ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರ ಯಾವ ಮಟ್ಟಕ್ಕೆ ಇಳಿದಿದೆ ಎಂದರೆ, ಗುತ್ತಿಗೆ ಕಾಮಗಾರಿಗಳಲ್ಲಿ ಅಷ್ಟೆ ಅಲ್ಲ, ಅಭಿವೃದ್ಧಿಗಾಗಿ ಮಾಡಲಾದ ಸಾಲದಲ್ಲೂ ಶೇ.40ರಷ್ಟು ಕಮಿಷನ್ ದಂಧೆ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಚೇರಿಯಲ್ಲಿ ಹಮ್ಮಿಕೊಂಡಿದ್ದ ʻಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರʼ ಎಂಬ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪಕ್ಷದ ಪ್ರಣಾಳಿಕೆಯಂತೆ ನಡೆದುಕೊಂಡೆವು. 165 ಭರವಸೆಗಳನ್ನು ಜನರಿಗೆ ನೀಡಿದ್ದೇವು, ಅವುಗಳಲ್ಲಿ 158 ಭರವಸೆಗಳನ್ನು ಐದು ವರ್ಷಗಳ ಆಡಳಿತದಲ್ಲಿ ಈಡೇರಿಸಿದ್ದೇವೆ. ಭರವಸೆ ನೀಡದೆ ಇದ್ದ 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೇವು ಎಂದರು.
2018ರಲ್ಲಿ ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕಕ್ಕೆ ನಮ್ಮ ವಚನಗಳು ಎಂಬ 600 ಭರವಸೆಗಳ ಪ್ರಣಾಳಿಕೆಯನ್ನು ನೀಡಿತು. ಅದರಲ್ಲಿ ಎಷ್ಟು ಭರವಸೆಯನ್ನು ಈಡೇರಿಸಲಾಗಿದೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ಬಿಜೆಪಿ ಪ್ರಣಾಳಿಕೆಯಲ್ಲಿ ಹೊರಡಿಸಿದ್ದ ಭರವಸೆಗಳಲ್ಲಿ ಶೇ.10ರಷ್ಟನ್ನು ಈಡೇರಿಸಿಲ್ಲ. ನುಡಿದಂತೆ ನಡೆಯಬೇಕು. ಶೇ.90ರಷ್ಟು ಭರವಸೆಗಳನ್ನು ಈಡೇರಿಸದೆ, ಬಿಜೆಪಿ ಆಡಳಿತವು ಜನರಿಗೆ ನಂಬಿಕೆ ದ್ರೋಹ ಮಾಡಿದೆ. ಬಿಜೆಪಿ ವಚನಗಳ ವಂಚನೆ ಮಾಡಿದೆ. ಇದಕ್ಕೆ ಉತ್ತರ ಕೊಡಲಿ. ಕಾಂಗ್ರೆಸ್ ಹೇಳುತ್ತಿರುವುದು ಸರಿಯಿಲ್ಲ ಎಂದಾದರೆ ಅದನ್ನು ಹೇಳಲಿ, ದಾಖಲೆ ಕಣ್ಣೇದುರಿಗೆ ಇದೆ. ಉತ್ತರ ಕೊಡಲಿ ಎಂದು ತಿಳಿಸಿದರು.
1.50 ಲಕ್ಷ ಕೋಟಿ ಖರ್ಚು ಮಾಡಿ ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಮೂರು ವರ್ಷದಲ್ಲಿ ಬಿಜೆಪಿ ಸರ್ಕಾರ 48 ಸಾವಿರ ಕೋಟಿ ಮಾತ್ರ ಖರ್ಚು ಮಾಡಿದೆ. ಇನ್ನೂ 1.00 ಲಕ್ಷ ಕೋಟಿ ಖರ್ಚು ಮಾಡಿಲ್ಲ. ಸುಳ್ಳು ಭರವಸೆ ಯಾಕೆ ನೀಡಿದ್ದೀರಾ ಎಂದು ಪ್ರಶ್ನಿಸಿದ ಅವರು, ನಾವು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 10 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದೇವು, ಐದು ವರ್ಷದಲ್ಲಿ 50 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಖರ್ಚು ಮಾಡಿದ್ದೇವೆ ಎಂದರು.
ರೈತರ ಒಂದು ಲಕ್ಷ ರೂಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಈವರಗೂ ಮಾಡಿಲ್ಲ. ಸಾಲ ಮನ್ನಾ ಮಾಡಲು ನಾವೇನು ನೋಟು ಮುದ್ರಿಸುವ ಯಂತ್ರ ಇಟ್ಟುಕೊಂಡಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ವಿಧಾನ ಪರಿಷತ್ನಲ್ಲಿ ಉಗ್ರಪ್ಪ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವುದ್ದಾಗಿ ಎಂದಿದ್ದರು. ಆದರೆ, ಅದು ಆಗಿಲ್ಲ, ಬದಲಾಗಿ ರೈತರ ಖರ್ಚುಗಳು ಹೆಚ್ಚಾಗಿವೆ ಎಂದರು.
ಮಹಿಳೆಯರು, ಯುವಕರು, ಕೃಷಿಕರು, ಪರಿಶಿಷ್ಠರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಸೇರಿ ಯಾರಿಗೂ ಬಿಜೆಪಿ ಸರ್ಕಾರ ನೆರವು ನೀಡಿಲ್ಲ. ಎಸ್ಸಿ, ಎಸ್ಟಿ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿಲ್ಲ, ಜನಸಂಖ್ಯೆ ಆಧಾರಿಸಿ ಅನುದಾನ ಬಿಡುಗಡೆ ಮಾಡಿಲ್ಲ. ವಸತಿ ನಿಲಯ ವಿದ್ಯಾರ್ಥಿಗಳಿಗೆ ಸೋಪು, ಪೆಸ್ಟ್ ಕೊಟ್ಟಿಲ್ಲ. ನಮ್ಮ ಸರ್ಕಾರ ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ಕಟ್ಟಿಸಿದ್ದೇವು.
ಬಿಜೆಪಿ ಸರ್ಕಾರ ಮೂರು ವರ್ಷದಲ್ಲಿ ಹೊಸದಾಗಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ, ಒಂದು ಮನೆಯನ್ನು ಕಟ್ಟಿಲ್ಲ. ನಮ್ಮ ಕಾಲದಲ್ಲಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ಕಟ್ಟಲು ಭೂಮಿ ನೀಡಿ, ಹಣ ನೀಡಿ, ಗುತ್ತಿಗೆ ನೀಡಲಾಗಿತ್ತು. ಮನೆಗಳ ಹಂಚಿಕೆಗೆ ಅರ್ಜಿಯನ್ನು ಕರೆಯಲಾಗಿತ್ತು. ಬಿಜೆಪಿ ಅರ್ಜಿಗಳನ್ನು ರದ್ದು ಮಾಡಿದೆ. ಒಂದೇ ಒಂದು ಮನೆಯನ್ನು ನಿರ್ಮಿಸಿಕೊಟ್ಟಿಲ್ಲ ಎಂದರು.