ಸಚಿವ ಸಂಪುಟದಿಂದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರನ್ನು ವಜಾ ಮಾಡಿ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚನೆ ಮಾಡುವ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಗಾದ ಸೇವೆ ಮಾಡಿರುವ ಶಿಕ್ಷಣ ತಜ್ಞರನ್ನು ಸಾಹಿತಿ, ವಿಮರ್ಶಕರನ್ನು ಹಾಗೂ ಪ್ರಗತಿಪರ ಚಿಂತಕರು, ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ಹಲವಾರು ಸಂಘಟನೆಗಳ ಮುಖ್ಯಸ್ಥರನ್ನು ಮತ್ತು ಪೋಷಕ ವರ್ಗವನ್ನು ಕಡೆಗಣಿಸಿ, ಅರ್ಹತೆ ಇಲ್ಲದ ಶಿಕ್ಷಣ ಕ್ಷೇತ್ರದ ಗಂಧಗಾಳಿಯನ್ನು ತಿಳಿಯದವರನ್ನು ನೇಮಿಸುವ ಮೂಲಕ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸಿದ್ದಾರೆ.

ಈ ಬಗ್ಗೆ ನೈಜ ಹೋರಾಟಗಾರರ ವೇದಿಕೆ ಪರವಾಗಿ ಸಾಮಾಜಿಕ ಹೋರಾಟಗಾರ ಹೆಚ್. ಎಂ. ವೆಂಕಟೇಶ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲ ಥಾವರ್‌ ಚಂದ್‌ ಗೋಹ್ಲೆಟ್‌ ಅವರಿಗೆ ಪತ್ರವನ್ನು ಬರೆದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಸಚಿವರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅರಿವು ಇಲ್ಲದ ಸಂಘಟನೆಯೊಂದರ ಮುಂಚೂಣಿಯಲ್ಲಿರುವ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಷ್ಟೇ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೋಹಿತ್ ಚಕ್ರತೀರ್ಥ ಮತ್ತು ಅವರ ಒಂದೇ ಸಮುದಾಯಕ್ಕೆ ಸೇರಿದ  ತಂಡವನ್ನು ಆಯ್ಕೆ ಮಾಡಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಮತ್ತು ಮಕ್ಕಳ ಪೋಷಕರಿಗೆ ದಿಗ್ಬ್ರಮೆ ಉಂಟುಮಾಡಿದೆ ಎಂದು ಹೆಚ್‌.ಎಂ. ವೆಂಕಟೇಶ ತಿಳಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆಯನ್ನು ತಿರುಚಿ ಅವರಿಗೆ ಅವಮಾನ ಮಾಡಿರುವ, ಸುಳ್ಳನ್ನೇ ಸತ್ಯವಾಗಿಸುವ ಚಾಕಚಕ್ಯತೆಯುಳ್ಳ ನಿರ್ಲಜ್ಜವ್ಯಕ್ತಿ, ಪೂಜ್ಯನೀಯ ತಾಯಿ ಸ್ಥಾನದಲ್ಲಿ ನೋಡುವ ಮಹಿಳೆಯನ್ನು ನಿಂದಿಸಿ ಬರೆದಿರುವ ಬನ್ನಂಜೆ ಪಾಠವನ್ನು ಮತ್ತು ಸುಳ್ಳನ್ನು ವೈಭವೀಕರಿಸಿ ಕರ್ನಾಟಕದಾದ್ಯಂತ ಸಾರ್ವಜನಿಕರು ನೀಡಿದ ಬಿರುದು ಹೆಂಗ್ ಪುಂಗ್ಲಿ ಬರೆದ ಪಾಠವನ್ನು ಭಾರತದ ಭವಿಷ್ಯದ ನಾಯಕರಾಗುವ ಮಕ್ಕಳಿಗೆ ಬೋಧಿಸುವುದಕ್ಕೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ.

ದೇಶಪ್ರೇಮಿ ಭಗತ್ ಸಿಂಗ್, ಟಿಪ್ಪುಸುಲ್ತಾನ್ ಪಾಠಗಳಿಗೆ ಕತ್ತರಿ ಆಡಿಸಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡದೇ ಇರುವ ಜಾತ್ಯಾತೀತ ರಾಷ್ಟ್ರದಲ್ಲಿ ಮೇಲ್ಜಾತಿ ವೈಭವೀಕರಿಸುವ ಸಂಘಟನೆ ಹುಟ್ಟುಹಾಕಿದ ಕೆ ಬಿ ಹೆಗ್ಡೆವಾರ್ ಮಾಡಿದ ಭಾಷಣವನ್ನು ನಮ್ಮ ಮಕ್ಕಳಿಗೆ ಬೋಧಿಸುವ ಮತ್ತು ಮೇಲ್ಜಾತಿಯವರನ್ನು ವೈಭವೀಕರಿಸುವ, ಹಿಂದುಳಿದ ದಲಿತ ಸಮುದಾಯದ ಮತ್ತು ತುಳಿತಕ್ಕೊಳಗಾದ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಉದ್ದೇಶದಿಂದಲೇ ಜಿ ರಾಮಕೃಷ್ಣ, ಶ್ರೀಮತಿ ಕೆ. ನೀಲಾ, ಬಿ ಟಿ ಲಲಿತಾ ನಾಯಕ್ ಮತ್ತಿತರರು ಬರೆದಿರುವ ಪಾಠಗಳನ್ನು ಯಾವುದೇ ಕಾರಣ ನೀಡದೆ ತೆಗೆದು ಹಾಕಿರುವುದು ಪ್ರಜ್ಞಾವಂತ ನಾಗರಿಕರನ್ನು ಕೆರಳಿಸಿದೆ.

ಮುಂದೆ ನಮ್ಮ ದೇಶವನ್ನು ಕಟ್ಟುವ, ದೇಶದ ಭವಿಷ್ಯವನ್ನು ರೂಪಿಸುವ ಮಕ್ಕಳ ಪಠ್ಯ ಪರಿಷ್ಕರಣೆಯಲ್ಲಿ ಜಾತಿ, ರಾಜಕೀಯ ಇನ್ನಿತರ ಷಡ್ಯಂತ್ರಗಳನ್ನು ರೂಪಿಸದೆ ಶುದ್ಧ ಮನಸ್ಸಿನ, ಶುದ್ಧ ಹೃದಯದ, ಸಾಮ್ರಾಜ್ಯದ ಒಳಿತಿಗಾಗಿ, ಭವ್ಯ ಭಾರತದ ಸಮೃದ್ಧಿಗಾಗಿ ಚಿಂತಿಸುವವರನ್ನು  ಹೊರಗಿಟ್ಟು, ದೇಶದ ಭವಿಷ್ಯವನ್ನು ರೂಪಿಸುವ ಮಕ್ಕಳು ಕಲಿಯುವ ಪಾಠವನ್ನು ನಿರ್ಧರಿಸುವ ಕೆಲಸವನ್ನು ಅನರ್ಹ ವ್ಯಕ್ತಿಗಳ ಕೈಗೆ ನೀಡಿರುವುದು ಶಿಕ್ಷಣ ಸಚಿವರ ಎಡಬಿಡಂಗಿ ನಿರ್ಧಾರ. ಈ ನಿರ್ಧಾರದಿಂದ ರಾಜ್ಯದ ನಾಗರೀಕರು ತಲ್ಲಣಗೊಂಡಿದ್ದಾರೆ ಎಂದು ಹೆಚ್‌.ಎಂ. ವೆಂಕಟೇಶ ಆರೋಪಿಸಿದ್ದಾರೆ.

ಬಹಳ ಮುಖ್ಯವಾಗಿ ಒಂದೇ ಸಮುದಾಯದವರನ್ನೇ ಈ ಪಠ್ಯಪುಸ್ತಕ ಪರಿಷ್ಕರಣೆಯ ಸಮಿತಿಯಲ್ಲಿ ತಂದು ಹಿಂದುಳಿದವರು, ದಲಿತರು, ಪ್ರಗತಿಪರರು, ಸಮಾಜದ ಚಿಂತಕರು, ಹೋರಾಟಗಾರರನ್ನು ತುಳಿದು ಆಳುವ ತಂತ್ರಗಾರಿಕೆಯನ್ನು ಈ ಪಠ್ಯಪುಸ್ತಕ ಪರಿಷ್ಕರಣ  ಸಮಿತಿಯ ನಡವಳಿಕೆಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಆಡಳಿತದಲ್ಲಿ ಮುಂದುವರಿಯುವ ಅರ್ಹತೆ  ಇಲ್ಲದಿರುವುದರಿಂದ ತಕ್ಷಣ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ತಕ್ಷಣ ವಜಾಗೊಳಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಹೆಚ್‌.ಎಂ. ವೆಂಕಟೇಶ ವಿನಂತಿಸಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *