ಬೆಂಗಳೂರು: ಹೊಸ ಆರ್ಥಿಕ ವರ್ಷಕ್ಕೆ ಒಂದು ದಿನವಷ್ಟೇ ಬಾಕಿ ಇದ್ದು, ಇಂದು(ಮಾ.30) ಮಧ್ಯಾಹ್ನ 3 ಗಂಟೆಗೆ ಮಂಡೆಯಾಗಬೇಕಿದ್ದ ಬಿಬಿಎಂಪಿ 2022-23ನೇ ಸಾಲಿನ ಬಜೆಟ್ ಮುಂದೂಡಿಕೆಯಾಗಿದೆ.
ಬಿಬಿಎಂಪಿ ಬಜೆಟ್ ಮಂಡಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ, ವಿವಿಧ ಕಾರ್ಯಕ್ರಮಗಳಿಗೆ ಹಾಗೂ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ಹಂಚಿಕೆಗಳಿಗೆ ಸಂಬಂಧಿಸಿದಂತೆ ಸಚಿವರು ಹಾಗೂ ಶಾಸಕರುಗಳಿಂದ ಆಕ್ಷೇಪಗಳು ವ್ಯಕ್ತವಾಗಿದ್ದರಿಂದ ಬಜೆಟ್ ಮಂಡಿಸದಿರಲು ಬಿಬಿಎಂಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಬಿಬಿಎಂಪಿ ವಾರ್ಡ್‍ಗಳ ಕರಡು ಪ್ರತಿ ಸಿದ್ದ
ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ-2021ರ ಕಾಯ್ದೆ ಅನ್ವಯ ಸುಮಾರು 9 ಸಾವಿರ ಕೋಟಿ ರೂ. ಮೊತ್ತದ ಬಜೆಟ್ ಮಂಡನೆಗೆ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಈ ಸಂಬಂಧ ಬಜೆಟ್ ಮಂಡನೆಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸೇರಿದಂತೆ ಇತರೆ ಅಧಿಕಾರಿಗಳು ಮುಖ್ಯಮಂತ್ರಿಗಳ ಅನುಮೋದನೆಯನ್ನು ಪಡೆದಿದ್ದರು.
ಆದರೆ, ನಗರದ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಕೆಲವು ಸಚಿವರು ಹಾಗೂ ಶಾಸಕರು ಅನುದಾನ ಹಂಚಿಕೆ ಬಗ್ಗೆ ತಕರಾರು ತೆಗೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿಯೂ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ಹಣಕಾಸು ವಿಭಾಗದ ಆಯುಕ್ತೆ ತುಳಸಿ ಮದ್ದಿನೇನಿ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಬಿಬಿಎಂಪಿ ಕಾಯಿದೆಯ ಸೆಕ್ಷನ್ 196ರ ಪ್ರಕಾರ ಬಿಬಿಎಂಪಿ ಬಜೆಟ್ ಅನ್ನು ಮುಂದಿನ ಆರ್ಥಿಕ ವರ್ಷಾರಂಭಕ್ಕಿಂತ ಕನಿಷ್ಠ ಮೂರು ವಾರಗಳಿಗೆ ಮುಂಚೆ ಅಂಗೀಕಾರವಾಗಬೇಕು. ಆದರೆ, ಪ್ರಸಕ್ತ ಹಣಕಾಸು ವರ್ಷ ಆರಂಭವಾಗಲು ಒಂದು ದಿನವಷ್ಟೇ ಉಳಿದಿದ್ದು, ಆಯವ್ಯಯ ಮಂಡನೆಗೆ ದಿನಾಂಕವನ್ನೇ ನಿಗದಿಪಡಿಸಿಲ್ಲ.
ಇದನ್ನು ಓದಿ: ಸಾಲಾ ಮಾಡ್ತೀರೊ, ಕಳ್ಳತನ ಮಾಡ್ತೀರೊ ಮೊದಲು ರಸ್ತೆ ಗುಂಡಿ ಮುಚ್ಚಿ – ಬಿಬಿಎಂಪಿಗೆ ‘ಹೈ’ ವಾರ್ನಿಂಗ್
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಬಿಬಿಎಂಪಿ ಆಯವ್ಯಯಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಆಡಳಿತಾಧಿಕಾರಿ, ಮುಖ್ಯ ಆಯುಕ್ತ ಹಾಗೂ ಹಣಕಾಸು ವಿಶೇಷ ಆಯುಕ್ತರು ಒಳಗೊಂಡಂತೆ ಇತರೆ ಅಧಿಕಾರಿಗಳೊಂದಿಗೆ ಮಂಗಳವಾರ ಸುಮಾರು 2 ಗಂಟೆಗಳ ಕಾಲ ಗುಪ್ತ ಸಭೆ ನಡೆಸಿದರು ಎನ್ನಲಾಗಿದೆ. ಈ ವೇಳೆ ಬಜೆಟ್‌ನಲ್ಲಿ ಕೆಲವು ಮಹತ್ವದ ಬದಲಾವಣೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಬುಧವಾರ ಮಂಡನೆಯಾಗಬೇಕಿದ್ದ ಆಯವ್ಯಯವನ್ನು ಮುಂದೂಡಿಕೆ ಕಂಡಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಈ ಬಗ್ಗೆ ಜಯನಗರ ಕ್ಷೇತ್ರದ ಬಿಬಿಎಂಪಿ ಕಂದಾಯ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಕಚೇರಿಯಲ್ಲಿ ಕೆಲಸ ಮಾಡದೆ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಮತದಾರರ ಪರಿಷ್ಕರಣೆ ಮಾಡುತ್ತಿರುವಾಗ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದಿದ್ದಾರೆ. ಅವರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ. ಇದರ ಬದಲು ಬಿಬಿಎಂಪಿ ಕಚೇರಿ ಹೆಸರನ್ನು ‘ಬೃಹತ್ ಬಿಜೆಪಿ ಮಹಾನಗರ ಪಾಲಿಕೆ’ ಎಂದು ಮರು ನಾಮಕರಣ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.