– ನವೀನ್ ಸೂರಿಂಜೆ
ಶಿವಮೊಗ್ಗದ ಸೈಕೋ ಮಂಜಪ್ಪ ನಡೆಸುವ ವನಶ್ರೀ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯ ಸಾವು, ವಿದ್ಯಾರ್ಥಿನಿಯರಿಗೆ ನೀಡುವ ಲೈಂಗಿಕ ಕಿರುಕುಳದಲ್ಲಿ ಆರ್ ಎಸ್ ಎಸ್ ನ ನೇರ ಪಾತ್ರವಿದೆ. ಇದೊಂದು ಕೇವಲ ಒಂದು ಹೆಣ್ಣು ಮಗುವಿನ ಸಾವು ಪ್ರಕರಣ ಅಥವಾ ಒಂದೆರಡು ಹೆಣ್ಣು ಮಕ್ಕಳ ಮೇಲೆ ನಡೆದ ಲೈಂಗಿಕ ಹಗರಣ ಮಾತ್ರವಲ್ಲ. ಇದು ರಾಷ್ಟ್ರ ಮಟ್ಟದಲ್ಲಿ ಆರ್ ಎಸ್ ಎಸ್ ನಡೆಸುವ ಮಕ್ಕಳ ಕಳ್ಳ ಸಾಗಾಣೆ ಪ್ರಕರಣದ ಒಂದಂಶವಷ್ಟೆ.
ಸೈಕೋ ಮಂಜಪ್ಪ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಇಬ್ಬರು ವಿದ್ಯಾರ್ಥಿನಿಯರು ಪೊಲೀಸರೆದುರು ಚಪ್ಪಲಿಯಲ್ಲಿ ಹೊಡೆದಿದ್ದರು. ಶಾಲೆಯ ಸ್ಥಾಪಕನಾಗಿರುವ ಸೈಕೋ ಮಂಜಪ್ಪಗೆ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಎಸಗುವ ದೈರ್ಯ ಬಂದಿದ್ದು ಎಲ್ಲಿಂದ ? ವಿದ್ಯಾರ್ಥಿನಿಯರು ಇಷ್ಟು ವರ್ಷ ಯಾಕೆ ಸುಮ್ಮನಿದ್ದರು ? ಎಂಬ ಪ್ರಶ್ನೆಗೆ ಉತ್ತರ “ಆರ್ ಎಸ್ ಎಸ್ ನ ವನವಾಸಿ ಕಲ್ಯಾಣ ಯೋಜನೆ ಮತ್ತು ಮಕ್ಕಳ ಕಳ್ಳ ಸಾಗಾಣೆಯ ಯೋಜನೆ…!”
ಸೈಕೋ ಮಂಜಪ್ಪನ ಶಾಲೆಗೆ ಅಸ್ಸಾಂ, ನಾಗಾಲ್ಯಾಂಡ್ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯರು ಹೇಗೆ ಬಂದು ಸೇರಿಕೊಂಡರು ? ಅವರ ಪೋಷಕರೇ ಬಂದು ಸೇರಿಸಿದರೇ ? ವಾಸ್ತವವಾಗಿ ಈ ವಿದ್ಯಾರ್ಥಿನಿಯರ ಪೋಷಕರಿಗೆ ತಮ್ಮ ಮಕ್ಕಳು ಸೈಕೋ ಮಂಜಪ್ಪನ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂಬುದು ಇನ್ನೂ ಗೊತ್ತಿಲ್ಲ. ಅಸ್ಸಾಂ, ನಾಗಾಲ್ಯಾಂಡಿನ ಈ ಬಡ ಬುಡಕಟ್ಟು ವಿದ್ಯಾರ್ಥಿನಿಯರು ಕರೆದು ತಂದು ಬಿಟ್ಟಿದ್ದು ಆರ್ ಎಸ್ ಎಸ್..!
ನಾನು ಮಂಗಳೂರು ಜಿಲ್ಲಾ ವರದಿಗಾರನಾಗಿದ್ದ ಸಂದರ್ಭದಲ್ಲಿ ಚೈಲ್ಡ್ ಲೈನ್ ಜೊತೆಗೂಡಿ ಆರ್ ಎಸ್ ಎಸ್ ನ ಈ ಮಕ್ಕಳ ಕಳ್ಳಸಾಗಾಣಿಕೆಯನ್ನು ಬಯಲು ಮಾಡಲು ಪ್ರಯತ್ನ ಪಟ್ಟಿದ್ದೆ. ಮಂಗಳೂರಿನಲ್ಲೂ ಹಲವು ಹಿಂದುತ್ವವಾದಿಗಳ ದೊಡ್ಡ ಕಂಪೌಂಡಿನ ನಿಗೂಢ ಶಾಲೆಗಳಲ್ಲಿ ಅಸ್ಸಾಂ, ನಾಗಾಲ್ಯಾಂಡಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದಾರೆ. ಅಲ್ಲಿ ಅವರಿಗೆ ಹಿಂದೂ ಸಂಪ್ರದಾಯ, ಸಂಸ್ಕಾರಗಳನ್ನು ಕಲಿಸುವ ನೆಪದಲ್ಲಿ ಬಂಧನದಲ್ಲಿ ಇಡಲಾಗಿದೆ. ಅದರದ್ದೇ ಒಂದು ಭಾಗ ಸೈಕೋ ಮಂಜಪ್ಪ.
ಈ ರೀತಿ ಹಿಂದುತ್ವವಾದಿಗಳ ಕಳ್ಳ ಸಾಗಾಣೆಗೆ ಒಳಗಾಗಿರುವ ಬಾಲಕಿಯರು ಹೆಚ್ಚಾಗಿವಅಸ್ಸಾಂನ ಐದು ಗಡಿ ಜಿಲ್ಲೆಗಳಾದ ಕೊಕ್ರಜಾರ್, ಗೋಲ್ಪಾರಾ, ಧುಬ್ರಿ, ಚಿರಾಂಗ್ ಮತ್ತು ಬೊಂಗೈಗಾಂವ್‌ಗೆ ಸೇರಿದವರು. ಇದರಲ್ಲಿ ಹೆಚ್ಚಿನ ಹುಡುಗಿಯರು ಬೋಡೋ ಮತ್ತು ಸಂತಾಲ್ ಸಮುದಾಯಕ್ಕೆ ಸೇರಿದವರು. ಮತ್ತು 2-3 ವರ್ಷಗಳ ಉಚಿತ ವಿದ್ಯಾಬ್ಯಾಸದ ನಂತರ ಹುಡುಗಿಯರು ಮನೆಗೆ ಹಿಂತಿರುಗುತ್ತಾರೆ ಎಂದು ಕುಟುಂಬಗಳಿಗೆ ಭರವಸೆ ನೀಡಲಾಗುತ್ತದೆ.
ಆರ್ ಎಸ್ ಎಸ್ ನ ವನವಾಸಿ ಕಲ್ಯಾಣ ಯೋಜನೆಯ ಮೂಲಕ ಈ ಕಾರ್ಯಾಚರಣೆ ಮಾಡಲಾಗುತ್ತದೆ. ಮೊದಲು ಬುಡಕಟ್ಟು ಗ್ರಾಮವನ್ನು ಗುರಿಯಾಗಿರಿಸಿ ಆರ್ ಎಸ್ ಎಸ್ ಪ್ರಚಾರಕರು ಕೆಲಸ ಮಾಡುತ್ತಾರೆ. ನಂತರ ಇಡೀ ಊರಿನ ವಿಶ್ವಾಸಗಳಿಸಿಕೊಂಡು ಅಲ್ಲಿಂದ ಯುವತಿಯರನ್ನು ಕರ್ನಾಟಕ ಸೇರಿದಂತೆ ದಕ್ಷಿಣಭಾರತಕ್ಕೆ ರವಾನೆ ಮಾಡುತ್ತಾರೆ. ಈ ಸಾಗಾಣೆಯ ಜವಾಬ್ದಾರಿಯನ್ನು ರಾಷ್ಟ್ರ ಸೇವಿಕಾ ಸಮಿತಿ ನಿರ್ವಹಿಸುತ್ತದೆ. ಹಾಗೆ ಸಾಗಣೆಯಾದ ಮಕ್ಕಳು ಎಲ್ಲಿರುತ್ತಾರೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ.
ಹಾಗಾದರೆ ಬುಡಕಟ್ಟು ನಿವಾಸಿಗಳಿಗೆ ಉಚಿತ ಶಿಕ್ಷಣ ನೀಡುವ ಆರ್ ಎಸ್ ಎಸ್ ಯೋಜನೆಯೇ ತಪ್ಪೇ ? ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಗಾಗಿ ಇರುವ ಕಾನೂನನ್ನು ಉಲ್ಲಂಘಿಸುವ ಎಲ್ಲಾ ಕೃತ್ಯಗಳು ಯಾವ ಉದ್ದೇಶ ಹೊಂದಿದ್ದರೂ ಅಪರಾಧವಾಗುತ್ತದೆ. ಈ ರೀತಿ ಮಕ್ಕಳು ತಂಗಿರುವ ಹಾಸ್ಟೆಲ್ ಅಥವಾ ಸಂಸ್ಥೆಯು ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಬೇಕು. ಅಂತಹ ನೋಂದಣಿಯಾಗದ ಸಂಸ್ಥೆಯಲ್ಲಿ ಮಕ್ಕಳನ್ನು ಇರಿಸುವುದು ಕಾನೂನುಬಾಹಿರವಾಗಿದೆ.
ಈ ಕಾರಣಕ್ಕಾಗಿಯೇ ಆರ್ ಎಸ್ ಎಸ್ ನ ಈ ಕೃತ್ಯದ ಬಗ್ಗೆ 16 ಜೂನ್ 2015 ರಂದು, ಅಸ್ಸಾಂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ASCPCR) ಅಸ್ಸಾಂ ಪೊಲೀಸರಿಗೆ ಪತ್ರ ಬರೆದು, ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆಯೋಗವು ಈ ಘಟನೆಯನ್ನು ‘ಬಾಲಾಪರಾಧ ನ್ಯಾಯ ಕಾಯಿದೆ 2000 ರ ನಿಬಂಧನೆಗೆ ವಿರುದ್ದ’ ಎಂದು ಕರೆದು, ಇದು “ಮಕ್ಕಳ ಕಳ್ಳಸಾಗಣೆ” ಎಂದು ತೀರ್ಮಾನಿಸಿದೆ. ಅದಾಗಲೇ ಈ ವಿಷಯ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ತಲುಪಿದ್ದಾರೂ ರಾಜಕೀಯ ಹಿತಾಸಕ್ತಿಯ ಕಾರಣಕ್ಕಾಗಿ ಆಯೋಗ ತನ್ನ ಕರ್ತವ್ಯ ನಿರ್ವಹಿಸಲಿಲ್ಲ.
ಸೈಕೋ ಮಂಜಪ್ಪನ ವನಶ್ರೀ ಶಾಲೆ ಮಾತ್ರವಲ್ಲ, ಕರ್ನಾಟಕ ಹಲವಾರು ಬಲಪಂಥೀಯ ಶಿಕ್ಷಣ ಸಂಸ್ಥೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದ ಈ ರೀತಿಯ ನೂರಾರು ಈಶಾನ್ಯ ರಾಜ್ಯದ ವಿದ್ಯಾರ್ಥಿನಿಯರಿದ್ದಾರೆ. ಈ ಹೆಣ್ಣು ಮಕ್ಕಳ ವಾಸ್ತವ್ಯವನ್ನು ಅಧಿಕೃತ ಗೊಳಿಸಲು, ಅವರನ್ನು ಗುರುತು ಪತ್ತೆ ಹಚ್ಚಿ ಕಾನೂನಿನ ವ್ಯಾಪ್ತಿಯಲ್ಲಿ ತರಲು ಹಿಂದೊಮ್ಮೆ ಚೈಲ್ಡ್ ಲೈನ್ ಪ್ರಯತ್ನ ಪಟ್ಟಿತ್ತು. ನಾನೂ ಅದಕ್ಕಾಗಿ ಸಣ್ಣಮಟ್ಟಿಗಿನ ಕೆಲಸ ಮಾಡಿದ್ದೆ. ಈಗ ಮತ್ತೊಮ್ಮೆ ಚೈಲ್ಡ್ ಲೈನ್, ಮಕ್ಕಳ ಕಲ್ಯಾಣ ಸಮಿತಿಗಳು, ರಾಜ್ಯ ಮಕ್ಕಳ ಹಕ್ಕು ಆಯೋಗ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರ್ ಎಸ್ ಎಸ್ ನಿಂದ ಕಳ್ಳಸಾಗಾಣೆಗೆ ಒಳಗಾಗಿರುವ ವಿದ್ಯಾರ್ಥಿನಿಯರ ಗಣತಿ ಮತ್ತು ನಿಯಮಬದ್ಧ ದಾಖಲೆಗಳನ್ನು ತಯಾರಿಸಬೇಕಿದೆ. ಇಲ್ಲವಾದರೆ ಹೇಳುವವರು ಕೇಳುವವರು ಇಲ್ಲದ ಈ ಬಡ ಮುಗ್ದ ಮಕ್ಕಳನ್ನು ಆರ್ ಎಸ್ ಎಸ್ ನ ಸೈಕೋ ಮಂಜಪ್ಪನಂತವರು ಹುರಿದು ಮುಕ್ಕುತ್ತಾರೆ.