ನವದೆಹಲಿ: ದೆಹಲಿಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ಕೇಂದ್ರ ಕಛೇರಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಭದ್ರತೆ ಒದಗಿಸಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
‘ಆರ್‌ಎಸ್‌ಎಸ್ ಕಚೇರಿಗಳ ರಕ್ಷಣೆಗೆ ಸಿಐಎಸ್‌ಎಫ್ ಸಿಬ್ಬಂದಿ, ವಿಮಾನ ನಿಲ್ದಾಣ ಸೇರಿದಂತೆ ಸರ್ಕಾರದ ಆಸ್ತಿಗಳ ರಕ್ಷಣೆಗೆ ಖಾಸಗಿಯವರ ನಿಯೋಜನೆ, ಇದೆಂತಾ ವಿಚಿತ್ರ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.
ಝಾಂಡೇವಾಲನ್‌ನಲ್ಲಿರುವ ಆರ್‌ಎಸ್‌ಎಸ್ ಕಛೇರಿ ʻಕೇಶವ್ ಕುಂಜ್ʼಗೆ ಝಡ್ ಪ್ಲಸ್ ಭದ್ರತಾ ನಿಯಮಗಳ ಪ್ರಕಾರ, ಭದ್ರತೆಗೆ ವಿಶೇಷವಾಗಿ ತರಬೇತಿ ಪಡೆದ ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಸಿಐಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಆರೆಸ್ಸೆಸ್ ಕಚೇರಿಗೆ ಸೆಪ್ಟೆಂಬರ್ 1 ರಿಂದ ಭದ್ರತೆ ನೀಡಲಾಗಿದೆ. ಕಟ್ಟಡದ ಆವರಣದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಸಿಐಎಸ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ವಿವಿಧ ಗುಪ್ತಚರ ವರದಿಗಳನ್ನು ಪಡೆದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.