3 ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೋಕರೆನ್ಸಿ ಕದ್ದ ಹ್ಯಾಕರ್​ಗಳು

ನವದೆಹಲಿ: ಜನವರಿ 2017 ರಿಂದ ಕಳೆದ ಆರು ವರ್ಷಗಳಲ್ಲಿ ಸುಮಾರು 3 ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಉತ್ತರ ಕೊರಿಯಾ ಮೂಲದ ಹಾಗೂ ಅಲ್ಲಿನ ಸರ್ಕಾರಿ ಬೆಂಬಲಿತ ಹ್ಯಾಕರ್​ಗಳು ಕದ್ದಿದ್ದಾರೆ ಎಂದು ಹೊಸ ವರದಿಯೊಂದು ತಿಳಿಸಿದೆ.

ಸೈಬರ್ ಸೆಕ್ಯುರಿಟಿ ಕಂಪನಿ ರೆಕಾರ್ಡೆಡ್ ಫ್ಯೂಚರ್ ಪ್ರಕಾರ ಕಿಮ್ಸುಕಿ, ಲಾಜರಸ್ ಗ್ರೂಪ್, ಆಂಡರಿಯಲ್ ಮತ್ತು ಇತರ ಉತ್ತರ ಕೊರಿಯಾದ ಹ್ಯಾಕಿಂಗ್ ಗುಂಪುಗಳು ಇಂಥ ದಾಳಿ ನಡೆಸುತ್ತಿವೆ.

“ಆರಂಭದಲ್ಲಿ ಸ್ವಿಫ್ಟ್ ನೆಟ್​ವರ್ಕ್ ಅನ್ನು ಹೈಜಾಕ್ ಮಾಡುವ ಮೂಲಕ ಹಣಕಾಸು ಸಂಸ್ಥೆಗಳಿಂದ ಸಂಪತ್ತು ಕದಿಯುವಲ್ಲಿ ಯಶಸ್ವಿಯಾದ ಉತ್ತರ ಕೊರಿಯಾ, 2017 ರ ಕ್ರಿಪ್ಟೊ ಅಲೆಯ ಸಮಯದಲ್ಲಿ ಕ್ರಿಪ್ಟೋಕರೆನ್ಸಿ ಕದಿಯಲು ಆರಂಭಿಸಿತು. ಕದಿಯುವಿಕೆ ದಕ್ಷಿಣ ಕೊರಿಯಾದ ಮಾರುಕಟ್ಟೆಯಿಂದ ಆರಂಭವಾಗಿ ಜಾಗತಿಕವಾಗಿ ವಿಸ್ತರಿಸಿತು” ಎಂದು ಸಂಶೋಧಕರು ತಿಳಿಸಿದ್ದಾರೆ.

ಹ್ಯಾಕರ್​ಗಳು 2022 ರ ವರ್ಷವೊಂದರಲ್ಲಿಯೇ 1.7 ಬಿಲಿಯನ್ ಡಾಲರ್ ಕ್ರಿಪ್ಟೋಕರೆನ್ಸಿಯನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಇದು ದೇಶದ ಆರ್ಥಿಕತೆಯ ಶೇಕಡಾ 5 ಅಥವಾ ಅದರ ಮಿಲಿಟರಿ ಬಜೆಟ್​ನ ಶೇಕಡಾ 45 ಕ್ಕೆ ಸಮನಾಗಿದೆ.

ವರದಿಯ ಪ್ರಕಾರ, ಸಾಂಪ್ರದಾಯಿಕ ಸೈಬರ್ ಕ್ರಿಮಿನಲ್ ಗುಂಪುಗಳಿಗೆ ಹೋಲುವ ವಿಧಾನಗಳನ್ನು ಬಳಸಿಕೊಂಡು ಕದ್ದ ಹಣವನ್ನು ಆಗಾಗ ಲಾಂಡರಿಂಗ್ ಮಾಡಲಾಗುತ್ತದೆ. ಇದು ಸರ್ಕಾರಕ್ಕೆ ಕೂಡ ಆದಾಯ ತರುತ್ತಿದೆ. ಸರ್ಕಾರವೇ ಹ್ಯಾಕರ್​ಗಳ ಬೆಂಬಲಕ್ಕೆ ನಿಲ್ಲುವುದರಿಂದ ಅಂತರರಾಷ್ಟ್ರೀಯ ನಿರ್ಬಂಧಗಳು ಇವರ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ.

ಕ್ರಿಪ್ಟೋಕರೆನ್ಸಿ ಎಕ್ಸ್​ಚೇಂಜ್​ಗಳು ಮಾತ್ರವಲ್ಲದೆ ವೈಯಕ್ತಿಕ ಬಳಕೆದಾರರು, ಬಂಡವಾಳ ಹೂಡಿಕೆ ಸಂಸ್ಥೆಗಳು ಮತ್ತು ಆಧುನಿಕ ತಂತ್ರಜ್ಞಾನ ಕಂಪನಿಗಳ ಮೇಲೆ ಹ್ಯಾಕಿಂಗ್ ದಾಳಿ ಮಾಡಲಾಗುತ್ತಿದೆ. ಕದ್ದ ಕ್ರಿಪ್ಟೋಕರೆನ್ಸಿಯನ್ನು ಆಗಾಗ್ಗೆ ಫಿಯೆಟ್ ಕರೆನ್ಸಿಯಾಗಿ ಪರಿವರ್ತಿಸಲಾಗುತ್ತದೆ ಮತ್ತು ಉತ್ತರ ಕೊರಿಯಾದ ಹ್ಯಾಕರ್​ಗಳು ಕದ್ದ ಸಾಕ್ಷಿಗಳನ್ನು ಅಳಿಸಲು ವಿವಿಧ ತಂತ್ರಗಳನ್ನು ಬಳಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ಉತ್ತರ ಕೊರಿಯಾ ಸರ್ಕಾರ ಕ್ರಿಪ್ಟೋಕರೆನ್ಸಿ ಕಳ್ಳತನವನ್ನು ತನ್ನ ಪ್ರಮುಖ ಆದಾಯದ ಮೂಲ ಮಾಡಿಕೊಂಡಿದೆ. ವಿಶೇಷವಾಗಿ ಮಿಲಿಟರಿ ಮತ್ತು ಶಸ್ತ್ರಾಸ್ತ್ರ ಕಾರ್ಯಕ್ರಮಗಳಿಗೆ ಈ ಹಣವನ್ನು ಅದು ಬಳಸುತ್ತಿದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಗಳಿಗೆ ಎಷ್ಟು ಪ್ರಮಾಣದಲ್ಲಿ ಇಂಥ ಕದ್ದ ಹಣ ಬಳಸಲಾಗುತ್ತಿದೆ ಎಂಬುದು ಅಸ್ಪಷ್ಟವಾಗಿದ್ದರೂ, ಕ್ರಿಪ್ಟೋಕರೆನ್ಸಿ ಕದಿಯುವಿಕೆ ಮತ್ತು ಕ್ಷಿಪಣಿ ಉಡಾವಣೆ ಎರಡೂ ಹೆಚ್ಚಾಗುತ್ತಿವೆ” ಎಂದು ಸಂಶೋಧಕರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *