ಬಳ್ಳಾರಿ: ನಗರದ ಹೃದಯ ಭಾಗದಲ್ಲಿರುವ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಸಂಬಂಧ ಕಾರ್ಯ ಸಾಧ್ಯತೆಯ ಕುರಿತು ಸ್ಥಳ ಪರಿಶೀಲನೆ ಮಾಡಲು ಮೇ.ರೈಟ್ಸ್ ಸಂಸ್ಥೆಯ ಪ್ರತಿನಿಧಿಗಳು ಬಳ್ಳಾರಿಯ ಏಕಶಿಲಾ ಬೆಟ್ಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆಗಮಿಸಿ ಬಳ್ಳಾರಿ ನಗರದ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಸಂಬಂಧ ಅಗತ್ಯ ಸಲಹೆ ಹಾಗೂ ನಿರ್ದೇಶನ ನೀಡಿದರು.
ಇದನ್ನು ಓದಿ :-ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ರೋಹಿತ್ ಕಾಯ್ದೆ ಅಗತ್ಯ
ಮುಖ್ಯವಾಗಿ ರೋಪ್ ವೇ ಯ ಪ್ರಾರಂಭಿಕ ಸ್ಥಳ ಹಾಗೂ ಅಂತ್ಯದ ಸ್ಥಳವನ್ನು ಗುರುತಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳಿಂದ ಇದೇ ಸಂದರ್ಭದಲ್ಲಿ ಮಾಹಿತಿ ಪಡೆದುಕೊಂಡರು. ಬೆಟ್ಟದ ಸುತ್ತಲೂ ಸರ್ಕಾರಿ ನಿವೇಶನ ಅಥವಾ ಸ್ಥಳ ಲಭ್ಯವಿದ್ದಲ್ಲಿ ಗುರುತಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಸಂಬಂಧ ಸ್ಥಳ ಪರಿಶೀಲನಾ ವರದಿಯನ್ನು ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಮೇ.ರೈಟ್ಸ್ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದರು. ಈ ಬಗ್ಗೆ ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾನಿರ್ದೇಶಕರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಗೂಗಲ್ ಮೀಟ್ ಸಭೆ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ಇದನ್ನು ಓದಿ :-ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಸ್ಥಾಪನೆ
ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ರೈಟ್ಸ್ ಸಂಸ್ಥೆಯ ಪ್ರತಿನಿಧಿ ಸತೀಶ್ ವರ್ಮ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರವೀಂದ್ರ ಸಿ.ಎ., ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ.ಎಸ್ ತಳಕೇರಿ ಹಾಗೂ ಮತ್ತೀತರರು ಹಾಜರಿದ್ದರು.