ದುಡಿಯುವ ಜನರು ಮತ್ತು ಬುದ್ಧಿಜೀವಿಗಳ ನಡುವಿನ ಅಂತರ ಹೆಚ್ಚುವಲ್ಲಿ ನವ-ಉದಾರವಾದವು ಬಹಳಷ್ಟು ಕೊಡುಗೆ ನೀಡಿದೆ. ಇದು, ಸಾಮಾನ್ಯವಾಗಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಹಿಷ್ಣುತೆಯ ರಕ್ಷಣೆಗಾಗಿ ಮುಂದಾಗುತ್ತಿದ್ದ ಬುದ್ಧಿಜೀವಿಗಳ ಮೇಲೆ ನವ-ಫ್ಯಾಸಿಸಂ ದಾಳಿಯನ್ನು ಸುಲಭಗೊಳಿಸಿದೆ. ಆದರೆ ದುಡಿಯುವ ಜನತೆ ಮತ್ತು ಬುದ್ಧಿಜೀವಿಗಳ ನಡುವಿನ ಅಂತರವನ್ನು ನಿವಾರಿಸಿ ನವ-ಫ್ಯಾಸಿಸಂನ್ನು ಸೋಲಿಸುವ ಪರಿಸ್ಥಿತಿ ನವ-ಉದಾರವಾದದ ಬಿಕ್ಕಟ್ಟಿನಿಂದಾಗಿಯೇ ಸೃಷ್ಟಿಯಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣ ವಲಯದ ಬೋಧಕರು ಎದುರಿಸುತ್ತಿರುವ ಆರ್ಥಿಕ ತೊಂದರೆಗಳೇ, ನವ-ಫ್ಯಾಸಿಸಂನ ಬಿಕ್ಕಟ್ಟಿನ ಕಾಲಮಾನದಲ್ಲಿ ಬುದ್ಧಿಜೀವಿಗಳು ಮತ್ತು ದುಡಿಯುವ ಜನರ ಭವಿಷ್ಯಗಳು ಪರಸ್ಪರ ತಳುಕು ಹಾಕಿಕೊಳ್ಳುತ್ತವೆ ಎಂಬ ಅಂಶಕ್ಕೆ ಸಾಕ್ಷಿಯಾಗುತ್ತವೆ.
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಭಾರತದ ಕಮ್ಯುನಿಸ್ಟರು ತಮ್ಮ ಕಾರ್ಯ ಚಟುವಟಿಕೆಯ ಭಾಗವಾಗಿ ಶಾಲಾ ಕಾಲೇಜುಗಳನ್ನು ಸ್ಥಾಪಿಸುವುದಕ್ಕಾಗಿ ಸಾರ್ವಜನಿಕ ದೇಣಿಗೆ ಸಂಗ್ರಹಿಸಲು ಮತ್ತು ಇದಕ್ಕೆ ಸಾರ್ವಜನಿಕರ ಮನವೊಲಿಸಲು ಬಹಳವಾಗಿ ಶ್ರಮಿಸಿದ್ದಾರೆ. ಅವರ ಈ ಕಾರ್ಯ-ನಿಷ್ಠೆಯು, ಆರ್‌ಎಸ್‌ಎಸ್‌ನಂತಹ ಫ್ಯಾಸಿಸ್ಟ್ ಸಂಘಟನೆಗಳು ಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸುವ ಚಟುವಟಿಕೆಗೆ ಹೋಲಿಸಿದರೆ, ಎರಡು ರೀತಿಯಲ್ಲಿ ಭಿನ್ನವಾಗಿತ್ತು. ಮೊದಲನೆಯದು, ಕಮ್ಯುನಿಸ್ಟರು ಈ ಶಿಕ್ಷಣ ಸಂಸ್ಥೆಗಳನ್ನು ಅವುಗಳ ಮೇಲೆ ಹಿಡಿತ ಸಾಧಿಸಿ ತಮ್ಮದೇ ವಿಶ್ವ-ಕಣ್ಣೋಟವನ್ನು ಪ್ರಸಾರ ಮಾಡುವ ಉದ್ದೇಶದಿಂದ ಆರಂಭಿಸಲಿಲ್ಲ. ಜನರು ಶಿಕ್ಷಣ ಪಡೆದಾಗ ಅವರಾಗಿ ಅವರೇ ಕಮ್ಯುನಿಸ್ಟರು ಹೊಂದಿರುವ ವಿಶ್ವ ದೃಷ್ಟಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಪಡೆಯುತ್ತಾರೆ ಎಂಬ ಧೃಡ ವಿಶ್ವಾಸದಿಂದ ಜನರ ಸಾಧಾರಣ ಶಿಕ್ಷಣ ಮಟ್ಟವನ್ನು ಸುಧಾರಿಸುವುದು ಅವರ ಗುರಿಯಾಗಿತ್ತು.
ಹಾಗಾಗಿ, ಕಮ್ಯುನಿಸ್ಟರು ಕಟ್ಟಿ ಬೆಳೆಸಿದ ಸಂಸ್ಥೆಗಳು ವಿಶ್ವಾಸಾರ್ಹ ಶಿಕ್ಷಣ ಸಂಸ್ಥೆಗಳಾಗಿದ್ದವೇ ವಿನಃ, ನಿರ್ದಿಷ್ಟ ಪ್ರಚಾರ ನಡೆಸುವ ಸಾಧನಗಳಲ್ಲ. ಎರಡನೆಯದು, ಕಮ್ಯುನಿಸ್ಟರು ಮಕ್ಕಳ ಶಾಲೆಗಳನ್ನು ಮಾತ್ರ ಸ್ಥಾಪಿಸಲಿಲ್ಲ, ವಿಷಯ-ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವ ಮೂಲಕ ಅಭಿಪ್ರಾಯಗಳನ್ನು ಪ್ರಬುದ್ಧವಾಗಿ ರೂಪಿಸಿಕೊಳ್ಳಲು ಅನುವಾಗುವಂತೆ ಕಾಲೇಜುಗಳನ್ನು ಸ್ಥಾಪಿಸಿದರು. ಇದಕ್ಕೆ ವ್ಯತಿರಿಕ್ತವಾಗಿ ಫ್ಯಾಸಿಸ್ಟರು ಎಳೆ ಮನಸಿನ ಮಕ್ಕಳನ್ನು ಭಾವನಾತ್ಮಕವಾಗಿ ಪ್ರಭಾವಿಸಿ ಅವರನ್ನು ಸೆಳೆಯುವ ಉದ್ದೇಶದಿಂದ ಮಕ್ಕಳ ಶಾಲೆಗಳನ್ನು ಸ್ಥಾಪಿಸುತ್ತಾರೆ.
ಇದನ್ನೂ ಓದಿ: ಜುಲೈ 13 ಕ್ಕೆ ಮಹಾನಾಯಕ ಸಾಮ್ರಾಟ್ ಅಶೋಕ ನಾಟಕ ಪ್ರದರ್ಶನ
ಈ ಎರಡು ಪ್ರಯತ್ನಗಳು ಶಿಕ್ಷಣದ ಬಗ್ಗೆ ಪರಸ್ಪರ ವಿರುದ್ಧವಾದ ಎರಡು ಮನೋಭೂಮಿಕೆಗಳನ್ನು ವ್ಯಕ್ತಪಡಿಸುತ್ತವೆ. ಬರ್ಟೋಲ್ಟ್ ಬ್ರೆಕ್ಟ್ “ಹಸಿದಿರುವ ಮಾನವ; ಪುಸ್ತಕ ಹಿಡಿ” ಎಂದಾಗ, ಶಿಕ್ಷಣವು ಮಾನವ ಗ್ರಹಿಕೆಗಳನ್ನು ವಿಸ್ತರಿಸುವುದರಿಂದ ಜನ ವಿಮೋಚನೆಗೆ ಅದು ಅವಶ್ಯ ಎಂಬ ಎಡಪಂಥೀಯ ಮನೋಭಾವವನ್ನು ಅವರು ಅರ್ಥಪೂರ್ಣವಾಗಿ ಅಭಿವ್ಯಕ್ತಿಸಿದ್ದರು. ಶಿಕ್ಷಣದ ಬಗ್ಗೆ ಫ್ಯಾಸಿಸ್ಟರ ಮನೋಭಾವವು ಇದಕ್ಕೆ ತದ್ವಿರುದ್ಧವಾಗಿದೆ. ಅವರ ಪ್ರಕಾರ, ತಮ್ಮ ಗ್ರಹಿಕೆಗಳನ್ನು ಜನರು ವಿಸ್ತರಿಸತೊಡಗಿದಾಗ ಸಾರಭೂತವಾಗಿಅದು ವಿಧ್ವಂಸಕವಾಗಿರುವುದರಿಂದ ನಿಜ ಶಿಕ್ಷಣವನ್ನು ಕೈಬಿಟ್ಟು ಅದನ್ನು ಫ್ಯಾಸಿಸ್ಟ್ ಪ್ರಚಾರಕ್ಕೆ ಬದಲಾಯಿಸಬೇಕು ಎಂಬುದು.

“ಹಸಿದಿರುವ ಮಾನವ,
ಪುಸ್ತಕಕ್ಕೆ ಕೈಚಾಚು
ಅದು ಒಂದು ಅಸ್ತ್ರ”
-ಬರ್ಟೊಲ್ಟ್ ಬ್ರೆಕ್ಟ್
ಎಡಪಂಥೀಯರು, “ಹಸಿದಿರುವ ಮನುಷ್ಯ”ನನ್ನು “ಪುಸ್ತಕ ಓದು” ಎಂದು ಪ್ರಚೋದಿಸುತ್ತಾರೆ; ಫ್ಯಾಸಿಸ್ಟರು ನಾಜಿ ಜರ್ಮನಿಯಲ್ಲಿ ಮಾಡಿದ್ದಂತೆ ಪುಸ್ತಕಗಳ ಸುಡುವುದನ್ನು ಪ್ರೋತ್ಸಾಹಿಸುತ್ತಾರೆ.
ಫ್ಯಾಸಿಸ್ಟರ ಶಿಕ್ಷಣ-ಭೀತಿ
ಈ ವಿಷಯದಲ್ಲಿ ಇಂದಿನ ನವ-ಫ್ಯಾಸಿಸ್ಟರು ತಮ್ಮ ಹಿರೀಕರನ್ನು ಅನುಕರಿಸುತ್ತಾರೆ. ಸಾಮಾನ್ಯವಾಗಿ ಅವರು ಬೌದ್ಧಿಕ ಚಟುವಟಿಕೆಯನ್ನು ನಿರ್ದಯವಾಗಿ ವಿರೋಧಿಸುತ್ತಾರೆ ಮತ್ತು ಬುದ್ಧಿಜೀವಿಗಳನ್ನು ಒಂದು ಸಾಮಾಜಿಕ ಗುಂಪಾಗಿ ವಿರೋಧಿಸುತ್ತಾರೆ. ಭಾರತದಲ್ಲಿ ಮಾತ್ರವಲ್ಲದೆ ಇದೇ ರೀತಿಯ ಆಡಳಿತಗಳನ್ನು ಹೊಂದಿರುವ ಯುಎಸ್ ಮತ್ತು ಇತರ ದೇಶಗಳಲ್ಲಿಯೂ ಸಹ ಸಂಭವಿಸುತ್ತಿರುವ ಎಲ್ಲ ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ನಾಶವು ಈ ಪ್ರವೃತ್ತಿಯ ಅಭಿವ್ಯಕ್ತಿಯಾಗಿದೆ. ಭಾರತದಲ್ಲಿ ತಮ್ಮ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಧೈರ್ಯ ತೋರುವ ಬುದ್ಧಿಜೀವಿಗಳನ್ನು ಜಾರಿ ನಿರ್ದೇಶನಾಲಯದ ದಾಳಿಗಳ ಮೂಲಕ ಹೆದರಿಸುವುದು, ಅವರನ್ನು “ಖಾನ್ ಮಾರ್ಕೆಟ್ ಗ್ಯಾಂಗ್” (ಅದರ ಅರ್ಥ ಏನೇ ಇರಲಿ), “ತುಕ್ಡೆ-ತುಕ್ಡೆ ಗ್ಯಾಂಗ್” (ದೇಶವನ್ನು ತುಂಡು ತುಂಡು ಮಾಡುವ ಗುಂಪು), “ನಗರ ನಕ್ಸಲರು” (ಅಂದರೆ ಉಗ್ರ ಎಡಪಂಥೀಯ ವ್ಯಕ್ತಿಗಳು ಮತ್ತು ಗುಂಪುಗಳು) ಎಂದು ಹಣೆಪಟ್ಟಿ ಹಚ್ಚುವ ಮೂಲಕ ಅವರ ವಿರುದ್ಧ ಒಂದು ಬದ್ಧದ್ವೇಷವನ್ನು ಸಾರ್ವಜನಿಕರಲ್ಲಿ ಹುಟ್ಟಿಸುವುದು ಇವೆಲ್ಲವೂ ಈ ಪ್ರವೃತ್ತಿಯ ಭಾಗವಾಗಿದೆ. ಅಮೆರಿಕದ ವಿಶ್ವವಿದ್ಯಾಲಯಗಳು ಕಮ್ಯುನಿಸ್ಟರಿಂದ ತುಂಬಿ ತುಳುಕುತ್ತಿವೆ ಎಂದು ಡೊನಾಲ್ಡ್ ಟ್ರಂಪ್ ನೋಡುತ್ತಿರುವುದು ಮತ್ತು ಅವರನ್ನು ನಿರ್ಮೂಲ ಮಾಡಬೇಕಾಗಿದೆ ಎಂದು ಹೇಳುತ್ತಿರುವುದು ಕಾಕತಾಳೀಯವೇನಲ್ಲ. ಶಿಕ್ಷಣದ ಬಗ್ಗೆ ಅಂತಹ ಒಂದು ಭೀತಿ ನವ-ಫ್ಯಾಸಿಸ್ಟ್ ಮನೋಭಾವದಲ್ಲೇ ಅಂತರ್ಗತವಾಗಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವನ್ನು ನಾಶಪಡಿಸಲು, ವಿಶ್ವಭಾರತಿ ವಿಶ್ವವಿದ್ಯಾಲಯವನ್ನು ನಿಷ್ಕ್ರಿಯಗೊಳಿಸಲು, ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯವನ್ನು ಧ್ವಂಸಗೊಳಿಸಲು, ಜಾಮಿಯಾ ಮಿಲಿಯಾ ಇಸ್ಲಾಮಿಯಾವನ್ನು ಭಯಭೀತಗೊಳಿಸಲು, ದೆಹಲಿ ವಿಶ್ವವಿದ್ಯಾಲಯವನ್ನು ಅಸ್ಥಿರಗೊಳಿಸಲು, ಪುಣೆ ಚಲನಚಿತ್ರ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲು (ವಿದ್ಯಾರ್ಥಿಗಳು ಇದರ ವಿರುದ್ಧ ದೀರ್ಘಕಾಲ ಪ್ರತಿಭಟನೆ ನಡೆಸಿದ್ದರು) ಮತ್ತು ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗವನ್ನು ನಿಯಂತ್ರಿಸಲು ಮೋದಿ ಸರ್ಕಾರವು ವ್ಯವಸ್ಥಿತವಾಗಿ ಪ್ರಯತ್ನಿಸಿದೆ. ಇವೆಲ್ಲವೂ ಸ್ವಾತಂತ್ರ‍್ಯ ಬಂದ ನಂತರ ನಿರ್ಮಿಸಿದ ಮತ್ತು ದೇಶವು ನಿಜಕ್ಕೂ ಹೆಮ್ಮೆಪಡಬಹುದಾದ ಸಂಸ್ಥೆಗಳೇ. ಅವುಗಳ ಮೇಲೆ ನಡೆಸುವ ದಾಳಿಯು ದೇಶದಲ್ಲಿ ಸ್ವಂತಿಕೆಯ ಹಾಗೂ ಸೃಜನಶೀಲ ಚಿಂತನೆಯನ್ನು ನಾಶಮಾಡುವ ಅತ್ಯಂತ ವಿಕೃತ ಪ್ರಯತ್ನವಾಗುತ್ತದೆ. ಚಿಂತನೆಯ ಮೇಲಿನ ಈ ದಾಳಿಯು ಕೊಲಂಬಿಯಾ ವಿಶ್ವವಿದ್ಯಾಲಯ, ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಇತರ ಖ್ಯಾತಿವೆತ್ತ ಸಂಸ್ಥೆಗಳ ಮೇಲೆ ಟ್ರಂಪ್ ಆಡಳಿತವು ನಡೆಸಿದ ದಾಳಿಯೊಂದಿಗೆ ವಿಲಕ್ಷಣವಾಗಿ ಹೋಲುತ್ತದೆ.
ಚಿಂತನೆಗಳಿಗೆ ಬೆಲೆಯಿಲ್ಲದಂತೆ ಮಾಡುವ ಮತ್ತು ಬೌದ್ಧಿಕ ಚಟುವಟಿಕೆಗಳನ್ನು ಹತ್ತಿಕ್ಕುವ ನವ-ಫ್ಯಾಸಿಸ್ಟರ ಪ್ರಯತ್ನವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಲ್ಲವಾದರೂ, ಒಂದು ಒಗಟಾಗಿ ಕಾಡುವ ಸಂಗತಿ ಯಾವುದು ಎಂದರೆ: ಸದಾ ತನ್ನ ಬುದ್ಧಿಜೀವಿಗಳನ್ನು ಅಪಾರ ಗೌರವದಿಂದ ಕಾಣುತ್ತಿದ್ದ (ಇದು ಬಂಡವಾಳಶಾಹಿ-ಪೂರ್ವದ ಪರಂಪರೆಯೂ ಹೌದು) ದೇಶದಲ್ಲಿ ಬೌದ್ಧಿಕ ಚಟುವಟಿಕೆಯನ್ನು ಹತ್ತಿಕ್ಕುವ ಪ್ರಯತ್ನವು ಈ ಮಟ್ಟದ ಯಶಸ್ಸನ್ನು ಕಂಡಿದ್ದಾದರೂ ಹೇಗೆ? ಕೆಲ ವರ್ಷಗಳ ಹಿಂದಿನವರೆಗೂ ಭಾರತದ ಜನ ಸಾಮಾನ್ಯರು ಬುದ್ಧಿಜೀವಿಗಳನ್ನು, ವಿಶೇಷವಾಗಿ ವಿದ್ವಜ್ಜನರನ್ನು ಅಪಾರ ಗೌರವದಿಂದ ಕಾಣುತ್ತಿದ್ದರು ಎಂಬುದನ್ನು ಶೈಕ್ಷಣಿಕ ವಲಯದಲ್ಲಿರುವ ಯಾರಾದರೂ ಖಾತ್ರಿಪಡಿಸುತ್ತಾರೆ. ಹಾಗಿದ್ದರೂ ಸಹ ಮೋದಿ ಸರ್ಕಾರವು ಬುದ್ಧಿಜೀವಿಗಳ ಮೇಲೆ ನಡೆಸಿದ ದಾಳಿಯು ಸಾಮಾನ್ಯವಾಗಿ ನಿರೀಕ್ಷಿಸಬಹುದಾದ ಮಟ್ಟದ ಜುಗುಪ್ಸೆಯನ್ನು ಏಕೆ ಹುಟ್ಟಿಸಲಿಲ್ಲ? ಈ ಬಗ್ಗೆ ಅಮೆರಿಕದ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ, ಏಕೆಂದರೆ, ಪಾಳೆಗಾರಿಕೆ ಪದ್ಧತಿಯ ಮಾರ್ಗವನ್ನು ಅದು ಹಾದು ಬರಬೇಕಿರಲಿಲ್ಲವಾದ ಕಾರಣದಿಂದಾಗಿ, ಭಾರತದಂತಹ ಪುರಾತನ ಸಮಾಜಗಳು ಸಾಮಾನ್ಯವಾಗಿ ನೀಡುವ ಉನ್ನತ ಸ್ಥಾನಮಾನವನ್ನು ಅದು ಬುದ್ಧಿಜೀವಿಗಳಿಗೆ ನೀಡಲೇ ಇಲ್ಲ. ಆದರೆ, ಭಾರತದಲ್ಲಿ ಈ ಬದಲಾವಣೆ ಉಂಟಾಗಲು ನಿಜಕ್ಕೂ ಆಗಿದ್ದಾದರೂ ಏನು?
ನವ-ಉದಾರವಾದಿ ಆಳ್ವಿಕೆಯ ಪರಿಣಾಮ
ಈ ಬದಲಾವಣೆಯ ತಳದಲ್ಲಿರುವ ಅತ್ಯಂತ ನಿರ್ಣಾಯಕ ಅಂಶವೆಂದರೆ ಅದು ನವ ಉದಾರವಾದಿ ಆಳ್ವಿಕೆಯನ್ನು ದೇಶದಲ್ಲಿ ಜಾರಿಗೆ ತಂದ ಅಂಶವೇ ಎಂಬುದರ ಬಗ್ಗೆ ಅನುಮಾನವಿಲ್ಲ. ಈ ಬದಲಾವಣೆಯು ಸಾಕಾರಗೊಳ್ಳುವಲ್ಲಿ ನವ ಉದಾರವಾದವು ಕನಿಷ್ಠ ಮೂರು ವಿಭಿನ್ನ ರೀತಿಯಲ್ಲಿ ಕೊಡುಗೆ ನೀಡಿದೆ. ಮೊದಲನೆಯದು, ವರಮಾನದ ಅಸಮಾನತೆಗಳು ಬಹಳವಾಗಿ ವಿಸ್ತರಿಸಿವೆ. ಬುದ್ಧಿಜೀವಿಗಳು ಮತ್ತು ವಿ.ವಿ ಬೋಧಕರು ಹೆಚ್ಚು ವರಮಾನ ಗಳಿಸುವವರ ಸಾಲಿನಲ್ಲೇನೂ ಇರಲಿಲ್ಲ. ಆದರೂ, ಅವರಲ್ಲಿ ಬಹಳ ಮಂದಿಯ ಸ್ಥಿತಿ-ಗತಿಗಳು ದುಡಿಯುವ ಜನಸಮೂಹದೊಂದಿಗೆ ಹೋಲಿಸಿದರೆ ನವ ಉದಾರವಾದದ ಆಳ್ವಿಕೆಯಲ್ಲಿ ಖಂಡಿತವಾಗಿಯೂ ಉತ್ತಮವಾಗಿವೆ. ಒಂದು ಉದಾಹರಣೆಯು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ. 1974ರಲ್ಲಿ ಭಾರತದಲ್ಲಿ ಒಂದು ಕ್ವಿಂಟಲ್ ಗೋಧಿಯ ಅಧಿಕೃತ ಕನಿಷ್ಠ ಬೆಂಬಲ ಬೆಲೆಯು 85 ರೂಗಳಷ್ಟಿತ್ತು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯದ ಒಬ್ಬ ಅಸೋಸಿಯೇಟ್ ಪ್ರೊಫೆಸರ್‌ನ ಆರಂಭಿಕ ಮೂಲ ವೇತನವು ತಿಂಗಳಿಗೆ 1,200 ರೂಗಳಷ್ಟಿತ್ತು.

ಇಂದಿನ ದಿನಗಳಲ್ಲಿ ಒಂದು ಕ್ವಿಂಟಲ್ ಗೋಧಿಯ ಅಧಿಕೃತ ಕನಿಷ್ಠ ಬೆಂಬಲ ಬೆಲೆಯು 2,275 ರೂಗಳಷ್ಟಾಗಿದೆ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್‌ನ ಆರಂಭಿಕ ಮೂಲ ಮಾಸಿಕ ವೇತನವು 131,400 ರೂಗಳಷ್ಟಾಗಿದೆ. ಈ ಅಂಕಿ-ಅಂಶಗಳನ್ನು ನಾವು ಉಲ್ಲೇಖಿಸಿದ ಈ ಎರಡು ವರ್ಗಗಳಿಗೆ ಸೇರಿದ ವ್ಯಕ್ತಿಗಳ ವರಮಾನಗಳಲ್ಲಿ ಆಗಿರುವ ಚಲನೆಯ ಒಂದು ಸ್ಥೂಲ ಅಂದಾಜು ಎಂದು ತೆಗೆದುಕೊಂಡರೆ, ಉನ್ನತ ಶಿಕ್ಷಣ ವಲಯದ ಒಬ್ಬ ಬೋಧಕನ ವರಮಾನವು 100 ಪಟ್ಟು ಹೆಚ್ಚಾಗಿದೆ ಮತ್ತು ಒಬ್ಬ ರೈತನ ವರಮಾನವು 27 ಪಟ್ಟು ಹೆಚ್ಚಾಗಿದೆ ಎಂಬುದು ಕಂಡುಬರುತ್ತದೆ. ಅಂದರೆ, ಈ ಮೂರು-ನಾಲ್ಕು ದಶಕಗಳ ಅವಧಿಯಲ್ಲಿ ಅವರ ವರಮಾನಗಳ ನಡುವಿನ ಅನುಪಾತವು ನಾಲ್ಕು ಪಟ್ಟು ದೊಡ್ಡದಾಗಿದೆ. ಇದು ನವ ಉದಾರವಾದಿ ಯುಗದೊಂದಿಗೆ ಬಹಳವಾಗಿ ತಾಳೆಯಾಗುತ್ತದೆ. ಇಂಥಹ ಒಂದು ಸನ್ನಿವೇಶದಲ್ಲಿ ಉನ್ನತ ಶಿಕ್ಷಣ ವಲಯದ ಬೋಧಕರಿಂದ ಮತ್ತು ಇತರ ಬುದ್ಧಿಜೀವಿಗಳಿಂದ ದುಡಿಯುವ ಜನರು ದೂರ ಸರಿಯುವುದು ಆಶ್ಚರ್ಯವಲ್ಲ.
ಎರಡನೆಯದು, ಬಂಡವಾಳಶಾಹಿಯ ಪರಿಣಾಮವಾಗಿ ಹಿಂದಿನ-ಸ್ವರೂಪದ ಸಮುದಾಯಗಳು ವಿಸರ್ಜಿಸಲ್ಪಡುತ್ತವೆ. ಭಾರತದಲ್ಲಿ ಬುದ್ಧಿಜೀವಿಗಳ ಮೇಲೆ ಇಟ್ಟ ಗೌರವವು ಬಂಡವಾಳಶಾಹಿ-ಪೂರ್ವ ಕಾಲದಿಂದಲೂ ಸಮುದಾಯ ಪ್ರಜ್ಞೆಯಿಂದ ಮೂಡಿಬಂದ ಒಂದು ಪರಂಪರೆಯಾಗಿದೆ. ದೇಶದಲ್ಲಿ ಪೂರ್ಣ ಪ್ರಮಾಣದ, ಅಡೆ ತಡೆಯಿಲ್ಲದ ಬಂಡವಾಳಶಾಹಿಯನ್ನು ಹೇರಿರುವ ನವ ಉದಾರವಾದಿ ಆಳ್ವಿಕೆಯು, ಬಂಡವಾಳಶಾಹಿ-ಪೂರ್ವ ಕಾಲದಿಂದಲೂ ಒಂದು ಪರಂಪರೆಯಾಗಿ ಬಂದ ಈ ಸಮುದಾಯದ ಪ್ರಜ್ಞೆಯನ್ನು ಅಳಿಸಿ ಹಾಕಿದೆ ಮತ್ತು ಬುದ್ಧಿಜೀವಿಗಳು ಮತ್ತು ದುಡಿಯುವ ಜನರ ನಡುವಿನ ಅಂತರವನ್ನು ಹಿಗ್ಗಿಸಿದೆ.
ಮೂರನೆಯದಾಗಿ, ಈ ವೈಯಕ್ತೀಕಕರಣದ ಪ್ರವೃತ್ತಿಯು ಬೆಳೆಯುತ್ತಿರುವ ಸಮಯದಲ್ಲೇ ಜಾಗತೀಕರಣದ ವಿದ್ಯಮಾನವೂ ಸಂಭವಿಸಿತು. ಇದು ಬುದ್ಧಿಜೀವಿಗಳ ದೊಡ್ಡ ವಿಭಾಗಗಳನ್ನು ಅವರ ಸುತ್ತಲಿನ ಸಮಾಜದ ಬೇರುಗಳಿಂದ ದೂರ ಸರಿಸಿ ವಿಶ್ವ ಮಟ್ಟದಲ್ಲಿ ಬುದ್ಧಿಜೀವಿಗಳು ಪರಸ್ಪರ ಸಂಬಂಧ ಕಲ್ಪಿಸಿಕೊಳ್ಳುವ ಪ್ರವೃತ್ತಿಯನ್ನು ಉಂಟುಮಾಡಿತು. ಇದೂ ಸಹ ಅವರನ್ನು ದೇಶದ ದುಡಿಯುವ ಜನರಿಂದ ಮತ್ತಷ್ಟು ದೂರ ಸರಿಸಿತು.
ಈ ಎಲ್ಲಾ ಕಾರಣಗಳಿಂದಾಗಿ, ದುಡಿಯುವ ಜನರು ಮತ್ತು ಬುದ್ಧಿಜೀವಿಗಳ ನಡುವಿನ ಅಂತರ ಹೆಚ್ಚುವಲ್ಲಿ ನವ-ಉದಾರವಾದವು ಕೊಡುಗೆ ನೀಡಿದೆ. ಈ ಕೊಡುಗೆಯು, ಸಾಮಾನ್ಯವಾಗಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಹಿಷ್ಣುತೆಯ ರಕ್ಷಣೆಗಾಗಿ ಮುಂದಾಗುತ್ತಿದ್ದ ಬುದ್ಧಿಜೀವಿಗಳ ಮೇಲೆ ನವ-ಫ್ಯಾಸಿಸಂ ದಾಳಿಯನ್ನು ಸುಲಭಗೊಳಿಸಿದೆ. ಈ ಕೊಡುಗೆಯು ನವ-ಫ್ಯಾಸಿಸಂಗಾಗಿ ಭೂಮಿಕೆಯನ್ನು ನವ-ಉದಾರವಾದವು ಸಿದ್ಧಪಡಿಸಿದ ಇನ್ನೊಂದು ಮಾರ್ಗವಾಗಿದೆ.
ನವ-ಉದಾರವಾದದ ಬಿಕ್ಕಟ್ಟಿನಿಂದಾಗಿಯೇ
ದುಡಿಯುವ ಜನರು ಬುದ್ಧಿಜೀವಿಗಳ ಬಗ್ಗೆ ಅವರು ಹೊಂದಿದ್ದ ಗೌರವವನ್ನು ಕಳೆದುಕೊಳ್ಳುವುದು ಒಂದು ಸ್ವಾಗತಾರ್ಹ ಬೆಳವಣಿಗೆ, ಏಕೆಂದರೆ ಅದು ಸಾಮಾಜಿಕ ಭಿನ್ನತೆಗಳನ್ನು ಮತ್ತು ಸಾಮಾಜಿಕ ಅಸಮಾನತೆಗಳನ್ನು ಅಳಿಸಿಹಾಕುತ್ತದೆ ಎಂದು ಭಾವಿಸಬಹುದು. ಇದು ತಪ್ಪು. ಸಮಾನತೆಯಲ್ಲಿ ನಂಬಿಕೆ ಇಡುವ ಒಂದು ಸಮಾಜದಲ್ಲಿ ಬುದ್ಧಿಜೀವಿಗಳು ಎಂದು ಕರೆಯಲಾಗುವ ಒಂದು ಪ್ರತ್ಯೇಕ ವಿಶೇಷ ವಿಭಾಗ ಇರಬೇಕಾಗಿಲ್ಲ, ಏಕೆಂದರೆ, ಸಮಾಜದ ಪ್ರತಿಯೊಬ್ಬರೂ ದುಡಿಯುವವರೂ ಆಗಿರುತ್ತಾರೆ ಮತ್ತು ಬುದ್ಧಿಜೀವಿಗಳೂ ಆಗಿರುತ್ತಾರೆ (ಕಮ್ಯುನಿಸ್ಟರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಕಾರಣ ಇದುವೇ ತಾನೇ).
ಸಮತ್ವದ ಹೆಸರಿನಲ್ಲಿ ಬುದ್ಧಿಜೀವಿಗಳನ್ನು ಸುಮ್ಮನೇ ಟೀಕಿಸುವುದು ಮತ್ತು ತೆಗಳುವುದು ಒಂದು ಸಮಾಜವನ್ನು ಚುಕ್ಕಾಣಿಯಿಲ್ಲದ ಸಮಾಜವಾಗಿ ಮಾಡುತ್ತದೆ ಮತ್ತು ಅದನ್ನು ನವ-ಫ್ಯಾಸಿಸ್ಟರ ಮತ್ತು ಪಂಡಿತರೆನಿಸಿಕೊಳ್ಳುವ ವಂಚಕರ ಪ್ರಭಾವಕ್ಕೆ ಒಡ್ಡುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ವಿಚಾರಗಳು ಒಂದು ಸಣ್ಣ ಗುಂಪಿನೊಳಗೆ ಕೇಂದ್ರೀಕೃತಗೊಂಡು ಅದರ ಏಕಸ್ವಾಮ್ಯ ನಿಯಂತ್ರಣಕ್ಕೊಳಪಡುವುದರ ಬದಲು ವಿಚಾರಗಳನ್ನು ಜನರ ನಡುವೆ ಪ್ರಚುರಗೊಳಿಸುವುದು ಮತ್ತು ಇನ್ನೊಂದು ಕಡೆಯಲ್ಲಿ ವಿಚಾರಗಳನ್ನು ನಾಶ ಪಡಿಸುವುದು-ಇವುಗಳ ನಡುವೆ ಒಂದು ಮೂಲಭೂತ ವ್ಯತ್ಯಾಸವಿದೆ.
ವಾಸ್ತವವಾಗಿ, ಅರ್ಥಶಾಸ್ತ್ರಜ್ಞ ಜೆ.ಎಂ. ಕೀನ್ಸ್ ಅವರಂಥಹ ಸೂಕ್ಷ್ಮ ದೃಷ್ಟಿಯುಳ್ಳ ಉದಾರವಾದಿ ಬರಹಗಾರರೂ ಸಹ, ಒಂದು ಬಂಡವಾಳಶಾಹಿ ಸಮಾಜದಲ್ಲಿ ಸಾಮಾಜಿಕ ಸೂಕ್ಷ್ಮತೆಯುಳ್ಳ ಬುದ್ಧಿಜೀವಿಗಳನ್ನು ಹೊಂದಿರುವುದರ ಪ್ರಾಮುಖ್ಯತೆಯನ್ನು ತೀಕ್ಷ್ಣವಾಗಿ ಅರಿತಿದ್ದರು. ವ್ಯವಸ್ಥೆಯನ್ನು ಸರಿಪಡಿಸಲು ಮತ್ತು ಅದರ ದೋಷಗಳನ್ನು ನಿವಾರಿಸಲು ಸಮಾಜದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಇಂತವರನ್ನು “ವಿದ್ಯಾವಂತ ಬೂರ್ಜ್ವಾ”ವರ್ಗ ಎಂದು ಅವರು ಕರೆದರು. ನವ ಉದಾರವಾದಿ ಆಳ್ವಿಕೆಯಡಿಯಲ್ಲಿ, ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿಯೂ ಸಹ, ಸಮಾಜದಲ್ಲಿ ಪ್ರಭಾವವನ್ನು ಹೊಂದಿರದ, ಸ್ವಾರ್ಥಪರರೂ ಮತ್ತು ಸಾಮಾಜಿಕ-ಅಸೂಕ್ಷ್ಮಿಗಳೂ ಆದ ಬುದ್ಧಿಜೀವಿಗಳ ಸೃಷ್ಟಿಯು ಇತ್ತೀಚಿನ ಬಂಡವಾಳಶಾಹಿಯ ಪ್ರಮುಖ ವೈರುಧ್ಯಗಳ ಪೈಕಿ ಒಂದು. ಈ ವೈರುಧ್ಯವು ಭಾರತದಂತಹ ದೇಶಗಳಲ್ಲಿ ಖಂಡಿತವಾಗಿಯೂ ನವ-ಫ್ಯಾಸಿಸಂನ ಬೆಳವಣಿಗೆಗೆ ಅನುಕೂಲಕರವಾಗಿದೆ.
ಇದನ್ನೂ ನೋಡಿ: ನಮ್ಮನ್ನು ಬೆಳೆಯಲು ಬಿಡಿ : ಸಿಎಂ ಸಭೆಗೆ ಹೊರಟ ತರಕಾರಿ, ಹೂ, ಹಣ್ಣುJanashakthi Media
ದುಡಿಯುವ ಜನತೆ ಮತ್ತು ಬುದ್ಧಿಜೀವಿಗಳ ನಡುವಿನ ಅಂತರವನ್ನು ನಿವಾರಿಸಿ ನವ-ಫ್ಯಾಸಿಸಂನ್ನು ಸೋಲಿಸುವ ಪರಿಸ್ಥಿತಿಗಳನ್ನು ಸೃಷ್ಟಿಸುವುದು ನವ-ಉದಾರವಾದದ ಬಿಕ್ಕಟ್ಟಿನಿಂದಾಗಿಯೇ ಕಾರ್ಯಸಾಧ್ಯವಾಗುತ್ತದೆ. ಆದರೆ, ಬುದ್ಧಿಜೀವಿ ವರ್ಗವು ಈ ಬಿಕ್ಕಟ್ಟಿಗೆ ಬಲಿಪಶುವಾಗುತ್ತದೆ ಮತ್ತು ಅದು ಹಿಂದೆ ಸಂಪಾದಿಸಿದ್ದ ತನ್ನ ಸವಲತ್ತು ಮತ್ತು ಸ್ಥಾನ-ಮಾನವನ್ನು ನವ ಉದಾರವಾದದ ಅಡಿಯಲ್ಲಿ ಕ್ರಮೇಣ ಕಳೆದುಕೊಳ್ಳುತ್ತಾ ಹೋಗುತ್ತದೆ. ನವ ಉದಾರವಾದೀ ಯುಗದಲ್ಲಿ ರೈತರ ವರಮಾನಕ್ಕೆ ಹೋಲಿಸಿದರೆ ಭಾರತದ ಶಿಕ್ಷಣ ವಲಯದ ಒಬ್ಬ ಬೋಧಕನ ಸಂಬಳವು ವೇಗವಾಗಿ ಏರಿಕೆಯಾದ ಬಗ್ಗೆ ಮೇಲೆ ಉಲ್ಲೇಖಿಸಲಾಗಿದೆ.
ಆದರೆ ನವ ಉದಾರವಾದವು ಒಳಗಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ, ಹೆಚ್ಚಿನದು ಎಂದು ಹೇಳಲಾಗುವ ಈ ಸಂಬಳಗಳನ್ನೂ ಸಹ ಸಕಾಲದಲ್ಲಿ ಕೊಡುತ್ತಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣ ವಲಯದ ಬೋಧಕರು ಎದುರಿಸುತ್ತಿರುವ ಆರ್ಥಿಕ ತೊಂದರೆಗಳೇ, ನವ-ಫ್ಯಾಸಿಸಂನ ಬಿಕ್ಕಟ್ಟಿನ ಕಾಲಮಾನದಲ್ಲಿ ಬುದ್ಧಿಜೀವಿಗಳು ಮತ್ತು ದುಡಿಯುವ ಜನರ ಭವಿಷ್ಯಗಳು ಪರಸ್ಪರ ತಳಕು ಹಾಕಿಕೊಳ್ಳುತ್ತವೆ ಎಂಬ ಅಂಶಕ್ಕೆ ಸಾಕ್ಷಿಯಾಗುತ್ತವೆ. ಮತ್ತು ಇದು ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರಂಗಸ್ಥಳದ ಕೇಂದ್ರಕ್ಕೆ ಬಂದು ಬಿಡುತ್ತದೆ.
