ಬೆಂಗಳೂರು : ಅನಗತ್ಯ ಮತ್ತು ಪ್ರಸ್ತುವಲ್ಲದ ವಿಷಯದ ಮೇಲೆ ಸದನದ ಸಮಯವನ್ನು ಹಾಳು ಮಾಡುತ್ತಿರುವ ಹಾಗೂ ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡುತ್ತಿರುವ ರಾಜ್ಯ ಸರಕಾರದ ಬೇಜವಾಬ್ದಾರಿಯುತ ಕ್ರಮವು ಅಕ್ಷಮ್ಯ ವೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.
ರಾಜ್ಯವು ತೀವ್ರತರವಾದ ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿರುವಾಗ ಮತ್ತು ಅವುಗಳಿಗೆ ಪರಿಹಾರ ಹುಡುಕಲು ಹಾಕಬೇಕಾದ ಸದನದ ಸಮಯವು ಕಳೆದೆರಡು ದಿನಗಳಿಂದ ರಾಜ್ಯ ಸರಕಾರದ ಹೊಣೆಗೇಡಿತನದಿಂದಾಗಿಯೇ ಪೋಲಾಗುತ್ತಿದೆ. ಬಿಜೆಪಿ ಹಾಗೂ ಸಂಘ ಪರಿವಾರವು ತನ್ನ ಜೀವಮಾನದುದ್ದಕ್ಕೂ ಸಮಸ್ಯೆ ಅಲ್ಲದವುಗಳನ್ನೇ, ದೊಡ್ಡ ಸಮಸ್ಯೆಗಳೆಂದು ಮುಂದೆ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರವನ್ನು ಮಾಡುತ್ತಾ ಬಂದಿವೆ. ಈಗಲೂ ಅದರ ಭಾಗವಾಗಿಯೇ, ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವನ್ನು ಮುನ್ನೆಲೆಗೆ ತಂದಿದೆಯೆಂದು ಸಿಪಿಐಎಂ ಕಟುವಾಗಿ ವಿಮರ್ಶಿಸಿದೆ.
ರಾಜ್ಯವು ಕಳೆದ ಮೂರು – ನಾಲ್ಕು ವರ್ಷಗಳಿಂದ ವ್ಯಾಪಕ ಬರಗಾಲ ಹಾಗೂ ಅತೀವೃಷ್ಟಿಗಳಿಂದ ಮತ್ತು ಕೋವಿಡ್ – 19, ಲಾಕ್ ಡೌನ್ ಗಳಿಂದ ಬಾಧಿತವಾಗಿದೆ. ಇವುಗಳಿಂದ ಬಾಧಿತರಾದ ರೈತರು, ಕೂಲಿಕಾರರು, ಮಹಿಳೆಯರು, ದಲಿತರು, ಕಾರ್ಮಿಕರ ಪರಿಹಾರದ ವಿಚಾರಗಳು ಗಂಭೀರವಾಗಿವೆ.
ಅದೇ ರೀತಿ, ರಾಜ್ಯದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿರುವ ಯಾವುದೇ ರೈತರ ಯಾವುದೇ ಬೆಳೆಗೆ ಡಾ. ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ಕೃಷಿ ಆಯೋಗದ ಸಲಹೆಯಂತೆ ಬೆಂಬಲ ಬೆಲೆ ನಿಗದಿಸುತ್ತಿಲ್ಲ. ಮಾತ್ರವಲ್ಲಾ, ನಿಗದಿಸಿದ ಕಳಪೆ ಬೆಲೆಯೂ ದೊರೆಯುತ್ತಿಲ್ಲ. ರೈತರನ್ನು ದೊಡ್ಡ ವ್ಯಾಪಾರಿಗಳ ಲೂಟಿಗೆ ಬಿಡಲಾಗಿದೆ.
ವಿದ್ಯಾವಂತ ನಿರುದ್ಯೋಗ ವ್ಯಾಪಕವಾಗಿ ಬೆಳೆಯುತ್ತಿದೆ. ಯುವಜನರು ಅಪಮಾನದ ಬದುಕು ಬದುಕುತ್ತಿದ್ದಾರೆ. ವ್ಯವಸಾಯ, ಉಪಕಸುಬುಗಳನ್ನು ಹಾಗೂ ಕೃಷಿ ಭೂಮಿಯನ್ನು ಕಾರ್ಪೋರೇಟ್ ಲೂಟಿಗೆ ತೆರೆಯಲು ಮತ್ತು ನೂರಾರು ವರ್ಷಗಳ ಸಮರ ಶೀಲ ಹೋರಾಟಗಳಿಂದ ಕಾರ್ಮಿಕರು ಪಡೆದುಕೊಂಡಿದ್ದ ಹಕ್ಕುಗಳನ್ನು ಕಸಿದು ಕಾರ್ಪೋರೇಟ್ ಲೂಟಿಗೆ ತೆರೆಯುವ ದೇಶ ದ್ರೋಹಿ ಕಾಯ್ದೆಗಳನ್ನು, ಗ್ರಾಹಕರ ಲೂಟಿಗೆ ಕಾರಣವಾದ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳಂತಹ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಗಳನ್ನು ದೇಶದ ಹಾಗೂ ರಾಜ್ಯದ ಜನತೆಯ ಮೇಲೆ ಬಲವಂತವಾಗಿ ಹೇರಲಾಗಿದೆ.
ದೇಶ ಹಾಗೂ ರಾಜ್ಯಗಳಿಗೆ ಅಪಾರ ಲಾಭ ತಂದುಕೊಡುತ್ತಿರುವ ಮತ್ತು ದಮನಿತ ಜನತೆಗೆ ಮೀಸಲಾತಿಯಡಿ ವ್ಯಾಪಕ ಉದ್ಯೋಗ ನೀಡುತ್ತಿರುವ ಸಾರ್ವ ಜನಿಕ ವಲಯದ ಉದ್ದಿಮೆಗಳಾದ ಬ್ಯಾಂಕ್, ವಿಮೆ, ರೈಲ್ವೇ, ಹಡಗು, ವಿಮಾನ, ಬಿ.ಎಸ್.ಎನ್.ಎಲ್, ವಿದ್ಯುತ್ ಮುಂತಾದ ರಂಗಗಳನ್ನು ಕಾರ್ಪೋರೇಟ್ ವಲಯಕ್ಕೆ ಧಾನ ಮಾಡುತ್ತಿರುವದರಿಂದ ಇಲ್ಲಿನ ನೌಕರರು ಉದ್ಯೋಗದ ತೀವ್ರ ಅಭದ್ರತೆಯನ್ನು ಎದುರಿಸುವಂತಾಗಿದೆ. ದೇಶದ ಜನತೆಗೆ ಸಂಪನ್ಮೂಲದ ಕೊರತೆಯುಂಟಾಗುವಂತಾಗಿದೆ.
ಕೇಂದ್ರ ಸರಕಾರ ಕಳೆದ ಬಜೆಟ್ ನಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ತೆರಿಗೆ ವಿನಾಯಿತಿ ನೀಡಿ, ಜನ ಸಾಮಾನ್ಯರ ಮೇಲೆ ತೆರಿಗೆಯ ಭಾರ ಹೇರಿ, ಅಗತ್ಯ ವಸ್ತುಗಳ ವ್ಯಾಪಕ ಬೆಲೆ ಏರಿಕೆಗೆ ಕಾರಣವಾಗಿದೆ.
ಇಂತಹ ಗಹನವಾದ ಯಾವುದೇ ವಿಷಯಗಳನ್ನು ಚರ್ಚೆಗಳಿಲ್ಲದೇ ಪ್ರಜಾಸತ್ತಾತ್ಮಕ ವಿಧಾನಗಳನ್ನು ಗಾಳಿಗೆ ತೂರಿ, ಪಾರ್ಲಿಮೆಂಟಿನಲ್ಲಿ ಮತ್ತು ವಿಧಾನ ಸಭೆಗಳಲ್ಲಿ ಅಂಗೀಕರಿಸಲು ಕ್ರಮ ವಹಿಸಿದ ಬಿಜೆಪಿ, ಇದೀಗ ಒಂದು ಚುನಾವಣೆಯ ಕುರಿತು ಚರ್ಚಿಸುವ ಮತ್ತು ತಾನು ಭಾರೀ ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳುವ ನಾಟಕವಾಡುತ್ತಿದೆ ಎಂದು ಸಿಪಿಐಎಂ ವಿಮರ್ಶಿಸಿದೆ. ರಾಜ್ಯದ ಜನತೆ ಬಿಜೆಪಿಯ ಇಂತಹ ನಯ ವಂಚನೆಯ ಕುರಿತು ಜಾಗ್ರತೆ ವಹಿಸಿ ತಿರಸ್ಕರಿಸುವಂತೆ ಕರೆ ನೀಡಿದೆ.
ರಾಜ್ಯದ ಲಕ್ಷಾಂತರ ರೈತರು, ಕಾರ್ಮಿಕರು, ಮಹಿಳೆಯರು, ನಾಗರೀಕರು ಈ ಜನ ವಿರೋಧಿ ನೀತಿಗಳು ಹಾಗೂ ಲೂಟಿಕೋರ ಕಾಯ್ದೆಗಳ ವಿರುದ್ದ ತೀರ್ವ ರೀತಿಯ ಚಳುವಳಿಯಲ್ಲಿ ತೊಡಗಿರುವಾಗ ಜನರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರವೇ ಇದಾಗಿದೆ.
ಇಂತಹ ಅಗ್ಗದ ಕುತಂತ್ರಗಳನ್ನು ಕೈಬಿಟ್ಟು ಜನರನ್ನು ಬಾಧಿಸುವ ಜ್ವಲಂತ ಸಮಸ್ಯೆಗಳ ಪರಿಹಾರದ ವಿಚಾರಗಳನ್ನು ಸದನವು ಕೈಗೆತ್ತಿಕೊಳ್ಳುವಂತೆ ರಾಜ್ಯ ಸರಕಾರ ಕ್ರಮ ವಹಿಸ ಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.