ನರಮೇಧಕ್ಕೆ ಕರೆ ನೀಡುವವರನ್ನು ಬಂಧಿಸಲು ಹಿಂಜರಿಕೆ ಏಕೆ: ನಿವೃತ್ತ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌

ನವದೆಹಲಿ: ಭಾರತದಲ್ಲಿ ದೇಶದ್ರೋಹದ ಕಾನೂನನ್ನು ಸಂಪೂಣವಾಗಿ ತೆಗೆದುಹಾಕಲು ಮತ್ತು ಇನ್ನೊಬ್ಬರನ್ನು ಹಿಂಸೆಗೆ ಪ್ರಚೋದಿಸದೇ ಇರುವಂತಹ ವಾಕ್‌ಸ್ವಾತಂತ್ರ್ಯವನ್ನು ಅನುಮತಿಸಲು ಇದು ಸಕಾಲವಾಗಿದೆ ಎಂದು ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶ ರೋಹಿಂಟನ್‌ ನಾರಿಮನ್‌ ಹೇಳಿದ್ದಾರೆ.

ಮುಂಬೈಯ ಡಿಎಂ ಹರೀಶ್‌ ಸ್ಕೂಲ್‌ ಆಫ್‌ ಲಾ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಸರಕಾರದ ಟೀಕಾಕಾರರನ್ನು ದೇಶದ್ರೋಹದ ಕಾನೂನಿನಡಿಯಲ್ಲಿ ಬಂಧಿಸುವ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಾಕ್‌ ಸ್ವಾತಂತ್ರ್ಯ ಬಳಕೆ ಮಾಡಿದವರನ್ನು ದೇಶದ್ರೋಹ ಕಾನೂನಿನಡಿ ಬಂಧಿಸಿದರೆ, ದ್ವೇಷದ ಭಾಷಣ ನೀಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.

ಸರಕಾರವನ್ನು ಟೀಕಿಸಿದ್ದಾರೆಂಬ ಏಕೈಕ ಕಾರಣಕ್ಕೆ ಕಾಮಿಡಿಯನ್‌ಗಳು, ಯುವಕರನ್ನು ಹಾಗೂ ವಿದ್ಯಾರ್ಥಿಗಳನ್ನು ದೇಶದ್ರೋಹದ ಕಾನೂನಿನಡಿ ಬಂಧಿಸಲಾಗುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ನರಮೇಧಕ್ಕೆ ಕರೆ ನೀಡಿ ದ್ವೇಷದ ಭಾಷಣ ನೀಡುವ ಜನರಿದ್ದಾರೆ. ಆದರೆ ಅಧಿಕಾರಿಗಳು ಇಂತಹವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಯುತ್ತಿದ್ದಾರೆ. ಆಡಳಿತದಲ್ಲಿರುವವರು ಇಂತಹ ದ್ವೇಷದ ಭಾಷಣಗಳ ಬಗ್ಗೆ ಮೌನ ತಾಳಿರುವ ಮೂಲಕ ಬಹುತೇಕ ಅವುಗಳನ್ನು ಪ್ರೋತ್ಸಾಹಿಸಿದಂತಾಗಿದೆ ಎಂದರು.

ದ್ವೇಷದ ಮಾತು ಅಸಾಂವಿಧಾನಿಕ. ಇದು ಸಂವಿಧಾನ ಬಾಹಿರ ಎಂದು ಗೊತ್ತಿದ್ದರೂ ಕೂಡ ದ್ವೇಷ ಭಾಷಣವನ್ನು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ದ್ವೇಷ ಭಾಷಣ ಮಾಡುವ ಒಬ್ಬ ವ್ಯಕ್ತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡಬಹುದಾದರೂ, ಅದು ಎಂದಿಗೂ ಸಂಭವಿಸುವುದಿಲ್ಲ. ಏಕೆಂದರೆ ಯಾವುದೇ ಕನಿಷ್ಠ ಶಿಕ್ಷೆಗಳನ್ನು ನಿಗದಿಪಡಿಸಲಾಗಿಲ್ಲ.ನಮ್ಮ ಸಂವಿಧಾನದಲ್ಲಿ ಒಳಗೊಂಡಿರುವ ಕಾನೂನಿನ ಆಳ್ವಿಕೆ ನಿಜವಾಗಿಯೂ ಬಲಪಡಿಸಲು ಬಯಸಿದರೆ, ಸಂಸತ್ತು ಕೂಡಲೇ ಅಗತ್ಯ ತಿದ್ದುಪಡಿಗಳನ್ನು ಮಂಡಿಸಬೇಕು ಎಂದು ಅವರು ತಿಳಿಸಿದ್ದಾರೆ

ದ್ವೇಷದ ಭಾಷಣ ಮಾಡುವವರಿಗೆ ಗರಿಷ್ಠ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಕಿಡಿಗೇಡಿಗಳ ಕೃತ್ಯ ಕಡಿಮೆ ಮಾಡಲು ಸಾಧ್ಯ. ಹೀಗಾಗಿ ಕೇಂದ್ರ ಸರ್ಕಾರ ಅಗತ್ಯ ಕಾನೂನು ತಿದ್ದುಪಡಿ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ದ್ವೇಷದ ಭಾಷಣ ಅಸಂವಿಧಾನಿಕ ಎಂದು ಇತ್ತೀಚೆಗೆ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿರುವುದನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ನಾರಿಮನ್‌, ʻʻಸ್ವಲ್ಪ ತಡವಾದರೂ ಇದನ್ನು ಗಮನಿಸಿದ್ದಾರೆʼʼ ಎಂದು ಹೇಳಿದರು.

ಏಳು ವರ್ಷ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ  ರೋಹಿಂಟನ್‌ ನಾರಿಮನ್‌ ಕಳೆದ ವರ್ಷ ನಿವೃತ್ತರಾದರು. ಅವರು  ಐಟಿ ಕಾಯಿದೆಯ ಸೆಕ್ಷನ್‌ 65ಎ ಅನ್ನು ರದ್ದುಗೊಳಿಸಿದ ಶ್ರೇಯಾ ಸಿಂಘಾಲ್-‌ ಕೇಂದ್ರ ಸರಕಾರ ಪ್ರಕರಣದ ತೀರ್ಪು ನೀಡಿದ ಪೀಠದಲ್ಲಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಯಲ್ಲಿನ ಸಂದೇಶ ನೀಡುವವರ ವಿರುದ್ಧ ಪ್ರಕರಣ ದಾಖಲಿಸಲು ಈ ಸೆಕ್ಷನ್‌ ಅನ್ನು ಬಳಸಲಾಗುತ್ತಿತ್ತು.

Donate Janashakthi Media

Leave a Reply

Your email address will not be published. Required fields are marked *