CITU ರಾಜ್ಯ ಸಮ್ಮೇಳನ ಹಾಸನ| 36 ಸಾವಿರ ಕನಿಷ್ಠ ವೇತನಕ್ಕಾಗಿ, ಗುತ್ತಿಗೆ ಪದ್ದತಿ ವಿರುದ್ಧ ಹೋರಾಟದ ನಿರ್ಣಯ

ಹಾಸನ: ಹಾಸನದಲ್ಲಿ ನಡೆಯುತ್ತಿರುವ ಸಿಐಟಿಯು ರಾಜ್ಯ ಸಮ್ಮೇಳನದಲ್ಲಿ, ₹36,000 ಕನಿಷ್ಠ ವೇತನಕ್ಕೆ ಆಗ್ರಹಿಸಿ, ಗುತ್ತಿಗೆ ಪದ್ಧತಿ ವಿರುದ್ಧ ಹೋರಾಟದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ತಿಳಿಸಿದರು. ಹಾಸನ

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 1928ರಲ್ಲಿ ಕನಿಷ್ಟ ವೇತನ ಕುರಿತು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಓ) ಸಮ್ಮೇಳನವು (ಐ.ಎಲ್.ಸಿ) ನಡೆದ ನಂತರ 1948ರಲ್ಲಿ ಭಾರತದಲ್ಲಿ ಕನಿಷ್ಟ ವೇತನ ಕಾಯ್ದೆಯನ್ನು ಜಾರಿ ಮಾಡಲಾಗಿದೆ. 15ನೇ ಭಾರತೀಯ ಕಾರ್ಮಿಕ ಸಮ್ಮೇಳನದಲ್ಲಿ ಕನಿಷ್ಟ ವೇತನದ ಲೆಕ್ಕಚಾರ ಕುರಿತು ಚರ್ಚಿಸಿ ಮೂರು ಜನ ಇರುವ ಒಂದು ಸಾಮಾನ್ಯ ಕುಟುಂಬ ಜೀವನ ನಡೆಸಲು ಬೇಕಾದ ವೆಚ್ಚ, ತಲಾ ವ್ಯಕ್ತಿಗೆ 2700 ಕ್ಯಾಲೋರಿ ಆಹಾರ ಮತ್ತು ಪ್ರತಿ ವರ್ಷವೂ ತಲಾ ವ್ಯಕ್ತಿಗೆ ಕನಿಷ್ಟ 72 ಗಜ ಬಟ್ಟೆ ಕನಿಷ್ಟ ವೇತನದ ಶೇ. 75 ಪ್ರಮಾಣದಲ್ಲಿ ನೀಡಬೇಕು ಹಾಗೂ ಉಳಿದ ಶೇ. 25 ಪ್ರಮಾಣ ಇಂಧನ, ಚಪ್ಪಲಿ ಮುಂತಾದ ವೆಚ್ಚಗಳಿಗೆ ಮೀಸಲಿರಿಸಬೇಕೆಂದು ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಆದರೆ ಶಿಕ್ಷಣ, ಆರೋಗ್ಯ ರಕ್ಷಣೆ, ಮನೆ ಬಾಡಿಗೆ, ಮುಂತಾದ ಅಗತ್ಯ ವೆಚ್ಚಗಳಿಗೆ ಯಾವುದೇ ಪೂರ್ವ ಹಂಚಿಕೆ ಮಾಡಿರಲಿಲ್ಲ ಎಂದು ಆರೋಪಿಸಿದರು.

ರೆಪ್ತಕೋಸ್ ಬ್ರೆಟ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಇಂತಹ ವೆಚ್ಚಗಳಿಗೆ ಹೆಚ್ಚುವರಿ ಶೇಕಡ 25 ನಿಗದಿ ಮಾಡಲು ಆದೇಶ ನೀಡಿತ್ತು. ಆದರೆ ಇಲ್ಲಿಯವರೆಗೂ ಈ ಮೇಲಿನ ಅಂಶದಂತೆ ಲೆಕ್ಕಚಾರ ಮಾಡಿ ಯಾವ ಸರ್ಕಾರಗಳೂ ಕನಿಷ್ಟ ವೇತನವನ್ನು ನಿಗದಿ ಮಾಡಿರುವುದಿಲ್ಲ. ಸಿಐಟಿಯು ಈ ಹಿಂದಿನಿಂದಲೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಆಯಾಯ ಸಂದರ್ಭದಲ್ಲಿನ ಬೆಲೆಗಳಿಗೆ ಅನುಗುಣವಾಗಿ ಖಾಯಂ ಮತ್ತು ಖಾಯಂಯೇತರ ಎಲ್ಲಾ ವಿಭಾಗದ ಕಾರ್ಮಿಕರಿಗೆ ಸಮಾನ ಕನಿಷ್ಟ ವೇತನವನ್ನು ನಿಗದಿ ಪಡಿಸಬೇಕೆಂದು ಹೋರಾಟಗಳನ್ನು ಸಂಘಟಿಸುತ್ತಾ ಬಂದಿದೆ ಎಂದರು.

ಇದನ್ನೂ ಓದಿ: ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ 12 ಮುಟ್ಟಿನ ರಜೆ: ಕಾರ್ಮಿಕ ಇಲಾಖೆ

ರಾಜ್ಯ ಕಾಂಗ್ರೇಸ್ ಸರ್ಕಾರ ಏಪ್ರಿಲ್ 11, 2025ರಲ್ಲಿ ಕನಿಷ್ಟ ವೇತನ ಪರಿಷ್ಕರಿಸಿ ವಿವಿಧ ಉದ್ದಿಮೆಗಳನ್ನು ನಾಲ್ಕು ಷೆಡ್ಯೂಲ್‌ಗಳಲ್ಲಿ ವಿಂಗಡಿಸಿ, ಪ್ರದೇಶವಾರು ಮೂರು ವಲಯಗಳಾಗಿ ವರ್ಗೀಕರಿಸಿ ಮಾಸಿಕ ಅಕುಶಲ ಕಾರ್ಮಿಕರಿಗೆ ರೂ.19,319/- ರಿಂದ ಅತಿಕುಶಲ ಕಾರ್ಮಿಕರಿಗೆ ರೂ.31114/- ನ್ನು ನಿಗಡಿಪಡಿಸಿ 01-04-2025 ರಿಂದ ಜಾರಿಗೆ ಬರುವಂತೆ ಕರಡು ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರದ ಕರಡು ಅಧಿಸೂಚನೆಯ ಕನಿಷ್ಟ ವೇತನ ಈ ಕೆಳಕಂಡಂತಿದೆ.

ರಾಜ್ಯ ಸರ್ಕಾರ 2025 ಏಪ್ರಿಲ್‌ನಲ್ಲಿ ಮೇಲಿನ ಪಟ್ಟಿಯಲ್ಲಿ ಇರುವಂತೆ ಹೊರಡಿಸಿದ ಕನಿಷ್ಟ ವೇತನ ಕರಡು ಅಧಿಸೂಚನೆಯಲ್ಲಿ ತುಟ್ಟಿಭತ್ಯೆ ಕುರಿತು ಯಾವುದೇ ಪ್ರಸ್ತಾಪಗಳು ಇರಲಿಲ್ಲ. ಸಿಐಟಿಯು, ಜೆಸಿಟಿಯು ವಿರೋಧ ವ್ಯಕ್ತಪಡಿಸಿದ ನಂತರ ತುಟ್ಟಿಭತ್ಯೆ ಸೇರ್ಪಡೆಯ ಅಧಿಸೂಚನೆಯನ್ನು ನಂತರ ರಾಜ್ಯ ಸರ್ಕಾರ ಹೊರಡಿಸಿದೆ. ಈ ಅಧಿಸೂಚನೆಯನ್ನು ಮೆ: ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿಯ ಪ್ರಕರಣದಲ್ಲಿ ರೂಪಿಸಲಾಗಿರುವ ಮಾನದಂಡಗಳನ್ನು ಅನ್ವಯಿಸಿ ಕನಿಷ್ಟ ವೇತನವನ್ನು ಹೊಸದಾಗಿ ಹೊರಡಿಸುವ ಕುರಿತು ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆದು ಆ ಮಾರ್ಗದರ್ಶನದ ಆಧಾರದಲ್ಲಿ ಪ್ರಕಟಿಸಲಾಗಿದೆ ಎಂದು ರಾಜ್ಯ ಸರ್ಕಾರ ಉಲ್ಲೇಖಿಸಿದೆ ಎಂದು ಹೇಳಿದರು.

ಆದರೆ ಪ್ರಕಟಿತ ಕನಿಷ್ಟವೇತನವು ಸರ್ವೋಚ್ಚನ್ಯಾಯಾಲಯವು “ವರ್ಕಮೆನ್ ಎದುರು ರೆಪ್ಟಕೋಸ್ ಬ್ರೆಟ್ ಆಡಳಿತವರ್ಗ ಎಐಆರ್ 1992 ಎಸ್‌ಸಿ 504”, ಪ್ರಕರಣದಲ್ಲಿ ರೂಪಿಸಿದ ಮಾನದಂಡಗಳಿಗೆ ಅನುಗುಣವಾಗಿ ಇಲ್ಲದಿರುವುದರಿಂದ ಸಿಐಟಿಯು ಮತ್ತು ಜೆಸಿಟಿಯು ನಿಂದ ವೈಜ್ಞಾನಿಕವಾಗಿ ಕನಿಷ್ಟ ವೇತನ ನಿಗದಿಪಡಿಸಬೇಕೆಂದು ತಕರಾರು ಸಲ್ಲಿಸಿದೆ. ಇವತ್ತಿನ ಬೆಲೆಗಳ ಆದಾರದಲ್ಲಿ ರಾಜ್ಯದ ಮೂರು ವಲಯಗಳಿಗೆ ಈ ಕೆಳಕಂಡ ರೀತಿಯಲ್ಲಿ ಕನಿಷ್ಟವೇತನ ಪ್ರಕಟಿಸಬೇಕೆಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗಿದೆ.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು)ಯ ಹಕ್ಕೋತ್ತಾಯ:

ಕನಿಷ್ಟ ವೇತನವನ್ನು ಕುಟುಂಬದ ಯೂನಿಟ್‌ಗಳು 3ಕ್ಕೆ ಬದಲಾಗಿ 3.6 ಯೂನಿಟ್ ನಂತೆ ಲೆಕ್ಕಹಾಕಿ ಮೇಲಿನ ಪಟ್ಟಿಯಲ್ಲಿರುವ ಪ್ರಸ್ತಾಪಿತ ಕನಿಷ್ಟ ವೇತನವನ್ನು ಪರಿಷ್ಕರಿಸಿ ಜಾರಿಗೆ ತರಬೇಕು. ತುಟ್ಟಿ ಭತ್ಯೆಯನ್ನು 9469 ಅಂಶಗಳಿಗೆ ಹೆಚ್ಚಾಗುವ ಪ್ರತಿ ಅಂಶಕ್ಕೆ ಒಂದು ದಿನಕ್ಕೆ 6 ಪೈಸೆಯಂತೆ ತುಟ್ಟಿಭತ್ಯೆಯ ಪಾವತಿಯಾಗಬೇಕು. ಕನಿಷ್ಟ ವೇತನವು 01.04.2025 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಕ್ರಮವಹಿಸಬೇಕಿದೆ. ಆದರೆ ಕಾರ್ಮಿಕ ಸಂಘಟನೆಗಳು ಸೂಚಿಸಿರುವ ತಿದ್ದಪಡಿ ಒಳಗೊಂಡಂತೆ ಕನಿಷ್ಟ ವೇತನ ನೀಡಲು ಅಂತಿಮ ಅಧಿಸೂಚನೆಯನ್ನು ಹೊರಡಿಸದೆ, ಮಾಲೀಕರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತಿಲ್ಲ. ಈಗಾಗಲೇ ಕರಡು ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಕನಿಷ್ಟ ವೇತನವನ್ನು ಕಡಿಮೆಗೊಳಿಸಬಾರದು. ಜೆಸಿಟಿಯು-ನ ತಿದ್ದುಪಡಿಗಳನ್ನು ಸರ್ಕಾರ ಪರಿಗಣಿಸಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಕನಿಷ್ಟವೇತನದ ಪರಿಷ್ಕರಣೆ ಆಗಬೇಕು. ಟೈಲರಿಂಗ್ ಒಳಗೊಂಡಂತೆ ಜವಳಿ ಉದ್ದಿಮೆಗಳು, ಬೀಡಿ, ಪ್ಲಾಂಟೇಷನ್ ಮುಂತಾದ 11 ಉದ್ದಿಮೆಗಳ ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಸಿಐಟಿಯು 16ನೇ ರಾಜ್ಯ ಸಮ್ಮೇಳನವು ಒತ್ತಾಯಿಸುತ್ತದೆ.

ಆದ್ದರಿಂದ ರಾಜ್ಯ ಸರ್ಕಾರ ಪ್ರಸ್ತುತ ಪ್ರಕಟಿಸಿರುವ ಕರಡು ಅಧಿಸೂಚನೆಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲಾಗಿರುವ ಅನುಸೂಚಿತ ಉದ್ದಿಮೆಗಳು ಹಾಗು ವಿಶೇಷ ಸೂಚನೆಯ ಅಡಿಯಲ್ಲಿನ ಅನುಸೂಚಿತ ಉದ್ದಿಮೆಗಳು ಹಾಗೂ ಸರ್ಕಾರಿ ಇಲಾಖೆಗಳು, ನಿಗಮ-ಸಂಸ್ಥೆಗಳು ಒಳಗೊಂಡು ಎಲ್ಲಾ ಕ್ಷೇತ್ರದ ಉದ್ದಿಮೆಗಳಿಗು ಸಮಾನ ಕನಿಷ್ಟ ವೇತನವನ್ನು ನಿಗದಿಪಡಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರಾಜ್ಯವ್ಯಾಪಿ ಹೋರಾಟಕ್ಕೆ ಸಿಐಟಿಯು 16ನೇ ರಾಜ್ಯ ಸಮ್ಮೇಳನವು ಕರೆ ನೀಡುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್. ಉಮೇಶ್, ಹಾಸನ ಜಿಲ್ಲಾಧ್ಯಕ್ಷ ಧರ್ಮೇಶ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಎಂ.ಬಿ. ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್ ಇದ್ದರು.

 

ಇದನ್ನೂ ನೋಡಿ: CITU ರಾಜ್ಯ ಸಮ್ಮೇಳನ ಹಾಸನ | 36 ಸಾವಿರ ಕನಿಷ್ಠ ವೇತನಕ್ಕಾಗಿ, ಗುತ್ತಿಗೆ ಪದ್ದತಿ ಿರುದ್ಧ ಹೋರಾಟದ ನಿರ್ಣಯ

Donate Janashakthi Media

Leave a Reply

Your email address will not be published. Required fields are marked *