ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನ ಹಾಗೂ ನಾಡಗೀತೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪಠ್ಯಪುಸ್ತಕ ಮರು ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಲಾಗಿದೆ.
ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ ಅಕಾಶೆ ಕಾರ್ಕಳ ವಿರುದ್ಧ ವಕೀಲ ಎ.ಪಿ.ರಂಗನಾಥ್ ಅವರ ನೇತೃತ್ವದಲ್ಲಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಲಾಗಿದೆ.
ರೋಹಿತ್ ಚಕ್ರತೀರ್ಥ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲಾತಾಣದಲ್ಲಿ ಹಾಕಿದ್ದರು. ಅಲ್ಲದೆ ನಾಡಗೀತೆಗೂ ಅಪಮಾನ ಮಾಡಿದ್ದಾರೆ. ಲಕ್ಷ್ಮಣ ಅಕಾಶೆ ಕಾರ್ಕಳ ಎಂಬವರು ಕುವೆಂಪು ಬಗ್ಗೆ ಕೆಟ್ಟ ಪದಗಳಿಂದ ನಿಂದನೆ ಮಾಡಿದ್ದಾರೆ. ಇವರಿಬ್ಬರ ವಿರುದ್ಧ ಸಮಾಜ ಸ್ವಾಸ್ಥ್ಯ ಕದಡುವ ಪ್ರಕರಣದ ಅಡಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್ ಅವರೊಂದಿಗೆ, ಹಿರಿಯ ವಕೀಲ ಬಾಲನ್, ಕೆ.ಎನ್ ಜಗದೀಶ್ ಕುಮಾರ್, ಪ್ರದೀಪ್, ಸೂರ್ಯ ಮುಕುಂದರಾಜ್ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ದೂರು ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದರು.
ದೂರಿನಲ್ಲಿರುವ ಕೆಲವು ಅಂಶಗಳು….
ನಾಲ್ಕನೇ ತರಗತಿಯ ಪಠ್ಯ ಪುಸ್ತಕದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಪರಿಚಯವನ್ನು ಅವಮಾನಕಾರಿ ರೀತಿಯಲ್ಲಿ ಪ್ರಕಟಿಸಿರುವುದು ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ 2017 ರಲ್ಲಿ ನಾಡಗೀತೆಯನ್ನು ಅವಮಾನಿಸಿದ ರೋಹಿತ್ ಚಕ್ರತೀರ್ಥರ ಈ ವಿಕೃತ ಬರಹವನ್ನು ಸಾಮಾಜಿಕ ಜಾಲತಾಣವಲ್ಲದೆ ಇತರೆ ಮಾಧ್ಯಮಗಳಲ್ಲೂ ಈಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಇದು ಕುವೆಂಪು ಅವರ ಗೌರವಕ್ಕೆ ಧಕ್ಕೆ ತರುವ ಜೊತೆಗೆ ಅವರ ಅಪಾರ ಅಭಿಮಾನಿ ವರ್ಗದ ಭಾವನೆಗಳಿಗೆ ನೋವುಂಟು ಮಾಡಿದೆ.
ಲಕ್ಷ್ಮಣ ಆಕಾಶೆ ಕಾರ್ಕಳ ಎಂಬ ವ್ಯಕ್ತಿ ರಾಷ್ಟ್ರಕವಿ ಕುವೆಂಪು ಅವರನ್ನು ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದಾರೆ. ಈತನ ಬರಹಕ್ಕೆ ರೋಹಿತ್ ಚಕ್ರತೀರ್ಥರ ಕುಮ್ಮಕ್ಕು ಇದೆ. ರಾಷ್ಟ್ರಕವಿ ಕುವೆಂಪು ಅವರು ನಿಧನರಾದ ಬಳಿಕವೂ ಅವರ ಸಾಹಿತ್ಯವನ್ನು ಓದಿಕೊಂಡು ಬೆಳೆದ ನಾಡಿನ ಜನತೆಯ ಭಾವನೆಗಳಿಗೆ ಧಕ್ಕೆಯಾಗಿದೆ. ಅಲ್ಲದೇ, ನಾಡಿನ ಘನತೆ, ಗೌರವಕ್ಕೆ ಚ್ಯುತಿಯುಂಟಾಗಿದೆ.
ಆದ್ದರಿಂದ ಈ ಇಬ್ಬರೂ ಸಮಾಜಘಾತುಕರ ಮೇಲೆ ಕಾನೂನು ಕ್ರಮ ಕೈಗೊಂಡು ತಕ್ಷಣ ಬಂಧಿಸಬೇಕೆಂದು ಮನವಿ ಮಾಡುತ್ತೇವೆ. ಈ ಮೂಲಕ ನಾಡಿನ ನೆಮ್ಮದಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ