ಬೆಂಗಳೂರು: ನೋಟ್ ಬುಕ್ ತಂದಿಲ್ಲ ಎಂಬ ಕಾರಣಕ್ಕೆ ನಗರದ ಖಾಸಗಿ ಶಾಲೆಯೊಂದರ ಶಿಕ್ಷಕ ಆರ್ ಟಿ ಇ ಕಾಯ್ದೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಯೊಬ್ಬನಿಗೆ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. ಕಿವಿ ಮತ್ತು ಕಣ್ಣಿಗೆ ತೀವ್ರವಾಗಿ ಪೆಟ್ಟಾಗಿರುವ ವಿದ್ಯಾರ್ಥಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಮಾಗಡಿ ರಸ್ತೆಯ ಅನುಭವ ನಗರದಲ್ಲಿರುವ ಬ್ಲೂವೆಲ್ ಶಾಲೆಯಲ್ಲಿ ಘಟನೆ ನಡೆಸಿದ್ದು, ವಿದ್ಯಾರ್ಥಿ ತನ್ಮಯ್ ಮೇಲೆ ಶಿಕ್ಷಕ ಮಾದೇಶ್ ಹಲ್ಲೆ ನಡೆಸಿದ್ದಾನೆ. ಮಗನ ಮೇಲೆ ಶಿಕ್ಷಕ ನಡೆಸಿರುವ ಹಲ್ಲೆ ಖಂಡಿಸಿ ವಿದ್ಯಾರ್ಥಿಯ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಬ್ಲೂವೆಲ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ತಮ್ಮ ಮಗ ತನ್ಮಯ್ ತರಗತಿಗೆ ಬಂದಾಗ ಗಣಿತ ನೋಟ್ ಬುಕ್ ತಂದಿಲ್ಲ ಎಂದು ಶಿಕ್ಷಕ ಮಾದೇಶ್ ಮಗನ ಕೆನ್ನೆಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ನಮ್ಮ ಮಗನ ಕಿವಿ, ಕಣ್ಣಿಗೆ ತೀವ್ರ ಪೆಟ್ಟಾಗಿದ್ದು, ರಕ್ತ ಹೆಪ್ಪುಗಟ್ಟಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆ ಆವರಣದ ವಾಣಿ ವಿಲಾಸ ಮಕ್ಕಳ ಆಸ್ಪತ್ರೆಯ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಮಗನ ಮೇಲಿನ ಹಲ್ಲೆ ಕುರಿತು ಶಾಲೆಯ ಪ್ರಾಂಶುಪಾಲರನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ನೀಡುತ್ತಾರೆ. ‘ನಮಗೆ ಪೊಲೀಸ್ ಬೆಂಬಲವಿದೆ ಏನಾದರೂ ಮಾಡಿಕೊಳ್ಳಿ’ ಎಂದು ಹೇಳುತ್ತಾರೆ. ಹಲ್ಲೆ ಮಾಡಿದ ಶಿಕ್ಷಕರ ಬಗ್ಗೆ ವಿಚಾರಿಸಿದರೆ ‘ಅವರಿಗೆ ಕೋವಿಡ್ ಬಂದಿದೆ ಶಾಲೆಗೆ ಬಂದಿಲ್ಲ’ ಎಂದು ಹೇಳುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಸಚಿವರು ಕೂಡಲೇ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು. ಮಕ್ಕಳ ಮೇಲೆ ಹಲ್ಲೆ ಮಾಡುವ ಇಂತಹ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಇಂತಹ ಶಿಕ್ಷಕರನ್ನು ರಕ್ಷಿಸುತ್ತಿರುವ ಶಾಲೆಯ ಆಡಳಿತ ಮಂಡಳಿ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಹಲ್ಲೆಗೊಳಗಾದ ವಿದ್ಯಾರ್ಥಿ ತಂದೆ ನರಸಿಂಹ ಆಗ್ರಹಿಸಿದ್ದಾರೆ.
ಆರ್ ಟಿ ಇ ಕಾಯ್ದೆಯ ಮಕ್ಕಳಿಗೆ ತಾರತಮ್ಯ : RTE ಅಡಿ 6 ನೇ ತರಗತಿ ಓದುತ್ತಿರುವ ತನ್ಮಯ್ ಆಸ್ಪತ್ರೆಯಿಂದಲೇ ಹೇಳಿಕೆ ಬಿಡುಗಡೆ ಮಾಡಿದ್ದು, ಎಲ್ಲ ಮಕ್ಕಳನ್ನ ಒಂದು ರೀತಿ ನೋಡಿಕೊಂಡ್ರೆ,ಆರ್ ಟಿ ಇ ಅಡಿಯಲ್ಲಿ ಓದುವ ಮಕ್ಕಳನ್ನೇ ಮತ್ತೊಂದು ರೀತಿಯಲ್ಲಿ ನೋಡಿಕೊಳ್ತಾರಂತೆ. ಆದ್ರಲ್ಲೂ ನನ್ನನ್ನ ಟಾರ್ಗೆಟ್ ಮಾಡಿ ನಿತ್ಯ ಹಿಂಸೆ ಮಾಡ್ತಾರೆ ಎಂದು ತನ್ಮಯ್ ಪ್ರತಿಕ್ರಿಯಿಸಿದ್ದಾನೆ.
ಈ ಹಿಂದೆಯೂ ತನ್ಮಯ್‌ಗೆ ಗಣಿತ ಶಿಕ್ಷಕ ಥಳಿಸಿದ್ರಂತೆ, ಇದು ಮೂರನೇ ಬಾರಿಗೆ ವಿದ್ಯಾರ್ಥಿಗೆ ಥಳಿಸಿರುವುದು. ಒಂದು ಕಿವಿ ಸರಿಯಾಗಿ ಕೇಳ್ತಿಲ್ಲ,ಕಣ್ಣು ಸರಿಯಾಗಿ ಕಾಣ್ತಿಲ್ಲ ಆ ರೀತಿ ಅಮಾನುಷವಾಗಿ ಶಿಕ್ಷಕ ಮಾದೇಶ್ ನಡೆದುಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಬ್ಲೂವೆಲ್ ಶಾಲೆಯ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ತೀವ್ರ ಪೆಟ್ಟಾಗುವಂತೆ ಹೊಡೆದಿರುವುದು ಗಮನಕ್ಕೆ ಬಂದಿದೆ, ಶೀಘ್ರ ಕಾರಣ ಕೇಳಿ ಶಾಲೆಗೆ ನೋಟಿಸ್ ನೀಡಲಾಗುವುದು. ಘಟನೆಯ ಮಾಹಿತಿ ಸಿಕ್ಕ ಕೂಡಲೇ ಶಾಲೆಗೆ ತೆರಳಿ ಹೇಳಿಕೆ ಪಡೆಯಲಾಗಿದೆ, ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ವಿವರಣೆ ಪಡೆದಿದ್ದೇವೆ. ಎರಡನ್ನೂ ಪರಿಶೀಲಿಸಲಾಗಿದ್ದು, ಶಾಲೆಗೆ ನೋಟಿಸ್ ನೀಡಲಾಗುವುದು. ಶಾಲೆಯವರು ನೀಡುವ ಉತ್ತರ ಆಧರಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.