ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಇಂದು ಬೆಳಿಗ್ಗೆ ಕುಮಾರಕೃಪಾ ಅತಿಥಿ ಗೃಹಕ್ಕೆ ಆಗಮಿಸಿ ಬಿಜೆಪಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಕಿಷನ್ ರೆಡ್ಡಿ ಅವರನ್ನು ಭೇಟಿ ಮಾಡಿದರು.
ಇದೇ ಸಂದರ್ಭದಲ್ಲಿ ಸಚಿವ ಆಕಾಂಕ್ಷಿಗಳಾದ ಬಿಜೆಪಿ ಪಕ್ಷದ ಶಾಸಕರು, ಪರಿಷತ್ ಸದಸ್ಯರು, ಮುಖಂಡರು ಬಹಳಷ್ಟು ಮಂದಿ ಉಪಸ್ಥಿತರಿದ್ದಾರೆ. ಕುಮಾರಕೃಪಾ ಅತಿಥಿ ಗೃಹವು ರಾಜಕೀಯ ಚಟುವಟಿಕೆಯ ಕೇಂದ್ರಬಿಂದುವಾಗಿದೆ. ಸಚಿವ ಆಕಾಂಕ್ಷಿಗಳು ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ವೀಕ್ಷಕರನ್ನು ಭೇಟಿ ಮಾಡಿದ್ದಾರೆ.
ಇದನ್ನು ಓದಿ: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ
ಶಾಸಕರಾದ ಮುರುಗೇಶ್ ನಿರಾಣಿ, ಆರ್. ಅಶೋಕ, ಎಸ್.ಟಿ, ಸೋಮಶೇಖರ್, ಡಾ. ಸುಧಾಕರ್ ಕೆ., ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅನೇಕ ಪ್ರಮುಖರ ಮಾತುಕತೆ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಅಶೋಕ ‘ಇದು ನಮಗೆ ಸಂತಸ ತಂದಿದೆ. ಬಸವರಾಜ್ ಬೊಮ್ಮಾಯಿ, ನಾನು ಜೋಡೆತ್ತು ಇದ್ದಂತೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿ ಇರುತ್ತೇವೆ. ಬೊಮ್ಮಾಯಿ ಮುಖ್ಯಮಂತ್ರಿ ಆಗಿರುವುದು ಬಹಳ ಸಂತೋಷ ತಂದಿದೆ. ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ಸಂಪುಟ ರಚನೆ ಬಗ್ಗೆ ಮಾತನಾಡಲಿದ್ದಾರೆ. ಆ ಬಳಿಕ ಸಚಿವ ಸಂಪುಟ ರಚನೆಯಾಗಲಿದೆ. ಒಂದು ವಾರದಲ್ಲೇ ಆಗಬಹುದುʼ ಎಂದು ಹೇಳಿದರು.
ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಮಾತನಾಡಿ ‘ನಮ್ಮ ನಾಯಕರನ್ನು ಭೇಟಿ ಮಾಡಲು ಬಂದಿದ್ದೆ. ನಾನು ತುಂಬಾ ಹಿರಿಯ ಶಾಸಕ. ಹೀಗಾಗಿ, ನನ್ನನ್ನು ಪರಿಗಣಿಸಬೇಕು. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಆದ ಸಚಿವರನ್ನೇ ಹಿಂದಿನ ಯಡಿಯೂರಪ್ಪ ಸರಕಾರ ಅವಧಿಯಲ್ಲಿಯೂ ಸಚಿವರಾಗಿದ್ದಾರೆ. ಕೆಲವರನ್ನು ಬದಲಾವಣೆ ಮಾಡಿ ಹೊಸಬರಿಗೂ ಅವಕಾಶ ಕೊಡಬೇಕೆಂದು ಹೇಳಿರುವೆ. ಸಚಿವ ಸ್ಥಾನ ನೀಡಲಿ, ನೀಡದಿರಲಿ ಕೆಲಸ ಮಾಡುತ್ತೇನೆʼ ಎಂದರು.
ಇದನ್ನು ಓದಿ: ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ : ನಾಳೆ ಪ್ರಮಾಣ ವಚನ
ಎಚ್. ವಿಶ್ವನಾಥ್ ಮಾತನಾಡಿ, ‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುತ್ತಿರುವುದು ಸಂತೋಷ. ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿರುವ ಅನುಭವ ಇದೆ. ಸಮರ್ಥವಾಗಿ ಕೆಲಸ ಮಾಡುತ್ತಾರೆಂಬ ವಿಶ್ವಾಸ ಇದೆ. ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ಮೋದಿ ಮಾಡಿದಂತೆ ಇಲ್ಲಿನ ಸಂಪುಟದಲ್ಲೂ ಮಾಡಬೇಕು. ನಾನು ಯಾರ ಮನೆ ಬಾಗಿಲಿಗೂ ಹೋಗೋದಿಲ್ಲ. ಸಚಿವ ಸ್ಥಾನ ಕೊಡಿ ಅಂತಾ ಯಾರನ್ನೂ ಕೇಳುವುದಿಲ್ಲ. ಹಳಬರು, ಹೊಸಬರನ್ನ ಸೇರಿಸಿಕೊಂಡು ಸಂಪುಟ ರಚನೆ ಮಾಡಬೇಕು. ನನಗೆ ಯಾವ ಖಾತೆಯೂ ಬೇಡ’ ಎಂದರು.