ಬೆಂಗಳೂರು : ಸಾಹಿತಿ ಹಾಗೂ ಚಿಂತಕ ಬಂಜಗೆರೆ ಜಯಪ್ರಕಾಶ್ ಅವರಿಗೆ ಅನಾಮಿಕ ಜೀವ ಬೆದರಿಕೆ ಪತ್ರವೊಂದು ಜೂನ್ 01 ರಂದು (ಗುರುವಾರ) ಕೈ ಸೇರಿದೆ.
ಪತ್ರದ ಬಗ್ಗೆ ಬಂಜಗೆರೆ ಜಯಪ್ರಕಾಶ್ ಅವರು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಅವರು ನೀಡಿದ್ದ ಹೇಳಿಕೆಗಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ಜುಲೈನಲ್ಲಿ ಸಹ ಜೀವ ಬೆದರಿಕೆ ಪತ್ರ ಬರೆಯಲಾಗಿತ್ತು. ಅಂದೂ ಕೂಡ ಹಾರೋಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಹಿಂದಿನ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ, ಮತ್ತೊಂದು ಬೆದರಿಕೆ ಪತ್ರ ಬಂದಿದ್ದು, ಈಗಿನ ಪತ್ರದ ಮೂಲದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜೀವ ಬೆದರಿಗೆ ಪತ್ರದಲ್ಲಿ ಏನಿದೆ?
ಮೂರು ಕಡೆಗಳಲ್ಲಿ ಶ್ರೀ ಎಂದು ಪತ್ರದ ಮೇಲ್ಭಾಗದಲ್ಲಿ ಬರೆಯಲಾಗಿದೆ. ಆನಂತರ ಬಂಜಗೆರೆ ಜಯಪ್ರಕಾಶ ಅವರಿಗೆ ಎಂದು ಬರೆಯಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಂಪನ ಆಡಳಿತ ಪ್ರಾರಂಭ. ಹಿಂದೂ ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ. ನಿಮ್ಮಂತಹವರಿಗೆ, ದುರ್ಜನ ದೇಶ ದ್ರೋಹಿಗಳಿಗೆ, ಮತಾಂದ, ಮುಸ್ಲಿಂ, ಮಂತಾತರಿ ಕ್ರೈಸ್ತರಿಗೆ ಪ್ರೀಯ ಸರ್ಕಾರ. ಉರಿಯೀರಿ ಮಕ್ಕಳ ಉರಿಯೀರಿ. ನಿಮ್ಮ ಜೀವ ಎಂಬ ಅಜ್ಞಾನದ ದೀಪ ಆರುವುದು ನಿಶ್ಚಿತ ನಿಶ್ಚಿತ. ಬಂಜಗೆರೆ ಜಯಪ್ರಕಾಶ ನಿಶ್ಚಿತ ನಿನ್ನ ಅಂತ್ಯ ಎಂದು ಬರೆದು ಸಹಿಷ್ಟು ಹಿಂದು ಎಂದು ಬರೆಯಲಾಗಿದೆ. ಕೊನೆಗೆ ಜೈ ಹಿಂದು ಜೈ ಹಿಂದು ಎಂದು ಎರಡು ಬಾರಿ ಘೋಷಣೆ ಬೆರೆಯಲಾಗಿದೆ.
ಬೆದರಿಕೆ ಪತ್ರ ಬರೆದ ಅನಾಮಿಕನ ಪತ್ತೆಗೆ ಪೊಲೀಸ್ ಇಲಾಖೆ ವಿಶೇಷ ತಂಡ ರಚನೆ ಮಾಡಿದೆ. ರಾಮನಗರ ಎಸ್ಪಿ ಕಾರ್ತೀಕ್ ರೆಡ್ಡಿ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಕನಕಪುರ ಗ್ರಾಮಾಂತರ ಠಾಣಾ ಪಿಎಸ್ಐ ಹೇಮಂತ್ ಎಂಬುವವರನ್ನ ತಂಡದ ಮುಖ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸದ್ಯ ಪತ್ರ ಬರೆದ ಅನಾಮಿಕನಿಗಾಗಿ ಈ ವಿಶೇಷ ಹುಡುಕಾಟ ನಡೆಸುತ್ತಿದೆ.
ವಸುಂಧರಾ ಭೂಪತಿಗೂ ಅವರಿಗೂ ಬೆದರಿಕೆ : ‘ಬಸವೇಶ್ವರನಗರ ನಿವಾಸಿ ವೈದ್ಯೆ ಹಾಗೂ ಲೇಖಕಿ ವಸುಂಧರಾ ಭೂಪತಿ ಅವರಿಗೂ ಬೆದರಿಕೆ ಪತ್ರ ಬಂದಿದೆ. ಈ ಕುರಿತು ದೂರು ನೀಡಿದ್ದಾರೆ.
‘ಮೇ 29ರಂದು ವಸುಂಧರಾ ಅವರ ಮನೆ ವಿಳಾಸಕ್ಕೆ ಪತ್ರ ಬಂದಿದೆ. ಪತ್ರದ ಮೇಲೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದ ಅಂಚೆ ಕಚೇರಿ ಮುದ್ರೆ ಇದೆ. ಅಲ್ಲಿಯ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಎಸ್.ಜಿ. ಸಿದ್ದರಾಮಯ್ಯ, ಕುಂ. ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್, ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ, ಬಿ.ಟಿ. ಲಲಿತಾ ನಾಯಕ್, ಪ್ರಕಾಶ್ ರಾಜ್ (ನಟ), ಭಗವಾನ್, ಮಹೇಶ್ ಚಂದ್ರ ಗುರು, ದ್ವಾರಕಾನಾಥ್, ಮೈಸೂರಿನ ಭಾಸ್ಕರ್ ಪ್ರಸಾದ್, ಚನ್ನಮಲ್ಲಸ್ವಾಮಿ, ನಿಜಗುಣಾನಂದ, ದಿನೇಶ್ ಅಮಿನ್‌ಮಟ್ಟು, ಹಂಪ ನಾಗರಾಜಯ್ಯ ಸೇರಿ 61 ಜನರ ಜೊತೆ ಗುರುತಿಸಿಕೊಳ್ಳದಂತೆ ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ’ ಎಂದಿದ್ದಾರೆ.
‘ಎಲ್ಲ ಸಾಹಿತಿ ಹಾಗೂ ಹೋರಾಟಗಾರರ ‘ಜೀವದ ದೀಪ ಆರುತ್ತದೆ’ ಎಂದು ಬರೆದಿದ್ದಾರೆ. ಪತ್ರದ ಕೊನೆಯಲ್ಲಿ ‘ಸಹಿಷ್ಣು ಹಿಂದು, ಜೈ ಹಿಂದು ರಾಷ್ಟ್ರ’ ಎಂಬ ಬರಹವಿದೆ. ಈ ಹಿಂದೆಯೂ ಹಲವು ಬಾರಿ ಇಂಥ ಪತ್ರಗಳು ಬಂದಿದ್ದವು. ಈಗ ಪುನಃ ಪತ್ರ ಬಂದಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಹೇಳಲಾಗಿದೆ.