಗರ್ಭಾಧಾರಣೆಯವರೆಗೆ ವ್ಯಾಪಿಸಿದೆ. ಈ ಅವೈಜ್ಞಾನಿಕ ತಳಿವಿಜ್ಞಾನವನ್ನು ಪೂರ್ವಭಾರತದಲ್ಲಿ ಕೆಲವೆಡೆ ಜ್ಯಾರಿಗೆ ತರುತ್ತಿರುವುದರ ಬಗ್ಗೆ ಪತ್ರಿಕೆಗಳು ವರದಿ ಮಾಡಿವೆ. ‘ನಮ್ಮಲ್ಲಿ ಎಲ್ಲವೂ ಇತ್ತುʼ ಎಂದು ವಾದಿಸುವವರಿಗೆ ನಾನು ಹೇಳುವುದುಂಟು- ʼ ಹೌದು ಎಲ್ಲವೂ ಇತ್ತು, ಮಲ ವಿಸರ್ಜನೆ ಮಾಡಲು ಪಾಯಿಖಾನೆಗಳು ಮಾತ್ರ ಇರಲಿಲ್ಲ. ಅದಕ್ಕಾಗಿ ತಲೆ ಮೇಲೆ ಹೇಲು ಹೊರಲು ಒಂದು ಸಮುದಾಯವನ್ನೇ ನಾವು ಸೃಷ್ಟಿಸಿಕೊಂಡೆವುʼ ಅಂತ. ಇದರರ್ಥ ನಮ್ಮಲ್ಲಿ ಹೆಮ್ಮೆ ಪಡಲು ವಿಷಯಗಳೇ ಇಲ್ಲವೆಂದು ಅರ್ಥವಲ್ಲ. ನಾಚಿಕೆ ಪಟ್ಟುಕೊಳ್ಳಲೂ ಸಾಕಷ್ಟು ವಿಷಯಗಳಿವೆ ಎಂಬುದನ್ನು ಅರಿತುಕೊಳ್ಳಬೇಕು.
ಭಾರತದ ಪಿತೃ ಪ್ರಧಾನ ಕುಟುಂಬ ವ್ಯವಸ್ಥೆ, ಜಾತಿಯ ಶ್ರೇಣೀಕರಣ, ಪಾಳೇಗಾರಿ ಪದ್ಧತಿ , ಇತ್ಯಾದಿಗಳನ್ನು ʼಆದರ್ಶ ಸಮಾಜʼ ಎಂದು ಪರೋಕ್ಷವಾಗಿ ಸಂಘ ಪರಿವಾರ ಕೊಂಡಾಡುತ್ತದೆ. ಇದರ ಜೊತೆಗೆ ʼ ಇಂಥ ಒಳ್ಳೆಯ ಸಮಾಜವು ಮುಸ್ಲಿಮರು ಬಂದ ಮೇಲೆ ಹಾಳಾಯ್ತು ನೋಡಿʼ ಎಂದು ಕೊರಗುತ್ತಾರೆ. ಸಂಘವು ಕಟ್ಟಿಕೊಡುವ ಆ ಕಾಲ್ಪನಿಕ ʼಆದರ್ಶ ಸಮಾಜದಲ್ಲಿ ʼ ಕಾಯಾ, ವಾಚಾ ಮನಸಾ ಶೋ಼ಷಣೆಗೊಳಗಾದವರೂ ಆ ಪ್ರವಚನಗಳನ್ನು ನಂಬುತ್ತಾರೆ. ʼಅಂಥದ್ದೊಂದು ಅದ್ಭುತ ಭಾರತವನ್ನು ಹಾಳು ಮಾಡಿದ ಮುಸ್ಲಿಮರನ್ನು ಓಡಿಸಿದರೆ ಮಾತ್ರ ನಮಗೆ ಒಳ್ಳೆಯದಾಗುತ್ತದೆʼ ಎಂದು ನಂಬಿ ಅವರು ಕೆಲಸ ಸುರು ಮಾಡುತ್ತಾರೆ. ಹೀಗೆ ಮಾಡುವುದರ ಮೂಲಕ ಬ್ರಾಹ್ಮಣ್ಯದ ಮರು ಸ್ಥಾಪನೆ ಸಾಧ್ಯವಾಗಿದೆ. ಕುತೂಹಲದ ಸಂಗತಿಯೆಂದರೆ ಇವತ್ತು ಅದನ್ನು ಸ್ಥಾಪನೆ ಮಾಡುವವರು ಬ್ರಾಹ್ಮಣರಿಗಿಂತಲೂ ಹೆಚ್ಚಾಗಿ ಅಬ್ರಾಹ್ಮಣರು.
ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಹೊರತು ಪಡಿಸಿ ಉಳಿದವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿ ಆರ್ ಎಸ್ ಎಸ್ ಬಹಳ ಪ್ರಗತಿ ಸಾಧಿಸಿದೆ. ಮೂಲತ: ಹಿಂದೂ ಧರ್ಮಕ್ಕೆ ವಿರೋಧವಾಗಿದ್ದ ಅನೇಕ ಸಮುದಾಯಗಳನ್ನೂ ಅದು ತನ್ನ ವಶಕ್ಕೆ ತೆಗೆದುಕೊಂಡಿದೆ. ಇವತ್ತು ಹಿಂದುಗಳ ಕಣ್ಮಣಿಯಾಗಿರುವ ಯೋಗಿ ಆದಿತ್ಯನಾಥರು ಪ್ರತಿನಿಧಿಸುತ್ತಿರುವ ನಾಥ ಪರಂಪರೆಯು ಹಿಂದೂ-ಮುಸ್ಲಿಮರ ನಡುವಣ ವ್ಯತ್ಯಾಸಗಳನ್ನು ಒಂದು ಕಾಲಕ್ಕೆ ಅಳಿಸಿಹಾಕಿತ್ತು-
`ಹಿಂದುಗಳು ಧ್ಯಾನಿಸುತ್ತಾರೆ ಮಂದಿರದಲಿ
ಮುಸ್ಲಿಮರು ಮಸೀದಿಯಲಿ
ಆದರೆ ಯೋಗಿಯ ಧ್ಯಾನದಲ್ಲಿ
ಮಂದಿರವೂ ಇಲ್ಲ, ಮಸೀದಿಯೂ ಇಲ್ಲʼ
ಎಂಬುದು ಗೋರಖನಾಥ ಪರಂಪರೆಯ ಪ್ರಸಿದ್ಧ ಮಾತು. ಇಂಥ ಪರಂಪರೆಗೆ ಸೇರಿದ ಆದಿತ್ಯನಾಥರು ಹೇಗೆ ಅಧಿಕಾರಕ್ಕೆ ಬಂದರು ಎಂದು ನಾನು ಹೇಳಬೇಕಾಗಿಲ್ಲವಲ್ಲ!
ಈಚೆಗೆ 2011ರ ಜನಗಣತಿ ಪ್ರಕಟವಾಗಿದೆ. ಅದರಲ್ಲಿ ಉಲ್ಲೇಖಿತವಾದ ಪ್ರಕಾರ ಭಾರತ ದೇಶದಲ್ಲಿ 125 ಕೋಟಿಗೂ ಹೆಚ್ಚು ಜನರಿದ್ದಾರೆ. 19569 ಮಾತೃ ಭಾಷೆಗಳಿವೆ. 4635 ಭಿನ್ನ ಭಿನ್ನ ಸಮುದಾಯಗಳಿವೆ. ಈ ದೇಶದಲ್ಲಿ ನೂರಾರು ಬಗೆಯ ಧರ್ಮಗಳಿವೆ. ಲಕ್ಷಾಂತರ ರೀತಿಯ ಆಚರಣೆಗಳಿವೆ. ಇಲ್ಲಿರುವ ದೇವರುಗಳ ಸಂಖ್ಯೆಯನ್ನು ಲೆಕ್ಕ ಹಾಕಿದವರಿಲ್ಲ. ಇವೆಲ್ಲವನ್ನೂ ʼಹಿಂದೂʼ ಎಂದು ಕರೆಯಬಯಸುವ ಅರ್ ಎಸ್ ಎಸ್ ಗೆ ಈ ಸಂಸ್ಕೃತಿಗಳ ಬಗ್ಗೆ ಯಾವ ತಿಳಿವಳಿಕೆಯೂ ಇಲ್ಲದ್ದರಿಂದ ಅನೇಕ ಅನಾಹುತಗಳು ಸಂಭವಿಸಲಾರಂಭಿಸಿವೆ.
ಅಂಬೇಡ್ಕರರಷ್ಟು ಓದಿಕೊಂಡ ಇನ್ನೊಬ್ಬ ಭಾರತೀಯ ವಿದ್ವಾಂಸ 20ನೇ ಶತಮಾನದಲ್ಲಿ ಕಾಣಸಿಗುವುದಿಲ್ಲ. ಅವರ ನೇತೃತ್ವದಲ್ಲಿ ತಯಾರಾದ ಸಂವಿಧಾನವು ಇಲ್ಲಿನ ಪಾರಂಪರಿಕ ರಾಜತ್ವ, ಧಾರ್ಮಿಕತೆ, ಬ್ರಾಹ್ಮಣ್ಯ, ಜಾತೀಯತೆ ಮೊದಲಾದ ಹಂಗುಗಳಿಂದ ನಮ್ಮನ್ನು ಬಿಡಿಸಿ, ನಮಗೆ ದೇಶದ ಪೌರತ್ವವನ್ನು ಮೊದಲಬಾರಿಗೆ ಒದಗಿಸಿಕೊಟ್ಟಿದೆ. ಅನೇಕ ಹುಸಿ ಮಾತುಗಳಿಂದ ನಮ್ಮನ್ನು ಬಿಡಿಸಿ, ನಾವೆಲ್ಲರೂ ಖಂಡಿತವಾಗಿಯೂ ನಂಬಬಹುದಾದ ಒಂದು ಆಶ್ವಾಸನೆಯನ್ನು ನೀಡಿದೆ. ಕೋಟ್ಯಂತರ ಭಾರತೀಯರ ಬದುಕಿಗೊಂದು ಭದ್ರತೆಯನ್ನೂ ನೀಡಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳು ಗಗನ ಕುಸುಮಗಳಾಗಿದ್ದ ಭಾರತದಲ್ಲಿ ಎಲ್ಲವರ ಘನತೆಯನ್ನು ಸಮಾನವಾಗಿ ಎತ್ತಿ ಹಿಡಿದದ್ದು ಸಂವಿಧಾನ. ಅದಕ್ಕೆ ಎಲ್ಲರನ್ನೂ ರಕ್ಷಿಸುವ ಹೊಣೆಗಾರಿಕೆಯಿದೆ. ಸಂವಿಧಾನವನ್ನು ಮಾನ್ಯ ಮಾಡುವುದರಿಂದ ಮಾತ್ರ ಬಲಿಷ್ಠ ಭಾರತವನ್ನು ಕಟ್ಟಲು ಸಾಧ್ಯವಾದೀತೇ ವಿನಾ ಆರ್ ಎಸ್ ಎಸ್ ಮಾಡುವ ಪ್ರವಚನಗಳಿಂದ ಅಲ್ಲ ಎಂದು ನಾನು ಗಟ್ಟಿಯಾಗಿ ನಂಬಿದ್ದೇನೆ.