ಚಂದ್ರಯಾನ ಯೋಜನೆಯನ್ನು ಸಾಧ್ಯಗೊಳಿಸಿದ ಹೆಚ್‍ಇಸಿ ನೌಕರರಿಗೆ ಬಾಕಿಗಳ ಪಾವತಿ ಮತ್ತು ಇಸ್ರೋ ಸಿಬ್ಬಂದಿಯ ಬಡ್ತಿ ತಕ್ಷಣವೇ ಆಗಬೇಕು

ಕೇಂದ್ರ ಸರಕಾರಕ್ಕೆ ಕೇಂದ್ರ ಕಾರ್ಮಿಕ ಸಂಘಟನೆಗಳ ಆಗ್ರಹ

ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ವಲಯವಾರು  ಒಕ್ಕೂಟಗಳು ಸಂಘಗಳ ವೇದಿಕೆಯು ಚಂದ್ರಯಾನ-3 ಅನ್ನು ಸಾಧ್ಯವಾಗಿಸಿದ ಎಂಜಿನಿಯರ್‌ಗಳು, ವಿಜ್ಞಾನಿಗಳು, ಸಂವಹನ ತಜ್ಞರು ಮುಂತಾದವರ ತಂಡವನ್ನು ಅಭಿವಂದಿಸುತ್ತ,  ಎದೆಗುಂದದ  ಅವರ ಕೆಲಸವು ಭಾರತಕ್ಕೆ ಅನೇಕ ಕ್ಷೇತ್ರಗಳಲ್ಲಿ ಮುನ್ನುಗ್ಗಲು ಅಸಂಖ್ಯಾತ ಸಾಧ್ಯತೆಗಳನ್ನು ತೆರೆದು ಕೊಟ್ಟಿದೆ ಎಂದು ಹೇಳಿದೆ.

ಆದರೆ, ಚಂದ್ರಯಾನ-3 ರ ಕಥೆಯು ತೆರೆದುಕೊಳ್ಳುತ್ತಿದ್ದಂತೆ, ಈ ಯೋಜನೆಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡಿದವರ ಹೃದಯ ವಿದ್ರಾವಕ ಕಥೆಗಳು  ಹೊರಬರುತ್ತಿವೆ ಎಂದು ವೇದಿಕೆ ಖೇದ ವ್ಯಕ್ತಪಡಿಸಿದೆ.  

ಚಂದ್ರಯಾನ-3 ರ ಮೊಬೈಲ್ ಉಡಾವಣಾ ಪ್ಯಾಡ್ ಮತ್ತು ಇತರ ಪ್ರಮುಖ ಉಪಕರಣಗಳನ್ನು ವಿನ್ಯಾಸಗೊಳಿಸಿದ ಮತ್ತು ತಯಾರಿಸಿಕೊಟ್ಟ ಝಾರ್ಖಂಡ್‌ನ ರಾಂಚಿಯಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆ ‘‘ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್‘

(ಎಚ್‌ಇಸಿ)ಸಾವಿರಾರು ಇಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೆ ಕಳೆದ 17 ತಿಂಗಳಿಂದ ಹಣ ಪಾವತಿಯಾಗಿಲ್ಲ ಇಸ್ರೋ  ವಿಜ್ಞಾನಿಗಳು  ಮತ್ತು  ಎಂಜಿನಿಯರ್‌ಗಳು ಯಾವುದೇ ಬಡ್ತಿಗಳಿಲ್ಲದೆ  ಕೆಲಸ ಮಾಡಿದ್ದಾರೆ! 

ಚಂದ್ರಯಾನ-3 ಯೋಜನೆಗೆ ನಿರ್ಣಾಯಕವಾದ ಸಂಪರ್ಕ ವ್ಯವಸ್ಥೆಯನ್ನು  ಮತ್ತೊಂದು ಸಾರ್ವಜನಿಕ ವಲಯದ ಉದ್ದಿಮೆಯಾದ ಬಿಎಸ್‍ಎನ್‍ಎಲ್‍   ಏಕಾಂಗಿಯಾಗಿ ನಿರ್ವಹಿಸಿದೆ.  ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಇದರ ಕತ್ತು ಹಿಸುಕುತ್ತಿದೆ ಎಂಬುದು ಗಮನಾರ್ಹ.

ಪ್ರಧಾನಿಗಳು ಸತ್ಯ ಒಪ್ಪಿಕೊಳ್ಳುತ್ತಾರೆಯೇ?

ಇಡೀ ಯೋಜನೆಯನ್ನುಸಾರ್ವಜನಿಕ ವಲಯದ ಉದ್ದಿಮೆಗಳೇ  ನಿರ್ವಹಿಸಿವೆ ಎಂಬುದರಲ್ಲಿ  ಆಶ್ಚರ್ಯವೇನಿಲ್ಲ ಎಂದು ಕಾರ್ಮಿಕ ಸಂಘಗಳ ವೇದಿಕೆ ಹೇಳಿದೆ. ವಾಸ್ತವವಾಗಿ, ಭಾರತ ಬ್ರಿಟಿಷ್‍ ಆಳ್ವಿಕೆಯಿಂದ ಸ್ವತಂತ್ರಗೊಂಡಾಗ, ಉದ್ದಿಮೆಗಳು ಫಲ ನೀಡಲು ದೀರ್ಘಕಾಲ ಕಾಯಬೇಕಾದ ಕ್ಷೇತ್ರಗಳಲ್ಲಿ ಖಾಸಗಿ ವಲಯವು ಹೂಡಿಕೆ ಮಾಡಲು ಸಿದ್ಧವಾಗಲಿಲ್ಲ. ಏಕೆಂದರೆ  ಅದಕ್ಕೆ ತ್ವರಿತ ಲಾಭಗಳು ಬೇಕು. ಆ ಕಾರಣಕ್ಕಾಗಿಯೇ ಭಾರತದಲ್ಲಿ ಸಾರ್ವಜನಿಕ ವಲಯ  ಹುಟ್ಟಿಕೊಂಡದ್ದು, ಅಂತಹ  ಉದ್ದಿಮೆಗಳು ಸಾರ್ವಜನಿಕ ವಲಯದಲ್ಲಿ  ಸ್ಥಾಪಿಸಲ್ಪಟ್ಟವು ಎಂದು ಈ ಸಂದರ್ಭದಲ್ಲಿ ಕಾರ್ಮಿಕ ಸಂಘಗಳ ವೇದಿಕೆ ನೆನಪಿಸಿದೆ.

ಎಚ್ಇಸಿ ನೌಕರರ ಕಥೆಯು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕಥೆಯನ್ನು ನೆನಪಿಗೆ ತರುತ್ತದೆ, ಅವರು ‘ಮುಂಚೂಣಿಯ ಯುದ್ಧವೀರರು” ಎಂಬ ಪ್ರಶಂಸೆಯನ್ನೇನೋ ಗಳಿಸಿದರು, ಆದರೆ ಅವರ ಶೋಚನೀಯ ಮಾಸಿಕ ಗೌರವಧನದಲ್ಲಿ ಯಾವುದೇ ಹೆಚ್ಚಳವಾಗಲಿಲ್ಲ!

ಈಗಲಾದರೂ, ಪ್ರಧಾನ ಮಂತ್ರಿಗಳು  ಸತ್ಯವಂತರಾಗಿ.  ಆರೋಗ್ಯವಂತ ಮಕ್ಕಳನ್ನು  ಬೆಳೆಸುವುದರಿಂದ ಹಿಡಿದು  ಬಾಹ್ಯಾಕಾಶವನ್ನು  ಅನ್ವೇಷಿಸುವವರೆಗೆ ನಮ್ಮ ರಾಷ್ಟ್ರದ ಬೆನ್ನೆಲುಬು ಸಾರ್ವಜನಿಕ ವಲಯ ಎಂದು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿರುವ ಕಾರ್ಮಿಕ ಸಂಘಗಳ ವೇದಿಕೆ, ಎಲ್ಲ ಆದ್ಯತೆಗಳನ್ನು ತಲೆಕೆಳಗಾಗಿಸಿ , ಇತ್ತ  ಸಾರ್ವಜನಿಕ ವಲಯದ ಉದ್ಯೋಗಿಗಳು ಹಸಿವಿನಿಂದ ಬಳಲುತ್ತಿರುವಾಗ, ಬೃಹತ್ ಪ್ರತಿಮೆಗಳನ್ನು ಸ್ಥಾಪಿಸಲು ಅದೇ ಸಾರ್ವಜನಿಕ ವಲಯದ  ಸಾವಿರಾರು ಕೋಟಿ ರೂಪಾಯಿಗಳನ್ನು ದೋಚಲಾಗುತ್ತಿದೆ  ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಎಲ್ಲ ನೌಕರರು, ಇಂಜಿನಿಯರುಗಳು, ವಿಜ್ಞಾನಿಗಳ ಕೊಡುಗೆಗಳನ್ನು ದೇಶ ಕೊಂಡಾಡುತ್ತಿರುವಾಗ,  ಈ ಯೋಜನೆಯಲ್ಲಿ ತಮ್ಮ ಮಹತ್ವದ ಪಾತ್ರವನ್ನು ವಹಿಸಿರುವ  ಇಸ್ರೋದಲ್ಲಿನ ಮತ್ತು ಇತರ ಘಟಕಗಳಲ್ಲಿನ ಇಂಜಿನಿಯರ್‌ಗಳು ಮತ್ತು ವೈಜ್ಞಾನಿಕ ಸಿಬ್ಬಂದಿಗಳಿಗೆ ಸಲ್ಲ ಬೇಕಾಗಿರುವ ಬಡ್ತಿಗಳನ್ನು ಕೊಡಬೇಕು ಮತ್ತು  ಎಚ್‌ಇಸಿ ಉದ್ಯೋಗಿಗಳಿಗೆ ಪಾವತಿ ಮಾಡಬೇಕಾದ ಬಾಕಿ ಗಳನ್ನು ಕೇಂದ್ರ ಸರ್ಕಾರವು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ವಲಯವಾರು  ಒಕ್ಕೂಟಗಳು/ಸಂಘಗಳ ವೇದಿಕೆಯು ಆಗ್ರಹಿಸಿದೆ.

ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಹೆಚ್‍ಎಂಎಸ್, ಎಐಯುಟಿಯುಸಿ, ಟಿಯುಸಿಸಿ, ಎಸ್‍ಇಡಬ್ಲ್ಯುಎ, ಎಐಸಿಸಿಟಿಯು, ಎಲ್‍ಪಿಎಫ್‍ ಮತ್ತು ಯುಟಿಯುಸಿ ಮುಖಂಡರು ಈ ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *