ಸಚಿವರ ಮಗಳ ಮದುವೆಗಾಗಿ ಡಾಂಬರ್‌ ಕಂಡ ರಸ್ತೆಗಳು!?

ಹುಬ್ಬಳ್ಳಿ :  ಕೇಂದ್ರ ಸಚಿವ ಪ್ರಹ್ಲಾದ ಜೋಶಿ  ಮಗಳ ಮದುವೆಗೆ ಹುಬ್ಬಳ್ಳಿಯಲ್ಲಿ ರಸ್ತೆಗಳ ದುರಸ್ತಿ ಕಾರ್ಯ ಜೋರಾಗಿದೆ. ಸಪ್ಟೆಂಬರ್ 2 ರಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಮದುವೆಗೆ ಆಯೋಜಿಸಲಾಗಿದೆ. ಮದುವೆ ಹಿನ್ನೆಲೆ ಕೇಂದ್ರದ ಹಲವಾರು ಮಂತ್ರಿಗಳು ನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತದೆ. ಸಚಿವರು ಹಾಗೂ ಅಧಿಕಾರಿಗಳ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸಿದ್ದು “ಕೊನೆಗೂ ರಸ್ತೆಗುಂಡಿಗಳನ್ನು ಮುಚ್ಚಲು ರಾಷ್ಟ್ರೀಯ ನಾಯಕರೇ ಬರಬೇಕಾಯಿತಾ” ಎಂದು  ಪ್ರಶ್ನಿಸುತ್ತಿದ್ದಾರೆ.

ನಗರದಲ್ಲಿ ರಸ್ತೆಗಳು ತೀವ್ರ ಹದಗೆಟ್ಟಿವೆ ಅಂತ ಜನ ಹೋರಾಟ ಮಾಡಿದರೂ ಅಧಿಕಾರಿಗಳು  ಗಮನ ಹರಿಸುತ್ತಿರಿಲ್ಲ. ರಸ್ತೆಗಳ ಅವ್ಯವಸ್ಥೆಯಿಂದ ಹುಬ್ಬಳ್ಳಿ ಧೂಳು ಹೆಚ್ಚಾಗಿದ್ದು, ಜನರು ಓಡಾಡುವುದೇ ಕಷ್ಟವಾಗಿತ್ತು. ಈ ದೂಳು ಜನರ ದೇಹ ಸೇರಿ ಅನೇಕರು ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾರೆ.  ಅನೇಕರ ಪಾಲಿಕೆ ವಿರುದ್ಧ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಆಗ ದುರಸ್ತಿ ಮಾಡದ ಪಾಲಿಕೆ ಅಧಿಕಾರಿಗಳು   ಈಗ ಕೇಂದ್ರ ಸಚಿವರ ಮಗಳ ಮದುವೆಗೆ ಗಣ್ಯರು ಬರುತ್ತಾರೆ ಎಂದು ಡಾಂಬರ್​ ಹಾಕಲು ಮುಂದಾಗಿದ್ದಾರೆ. ನಗರದಲ್ಲಿ ಇದೀಗ ವಿವಿಐಪಿ ಗಳು ಸಂಚರಿಸುವ ರಸ್ತೆಗಳು ಡಾಂಬರು ಕಾಣಲಾರಂಭಿಸಿವೆ. ಚುನಾವಣಾ  ನೀತಿ ಸಂಹಿತೆ ನಡುವೆಯೂ ನಡೆಯುತ್ತಿರುವ ಈ ಕಾರ್ಯವನ್ನು  ಜನರು ಪ್ರಶ್ನಿಸಿದ್ದು, ಇದಕ್ಕೆ ನೀತಿ ಸಂಹಿತೆ ಅಡ್ಡ ಬರುವುದಿಲ್ಲವೇ ಎಂದು ಕೇಳಿದ್ದಾರೆ.

ಇದನ್ನೂ ಓದಿ : ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ 312 ಕೋಟಿ ರೂ ಖಾಸಗಿ ಆಸ್ಪತ್ರೆಗೆ

ಜನ ರಸ್ತೆಗಳಲ್ಲಿ ಸಂಚಾರಿಸುವಾಗ ನಿತ್ಯ ನರಕ ಅನುಭವಿಸುತ್ತಿದದರೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು, ನೀತಿ ಸಂಹಿತೆ ನಡುವೆಯೂ ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಕೇಂದ್ರ ಸಚಿವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಅದೂ ಸಹ ಕೆಲವೇ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಉಳಿದ ರಸ್ತೆಗಳ ಅಭಿವೃದ್ಧಿಗೆ ಮತ್ಯಾರದ್ದಾರೂ ಮದುವೆಯಾಗಬೇಕಾ? ಇದು ಒಂದರ್ಥದಲ್ಲಿ ಚುನಾವಣೆ ಆಮೀಷೆ ಒಡ್ಡುವ ಕೆಲಸವಾಗಿದೆ. ಮದುವೆಗೆ ಅಂದಾಜು 10 ಸಾವಿರ ಜನ ಸೇರುವ ಸಾಧ್ಯತೆ ಇದೆ. ಇದು ಕೋವಿಡ್‌ ನಿಯಮ ಉಲ್ಲಂಘನೆಯಲ್ಲವೆ? ಕೇಂದ್ರದ ಸಚಿವರೊಬ್ಬರು ಈ ರೀತಿಯ ಚುನಾವಣೆ ಹಾಗೂ ಕೋವಿಡ್‌ ಸಂದರ್ಭದಲ್ಲಿ ಮಾದರಿಯಾಗಿರಬೇಕಿತ್ತು. ಆದರೆ ಸಚಿವರ ನಡೆ ಇಲ್ಲಿ ಹಲವು ಅನುಮಾನಗಳನ್ನು ಹುಟ್ಟಿಸುತ್ತಿದೆ ಎಂದು ಸಿಪಿಐಎಂ ಧಾರವಾಡ ಜಿಲಾ ಕಾರ್ಯದರ್ಶಿ ಮಹೇಶ್‌ ಪತ್ತಾರ್‌ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ, ಮಗಳ ಮದುವೆಗಾಗಿ ತುರಾತುರಿಯಲ್ಲಿ ರಸ್ತೆ ಸಿದ್ಧಪಡಿಸಿದ ಪ್ರಹ್ಲಾದ ಜೋಶಿ ಅವರೇ, ಇದೇ ಶ್ರದ್ಧೆ, ಇಚ್ಛಾಶಕ್ತಿ ಉಳಿದ ಕಾಮಗಾರಿಯಲ್ಲಿ ಏಕೆ ತೋರಲಿಲ್ಲ? ಎಂದು ಪ್ರಶ್ನಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಗಳ ಮದುವೆಗಾಗಿ ಏಕಾಏಕಿ ರಸ್ತೆ ಸಿದ್ಧಪಡಿಸುವ ಶಕ್ತಿ ಇದೆ ಎಂದಾದರೆ, ಉಳಿದ ಕಾಮಗಾರಿ ಮುಗಿಸಲು ಮತ್ತೊಮ್ಮೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಅಧಿಕಾರ ಕೊಡಿ ಎನ್ನಲು ನಾಚಿಕೆ ಎನಿಸುವುದಿಲ್ಲವೇ ,ಇಷ್ಟು ದಿನ ಹುಬ್ಬಳ್ಳಿ ಧಾರವಾಡದ ಪಾಲಿಕೆ ಬಿಜೆಪಿ ಆಡಳಿತದಲ್ಲಿದ್ದರೂ ನೀರಿನ ಸಮಸ್ಯೆ ಬಗೆಹರಿಯಲಿಲ್ಲ, ರಸ್ತೆ ಗುಂಡಿ ಮುಚ್ಚಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಮತ್ತೊಮ್ಮೆ ಅಧಿಕಾರ ಕೊಟ್ಟರೆ ಕೆಲಸ ಮುಗಿಸುತ್ತೇವೆ ಎನ್ನುವ ಪ್ರಹ್ಲಾದ ಜೋಶಿ ಅವರೇ, ಒಂದು ರಸ್ತೆಯಾಗಲು ನಿಮ್ಮ ಮಗಳ ಮದುವೆ ಬರಬೇಕಾಯ್ತು! ಇನ್ನುಳಿದ ಕೆಲಸ ಪೂರೈಸಲು ಯಾರದ್ದಾದರೂ ಬಿಜೆಪಿಗರ ಮದುವೆಯೇ ಬರಬೇಕು ಎಂದು ಟೀಕಿಸಿದೆ. ಯಾವುದೇ ಚುನಾವಣೆ ಬರಲಿ ಬಿಜೆಪಿ ಪಕ್ಷದವರು ಸುಳ್ಳಿನ ರೈಲು ಬಿಡಲು ತಯಾರಾಗುತ್ತಾರೆ! ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ, ಸಂಸದರು, ಶಾಸಕರೂ ಬಿಜೆಪಿ, ಒಬ್ಬರು ರಾಜ್ಯದ ಸಚಿವರಾಗಿದ್ದರು, ಮತ್ತೊಬ್ಬರು ಕೇಂದ್ರ ಸಚಿವರಾಗಿದ್ದಾರೆ. ಹೀಗಿದ್ದೂ ಯಾವ ಅಭಿವೃದ್ಧಿ ಮಾಡದೆ, ಹುಬ್ಬಳ್ಳಿ ಧಾರವಾಡದ ಜನರೆದುರು ಇನ್ನೂ ಬಣ್ಣದ ರೈಲನ್ನೇ ಬಿಡುತ್ತಿದ್ದಾರೆ ಎಂದು ಲೇವಡಿ ಮಾಡಿದೆ.

ಒಟ್ಟಾರೆ ಜನ ಕೇಳಿದಾಗ ದುರಸ್ತಿ ಮಾಡಿಕೊಡದ ಅಧಿಕಾರಿಗಳು , ಸಚಿವರ ಮದುವೆಗೆ ರಸ್ತೆಗಳನ್ನು ನಿರ್ಮಿಸುವುದು ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಜನರ ಕಲ್ಯಾಣಕ್ಕಾಗಿ ದುಡಿಯಬೇಕಿದ್ದ ಸಚಿವರು ಮತ್ತು ಅಧಿಕಾರಿಗಳು ಯಾರನ್ನೋ ಖುಷಿ ಪಡಿಸಲು, ಮೆಚ್ಚುಗೆ ಪಡೆಯಲು ಈ ರೀತಿಯ ಕಾರ್ಯಗಳಿಗೆ ಮುಂದಾಗುತ್ತಿರುವುದು ವಿಪರ್ಯಾಸವೇ ಸರಿ.

Donate Janashakthi Media

Leave a Reply

Your email address will not be published. Required fields are marked *