ತೆಲಂಗಾಣದ 3ನೇ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ

ಹೈದರಾಬಾದ್: ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ, ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ ಅವರು ಗುರುವಾರ ಇಲ್ಲಿನ ಎಲ್‌.ಬಿ. ಶಾಸ್ತ್ರಿ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೆಪ್ಟೆಂಬರ್ 2009 ರಲ್ಲಿ ವೈ. ಎಸ್. ರಾಜಶೇಖರ ರೆಡ್ಡಿ ಅವರ ನಿಧನದ ನಂತರ ತೆಲುಗು ಭಾಷಿಕ ರಾಜ್ಯಗಳಲ್ಲಿ ಇದೇ ಮೊದಲ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದೆ. ಈ ಸಮಾರಂಭಕ್ಕೆ ಸುಮಾರು ಒಂದು ಲಕ್ಷ ಜನರು ಸಾಕ್ಷಿಯಾಗಿದ್ದಾರೆ.

ರಾಜ್ಯದ ಮೂರನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 54 ವರ್ಷ ವಯಸ್ಸಿನ ರೇವಂತ್ ರೆಡ್ಡಿ ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಸೇರಿದಂತೆ 11  ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಸೂಚಿಸಿವೆ.

ಇದನ್ನೂ ಓದಿ: 3 ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೋಕರೆನ್ಸಿ ಕದ್ದ ಹ್ಯಾಕರ್​ಗಳು

ವಿಕಾರಾಬಾದ್ ಕ್ಷೇತ್ರದಿಂದ ಗೆದ್ದಿದ್ದ ಗದ್ದಂ ಪ್ರಸಾದ್ ಕುಮಾರ್ ಅವರನ್ನು ವಿಧಾನಸಭೆಯ ಸ್ಪೀಕರ್ ಆಗಿ ಪಕ್ಷವು ಸೂಚಿಸಿದೆ ಎಂದು ವರದಿ ಹೇಳಿವೆ. ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹತ್ತು ಮಂದಿಗೆ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.

ಆಂಧೋಲೆಯಿಂದ ದಾಮೋದರ ರಾಜನರಸಿಂಹ, ಹುಜೂರ್‌ನಗರದಿಂದ ಉತ್ತಮ್ ಕುಮಾರ್ ರೆಡ್ಡಿ, ನಲ್ಗೊಂಡದಿಂದ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಮುಳುಗಿನಿಂದ ಸೀತಕ್ಕ, ಹುಸ್ನಾಬಾದ್‌ನಿಂದ ಪೊನ್ನಂ ಪ್ರಭಾಕರ್, ಮಂಥಣಿಯಿಂದ ಶ್ರೀಧರ್ ಬಾಬು, ಖಮ್ಮಂನಿಂದ ತುಮ್ಮಲ ನಾಗೇಶ್ವರ ರಾವ್, ವಾರಂಗಲ್ ಪೂರ್ವದಿಂದ ಕೊಂಡ ಸುರೇಖಾ, ಕೊಲ್ಲಾಪುರದಿಂದ ಜೂಪಲ್ಲಿ ಕೃಷ್ಣ ಮತ್ತು ಪಾಲೇರ್‌ನಿಂದ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಅವರು ಸಚಿವರಾಗಿ ಪ್ರಮಾಣ ವಚನೆ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ವರಿಷ್ಠರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ಏಕಕಾಲದಲ್ಲಿ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ತೆಲಂಗಾಣದಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: ಬೆಂಗಳೂರು | ಹುಸಿ ಬಾಂಬ್ ಸಂದೇಶ ಪ್ರಕರಣ; ಪತಿಯ ಮೇಲಿನ ಸೇಡಿಗಾಗಿ ಕೃತ್ಯವೆಸಗಿದ ಪತ್ನಿ ಬಂಧನ

ಅಲ್ಲದೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಅಶೋಕ್ ಚವಾಣ್, ದಿಗ್ವಿಜಯ ಸಿಂಗ್, ವೀರಪ್ಪ ಮೊಯ್ಲಿ, ಮಾಣಿಕಂ ಟ್ಯಾಗೋರ್, ಪಿ.ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ, ಮೀರಾ ಕುಮಾರಿ, ಕೆಜೆ ಜಾರ್ಜ್, ಟಿಎಂಸಿ ನಾಯಕ ಡೆರೆಕ್ ಒ ಬ್ರಿಯಾನ್ ಸೇರಿದಂತೆ ಮತ್ತಿತರರು ಇದರಲ್ಲಿ ಭಾಗವಹಿಸಿದ್ದರು.

ಯಾರು ಅನುಮುಲಾ ರೇವಂತ್ ರೆಡ್ಡಿ?

ಕೃಷಿಕ ಕುಟುಂಬದ ಹಿನ್ನೆಲೆಯಿರುವ ರೇವಂತ್ ರೆಡ್ಡಿ ಅವರು ಅಖಿಲ ಭಾರತೀಯ ವಿದ್ಯಾ ಪರಿಷತ್ (ಎಬಿವಿಪಿ) ಯೊಂದಿಗೆ ಸಂಬಂಧ ಹೊಂದಿದ್ದರು ಎಂದು ವರದಿ ಹೇಳಿವೆ. ಆದರೆ ಅವರು ತಮ್ಮ ವಿದ್ಯಾರ್ಥಿ ಜೀವನದ ನಂತರ ಹಿಂದುತ್ವ ರಾಜಕೀಯವನ್ನು ತೊರೆದಿದ್ದರು. ನಂತರ ಅವರು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ಗೆ ಸೇರಿ, ಅದರ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅಡಿಯಲ್ಲಿ ಕೆಲಸ ಮಾಡಿದ್ದರು.

ಇದೀಗ ಅವರನ್ನೆ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. 2001-2002ರಲ್ಲಿ ಟಿಆರ್‌ಎಸ್‌ಗೆ ಸೇರಿದ್ದರೂ ನಂತರ ಅವರು 2006 ರಲ್ಲಿ ಪಕ್ಷವನ್ನು ತೊರೆದಿದ್ದರು. 2007 ರಲ್ಲಿ ಮಹಬೂಬ್‌ನಗರದಿಂದ ಜಿಲ್ಲಾ ಪರಿಷತ್ ಪ್ರಾದೇಶಿಕ ಕ್ಷೇತ್ರಗಳ (ZPTC) ಚುನಾವಣೆಗಳು ಮತ್ತು MLC ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಯಶಸ್ವಿಯಾಗಿ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಭಯೋತ್ಪಾದಕ ಬೆಂಬಲಿಗ ಎಂದು ಸುಳ್ಳು ಹೇಳಿದ ಬಿಜೆಪಿ ಶಾಸಕ ಯತ್ನಾಳ್

ನಂತರ ತೆಲುಗು ದೇಶಂ ಪಕ್ಷಕ್ಕೆ ಸೇರಿದ ರೇವಂತ್ ರೆಡ್ಡಿ ಅವರು, 2009ರಲ್ಲಿ ಟಿಡಿಪಿ ಟಿಕೆಟ್‌ನಲ್ಲಿ ಕೊಡಂಗಲ್ ಕ್ಷೇತ್ರದಿಂದ ಗೆದ್ದು ಶಾಸಕರಾದರು. 2014 ರಲ್ಲಿ ತೆಲಂಗಾಣ ರಚನೆಯಾದ ನಂತರ, ಅವರು ಟಿಡಿಪಿಯಲ್ಲಿಯೇ ಇದ್ದ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಕೂಡಾ ಕೆಲಸ ಮಾಡಿದ್ದಾರೆ. ಆದಾಗ್ಯೂ, ರಾಜ್ಯದಲ್ಲಿ ಟಿಡಿಪಿ ದುರ್ಬಲಗೊಂಡಿದ್ದರಿಂದ ಪಕ್ಷ ತ್ಯಜಿಸಿದ ಅವರು 2017 ರಲ್ಲಿ ಕಾಂಗ್ರೆಸ್‌ಗೆ ಸೇರಿದರು.

ಕಾಂಗ್ರೆಸ್ ಸೇರಿ ಒಂದು ವರ್ಷದೊಳಗೆ ಅವರನ್ನು 2018 ರಲ್ಲಿ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಅದಾಗ್ಯೂ 2018 ರ ರಾಜ್ಯ ಚುನಾವಣೆಯಲ್ಲಿ ತಮ್ಮ ಕೊಡಂಗಲ್ ಕ್ಷೇತ್ರವನ್ನು BRS ಅಭ್ಯರ್ಥಿಯ ಮುಂದೆ ಸೋತಿದ್ದರು.

ಕೆಸಿಆರ್ ಅವರ ಬಿಆರ್‌ಎಸ್‌ ಪಕ್ಷದ ವಿರುದ್ಧ ಎರಡು ಬಾರಿ ಸೋಲುಂಡಿದ್ದ ಕಾಂಗ್ರೆಸ್ 2021 ರಲ್ಲಿ ರೇವಂತ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಈ ವೇಳೆ ಅವರು ಪಕ್ಷದ ಆಂತರಿಕ ಪ್ರತಿರೋಧವನ್ನು ಕೂಡಾ ಎದುರಿಸಬೇಕಾಗಿ ಬಂದಿತ್ತು.

ವಿಡಿಯೊ ನೋಡಿ: ಮಹಾಧರಣಿ | ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್‌

 

Donate Janashakthi Media

Leave a Reply

Your email address will not be published. Required fields are marked *