- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಹಿನ್ನೆಲೆ ರಾಜೀನಾಮೆ
- ರಾಜೀನಾಮೆ ಅಂಗೀಕಾರಕ್ಕೆ ಹೈಕಮಾಂಡ್ ಆದೇಶ ಕಾಯುತ್ತಿರುವ ಸಿಎಂ ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಹಿನ್ನೆಲೆ, ಸಿ.ಟಿ.ರವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿ.ಟಿ.ರವಿ ಶನಿವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಸಿ.ಟಿ.ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದರು. ಶನಿವಾರ ಸಂಜೆ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಸಿ.ಟಿ.ರವಿ ಅವರ ರಾಜೀನಾಮೆಯನ್ನು ಸಿಎಂ ಬಿಎಸ್ವೈ ಇನ್ನೂ ಸಹ ಅಂಗೀಕರಿಸಿಲ್ಲ.
ಇನ್ನು, ನಾಳೆ ಅಂದರೆ ಅ.5ರಂದು ಸಿ.ಟಿ.ರವಿ ಅವರು ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸಿ.ಟಿ.ರವಿ ಭೇಟಿ ಮಾಡಲಿದ್ದಾರೆ. ಜೊತೆಗೆ ಅಕ್ಟೋಬರ್ 5 ಮತ್ತು 6ರಂದು ದೆಹಲಿಯಲ್ಲಿ ಪಕ್ಷದ ಸಂಘಟನಾ ಸಭೆ ಇದೆ. ಈ ಸಭೆಯಲ್ಲೂ ಸಹ ಸಿ.ಟಿ.ರವಿ ಅವರು ಪಾಲ್ಗೊಳ್ಳಲಿದ್ದಾರೆ.
ಸಿ.ಟಿ.ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಾಗ ಪಕ್ಷ ಬಯಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಅಂತೆಯೇ ಈಗ ಕೊಟ್ಟ ಮಾತಿನಂತೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ತಮ್ಮ ರಾಜೀನಾಮೆ ಕುರಿತಾಗಿ ಸಿ.ಟಿ.ರವಿ ಮಾತನಾಡಿದ್ದರು. ನಾನು ಸಾಮಾನ್ಯ ಕಾರ್ಯಕರ್ತನಾಗಿಯೇ ಕೆಲಸ ಮಾಡಿಕೊಂಡು ಬಂದಿರುವುದರಿಂದ ನನಗೆ ಯಾವುದೇ ಗೊಂದಲಗಳಿಲ್ಲ. ಅಧಿಕಾರವೆಂಬುದು ಒಂದು ಸಾಧನ. ಅಧಿಕಾರವೇ ಜೀವನದ ಅಂತಿಮ ಗುರಿಯಲ್ಲ. ಪಕ್ಷದ ಸಂಘಟನೆಯೇ ಮೊದಲ ಆದ್ಯತೆ ಎಂದಿದ್ದರು.
ಅಲಿಖಿತ ನಿಯಮ ಬದಲಾಗಬಹುದು:
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಮರುದಿನವೇ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪರೋಕ್ಷವಾಗಿ ಸಿ.ಟಿ.ರವಿ ಟೀಕೆ ಮಾಡಿದ್ದರು. ಬಿಜೆಪಿಯಲ್ಲಿರುವ ಒಬ್ಬರಿಗೆ ಒಂದೇ ಹುದ್ದೆ ಎಂಬ ಅಲಿಖಿತ ನಿಯಮದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ , ನಮ್ಮ ಪಕ್ಷದಲ್ಲಿ 75 ವರ್ಷದ ಮೇಲಿರುವವರು ಅಧಿಕಾರದಿಂದ ನಿವೃತ್ತಿ ಪಡೆಯಬೇಕು ಎಂಬ ನಿಯಮವಿದೆ. ಆದರೆ ಕೆಲ ಬಾರಿ ಅದು ಬದಲಾಗಿದ್ದೂ ಇದೆ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದರು. ಈ ಮೂಲಕ ಯಡಿಯೂರಪ್ಪ ಅವರಿಗೆ ಬದಲಾಗಿರುವ ಅಲಿಖಿತ ನಿಯಮ ನನಗೆ ಬದಲಾಗಬಾರದೇಕೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರಿಗೆ ಚುಚ್ಚಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿ.ಟಿ.ರವಿ ರಾಜೀನಾಮೆ ನೀಡಲಿದ್ದಾರೆ ಎಂದಿದ್ದರು. ಮರುದಿನವೇ ಅಂದರೆ ಶುಕ್ರವಾರ ಸಿ.ಟಿ.ರವಿ ರಾಜೀನಾಂಎ ನೀಡಲು ಯಡಿಯೂರಪ್ಪ ವರ ಸಮಯ ಕೋರಿದ್ದರು. ಗಾಂಧಿ ಜಯಂತಿಯಂದು ಸಿಎಂ ಅವರ ಸಮಯ ಸಿಗದ ಹಿನ್ನೆಲೆಯಲ್ಲಿ ಶಿನಿವಾರ ಸಂಜೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಅಂಗೀಕಾರ ವಿಳಂಬ ಸಾಧ್ಯತೆ
ಸಚಿವ ಸ್ಣಾಕ್ಕೆ ಸಿ.ಟಿ.ರವಿ ರಾಜೀನಾಮೆ ನೀಡಿದ್ದರೂ ಸಿಎಂ ಯಡಿಯೂರಪ್ಪ ಅವರ ರಾಜೀನಾಮೆಯನ್ನೂ ತಕ್ಷಣ ಅಂಗೀಕರಿಸುವುದು ಅನುಮಾನ. ಈ ಬಗ್ಗೆ ಹೈಕಮಾಂಡ್ ಇನ್ನೂ ಸೂಚನೆ ನೀಡಿಲ್ಲ. ಮುಂದಿನ ತಿಂಗಳು ರಾಜ್ಯೋತ್ಸವ, ಉಪಚುನಾವಣೆ ಇವೆ. ಜೊತೆಗೆ ಸಚಿಚ ಸಂಪುಟ ವಿಸ್ತರಣೆ ಮಾಡಬೇಕಿದೆ. ಇವುಗಳಿಗಿಂತ ಹೆಚ್ಚಿನದಾಗಿ ಅ.6, 7 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಪ್ರಮುಖ ನೂತನ ಪದಾಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆ ಮುಗಿದ ಬಳಿಕ ಸಿ.ಟಿ.ರವಿ ರಾಜೀನಾಮೆ ಅಂಗೀಕಾರದ ಬಗ್ಗೆ ನಿರ್ಧಾರವಾಗಲಿದೆ. ಬಲ್ಲ ಮೂಲಗಳ ಮಾಹಿತಿಯಂತೆ ಸಚಿವ ಸಂಪುಟ ವಿಸ್ತರಣೆ ವೇಳೆ ರವಿ ಅವರ ರಾಜೀನಾಮೆ ಅಂಗೀಕಾರವಾಗಲಿದೆ ಎನ್ನಲಾಗಿದೆ. ಈ ವಳೇಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ರವಿ ಅವರ ರಾಜ್ಯೋತ್ಸವ ಕೆಲಸಗಳೂ ಮುಗಿದಿರುತ್ತವೆ. ಸಿಎಂ ಅವರ ುಪಚುನಾವಣೆ ಕೆಲಸಗಳೂ ಮುಗಿದಿರುತ್ತವೆ ಎಂಬ ಲೆಕ್ಕಾಚಾರ ಹೈಕಮಾಂಡಿನದ್ದು. ಹಾಗಾಗಿ ಸಿ.ಟಿ.ರವಿ ಅವರು ನವೆಂಬರ್ ಅಂತ್ಯದವರೆಗೂ ಸಚಿವರಾಗಿ ಮುಂದುವರಿಯುವ ಸಾಧ್ಯತೆ ಇದೆ.