ಬೆಂಗಳೂರು: ವಿದ್ಯುತ್ ದರದಲ್ಲಿ ಮಾಡಿರುವ ಹೆಚ್ಚಳವನ್ನ ಮುಂದಿನ ವರ್ಷಕ್ಕೆ ಮುಂದೂಡಿ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಮಾಡಿದೆ.
ವಿದ್ಯುತ್ ದರ ಆಗಾಗ ಹೆಚ್ಚಿಸುವುದರಿಂದ ಎಲ್ಲಾ ಉದ್ಯಮಗಳ ಮಾಲೀಕರಿಗೆ ತೊಂದರೆಯಾಗುತ್ತಿದೆ. ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (ಎಫ್‌ಪಿಪಿಸಿಎ),ನಿಗದಿತ ಬೇಡಿಕೆ ದರ ಹೆಚ್ಚಾಗಿದೆ. ಏರಿಕೆಯಾಗಿರುವ ದರದ ಮೇಲೂ ಶೇ.9 ತೆರಿಗೆಯೂ ಹೆಚ್ಚಳವಾಗಿದೆ. ಹಾಗಾಗಿ ಈ ದರ ಹೆಚ್ಚಳವನ್ನೂ ಒಂದು ವರ್ಷದ ಅವಧಿಗೆ ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಬಿಲ್ ಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ವಿದ್ಯಾರ್ಥಿ ಸಂಘಟನೆಗಳ ಆಗ್ರಹ
ಪ್ರಮುಖ 6 ಅಂಶಗಳ ವಿಚಾರ ಸರ್ಕಾರದ ಗಮನಕ್ಕೆ ತಂದಿದ್ದ ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ವಿದ್ಯುತ್ ತೆರಿಗೆಯನ್ನು ಶೇ 9ರಿಂದ ಶೇ 3ಕ್ಕೆ ಇಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಪಾವತಿಸಬೇಕಾದ ಬಾಕಿ ಮೊತ್ತವನ್ನು ಬಡ್ಡಿ ಸಹಿತ ಸಂಗ್ರಹಿಸಬೇಕು. ಪ್ರಿಪೇಡ್ ಮೀಟರ್ ಅಳವಡಿಸಿ ಗ್ರಾಹಕರ ಠೇವಣಿ ಹಣವನ್ನು ಹಿಂತಿರುಗಿಸಬೇಕು. ಅನಗತ್ಯ ಆಡಳಿತಾತ್ಮಕ ವೆಚ್ಚಗಳನ್ನು ನಿಯಂತ್ರಿಸಬೇಕು. ಇವೆಲ್ಲವನ್ನೂ ಪರಿಗಣಿಸಿದಲ್ಲಿ ಉದ್ಯಮಿಗಳಾದ ನಮಗೂ ವಿದ್ಯುತ್ ಇಲಾಖೆಗೂ ಅನೂಕೂಲವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದಾರೆ. ಅನಗತ್ಯ ಅಡ್ಮಿನಿಸ್ಟ್ರೇಷನ್ ಖರ್ಚು ವೆಚ್ಚಗಳನ್ನು ಹತೋಟಿಗೆ ತರಬೇಕು. ಇಲ್ಲದಿದ್ದಲ್ಲಿ ಹೊಟೇಲ್ ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದ ಹಾಗಾಗುತ್ತದೆ ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್, ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್ ಅವರು ಇಂಧನ ಸಚಿವರಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.