ಸಾರ್ವಜನಿಕ ಆಸ್ತಿಗಳ ಮಾರಾಟ; ರಾಜ್ಯ ಸರ್ಕಾರದ ಕ್ರಮಕ್ಕೆ ಸಿಪಿಐ(ಎಂ) ಖಂಡನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮತ್ತು ನಗದೀಕರಣ ಯೋಜನೆ ಮೂಲಕ ಬೆಂಗಳೂರು ಸುತ್ತಲಿನ ಭೂಮಿ ಮತ್ತು ಬಿ.ಡಿ.ಎ ಕಾಂಪ್ಲೆಕ್ಸ್ಗಳು, ಮುಂತಾದ  ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಿಸಲು ಮುಂದಾಗಿರುವ ಕ್ರಮವನ್ನು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳು ತೀವ್ರವಾಗಿ ಖಂಡಿಸಿವೆ.

ಈ ಕುರಿತು ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಎನ್ ಮಂಜುನಾಥ್, ಎನ್. ಪ್ರತಾಪ್ ಸಿಂಹ ಜಂಟಿ ಹೇಳಿಕೆ ನೀಡಿದ್ದು,  ಮೋದಿ ಸರ್ಕಾರ ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಯೋಜನೆ ಮೂಲಕ ದೇಶದ ಸಂಪತ್ತಾದ  ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ಕಂಪನಿಗೆ ಆರುಕಾಸು ಮೂರುಕಾಸಿಗೆ ಮಾರಾಟ ಮಾಡಿ ಸಾವಿರಾರು ಕೋಟಿ ರೂಗಳ ಎಲೆಕ್ಟ್ರೋಲ್ ಬಾಂಡ್‌ನ್ನು ಬಿಜೆಪಿ ಪಡೆದು ಬಾರಿ ಭ್ರಷ್ಟಾಚಾರ ನಡೆಸಿರುವುದು ಬಯಲಾಗಿತ್ತು. ದೇಶದ ಜನತೆ ಲೋಕಸಭಾ ಚುನಾವಣೆಯಲ್ಲಿ ಇದರ ವಿರುದ್ಧ ತೀರ್ಪು ನೀಡಿ ಬಿಜೆಪಿ ಗೆ ಬಹುಮತ ಸಿಗದಂತೆ ಮಾಡಿದ್ದಾರೆ.

ಇದೇ ಹಾದಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರೆಂಟಿ ಯೋಜನೆಗಳ ಅನುಷ್ಟಾನಕ್ಕೆ ಹಣಕಾಸಿನ ಸಂಪನ್ಮೂಲ ಕ್ರೂಡೀಕರಿಸಲು ಕಾರ್ಪೊರೇಟ್ ತೆರಿಗೆ ವಿಧಿಸುವ ಬದಲಾಗಿ ಕಳೆದ ಬಜೆಟ್ ನಲ್ಲಿ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡಿ ಹಣಗಳಿಸಲು ಪಿಪಿಪಿ ಮತ್ತು ನಗದೀಕರಣ ಯೋಜನೆ ಯನ್ನು ಪ್ರಕಟಿಸಿತ್ತು. ಚುನಾವಣೆ ನಂತರ ಇದರ ಜಾರಿಗೆ ಮುಂದಾಗಿದ್ದು, ಮೊದಲ ಹೆಜ್ಜೆಯಾಗಿ ಬೆಂಗಳೂರಿನ ಬಿ.ಡಿ.ಎ. ಕಾಂಪ್ಲೆಕ್ಸ್ಗಳನ್ನು ಮತ್ತು ಬೆಂಗಳೂರು ಸುತ್ತಲಿನ ಸರ್ಕಾರಿ ಭೂಮಿಯನ್ನು ಖಾಸಗೀ ಲೂಟಿಗೆ ಅವಕಾಶ ನೀಡಲು ಮುಂದಾಗಿರುವುದು ಜನ ವಿರೋಧಿ ನಡೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕೆಲವು ಅಧಿಕಾರಿಗಳನ್ನು ಅನ್‌ಫಿಟ್‌ ಎಂದ ಸಿಎಂ ಸಿದ್ದರಾಮಯ್ಯ

ಈಗಾಗಲೇ ಬೆಂಗಳೂರಿನ ಪ್ರತಿಷ್ಟಿತ ಕೋರಮಂಗಲ, ಹೆಚ್.ಎಸ್.ಆರ್.ಲೇಔಟ್, ಆಸ್ಟಿನ್ ಟೌನ್, ಇಂದಿರಾನಗರ, ಆರ್.ಟಿ.ನಗರ, ವಿಜಯನಗರ, ಸದಾಶಿವನಗರ ಬಡಾವಣೆಗಳ  ಬಿ.ಡಿ.ಯ. ಕಾಂಪ್ಲೆಕ್ಸ್ ಗಳನ್ನು ಪುನರ್ ನಿರ್ಮಾಣ ಮತ್ತು ನಿರ್ವಹಣೆಗೆ ಪಿಪಿಪಿ ಯೋಜನೆಯಡಿ ‘ಎಂ-ಫಾರ್ ಡೆವಲಪರ್ಸ್ ಪ್ರೈ.ಲಿ’ ಗೆ ನೀಡಿದೆ. ಇದು ಹಿಂದಿನ ಬಿಜೆಪಿ ಸರ್ಕಾರದ ತೀರ್ಮಾನವೇ ಆಗಿದೆ. ಬೆಂಗಳೂರು ನಗರ ಮತ್ತು ಸುತ್ತಲಿನ 25 ಸಾವಿರ ಎಕರೆ ಭೂಮಿಯಲ್ಲಿ ಬಡವರಿಗೆ ವಸತಿ ಕಲ್ಪಿಸುವ ಬದಲಾಗಿ ಈ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿ ನಗದೀಕರಿಸಲು ರಾಜ್ಯದ ಸಿದ್ದರಾಮಯ್ಯ ಸರ್ಕಾರ  ಮುಂದಾಗಿರುವುದು ಜನತೆಯ ವಿಶ್ವಾಸಕ್ಕೆ ಬಗೆದ ದ್ರೋಹವಾಗಿದೆ.

ರಾಜ್ಯದಲ್ಲಿ ವರಮಾನ ಸಂಗ್ರಹ ಹೆಚ್ಚಳಕ್ಕಿರುವ ಅವಕಾಶಗಳ ಕುರಿತು ಹಣಕಾಸು ಇಲಾಖೆಗೆ ಸಲಹೆ ನೀಡಲು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಕಂಪನಿಯನ್ನು ನೇಮಿಸಿಕೊಂಡಿರುವುದು ಸರ್ಕಾರವನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳ ನಿಯಂತ್ರಣಕ್ಕೆ ವಹಿಸುವ ಕ್ರಮವಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಸಾರ್ವಜನಿಕ ಆಸ್ತಿಗಳನ್ನು ಪಿಪಿಪಿ ಮತ್ತು ನಗದೀಕರಣ ಯೋಜನೆ ಯಡಿ ಮಾರಾಟ ಮಾಡುವ ಕ್ರಮವನ್ನು  ಕೂಡಲೇ  ಕೈಬಿಡಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.

ಇದನ್ನೂ ನೋಡಿ: ಲೋಕಮತ 2024 | ಪಶ್ಚಿಮ ರಾಜ್ಯಗಳಲ್ಲೂ ಬಿಜೆಪಿಗೆ ಹಿನ್ನಡೆ Janashakthi Media

Donate Janashakthi Media

Leave a Reply

Your email address will not be published. Required fields are marked *