ಮಧ್ಯಪ್ರದೇಶ: ತೆರಿಗೆ ನೋಟಿಸನ್ನು ಕೋಟಿ ಕೋಟಿ ಹಣದ ವ್ಯವಹಾರ ನಡೆಸುವವರಿಗೆ ತೆರಿಗೆ ನೋಟಿಸ್ ಕಳುಹಿಸುವುದು ಸಾಮಾನ್ಯ ಸಂಗತಿ. ಆದರೆ, ಇಲ್ಲೊಬ್ಬ ಬಡ ಯುವಕನಿಗೆ 6 ಕೋಟಿ ರೂ. ತೆರಿಗೆ ನೋಟಿಸ್ ಕಳುಹಿಸಿದ್ದು, ಅದನ್ನು ನೋಡಿದ ಆತ ಒಂದು ಕ್ಷಣ ದಂಗಾಗಿದ್ದಾನೆ. ಈ ಘಟನೆ ಮಧ್ಯಪ್ರದೇಶದ ದಾಮೋಹ್ನಲ್ಲಿ ನಡೆದಿದೆ. ಮಧ್ಯಪ್ರದೇಶ
ಮೊಟ್ಟೆ ವ್ಯಾಪಾರಿ ಪ್ರಿನ್ಸ್ ಹೆಸರಿನಲ್ಲಿ ದೆಹಲಿಯಲ್ಲಿ ಕಂಪನಿ ಇದೆ ಎಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆ ಕಳುಹಿಸಿರುವ ನೋಟಿಸ್‌ನಲ್ಲಿ ಹೇಳಲಾಗಿತ್ತು. ಈ ಕಂಪನಿಯ ಹೆಸರಿನಲ್ಲಿ ಸುಮಾರು 50 ಕೋಟಿ ರೂಪಾಯಿ ವಹಿವಾಟು ಕೂಡ ನಡೆದಿದ್ದು, ಸುಮಾರು 6 ಕೋಟಿ ರೂ. ಜಿಎಸ್‌ಟಿ ಪಾವತಿ ಬಾಕಿ ಇರುವುದಾಗಿ ಮತ್ತು ಅದನ್ನು ಪಾವತಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮಧ್ಯಪ್ರದೇಶ
ಈ ನೋಟಿಸ್ನಿಂದಾಗಿ ಪ್ರಿನ್ಸ್ ಸೇರಿದಂತೆ ಇಡೀ ಕುಟುಂಬ ಚಿಂತಿತವಾಗಿದೆ. ಈ ವಿಷಯದ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಎಸ್ಪಿಗೆ ದೂರು ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಭಾರತೀಯ ಅಂಚೆ ಇಲಾಖೆಯಲ್ಲಿ 65,200 ಹುದ್ದೆ ಖಾಲಿ: ಅರ್ಜಿ ಸಲ್ಲಿಸೋದು ಹೇಗೆ?
ಅಂದಹಾಗೆ ದಾಮೋಹ್‌ನ ಪಥಾರಿಯಾದ ವಾರ್ಡ್ ಸಂಖ್ಯೆ 14ರಲ್ಲಿ ಪ್ರಿನ್ಸ್ ವಾಸವಿದ್ದಾರೆ. ಪ್ರಿನ್ಸ್, ಒಂದು ಬಂಡಿ ಹಾಕಿಕೊಂಡು ಮೊಟ್ಟೆಗಳನ್ನು ಮಾರಾಟ ಮಾಡುತ್ತಾರೆ. ಮಾರ್ಚ್ 18ರಂದು ಅವರ ಹೆಸರಿಗೆ ನೋಂದಾಯಿತ ಅಂಚೆ ಬಂದಿತು.
ಅದರಲ್ಲಿ ಜಿಎಸ್‌ಟಿ ಇಲಾಖೆಯ ನೋಟಿಸ್ ಇತ್ತು. ನೋಟಿಸ್‌ನಲ್ಲಿ, ಪ್ರಿನ್ಸ್‌ನಿಂದ ಬ್ಯಾಂಕ್ ಸ್ಟೇಟ್‌ಮೆಂಟ್ ಮತ್ತು ಇತರ ದಾಖಲೆಗಳನ್ನು ಸಲ್ಲಿಸುವಂತೆ ಕೋರಲಾಗಿದೆ. ಆ ನೋಟಿಸ್‌ನಲ್ಲಿ 2022ರಲ್ಲಿ, ದೆಹಲಿಯ ರಾಜ್ಯ ವಲಯ 3 (ವಾರ್ಡ್ 33) ರಲ್ಲಿ ಪ್ರಿನ್ಸ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಒಂದು ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು ಎಂದು ಬರೆಯಲಾಗಿದೆ. ಈ ಕಂಪನಿ ನೋಂದಣಿ ಸಹ ಮಾಡಿಸಿಕೊಂಡಿದ್ದು, ಮೋಸದಿಂದ ಜಿಎಸ್‌ಟಿ ನಂಬರ್ ಕೂಡ ಪಡೆದುಕೊಂಡಿತ್ತು.
ಆದರೆ, ಆ ಕಂಪನಿ ಈಗ ಅಸ್ತಿತ್ವದಲ್ಲಿ ಇಲ್ಲ. ಈ ಕಂಪನಿಯು 2022-23 ರಲ್ಲಿ ಸುಮಾರು 50 ಕೋಟಿ ರೂ. ಮೌಲ್ಯದ ಚರ್ಮ, ಮರ ಮತ್ತು ಕಬ್ಬಿಣದ ವ್ಯವಹಾರವನ್ನು ಮಾಡಿತು. ಆದರೆ, ಜಿಎಸ್‌ಟಿ ಪಾವತಿಸಿರಲಿಲ್ಲ. ಕಂಪನಿಯು ಸುಮಾರು 6 ಕೋಟಿ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಿನ್ಸ್ಗೆ ನೋಟಿಸ್ ಬಂದಿದೆ.
ಯಾರಿಗೂ ಆಧಾರ್ ಮತ್ತು ಪ್ಯಾನ್ ಕಾರ್ಡ್ ಕೊಡಬೇಡಿ
ಅಂದಹಾಗೆ ಪ್ರಿನ್ಸ್ ಅವರ ಆಧಾರ್ ಕಾರ್ಡ್ ಅನ್ನು ಪಡೆದುಕೊಂಡು. ಅದರ ಮೂಲಕ ಕಂಪನಿಯನ್ನು ಅಕ್ರಮವಾಗಿ ರಚಿಸಿದ್ದರು ಎನ್ನಲಾಗಿದೆ. ಕಾರ್ಮಿಕನಾಗಿ ಕೆಲಸ ಮಾಡಲು 2023ರಲ್ಲಿ ಇಂದೋರ್‌ಗೆ ಹೋಗಿದ್ದೆ. ಅಲ್ಲಿ ಸುಮಾರು 1 ವರ್ಷ ಕೆಲಸ ಮಾಡಿದ್ದೆ. ಆ ಸಮಯದಲ್ಲಿ ನಾನು ಯಾರಿಗೂ ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ನೀಡಲಿಲ್ಲ. ಆದರೂ ನನ್ನ ಹೆಸರಿನಲ್ಲಿ ಕಂಪನಿ ಹೇಗೆ ನೋಂದನಿ ಆಯ್ತು ನನಗೆ ಗೊತ್ತಿಲ್ಲ ಎಂದು ಪ್ರಿನ್ಸ್ ಹೇಳಿದ್ದಾರೆ.
ಪ್ರಸ್ತುತ, ಪ್ರಿನ್ಸ್, ಪಥಾರಿಯಾದಲ್ಲಿ ಮೊಟ್ಟೆ ವ್ಯಾಪಾರ ಮಾಡುವ ಮೂಲಕ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದಾರೆ. ತಂದೆ ಶ್ರೀಧರ್ ಸುಮನ್ ಒಂದು ಸಣ್ಣ ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾರೆ. ನಮಗೆ ನ್ಯಾಯ ಸಿಗದಿದ್ದರೆ, ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿಯಿಲ್ಲ ಎಂದು ಶ್ರೀಧರ್ ಸುಮನ್ ಅಳಲು ತೋಡಿಕೊಂಡಿದ್ದಾರೆ.
ಇನ್ನು ಈ ರೀತಿ ಆಧಾರ್ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ದೇಶಾದ್ಯಂತ ಇಂತಹ ಅನೇಕ ಪ್ರಕರಣಗಳು ನಡೆದಿವೆ. ವಿದ್ಯಾರ್ಥಿಗಳು ಮತ್ತು ನೌಕರರ ಆಧಾರ್ ಕಾರ್ಡ್ಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ವರ್ಗಾಣವೆಗಳು ನಡೆಯುತ್ತಿವೆ. ಹೀಗಾಗಿ ಯಾರಿಗೂ ಆಧಾರ್ ಕಾರ್ಡ್ ಆಗಲಿ ಅಥವಾ ಪ್ಯಾನ್ ಕಾರ್ಡ್ ಆಗಲಿ ಕೊಡಬೇಡಿ ಎಂದು ಪೊಲೀಸರ ಮನವಿಯಾಗಿದೆ.
ಇದನ್ನೂ ನೋಡಿ: ರಂಗಭೂಮಿ ದಿನ | ಜರ್ನಿ ಥಿಯೇಟರ್ ತಂಡದಿಂದ ರಂಗಗೀತೆಗಳು Janashakthi Media