ಸುರತ್ಕಲ್: ಟೋಲ್‌ಗೇಟ್ ತೆರವುಗೊಳಿಸಲು ತೀರ್ಮಾನ ಕೈಗೊಂಡಿರುವುದಾಗಿ ರಾಜ್ಯ ಸರಕಾರ ವಿಧಾನಸಭೆ ಅಧಿವೇಶನದಲ್ಲಿ ಪ್ರಕಟಿಸಿ ತಿಂಗಳು ದಾಟಿದರೂ, ಸರಕಾರದ ಅಧಿಕೃತ ಹೇಳಿಕೆಯನ್ನು ಅಣಕಿಸುವಂತೆ ಟೋಲ್ ಸುಲಿಗೆ ಮಾತ್ರ ನಿರಾತಂಕವಾಗಿ ಮುಂದುವರಿದಿದೆ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.
ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಸುರತ್ಕಲ್ ಟೋಲ್‌ಗೇಟ್ ತೆರವುಗೊಳಿಸಬೇಕೆಂದು ಆಗ್ರಹಿಸಿ ಅಕ್ಟೋಬರ್ 28ರಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಹಗಲು ರಾತ್ರಿ ಪ್ರತಿಭಟನಾ ಧರಣಿಯೂ ಇಂದು(ನವೆಂಬರ್ 4) ಎಂಟನೇ ದಿನಕ್ಕೆ ಕಾಲಿಟ್ಟಿದೆ.
ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್, ಭರತ್ ಶೆಟ್ಟಿಯವರ ಭರವಸೆಗಳಂತೆ ರಾಜ್ಯ ಸರಕಾರದ ಮಾತುಗಳಿಗೂ ಕಿಮ್ಮತ್ತಿಲ್ಲ ಎಂಬಂತಾಗಿದೆ. ನವೆಂಬರ್ 07 ರಂದು ತುಳುನಾಡು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೋಲ್ ತೆರವಿಗಾಗಿ ಹಗಲು ರಾತ್ರಿ ಧರಣಿ ಕೂತಿರುವ ಹೋರಾಟದ ಸ್ಥಳಕ್ಕೆ ಆಗಮಿಸಿ ಟೋಲ್ ತೆರವು ತೀರ್ಮಾನದ ಕುರಿತು ಸ್ಪಷ್ಟ ತೀರ್ಮಾನ ಪ್ರಕಟಿಸಬೇಕು ಎಂದು ಅನಿರ್ಧಿಷ್ಟಾವಧಿ ಧರಣಿ ಉದ್ದೇಶಿಸಿ ಮುನೀರ್ ಕಾಟಿಪಳ್ಳ ಸೂಚಿಸಿದರು.
ಟೋಲ್ ತೆರವು ಕುರಿತು ಹತ್ತಾರು ಗಡುವುಗಳನ್ನು ನೀಡಿರುವ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಶಾಸಕರುಗಳು ಈಗ ಬಾಯಿಗೆ ಬೀಗ ಹಾಕಿ ಕೂತಿದ್ದಾರೆ. ಅವಿಭಜಿತ ಜಿಲ್ಲೆಯಲ್ಲಿ ಬಿಜೆಪಿಯ ಬಾಯಿ ಬಂದ್ ಆಗಿದೆ. ಸುಲಿಗೆ ಹೀಗೆಯೆ ಮುಂದುವರಿದರೆ ಟೋಲ್ ತೆರವು ಹೋರಾಟ ತುಳುನಾಡಿನಲ್ಲಿ ಬಿಜೆಪಿ ತೆರುವು ಹೋರಾಟವಾಗಿ ಪರಿವರ್ತನೆಗೊಳ್ಳಲಿದೆ. ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜಿನಾಮೆ ಮಾತ್ರ ಈಗ ಉಳಿದಿರುವ ಆಯ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಟನೇ ದಿನದ ಧರಣಿಯ ನೇತೃತ್ವವನ್ನು ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಸ್ಥೆ ಉಡುಪಿ ಘಟಕ ವಹಿಸಿಕೊಂಡಿತ್ತು.
ಧರಣಿಯಲ್ಲಿ ಮಾಜಿ ಶಾಸಕ ಅಭಯಚಂದ್ರ ಜೈನ್, ಕಾರ್ಮಿಕ ನಾಯಕ ಬಿ ಎಂ ಭಟ್, ಈಶ್ವರಿ ಪದ್ಮುಂಜ, ಶ್ಯಾಮರಾಜ್ ಪಟ್ರಮೆ, ರಮೀಝ್ ಬೆಳ್ತಂಗಡಿ, ಯೋಗಿತಾ ಉಳ್ಳಾಲ, ಕಾವು ಹೇಮನಾಥ ಶೆಟ್ಟಿ, ಇಸಾಕ್ ಸಾಲ್ಮರ, ಕೆ ಸಿ ಅಶೋಕ್ ಶೆಟ್ಟಿ, ವೆರನಿಕಾ ಕರ್ನೆಲಿಯೊ, ರೋಸ್ನಿ ವೊಲಿವೆರಾ, ಜ್ಯೋತಿ ಮೆನನ್, ಆಶಾ ಕರ್ವೊಲೊ, ಡಾ. ಸುನಿತಾ, ಅನಿತಾ ಡಿಸೋಜ ಇನ್ನಾ, ಐರಿನ್ ಅಂದ್ರಾದೆ, ಕೀರ್ತಿ ಶೆಟ್ಟಿ, ಮಂಜುನಾಥ ಕುಲಾಲ್ ಸಿದ್ದಾಪುರ, ನಾಗೇಶ್ ಕುಮಾರ್ ಉದ್ಯಾವರ, ಜೆಡಿಎಸ್ ನಾಯಕರಾದ ಸುಶೀಲ್ ನೊರಾನ್ಹ, ಸುಮತಿ ಹೆಗ್ಡೆ, ಕನಕ ದಾಸ ಕೂಳೂರು, ಅಕ್ಷಿತ್ ಸುವರ್ಣ, ಶಾ ಝಮೀರ್, ರತ್ನಾಕರ ಸುವರ್ಣ, ಹೋರಾಟ ಸಮಿತಿಯ ಬಿ ಕೆ ಇಮ್ತಿಯಾಜ್, ರಾಘವೇಂದ್ರ ರಾವ್, ವಿಲ್ಲಿ ವಿಲ್ಸನ್, ಟಿ ಎನ್ ರಮೇಶ್, ಮನ್ಸೂರ್ ಸಾಗ್ ಮತ್ತಿತರರು ಉಪಸ್ಥಿತರಿದ್ದರು.