ಸಾಗರ : ಸಾಗರದ ಹೊರವಲಯದ ವನಶ್ರೀ ವಸತಿ (ಖಾಸಗಿ) ಶಾಲೆಯಲ್ಲಿ ಬಾಲಕಿಯೊಬ್ಬಳು ಗುರುವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಲೀಟರ್‌ಗಟ್ಟಲೆ ನೀರು ಕುಡಿಸಿದ್ದರಿಂದ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
8ನೇ ತರಗತಿ ವಿದ್ಯಾರ್ಥಿನಿ, ಸೊರಬ ತಾಲೂಕಿನ ಶಿವಪುರ ಗ್ರಾಮದ ತೇಜಸ್ವಿನಿ(13) ಮೃತರು. ಖಾಸಗಿ ವಸತಿಶಾಲೆ ವಿರುದ್ಧ ಪೋಷಕರ ಆಕ್ರೋಶ ಭುಗಿಲೆದ್ದಿದೆ. ಮಗಳ ಸಾವು ಅನುಮಾನಾಸ್ಪದವಾಗಿದ್ದು, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಬಾಲಕಿಯ ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಂಜೆ ಕಳುಹಿಸಲಾಗಿದೆ.
ವಸತಿ ಶಾಲೆಗೆ ಸೇರಿ ಕೇವಲ ಐದು ದಿನಗಳಾಗಿತ್ತು. ಮಗಳು ಶಾಲೆಗೆ ಹೋದ ಐದು ದಿನಕ್ಕೆ ಸಾವನ್ನಪ್ಪಿರುವುದು ಪೋಷಕರಿಗೆ ಸಿಡಿಲು ಬಡಿದಂತಾಗಿದೆ. ತೇಜಸ್ವಿನಿಗೆ ಹುಷಾರಿಲ್ಲ, ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ, ಸಾಗರ ಆಸ್ಪೆತ್ರೆಗೆ ಬನ್ನಿ ಎಂದು ನಮಗೆ ಹೇಳಿದರು. ಆಸ್ಪತ್ರೆಗೆ ಬಂದಾಗ ಮಗಳ ಸಾವಿನ ಸುದ್ದಿ ಕೇಳಿ ಆಕಾಶವೇ ಕಳಚಿ ಬಿದ್ದಂತಾಗಿದೆ. ನಮ್ಮ ಮಗಳು ಪ್ರಜ್ಞೆ ತಪ್ಪಿ ಬಿದ್ದಿರಬೇಕು, ಚಿಕಿತ್ಸೆ ನೀಡಿ ಬದುಕಿಸಿ ಎಂದು ತಾಯಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಇದನ್ನೂ ಓದಿ : ವಸತಿ ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಪ್ರಾಂಶುಪಾಲರು ಸೇರಿ ಐವರ ಬಂಧನ
ಶಾಲೆಯಲ್ಲಿ ಯೋಗಾಸನ ಮಾಡಿಸಿದ್ದರಿಂದ ತೇಜಸ್ವಿನಿಗೆ ಕಾಲು ನೋವಾಗಿದೆ. ಇದಕ್ಕೆ ಮುಲಾಮು ಹಚ್ಚಿದ್ದು, ಗುಣಮುಖರಾಗುತ್ತಾರೆ ಎಂದು ಮಂಜಪ್ಪ ತಿಳಿಸಿದ್ದರು. ಗುರುವಾರ ಘಟನೆ ನಡೆದ ಬಳಿಕ ಮಕ್ಕಳೊಂದಿಗೆ ಮಾತನಾಡಿದಾಗ, ‘ನಾನು ನೀರು ಕುಡಿಸಿಯೇ ಇದನ್ನು ಪರಿಹರಿಸುತ್ತೇನೆ’ ಎಂದು ಮಂಜಪ್ಪ ಅವರು ಕುಡಿಯಲು ಲೀಟರ್‌ಗಟ್ಟಲೆ ನೀರು ಕೊಟ್ಟಿದ್ದಾರೆ. ಕಾಲಿಗೆ ಬಿದ್ದು ಪೋಷಕರೊಂದಿಗೆ ಮಾತನಾಡಲು ಕೇಳಿಕೊಂಡರೂ ಅವರು ಒಪ್ಪಿಲ್ಲ’ ಎಂದು ತೇಜಸ್ವಿನಿ ಪೋಷಕರು, ಸಂಬಂಧಿಗಳು ಆರೋಪಿಸಿದ್ದಾರೆ.
ಆಸ್ಪತ್ರೆಗೆ ಧಾವಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಸಿ, ವರದಿ ಬಂದ ಬಳಿಕ ಸಮರ್ಪಕ ತನಿಖೆ ನಡೆಸಬೇಕು ಎಂದು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್‌ಗೆ ಸೂಚಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪರಪ್ಪ, ವೈದ್ಯ ಪ್ರಕಾಶ್ ಭೋಸ್ಲೆಇದ್ದರು.