ಬೆಂಗಳೂರು: ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಸೋಗಿನಲ್ಲಿ 24 ಲಕ್ಷ ರೂ., ಹಣ ಸುಲಿಗೆ ಮಾಡಿರುವ ಆರೋಪದಡಿ ದೇವನಹಳ್ಳಿ ಠಾಣಾ ಪೊಲೀಸರು 9 ಆರೋಪಿಗಳನ್ನ ಬಂಧಿಸಿದ್ದಾರೆ.
ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿದಂತೆ 12 ಜನರ ಪೈಕಿ ಕೃಷ್ಣಕುಮಾರ್, ವೇಣುಗೋಪಾಲ್, ಸಂಪಂಗಿ ರಾಮ, ನಾರಾಯಣಸ್ವಾಮಿ, ವೆಂಕಟೇಶ, ಮುರುಗೇಶನ್, ಶಿವ ಸೇರಿದಂತೆ 9 ಮಂದಿಯನ್ನು ಬಂಧಿಸಿ ಹಣವನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ನೆಗಿನಾಳ| ಸರ್ಕಾರಿ ಶಾಲೆ ಮುಚ್ಚುತ್ತಿರುವುದನ್ನು ಖಂಡಿಸಿ ಎಐಡಿಎಸ್‌ಒ ಪ್ರತಿಭಟನೆ
ಶಂಕರಪ್ಪ ಎಂಬುವವರಿಗೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಆರೋಪಿ ಕೃಷ್ಣ ಕುಮಾರ್ ಹೇಳಿದ್ದು, ಅದರಂತೆ ಶಂಕರಪ್ಪ ಚಿನ್ನಾಭರಣ ಅಡವಿಟ್ಟು 24 ಲಕ್ಷ ರೂ ಹಣವನ್ನು ತಂದಿದ್ದಾರೆ. ಇತ್ತ ಮೊದಲೇ ಮಾಡಿಕೊಂಡಿದ್ದ ಸಂಚಿನಂತೆ ಖಾಸಗಿ ಕಾರಿನಲ್ಲಿ ಕೃಷ್ಣ ಕುಮಾರ್ ಸಹಚರರು ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಹೆಸರಿನಲ್ಲಿ ಖಾಸಗಿ ಕಾರ್ಗೆ ಫಲಕ ಹಾಕಿಕೊಂಡು ಅಧಿಕಾರಿಗಳ ಸೋಗಿನಲ್ಲಿ ಬಂದು 24 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಹಣ ಎಗರಿಸಿದ ನಂತರ ಆರೋಪಿ ಕೃಷ್ಣಕುಮಾರ್ ಪೊಲೀಸ್ ಠಾಣೆಗೆ ಬಂದು ತಾನೇ ದೂರು ನೀಡಿದ್ದ. ಪೊಲೀಸರ ವಿಚಾರಣೆ ವೇಳೆ ದೂರು ನೀಡಿದ್ದ ಆರೋಪಿಯೇ ದರೋಡೆಕೋರ ಎನ್ನುವುದು ಬಯಲಾಗಿದೆ. ಸದ್ಯ ದೇವನಹಳ್ಳಿ ಠಾಣೆ ಪೊಲೀಸರು 12 ಜನರಲ್ಲಿ 9 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ನೋಡಿ: “ಪಶುಗಳು ಮೇವು ತಿನ್ನುವುದಿಲ್ಲವೇ? ಕಾರಣಗಳೇನು?” | ಡಾ. ಎನ್. ಬಿ ಶ್ರೀಧರ Janashakthi Media
