- ರೋಹಿಣಿ ಸುಂಧೂರಿ ಮತ್ತು ಸಾ.ರ ಮಹೇಶ್ ನಡುವೆ ಮತ್ತೆ ಜಟಾಪಟಿ ಆರಂಭ
- ರೋಹಿಣಿ ಸಿಂಧೂರಿ ರೂಪಿಸಿದ್ದ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ
- ಒಂದು ಕೋಟಿ ರೂ ತಗುಲುವ ಬಟ್ಟೆ ಬ್ಯಾಗ್ ಖರೀದಿಗೆ ಏಳು ಕೋಟಿ ವೆಚ್ಚ
- ರೋಹಿಣಿ ಸಿಂಧೂರಿ ಆರು ಕೋಟಿ ರೂ ಕಿಕ್ ಬ್ಯಾಕ್ ಪಡೆದ ಆರೋಪ
ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ. ಮಹೇಶ್ ನಡುವಿನ ಮುಸುಕಿನ ಗುದ್ದಾಟ ನಿಂತತೆ ಕಾಣುತ್ತಿಲ್ಲ. ಮೈಸೂರಿನಿಂದ ಅವರು ವರ್ಗವಾದ ಮೇಲೆ ತಣ್ಣಗಾಗಬಹುದು ಎಂದು ಬಹುತೇಕರು ಅಂದುಕೊಂಡಿದ್ದರು. ಈಗ ಆ ಜಟಾಪಟಿ “ರೋಹಿಣಿ ಸಿಂಧೂರಿ 6 ಕೋಟಿ ರೂ ಭ್ರಷ್ಟಾಚಾರ” ನಡೆಸಿದ್ದಾರೆ ಎನ್ನುವ ಮೂಲಕ ಬೀದಿಗೆ ಬಂದಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ರಾಜಕೀಯ ನಾಯಕರೊಂದಿಗಿನ ತೀವ್ರ ಸಮರದ ಬಳಿಕ ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಸರ್ಕಾರಿ ಬಂಗಲೆ ಆವರಣದಲ್ಲಿ ಈಜುಕೊಳ ನಿರ್ಮಾಣ ವಿಚಾರ ಭಾರಿ ವಿವಾದ ಸೃಷ್ಟಿಸಿತ್ತು. ಆದರೆ ಅವರ ವರ್ಗಾವಣೆಯಾಗಿ ತಿಂಗಳುಗಳು ಉರುಳಿದರೂ ರಾಜಕೀಯ ಮುಖಂಡರ ಆರೋಪಗಳು ನಿಂತಿಲ್ಲ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆ ನೆಪದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಕ್ರಮವೆಸಗಿದ್ದಾರೆ ಎಂದು ಸಾ.ರಾ. ಮಹೇಶ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಟ್ಟೆ ಬ್ಯಾಗ್ ಖರೀದಿಗೆ ಜಿಎಸ್‌ಟಿ ಸೇರಿ 9 ರೂ ಆಗುತ್ತದೆ. ಆದರೆ, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕೈಮಗ್ಗ ಇಲಾಖೆಯವರಿಂದ ಖರೀದಿಸದೆ, ಖಾಸಗಿಯವರಿಂದ ಬ್ಯಾಗ್ ಖರೀದಿಸಿದ್ದಾರೆ. ಈ ಒಂದು ಬ್ಯಾಗ್ ಬೆಲೆ 52 ರೂ. ಇದೆ ಎಂದು ಆರೋಪಿಸಿದರು.
ಬ್ಯಾಗ್ ಮೇಲೆ ಕೇವಲ “ನಾನು ಪರಿಸರ ಸ್ನೇಹಿ” ಎಂಬ ಸಾಲು ಹಾಗೂ ಹಾಗೂ ಚಿಹ್ನೆ ಮುದ್ರಣ ಮಾಡಿಸಲು, ಪ್ರತಿ ಚೀಲಕ್ಕೆ 42 ರೂ. ಬಿಲ್ ಮಾಡಿದ್ದಾರೆ. ಒಟ್ಟು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಇದಕ್ಕೆ ವಾಸ್ತವವಾಗಿ ತಗುಲುವುದು 1,47,15,000 ರೂಪಾಯಿ. ಆದರೆ 7 ಕೋಟಿಗೂ ಅಧಿಕ ರೂಪಾಯಿ ನೀಡಿ ಖರೀದಿ ಮಾಡಲಾಗಿದೆ. ಅಂದರೆ 6 ಕೋಟಿ 18 ಲಕ್ಷ ರೂ. ಭ್ರಷ್ಟಾಚಾರ ನಡೆದಿದೆ. ರೋಹಿಣಿ ಸಿಂಧೂರಿ ಆರು ಕೋಟಿ ರೂ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ದೂರಿದರು.
ಇದನ್ನೂ ಓದಿ : ಮೈಸೂರು ಲ್ಯಾಂಡ್ ಮಾಫೀಯಾ ಹಿಂದೆ ಸಾರಾ ಇದ್ದಾರೆ? ತನಿಖೆಗೆ ಮುಂದಾಗಿದ್ದಕ್ಕೆ ವರ್ಗಾವಣೆ – ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿಯನ್ನು ವಜಾಗೊಳಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸುವೆ. ಮುಖ್ಯ ಕಾರ್ಯದರ್ಶಿ ಅವರ ಕಚೇರಿ ಮುಂದೆ ಸದ್ಯದಲ್ಲಿಯೇ ಧರಣಿ ನಡೆಸುತ್ತೇನೆ ಎಂದು ಅವರು ಹೇಳಿದರು.
ರೋಹಿಣಿಯವರು ಮೈಸೂರಿನಿಂದ ಹೋಗುವ ಮುನ್ನ ಶಾಸಕ ಸಾ.ರಾ. ಮಹೇಶ್ ವಿರುದ್ಧ ಭೂ ಮಾಫಿಯಾದ ಆರೋಪ ಮಾಡಿದ್ದಷ್ಟೆ ಅಲ್ಲದೆ, ಭೂ ಅಕ್ರಮಗಳ ತನಿಖೆ ಮಾಡಿ ಎಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು. ಆ ತನಿಖೆಯಲ್ಲಿ ಪ್ರಗತಿಯಲ್ಲಿದೆ ಇದನ್ನು ದಿಕ್ಕು ತಪ್ಪಿಸಲು ಸಾ.ರಾ.ಮಹೇಶ್ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಇಬ್ಬರ ಜಗಳದಲ್ಲಿ ಎರಡು ಅಕ್ರಮಗಳು ಬಯಲಿಗೆ ಬರುತ್ತಿದ್ದು ರಾಜ್ಯ ಸರಕಾರ ಸರಿಯಾದ ತನಿಖೆಯನ್ನು ನಡೆಸಬೇಕಿದೆ.