ಪಠ್ಯದಲ್ಲಿ ಮಹಿಳೆಯರಿಗೆ ಅವಮಾನ – ಕವಿತೆಗೆ ಅನುಮತಿ ಹಿಂಪಡೆದ ರೂಪಾ ಹಾಸನ

ಹಾಸನ : ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿರೋಧಿಸಿ ಜಿ.ರಾಮಕೃಷ್ಣ ಹಾಗೂ ದೇವನೂರ ಮಹದೇವ, ಎಸ್‌ಜಿ ಸಿದ್ದರಾಮಯ್ಯ, ಸಾಹಿತಿ ಮೂಡ್ನಕೂಡು ಚಿನ್ನಸ್ವಾಮಿ ಹಾಗೂ ಈರಪ್ಪ ಎಂ ಕಂಬಳಿಯವರು ತಮ್ಮ ಲೇಖನ, ಪ್ರಬಂಧ, ಕವಿತೆಯನ್ನು ಪ್ರಕಟಿಸಲು ಅನುಮತಿಯನ್ನು ವಾಪಸ್ ಪಡೆದುಕೊಂಡಿದ್ದರು. ಇದೀಗ ಸಾಹಿತಿ ರೂಪಾ ಹಾಸನರವರು ತಮ್ಮ ಕವಿತೆಯ ಅನುಮತಿಯನ್ನು ವಾಪಸ್ಸು ಪಡೆದುಕೊಂಡಿದ್ದಾರೆ.

ಪರಿಷ್ಕೃತ 9 ನೆಯ ತರಗತಿಯ ಪಠ್ಯದಿಂದ ನನ್ನ “ಅಮ್ಮನಾಗುವುದೆಂದರೆ ಕವಿತೆಯನ್ನು ಕೈಬಿಡಬೇಕು ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ವರ್ಷ ಶಾಲಾ ಪಠ್ಯಪುಸ್ತಕಗಳು ಆಳುವ ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಮರುಪರಿಷ್ಕರಣೆಗೊಂಡಿರುವುದು ಖೇದನೀಯ. ಅದನ್ನು ಈಗಾಗಲೇ ಕೆಲವು ಹಿರಿಯ ಗೌರವಾನ್ವಿತ ಸಾಹಿತಿಗಳು ಖಂಡಿಸಿ, ಪಠ್ಯದಲ್ಲಿ ತಮ್ಮ ಬರಹವನ್ನು ಸೇರ್ಪಡೆಗೊಳಿಸಲು ಹಿಂದಿನ ಸಮಿತಿಗೆ ಕೊಟ್ಟ ಅನುಮತಿಯನ್ನು ಹಿಂಪಡೆಯುವ ಮೂಲಕ ತಮ್ಮ ನೈತಿಕ ಹಾಗೂ ಸಾತ್ವಿಕ ಪ್ರತಿರೋಧ ತೋರಿದ್ದಾರೆ. ಆದರೆ ಆದ ತಪ್ಪನ್ನು ಸರಿಪಡಿಸಿ, ತಕ್ಷಣವೇ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಈ ಕುರಿತು ನಿರ್ಲಕ್ಷ್ಯ ವಹಿಸಿರುವುದು ಹಾಗೂ ಸರ್ಕಾರದ ಜನಪ್ರತಿನಿಧಿಗಳಿಂದಲೇ ಅಂತಹ ಘನತೆಯುತ ಸಾಹಿತಿಗಳನ್ನು ಇನ್ನಷ್ಟು ಅವಮಾನಿಸುವ ಸಂಗತಿಗಳು ನಡೆಯುತ್ತಿರುವುದು ಖಂಡನೀಯ ಎಂದು ಪತ್ರದಲ್ಲಿ ನಮೂದಿಸಿದ್ದಾರೆ.

ಇದನ್ನೂ ಓದಿ : ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂಪಡೆದ ಮತ್ತಿಬ್ಬರು ಸಾಹಿತಿಗಳು

ಜೊತೆಗೆ ಈಗಿನ ಮರು ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ ಒಬ್ಬ ಮಹಿಳಾ ಸದಸ್ಯರಿಲ್ಲದಿರುವುದು, ಹತ್ತನೆಯ ತರಗತಿಯ ಕನ್ನಡ ಪಠ್ಯದಲ್ಲಿ ಒಬ್ಬ ಮಹಿಳೆಯದೂ ಗದ್ಯ-ಪದ್ಯವಿಲ್ಲದಿರುವುದೂ, ಒಬ್ಬೇ ಒಬ್ಬ ಸಾಧಕಿಯ ಕುರಿತೂ ಪಠ್ಯವಿಲ್ಲದಿರುವುದೂ.. ಸರ್ಕಾರ ಮಹಿಳಾ ಸಂಕುಲಕ್ಕೆ ಮಾಡಿದ ಅವಮಾನವೆಂಬುದು ನೋವಿನ ಸಂಗತಿಯಾಗಿದೆ.

ಮಕ್ಕಳು ಹಾಗೂ ಶೈಕ್ಷಣಿಕ ಹಕ್ಕುಗಳ ರಕ್ಷಣೆಗಾಗಿ ಕಳೆದೆರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ನಾನು, ಪರಿಷ್ಕೃತಗೊಂಡ ಶಾಲಾ ಪಠ್ಯ ಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅವು ಮುಖ್ಯವಾಗಿ “ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005″ ರ ನೀತಿ ನಿಯಮಗಳಿಗೆ ಅನುಗುಣವಾಗಿ ರೂಪಿತವಾಗಿಲ್ಲದಿರುವುದು ಎದ್ದು ಕಾಣುತ್ತಿದೆ. ಈ ಚೌಕಟ್ಟು ಸಂವಿಧಾನದ ಮೂಲತತ್ವಗಳಿಗೆ ಬದ್ಧವಾಗಿ ರೂಪುಗೊಂಡಿದೆ. ಪ್ರಜಾಪ್ರಭುತ್ವದ ಆಶಯಗಳನ್ನೊಳಗೊಂಡು ಸಮಾನತೆ, ಧರ್ಮನಿರಪೇಕ್ಷತೆ, ಲಿಂಗಸಮಾನತೆ, ಸಾಮಾಜಿಕ ನ್ಯಾಯ, ತಾರತಮ್ಯ ನಿರ್ಮೂಲನೆ, ಹಕ್ಕುಗಳ ಬಗ್ಗೆ ಗೌರವವನ್ನು ಪಠ್ಯದ ಆದ್ಯತೆಯಾಗಿ ಪರಿಗಣಿಸಬೇಕೆಂದು ಅದು ಘೋಷಿಸಿದೆ.

ಹೀಗಾಗಿ ಮಗುವಿನ ಬುದ್ಧಿ ಮತ್ತು ಮನಸುಗಳು ನಮ್ಮ ಬಹುತ್ವ ಭಾರತದ ಬಹುಸಂಸ್ಕೃತಿಗಳ ಬಹು ಆಯಾಮಗಳನ್ನು ಒಳಗೊಳ್ಳುವಂತಿರಬೇಕು. ಪಠ್ಯಗಳು ವಿಶಾಲ, ಉದಾತ್ತ, ವೈಚಾರಿಕ, ವೈಜ್ಞಾನಿಕ, ಸಹಬಾಳ್ವೆ, ಸಾಮರಸ್ಯದ ಉದ್ದೇಶ ಹೊಂದಿರಬೇಕು. ಪ್ರತಿ ಮಗುವೂ ಪ್ರೀತಿ, ಅಹಿಂಸೆ ಮತ್ತು ಐಕ್ಯತೆದಿಂದ ಬೆಳೆಯುವಂತೆ, ಮುಕ್ತಚಿಂತನೆಯಿಂದ ಕೂಡಿದ ಸಮಚಿತ್ತದ ಪಠ್ಯವನ್ನು ರೂಪಿಸಲು ಆದ್ಯತೆ ನೀಡಬೇಕಿದ್ದುದು ಅತ್ಯಂತ ಮುಖ್ಯವಾಗಿತ್ತು. ಆದರೆ ಈ ಚೌಕಟ್ಟಿನ ಆಶಯಕ್ಕನುಗುಣವಾಗಿ ಮರು ಪರಿಷ್ಕರಣೆ ನಡೆದಿಲ್ಲದಿರುವುದು ಆತಂಕಕಾರಿಯಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಒಂಬತ್ತನೆಯ ತರಗತಿ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕ ‘ನುಡಿಕನ್ನಡ’ ಪಠ್ಯದಲ್ಲಿ ಅಳವಡಿಕೆಯಾಗಿದ್ದ ನನ್ನ “ಅಮ್ಮನಾಗುವುದೆಂದರೆ” ಕವಿತೆಯನ್ನು ಬೋಧಿಸಲು ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಈ ಮೂಲಕ ಹಿಂಪಡೆಯುತ್ತಿದ್ದು, ಇದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ರೂಪ ಹಾಸನ ತಿಳಿಸಿದ್ದಾರೆ.

Donate Janashakthi Media

One thought on “ಪಠ್ಯದಲ್ಲಿ ಮಹಿಳೆಯರಿಗೆ ಅವಮಾನ – ಕವಿತೆಗೆ ಅನುಮತಿ ಹಿಂಪಡೆದ ರೂಪಾ ಹಾಸನ

  1. ರಾಜಕೀಯ ಮಾಡಿಕೊಂಡು ಪಠ್ಯಕ್ಕೆ ಸೇರಿಸಿಕೊಂಡ ಸಾಹಿತ್ಯ ವಾಪಸ್ ಪಡೆಯುವ ಆಟದಲ್ಲಿ ಬೇರೆ ಏನೋ ವಾಸನೆ ಬರುತ್ತಿದೆಯಲ್ಲ. ನಮ್ಮ ಮಕ್ಕಳ ಭವಿಷ್ಯದ ಜೊತೆ ಇವರೆಲ್ಲ ಗೇಮ್ ಆಡೋದು ನೋಡಿದರೆ ಇವರುಗಳ ಸಾಹಿತ್ಯ ಬೇಡವೇ ಬೇಡ. ಏನಾದರೂ ಸಮಸ್ಯೆಗಳಿದ್ದರೆ ಪರ್ಯಾಯ ಮಾರ್ಗ ಮೂಲಕ ಬಗೆಹರಿಸಿಕೊಳ್ಳದೇ ಮಾಡುತ್ತಿರುವ ಆಟಾಟೋಪ ಪಾಲಕರಿಗೆ ಗೊಂದಲ ಮೂಡಿಸುತ್ತಿದೆ. ಲಾಭಿ ಲಾಭದ ಉದ್ಧೇಶ ಇರಬಹುದೆಂದು ನಾಗರೀಕ ಜಗತ್ತಿನಲ್ಲಿ ಚರ್ಚೆ ನಡೆದಿದೆ.
    ಜೆ.ಎಮ್ ರಾಜಶೇಖರ
    ನಿಜ ಬಂಡಾಯ ಸಾಹಿತಿ

Leave a Reply

Your email address will not be published. Required fields are marked *