ಅಸ್ಸಾಂನಲ್ಲಿ ಸಂಭವಿಸಿದ ಧ್ವಂಸಕಾರೀ ಪ್ರವಾಹವು ಬ್ರಹ್ಮಪುತ್ರ ಕಣಿವೆ ಮತ್ತು ಬರಾಕ್ ಕಣಿವೆಗಳಲ್ಲಿ ಮಾನವ ಜೀವ ಮತ್ತು ಸೊತ್ತುಗಳನ್ನೂ ಭಾರೀ ಪ್ರಮಾಣದಲ್ಲಿ ಬಲಿ ತೆಗೆದುಕೊಂಡಿದೆ. 35 ಜಿಲ್ಲೆಗಳ ಪೈಕಿ 32 ಜಿಲ್ಲೆಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಜನರು ಬದುಕುಳಿಯಲು ಹೋರಾಡುತ್ತಿದ್ದಾರೆ. ದುರದೃಷ್ಟವಶಾತ್, ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 1.08 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಭೂಮಿ ಮುಳುಗಡೆಯಾಗಿದ್ದು, 2000 ಕಿ.ಮೀ.ಗೂ ಹೆಚ್ಚು ರಸ್ತೆಗಳು ಕೆಟ್ಟು ಹೋಗಿವೆ. ಸಾವಿರಾರು ಜಾನುವಾರುಗಳು ನಾಶವಾಗಿವೆ ಎಂದು ವರದಿಯಾಗಿದೆ.
ಇಂತಹ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಶೋಚನೀಯವಾಗಿ ವಿಫಲವಾಗಿವೆ. ಎರಡೂ ಸರ್ಕಾರಗಳು ಮಹಾರಾಷ್ಟ್ರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕುದುರೆ ವ್ಯಾಪಾರದಲ್ಲಿಯೇ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿವೆ, ಅಲ್ಲಿಯ ಶಾಸಕರಿಗೆ ಆತಿಥ್ಯ ನೀಡುವಲ್ಲಿ ಮಗ್ನವಾಗಿವೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಖೇದ ವ್ಯಕ್ತಪಡಿಸಿದೆ.
ಪರಿಣಾಮವಾಗಿ, ರಕ್ಷಣಾ ಕಾರ್ಯಾಚರಣೆಗಳು, ಪರಿಹಾರ ಕಾರ್ಯ ಮತ್ತು ಆಹಾರ ವಿತರಣೆ, ಕುಡಿಯುವ ನೀರು, ಔಷಧಗಳ ಪೂರೈಕೆ ಅಸ್ತವ್ಯಸ್ತಗೊಂಡಿವೆ ಮತ್ತು ಆರೋಗ್ಯ ಕಾರ್ಯಕರ್ತರು ಕಕ್ಕಾಬಿಕ್ಕಿಯಾಗಿದ್ದಾರೆ. ಪರಿಸ್ಥಿತಿಯ ಅವಲೋಕನ ಮತ್ತು ಅಗತ್ಯ ಪರಿಹಾರ ಮತ್ತು ನೆರವು ಒದಗಿಸಲು ಪ್ರಧಾನಿಯಾಗಲೀ ಅಥವಾ ಯಾವುದೇ ಸಂಪುಟ ಸಚಿವರಾಗಲೀ ಪ್ರವಾಹ ಪೀಡಿತ ರಾಜ್ಯಕ್ಕೆ ಭೇಟಿ ನೀಡಿಲ್ಲ. ಇದು ಅತ್ಯಂತ ನಿರ್ದಯ ವರ್ತನೆ ಎಂದು ಟೀಕಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೋ ನೊಂದ ಜನರಿಗೆ ಕೂಡಲೇ ಪರಿಹಾರ ಒದಗಿಸುವಂತೆ ಕರೆ ನೀಡಿದೆ. ಪರಿಹಾರ ಶಿಬಿರಗಳಲ್ಲಿ ಆಹಾರ ಮತ್ತು ಸರಿಯಾದ ಸೌಕರ್ಯಗಳ ವ್ಯವಸ್ಥೆಗಳನ್ನು ಖಚಿತಪಡಿಸಬೇಕು. ವಾಸಸ್ಥಳ, ಆಸ್ತಿ ಕಳೆದುಕೊಂಡಿರುವ ಎಲ್ಲರ ಪುನರ್ವಸತಿಗೆ ರಾಜ್ಯ ಸರಕಾರ ಗಂಭೀರ ಪ್ರಯತ್ನ ನಡೆಸಬೇಕು ಎಂದು ಅದು ಹೇಳಿದೆ.
ಅಸ್ಸಾಂನ ಪರಿಹಾರ ಕಾರ್ಯಗಳಿಗೆ ಸ್ವಯಂಪ್ರೇರಿತವಾಗಿ ನಿಧಿಯನ್ನು ನೀಡುವಂತೆ ಜನತೆಗೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆ ನೀಡಿದೆ.