ಬೆಳಗಾವಿ: ವಿಧಾನ ಮಂಡಲದ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ಪ್ರಶ್ನೆ ಕೇಳಬೇಕಾದ ಹಲವು ಶಾಸಕರು ಸದನಕ್ಕೆ ಗೈರಾದ ಕಾರಣದಿಂದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಕೊನೆಯ ದಿನವಾದ ಇಂದು ಪ್ರಶ್ನೋತ್ತರ ಅವಧಿ ಆರಂಭವಾದರೂ, ಹಲವು ಶಾಸಕರು ಗೈರಾಗಿದ್ದರು. ಪ್ರಶ್ನೆ ಕೇಳಲು ಸದಸ್ಯರ ಹೆಸರನ್ನು ಸಭಾಧ್ಯಕ್ಷರು ಕೂಗಿದರೂ ಅವರು ಮಾತ್ರ ಸದನದಲ್ಲಿ ಹಾಜರಾಗಿರಲಿಲ್ಲ. ಅಧಿವೇಶನದ ಕೊನೆಯ ದಿನದಂದೇ ಸದಸ್ಯರು ಈ ರೀತಿ ಗೈರಾಗಿದ್ದಕ್ಕೆ ಕಾಗೇರಿ ಬೇಸರ ವ್ಯಕ್ತಪಡಿಸಿದರು.
ಪ್ರಶ್ನೆ ಕೇಳಲು ಇಚ್ಛಿಸಿದ್ದ ಸದಸ್ಯರ ಹೆಸರುಗಳನ್ನು ಒಬ್ಬರಾದ ಮೇಲೆ ಒಬ್ಬರಂತೆ ಕೂಗಿದರೂ ʻʻತನ್ವೀರ್ ಸೇಠ್ ಇಲ್ಲ, ಬೆಳ್ಳಿ ಪ್ರಕಾಶ್ ಇಲ್ಲ, ರಾಮಪ್ಪ ಎಸ್ ಹರಿಹರ ಇಲ್ಲ…. ಇತ್ಯಾದಿ ಹಲವು ಹೆಸರುಗಳನ್ನು ಕರೆದರೂ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಹಲವು ಶಾಸಕರು ಗೈರಾಗಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟು, ವೆಂಟಕರಾವ್ ನಾಡಗೌಡ, ಈಶ್ವರ್ ಖಂಡ್ರೆ ಸೇರಿದಂತೆ ಹಲವು ಹಿರಿಯ ಶಾಸಕರೂ ಗೈರಾಗಿದ್ದಾರೆ. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಡವಾಗಿ ಹಾಜರಾದರು.
ಸದನದ ಕಲಾಪದಲ್ಲಿ ಸದಸ್ಯರ ಗೈರು ಆಗುತ್ತಿರುವ ಬಗ್ಗೆ ಈ ಹಿಂದೆಯೂ ಸಭಾಧ್ಯಕ್ಷರು ಪ್ರಸ್ತಾಪಿಸಿದ್ದರು. ಸದಸ್ಯರು ಅನವಶ್ಯಕವಾಗಿ ಗೈರಾಗಬಾರದು ಎಂದು ಮನವಿ ಮಾಡಿದ್ದರು. ಹೀಗಿದ್ದರೂ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಲು ಹೆಚ್ಚಿನ ಆಸಕ್ತಿ ತೋರಿಸಿಲ್ಲ.