ಶಕ್ತಿ ಯೋಜನೆ ಕಾರಣಕ್ಕೆ ಸಂಸ್ಥೆಯ ಬಸ್‌ಗಳಲ್ಲಿ ಸುಮಾರು 25 ಲಕ್ಷ ಹೆಚ್ಚುವರಿ ಜನರು ಪ್ರಯಾಣಿಸುತ್ತಿದ್ದಾರೆ
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ‘ಶಕ್ತಿ ಯೋಜನೆ’ಯಿಂದ ರಾಜ್ಯದ ಸಾರಿಗೆ ಸಂಸ್ಥೆಗೆ ಹೆಚ್ಚಿನ ಆದಾಯ ಗಳಿಸುತ್ತಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಯೋಜನೆಯನ್ನು ಸರ್ಕಾರ ಜಾರಿ ಮಾಡಿದ ನಂತರ ಸಾರಿಗೆ ಸಂಸ್ಥೆಯು ಸುಮಾರು 5 ಕೋಟಿ ರೂ.ಗಳಷ್ಟು ಹೆಚ್ಚುವರಿ ಆದಾಯ ಗಳಿಸುತ್ತಿದೆ ಎಂದು ವರದಿಯೂ ಉಲ್ಲೇಖಿಸಿದೆ.
ಈ ಹಿಂದೆ ನಷ್ಟದ ಸುಳಿಯಲ್ಲಿದ್ದ ಸಂಸ್ಥೆಗೆ ಶಕ್ತಿ ಯೋಜನೆ ಆಶಾದಾಯಕವಾಗಿ ಪರಿಣಮಿಸಿದೆ. ಜೂನ್ 11 ಕ್ಕೂ ಮೊದಲು ಸಂಸ್ಥೆಯು ತನ್ನ ನಾಲ್ಕು ವಿಭಾಗಗಳಲ್ಲಿ ಸರಾಸರಿ 84.91 ಲಕ್ಷ ಜನರು ಪ್ರಯಾಣಿಸುತ್ತಿದ್ದು, 24.22 ಕೋಟಿ ರೂ. ಆದಾಯವನ್ನು ಗಳಿಸುತ್ತಿದ್ದವು. ಆದರೆ ಜೂನ್ 11ರ ನಂತರ ಈ ನಾಲ್ಕು ವಿಭಾಗಗಳಲ್ಲಿ ದಿನಕ್ಕೆ ಸರಾಸರಿ 1.09 ಕೋಟಿ ಜನರು ಪ್ರಯಾಣಿಸುತ್ತಿದ್ದು, ಆದಾಯ ಸರಾಸರಿ 29.21 ಕೋಟಿ ರೂ.ಗಳಿಗೆ ಹೆಚ್ಚಾಗಿದೆ.
ಇದನ್ನೂ ಓದಿ: ಶಕ್ತಿ ಯೋಜನೆ ಬಗ್ಗೆ ಗೋ(ಮೋ)ದಿ ಮೀಡಿಯಾಗಳಿಗೆ ಯಾಕೆ ಸಿಟ್ಟು? ಇದು ಸ್ತ್ರೀ ವಿರೋಧಿ ಮನಸ್ಥಿತಿಯೇ?
ಶಕ್ತಿ ಯೋಜನೆಯ ಜಾರಿಯ ನಂತರ ಕೆಎಸ್‌ಆರ್‌ಟಿಸಿ ಸಂಸ್ಥೆಯ ಬಸ್‌ಗಳಲ್ಲಿ ಸುಮಾರು 25 ಲಕ್ಷ ಹೆಚ್ಚುವರಿ ಜನರು ಪ್ರಯಾಣಿಸುತ್ತಿದ್ದಾರೆ ಎಂದು ಪ್ರಜಾವಾಣಿ ವರದಿ ಉಲ್ಲೇಖಿಸಿದೆ. ಈ ಹಿಂದೆ ಖಾಸಗಿ ಬಸ್‌ಗಳಲ್ಲಿ ಓಡಾಡುತ್ತಿದ್ದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ಮಹಿಳೆಯರ ಜೊತೆಗೆ ಬರುವ ಪುರುಷರು ಕೂಡಾ ಸರ್ಕಾರಿ ಬಸ್‌ಗಳಲ್ಲಿ ಓಡಾಡುತ್ತಿರುವ ಕಾರಣಕ್ಕೆ ಬಸ್‌ಗಳಲ್ಲಿ ಜನರ ಪ್ರಯಾಣ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಟಿಕೆಟ್ ಉಚಿತವಾದರೂ, ಈ ಹಣವನ್ನು ಸರ್ಕಾರ ಸಂಸ್ಥೆಗೆ ಪಾವತಿ ಮಾಡುತ್ತದೆ. ಹಾಗಾಗಿ ಸಂಸ್ಥೆಯು ಮಹಿಳೆಯರ ಬಸ್ ಪ್ರಯಾಣವನ್ನು ಆದಾಯವೆಂದೇ ಪರಿಗಣಿಸುತ್ತದೆ. ಇಷ್ಟೆ ಅಲ್ಲದೆ, ಯೋಜನೆ ಜಾರಿಯಾದ ನಂತರ ಸಂಸ್ಥೆಯ ಬಸ್‌ಗಳ ಓಡಾಟವೂ ಹೆಚ್ಚಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
2017–18ರ ವೇಳೆ 300 ಕೋಟಿ ರೂ. ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆಗೆ ಕೊರೊನಾ ಸಾಂಕ್ರಮಿಕ ಮತ್ತಷ್ಟು ಹೊಡೆತ ನೀಡಿತ್ತು. ಕೊರೊನಾದ ಎರಡು ವರ್ಷಗಳಲ್ಲಿ ಭಾರಿ ನಷ್ಟ ಉಂಟಾಗಿ ನಷ್ಟದ ಪ್ರಮಾಣ 4,000 ಕೋಟಿ ರೂಗಳಿಗೆ ಏರಿತ್ತು. ಈ ನಷ್ಟವನ್ನು ಭರಿಸಲು ಸರ್ಕಾರ ಸುಮಾರು 3,000 ಕೋಟಿ ರೂ. ಅನುದಾನ ಒದಗಿಸಿತ್ತು.
ಇದನ್ನೂ ಓದಿ: ಉಚಿತ ಬಸ್ ಪಾಸ್ : ಮಹಿಳಾ ಸಶಕ್ತೀಕರಣಕ್ಕೆ “ಶಕ್ತಿ” ತುಂಬಬಹುದೆ?
ಶಕ್ತಿ ಯೋಜನೆಯ ನಂತರ ಸಂಸ್ಥೆಯ ಆದಾಯ ಹೆಚ್ಚಳವಾಗಿರುವ ವರದಿಯ ಬಗ್ಗೆ ರಾಜ್ಯ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಬಿಜೆಪಿಯ ಖಾಸಗೀಕರಣದ ಹುನ್ನಾರಕ್ಕೆ ನಷ್ಟದ ಕೂಪಕ್ಕೆ ಜಾರಿದ್ದ ಸಾರಿಗೆ ಸಂಸ್ಥೆಗಳು ಈಗ ತಲೆ ಎತ್ತಿ ಬೀಗುತ್ತಿವೆ ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “ನಷ್ಟದ ಹಾದಿಯಲ್ಲಿದ್ದ ಸಾರಿಗೆ ಸಂಸ್ಥೆಗಳು ಈಗ ಲಾಭದ ದಾರಿಗೆ ಮರಳಿವೆ. ಪುರುಷ ಪ್ರಯಾಣಿಕರ ಸಂಖ್ಯೆಯೂ ಗಣನಿಯವಾಗಿ ಹೆಚ್ಚಳವಾಗಿ ಸಾರಿಗೆ ಸಂಸ್ಥೆಗಳಿಗೆ ಆದಾಯ ಹರಿದುಬರುತ್ತಿದೆ. ಬಿಜೆಪಿಯ ಖಾಸಗೀಕರಣದ ಹುನ್ನಾರಕ್ಕೆ ನಷ್ಟದ ಕೂಪಕ್ಕೆ ಜಾರಿದ್ದ ಸಾರಿಗೆ ಸಂಸ್ಥೆಗಳು ಈಗ ತಲೆ ಎತ್ತಿ ಬೀಗುತ್ತಿವೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಮುಳುಗಿಯೇ ಬಿಡುತ್ತವೆ ಎಂದು ಬೊಬ್ಬೆ ಹೊಡೆಯುತ್ತಿದ್ದ ರಾಜ್ಯ ಬಿಜೆಪಿಯ ಅರ್ಥಶಾಸ್ತ್ರದ ಬೃಹಸ್ಪತಿಗಳು ಈಗ ದ್ರಾಕ್ಷಿ ಸಿಗದ ನರಿಯಂತೆ ಆಗಿದ್ದಾರೆ!” ಎಂದು ಹೇಳಿದೆ.