ಸಾಂವಿಧಾನಿಕ ಹುದ್ದೆ ಹೊಂದಿರುವವರನ್ನು ಕೋರ್ಟಿಗೆ ಕರೆಯಿಸಬೇಡಿ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಚುನಾವಣಾ ಆಯುಕ್ತರು ಸೇರಿದಂತೆ ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಕರೆಸಬೇಕಾಗಿಲ್ಲ, ಕರೆಸುವುದು ಬೇಡ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಸಂಬಂಧಿಸಿದ ಕೇಂದ್ರ ಚುನಾವಣಾ ಆಯೋಗದ ಮಾಜಿ ಆಯುಕ್ತ ಸುನಿಲ್‌ ಅರೋರಾ ಅವರಿಗೆ ಖುದ್ದು ಹಾಜರಾಗುವಂತೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ತಡೆ ನೀಡಿದೆ.

ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್‌ ಕಮಟಳ್ಳಿ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ಸಂಬಂಧ ಸಾಕ್ಷ್ಯ ನುಡಿಯಲು ಖುದ್ದು ಹಾಜರಾಗಬೇಕೆಂದು ಸೂಚಿಸಿ ಸುನಿಲ್‌ ಅರೋರಾ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ನೇತೃತ್ವದ ವಿಭಾಗೀಯ ಪೀಠ ತಡೆ ನೀಡಿದೆ.

ನ್ಯಾಯಾಲಯಗಳು ಭಾರತೀಯ ಚುನಾವಣಾ ಆಯೋಗದಿಂದ ಅಗತ್ಯ ದಾಖಲೆಗಳನ್ನು ತರಿಸಿಕೊಳ್ಳಬಹುದು. ಆದರೆ, ಸಾಂವಿಧಾನಿಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಅಥವಾ ನಿವೃತ್ತ ಅಧಿಕಾರಿಗಳನ್ನು ಸುಮ್ಮನೆ ಕೆಲವು ಪ್ರಶ್ನೆ ಕೇಳಲು ಸಮನ್ಸ್‌ ಜಾರಿಗೊಳಿಸುವುದು ಸಮಂಜಸವಲ್ಲ ಎಂದು ನ್ಯಾಯಪೀಠ ಹೇಳಿದೆ.

ಸಾಂವಿಧಾನಿಕ ಸಂಸ್ಥೆಯ ಮಾಜಿ ಮುಖ್ಯಸ್ಥರನ್ನು ಖುದ್ದು ಹಾಜರಾಗುವಂತೆ ಹೇಳುವುದು, ಅವರು ದಾಖಲೆಗಳನ್ನು ತರಬೇಕೆಂದು ಸೂಚನೆ ನೀಡುವುದು ಸಹ ಸರಿಯಲ್ಲ. ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯಗಳು ತಮ್ಮ ವಿವೇಚನೆ ಅಧಿಕಾರವನ್ನು ಬಳಸಬೇಕಾಗುತ್ತದೆ ಎಂದು ವಿಭಾಗೀಯ ಪೀಠ ಆದೇಶದಲ್ಲಿ ತಿಳಿಸಿದೆ.

ವಾದ-ಪ್ರತಿವಾದ ಆಲಿಸಿದ ವಿಭಾಗೀಯ ಪೀಠವು, ಸಾಮಾನ್ಯವಾಗಿ ಸಿವಿಲ್‌ ವ್ಯಾಜ್ಯಗಳಲ್ಲಿ ಸಂವಿಧಾನಿಕ ಹುದ್ದೆಗಳಲ್ಲಿರುವವರನ್ನು ಕೋರ್ಟಿಗೆ ಹಾಜರಾಗುವಂತೆ ಆದೇಶಿಸುವುದಿಲ್ಲ. ಆದರೆ, ನ್ಯಾಯಾಲಯಗಳು ಭಾರತೀಯ ಚುನಾವಣಾ ಆಯೋಗದಿಂದ ಅಗತ್ಯ ದಾಖಲೆಗಳನ್ನು ತರಿಸಿಕೊಳ್ಳಬಹುದು. ಅವರು ತಮ್ಮ ಕರ್ತವ್ಯವನ್ನು ನಿರ್ಭೀಡೆಯಿಂದ ಚಲಾಯಿಸಬೇಕಾದರೆ ಕೆಲವೊಂದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ ಮತ್ತು ಅದರಂತೆ ನಡೆದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಅವರನ್ನು ಸಾಕ್ಷ್ಯ ಎಂದು ಕರೆಯುವ ಭಯ ಹುಟ್ಟುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿ ರಕ್ಷಣೆಗೆ ರಕ್ಷಣಾತ್ಮಕ ವಿಧಾನದ ಮೊರೆ ಹೋಗುತ್ತಾರೆ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ

ಅಥಣಿ ವಿಧಾನಸಭಾ ಕ್ಷೇತ್ರಕ್ಕೆ 2019ರಲ್ಲಿ ಉಪ ಚುನಾವಣೆ ನಡೆದಿತ್ತು. ನಿಗದಿಯಾಗಿದ್ದ ಚುನಾವಣೆ ಮುಂದೂಡಿ ಮತ್ತು ನಾಮಪತ್ರ ಸಲ್ಲಿಕೆ ನಿಗದಿಪಡಿಸಿದ್ದ ಸಮಯವನ್ನು ವಿಸ್ತರಿಸಿ 2019ರ ಸೆಪ್ಟಂಬರ್‌ 27ರಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸಿತ್ತು. ನಂತರ ಡಿಸೆಂಬರ್‌ 12ರಂದು ಚುನಾವಣೆ ನಡೆದಿತ್ತು. ಬಿಜೆಪಿ ಅಭ್ಯರ್ಥಿ ಮಹೇಶ್‌ ಕುಮಟಳ್ಳಿ ಆಯ್ಕೆಯಾಗಿದ್ದರು. ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ರವಿ ಶಿವಪ್ಪ ಪಡಸಲಗಿ ಹೈಕೋರ್ಟಿಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *