ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತನ್ನ ಸಹ ಆಟಗಾರ ಅಕ್ಸರ್ ಪಟೇಲ್ ಗೆ ಕೈ ಮುಗಿದು ಕ್ಷಮೆ ಕೇಳಿದ ಘಟನೆ ನಡೆದಿದೆ.
ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಸಹ ಆಟಗಾರ ಅಕ್ಸರ್ ಪಟೇಲ್ ಗೆ ಕೈ ಮುಗಿದು ಕ್ಷಮೆ ಯಾಚಿಸಿದ್ದಾರೆ. ತಾವು ಮಾಡಿದ ಒಂದೇ ಒಂದು ಎಡವಟ್ಟಿನಿಂದಾಗಿ ಅಕ್ಸರ್ ಪಟೇಲ್ ರ ಹ್ಯಾಟ್ರಿಕ್ ಕನಸು ನುಚ್ಚು ನೂರಾಯಿತು. ಇದೇ ಕಾರಣಕ್ಕೆ ರೋಹಿತ್ ಶರ್ಮಾ ಅಕ್ಸರ್ ಪಟೇಲ್ ಬಳಿ ಬಹಿರಂಗವಾಗಿಯೇ ಕ್ಷಮೆ ಯಾಚಿಸಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಬೆಂಗಳೂರು| 2 ಅಂತಸ್ತಿನ ಮನೆ ಕುಸಿತ
ಇಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡವು ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನಕ್ಕೆ ಆರಂಭದಲ್ಲೇ ತತ್ತರಿಸಿತು. ಪಂದ್ಯದ ಆರಂಭದಲ್ಲಿ ಭಾರತೀಯ ಬೌಲರ್ ಗಳ ಆರ್ಭಟಕ್ಕೆ ತತ್ತರಿಸಿ ಹೋದ ಬಾಂಗ್ಲಾದೇಶ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. ಕೇವಲ 35ರನ್ ಗಳ ಅಂತರದಲ್ಲಿ ಬಾಂಗ್ಲಾದೇಶ ತಂಡ 5 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಪೈಕಿ ಮೂವರು ಬ್ಯಾಟರ್ ಗಳು ಶೂನ್ಯಕ್ಕೆ ಔಟಾಗಿದ್ದು, ಬಾಂಗ್ಲಾದೇಶಕ್ಕೆ ನುಂಗಲಾರದ ತುತ್ತಾಯಿತು. ಈ ಹಂತದಲ್ಲಿ ಜೊತೆಗೂಡಿದ ತೌಹೀದ್ ಹೃದೋಯ್ ಮತ್ತು ಜೇಕರ್ ಅಲಿ ಬಾಂಗ್ಲಾದೇಶ ತಂಡವನ್ನು ಮುಜುಗರದಿಂದ ಪಾರು ಮಾಡಿದರು.