ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿ ಸ್ಪಷ್ಟ ಬಹುಮತ ಪಡೆದು ಮುನ್ನುಗ್ಗುತ್ತಿದೆ.
ಬಿಜೆಪಿಯ ನೇತೃತ್ವದಲ್ಲಿದ್ದ ಸರ್ಕಾರದ ವಿರುದ್ಧ ಜನರಿಗೆ ಅಸಮಾಧಾನ ಇದ್ದದ್ದು ಈ ರೀತಿ ಬಯಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಸೋಲುಕಂಡಿದ್ದಾರೆ.
ಸಚಿವರಾಗಿ ಅವರ ಕಾರ್ಯವೈಖರಿ ಬಗ್ಗೆ ಕೂಡ ಅಸಮಾಧಾನ ಇದ್ದಂತೆ ಈ ಫಲಿತಾಂಶವನ್ನು ವ್ಯಾಖ್ಯಾನಿಸಬಹುದು. 2018ರ ವಿಧಾನಭಾ ಚುನಾವಣೆಯಲ್ಲೂ ಸಹ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ಸೋತಿದ್ದರು. ಇದೀಗ ಬೊಮ್ಮಾಯಿ ಸಂಪುಟದ ಸಚಿವರಿಗೂ ಇದೇ ಪರಿಸ್ಥಿತಿ ಬಂದಿದೆ. ಆಡಳಿತ ವಿರೋದಿ ಅಲೆ ಇಲ್ಲಿ ಪ್ರಮುಖವಾಗಿ ಕೆಲಸ ಮಾಡಿದೆ.
ಬಳ್ಳಾರಿ ಗ್ರಾಮಾಂತರದಿಂದ ಸ್ಪರ್ಧಿಸಿದ್ದ ಸಾರಿಗೆ ಸಚಿವ ಶ್ರೀರಾಮುಲು ಕೂಡ ಪರಾಭವಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರೋಗ್ಯ ಸಚಿವ ಡಾ. ಕೆ ಸುಧಾರಕ್ ಕಾಂಗ್ರೆಸ್ ನ ಪ್ರದೀಪ್ ಈಶ್ವರ್ ವಿರುದ್ಧ ಸೋಲನುಭವಿಸಿದ್ದಾರೆ.
ಕೆಆರ್ ಪೇಟೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಕ್ರೀಡಾ ಸಚಿವ ನಾರಾಯಣಗೌಡ ಕೂಡ ಸೋತಿದ್ದಾರೆ, ಗೋವಿಂದ್ ಕಾರಜೋಳ- ಮುಧೋಳ್ ವಿ. ಸೋಮಣ್ಣ- ಚಾಮರಾಜನಗರ, ವರುಣಾ, ಮುರುಗೇಶ್ ನಿರಾಣಿ- ಬೀಳಗಿ, ಜೆಸಿ ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ ಕನಕಪುರದಿಂದ ಸಚಿವ ಎಂಟಿಬಿ ನಾಗರಾಜ್ ಕೂಡ ಹೊಸಕೋಟೆಯಲ್ಲಿ ಸೋಲನುಭವಿಸಿದರು. ಸಚಿವ ಹಾಲಪ್ಪ ಆಚಾರ್ ಯಲಬುರ್ಗಾದಲ್ಲಿ ಬಸವರಾಜ ರಾಯರೆಡ್ಡಿ ವಿರುದ್ಧ ಸೋಲುಂಡಿದ್ದಾರೆ. ಶಿಕ್ಷಣ ಸಚಿವ ಬಿಸಿ ನಾಗೇಶ್, ಸಾರಿಗೆ ಸಚಿವ ಬಿ. ಶ್ರೀರಾಮಲು, ಕೃಷಿ ಸಚಿವ ಬಿಸಿ ಪಾಟೀಲ್ ಸೇರಿದಂತೆ ಬಹಳಷ್ಟು ಸಚಿವರು ಸೋಲನುಭವಿಸಿದ್ದಾರೆ. ಸ್ಪೀಕರ್ ಕಾಗೇರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೆ. ಜಿ ಭೋಪಯ್ಯ, ಸೇರಿದಂತೆ ಪ್ರಮುಖ ನಾಯಕರು ಸೋಲುಂಡಿದ್ದಾರೆ.