ಬೆಂಗಳೂರು ಜ 29: ಕೆಲವು ವರ್ಷಗಳ ಹಿಂದೆ ಸದನದಲ್ಲಿ ಕೆಲ ಶಾಸಕರು ನೀಲಿ ಚಿತ್ರ ವೀಕ್ಷಿಸಿದ್ದ ಪ್ರಸಂಗ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ, ಅಂಥದ್ದೇ ಮತ್ತೊಂದು ಪ್ರಸಂಗ ಇಂದು ಬೆಳಕಿಗೆ ಬಂದಿದೆ. ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಧಾನಪರಿಷತ್ನಲ್ಲಿ ಕಲಾಪದ ವೇಳೆ ಕಾಂಗ್ರೆಸ್ ನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದನದ ಕಾರ್ಯಕಲಾಪದ ವೇಳೆ, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ತಮ್ಮ ಮೊಬೈಲ್ನ ಗ್ಯಾಲರಿಯಲ್ಲಿದ್ದ ಕೆಲ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದರು ಎಂದು ಹೇಳಲಾಗಿದೆ.

ಪ್ರಕಾಶ್ ರಾಠೋಡ್ ವರ್ತನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು, ಚರ್ಚೆ ಮಾಡಲು ಸಾಕಷ್ಟು ಇವೆ. ರಾಜ್ಯದ ಜನತೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ರೈತ, ಕಾರ್ಮಿಕರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತವುಗಳ ಬಗ್ಗೆ ಚರ್ಚೆ ಮಾಡುವ ಬದಲು ಅಶ್ಲೀಲ ಚಿತ್ರ ವಿಕ್ಷೀಸಲು ಇವರನ್ನು ಪರಿಷತ್ ಗೆ ಕಳುಹಿಸಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ವಿಧಾನ ಸೌಧ ಪವಿತ್ರವಾದ ಸ್ಥಳ, ಈ ಜಾಗದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವುದು ಅಪರಾಧ, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಈ ಘಟನೆ ಕಾಂಗ್ರೆಸ್ ಗೆ ಇರುಸು ಮುರುಸಾಗುವಂತೆ ಮಾಡಿದೆ.
ರಾಥೋಡ್ ನಿರಾಕರಣೆ : ಈ ಆರೋಪವನ್ನು ಪರಿಷತ್ ಸದಸ್ಯ ರಾಥೋಟ್ ತಳ್ಳಿಹಾಕಿದ್ದು, ತಮ್ಮ ಮೊಬೈಲ್ ಗ್ಯಾಲರಿಯಲ್ಲಿದ್ದ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡ್ತಿದ್ದೆ, ಇದಕ್ಕೆ ತಪ್ಪು ಅರ್ಥಕಲ್ಪಿಸುವುದು ಬೇಡ. ರಾಥೋಡ್ ತಿಳಿಸಿದ್ದಾರೆ.