ತಿರುವನಂತಪುರ: ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಜೀವನಾಧರಿತ ʻರಾಕೆಟ್ರಿ ದಿ ನಂಬಿ ಎಫೆಕ್ಟ್ʼ ಚಲನಚಿತ್ರ ಒಂದು ಕಟ್ಟುಕಥೆಯಾಗಿದೆ. ಚಿತ್ರದಲ್ಲಿ ಶೇಕಡ 90ರಷ್ಟು ಭಾಗ ಸುಳ್ಳು ಹೇಳಲಾಗಿದೆ ಎಂದು ಇಸ್ರೋ ಮಾಜಿ ವಿಜ್ಞಾನಿಗಳ ಗುಂಪು ಆರೋಪಿಸಿದೆ.
ಇಸ್ರೊ ಎಲ್ಪಿಎಸ್ಇ ನಿರ್ದೇಶಕ ಡಾ.ಎ.ಇ. ಮುತುನಾಯಗಂ, ಕ್ರಯೋಜೆನಿಕ್ ಎಂಜಿನ್ ಯೋಜನಾ ನಿರ್ದೇಶಕ ಪ್ರೊಫೆಸರ್ ಇ.ವಿ.ಎಸ್. ನಂಬೂದಿರಿ, ಉಪ ನಿರ್ದೇಶಕ ಡಿ.ಸಸಿಕುಮಾರನ್ ಹಾಗೂ ಇಸ್ರೊದ ಇತರ ಮಾಜಿ ವಿಜ್ಞಾನಿಗಳು ಮಾಧ್ಯಮಗೋಷ್ಠಿ ನಡೆಸಿ ಸಿನಿಮಾದಲ್ಲಿ ಉಲ್ಲೇಖಿಸಿರುವ ಸುಳ್ಳಗಳ ಬಗ್ಗೆ ವಿವರಿಸಿದ್ದಾರೆ.
1980ರಲ್ಲಿ ಇಸ್ರೊ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಿತು. ಆಗ ಉಸ್ತುವಾರಿ ಇದ್ದವರು ಇ.ವಿ.ಎಸ್. ನಂಬೂದಿರಿ. ಈ ಯೋಜನೆಗೂ ನಾರಾಯಣನ್ ಅವರಿಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಟ ಆರ್ ಮಾಧವನ್ ನಿರ್ದೇಶಿಸಿದ, ನಿರ್ಮಿಸಿದ ಮತ್ತು ಬರೆದಿರುವ ಚಿತ್ರದಲ್ಲಿ ಬಾಹ್ಯಾಕಾಶ ಸಂಸ್ಥೆಯನ್ನು ಮಾನಹಾನಿ ಮಾಡುವಂತಿದೆ ಎಂದು ಹೇಳಿರುವ ಇಸ್ರೋದ ಮಾಜಿ ವಿಜ್ಞಾನಿಗಳು ‘ಚಿತ್ರದಲ್ಲಿ ಮತ್ತು ಟಿ.ವಿ ವಾಹಿನಿಗಳಲ್ಲಿ ಹೇಳಿರುವಂತೆ ನಂಬಿ ನಾರಾಯಣ್ ಅನೇಕ ಯೋಜನೆಗಳ ಪಿತಾಮಹಾ ಎನ್ನುವುದು ಸುಳ್ಳು. ನಂಬಿ ನಾರಾಯಣ್ ಸಿನಿಮಾ ಮತ್ತು ಟಿ.ವಿ ವಾಹಿನಿಗಳ ಮೂಲಕ ಇಸ್ರೊ ಮತ್ತು ಇತರ ವಿಜ್ಞಾನಿಗಳಿಗೆ ಕುಖ್ಯಾತಿ ಅಂಟಿಸುತ್ತಿದ್ದು, ಸಾರ್ವಜನಿಕರಿಗೆ ವಾಸ್ತವ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಚಲನಚಿತ್ರದ ಮೂಲಕ ಮತ್ತು ದೂರದರ್ಶನ ಚಾನೆಲ್ಗಳ ಮೂಲಕ ಇಸ್ರೋ ಮತ್ತು ಇತರ ವಿಜ್ಞಾನಿಗಳನ್ನು ದೂಷಿಸುತ್ತಿರುವುದರಿಂದ ನಾವು ಸಾರ್ವಜನಿಕರಿಗೆ ಕೆಲವು ವಿಷಯಗಳನ್ನು ಹೇಳಬೇಕಾಗಿದೆ. ಕ್ರಯೋಜೆನಿಕ್ ತಂತ್ರಜ್ಞಾನವನ್ನು ಇಸ್ರೊ ಹೊಂದುವಲ್ಲಿ ಆದ ವಿಳಂಬವೇ ತಮ್ಮ ಬಂಧನಕ್ಕೆ ಕಾರಣವೆಂದು ನಾರಾಯಣನ್ ಸಿನಿಮಾದಲ್ಲಿ ಹೇಳಿರುವುದು ವಾಸ್ತವಕ್ಕೆ ದೂರವಾದುದು. ಭಾರತದ ರಾಷ್ಟ್ರಪತಿಯಾಗಲು ಹೋದ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಒಮ್ಮೆ ತಿಳಿ ಹೇಳಿದ್ದೇನೆ ಎಂದು ಸಿನಿಮಾದಲ್ಲಿ ಹೇಳಿಕೊಂಡಿದ್ದಾರೆ. ಅದೂ ಸುಳ್ಳು ಎಂದು ಮಾಜಿ ವಿಜ್ಞಾನಿಗಳು ಹೇಳಿದ್ದಾರೆ.
1994ರಲ್ಲಿ ತಮಿಳುನಾಡು ರಾಜ್ಯಕ್ಕೆ ಅಪ್ಪಳಿಸಿದ ಬೇಹುಗಾರಿಕೆ ಪ್ರಕರಣವು ಇಬ್ಬರು ವಿಜ್ಞಾನಿಗಳು ಮತ್ತು ಇಬ್ಬರು ಮಾಲ್ಡೀವಿಯನ್ ಮಹಿಳೆಯರ ಮೂಲಕ ಇತರ ನಾಲ್ವರು ಸೇರಿ ಕೆಲವು ಬಾಹ್ಯಾಕಾಶ ಕಾರ್ಯಕ್ರಮಗಳನ್ನು ವಿದೇಶಗಳಿಗೆ ವರ್ಗಾಯಿಸಿದ ಆರೋಪಗಳಿಗೆ ಸಂಬಂಧಿಸಿದೆ. ಈ ಪ್ರಕರಣವನ್ನು ಮೊದಲು ರಾಜ್ಯ ಪೊಲೀಸರು ತನಿಖೆ ನಡೆಸಿ ನಂತರ ಸಿಬಿಐಗೆ ಹಸ್ತಾಂತರಿಸಿದ್ದರು. ಈ ಘಟನೆಯಿಂದಾಗಿ ಆಗಿನ ಮುಖ್ಯಮಂತ್ರಿ ದಿವಂಗತ ಕೆ ಕರುಣಾಕರನ್ ರಾಜೀನಾಮೆ ನೀಡಬೇಕಾಯಿತು.
2018 ರಲ್ಲಿ 76 ವರ್ಷದ ನಾರಾಯಣನ್ ಆರೋಪಿಯಾಗಿದ್ದ ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಕೇರಳ ಪೊಲೀಸರ ಪಾತ್ರವೇನು ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ತನಿಖೆಗೆ ಆದೇಶಿಸಿತ್ತು. ಬೇಹುಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಾರಾಯಣನ್ ಅವರು ಸುಮಾರು ಎರಡು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು. ನಂತರ ಗೂಢಚಾರಿಕೆ ಪ್ರಕರಣವು ಸುಳ್ಳು ಎಂದು ಸಿಬಿಐ ಕಂಡುಹಿಡಿದಿತ್ತು.
ಚಿತ್ರದಲ್ಲಿ ಮೂಡಿ ಬಂದಿರುವ ಸುಳ್ಳುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಇಸ್ರೋದ ಹಾಲಿ ಅಧ್ಯಕ್ಷ ಎಸ್ ಸೋಮನಾಥ್ ಅವರನ್ನು ಕೇಳಿದ್ದೇವೆ ಎಂದು ಇಸ್ರೋದ ಮಾಜಿ ವಿಜ್ಞಾನಿಗಳು ತಿಳಿಸಿದ್ದಾರೆ.