– ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್, ಅವರ ತಾಯಿ ಕುಮುದಾ ನಾಯಕ್ ಆತ್ಮಹತ್ಯೆ ಪ್ರಕರಣ
ಮುಂಬೈ: ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಮಹಾರಾಷ್ಟ್ರ ಸಿಐಡಿ ತಂಡವು ಬುಧವಾರ ವಶಕ್ಕೆ ಪಡೆದುಕೊಂಡಿದೆ.
ಬುಧವಾರ ಮುಂಜಾನೆ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಂಪಾದಕ ಅರ್ನಬ್ ಗೋಸ್ವಾಮಿ ನಿವಾಸಕ್ಕೆ ದಾಳಿ ಮಾಡಿದ ರಾಯ್‌ಗಡ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಸುಮಾರು ಹನ್ನೆರಡು ಮಂದಿ ಪೊಲೀಸರ ತಂಡ ಅರ್ನಬ್ ಮನೆಗೆ ದಾಳಿ ಮಾಡಿದ್ದು, ಅರ್ನಬ್ ಗೋಸ್ವಾಮಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಐಡಿ ತಂಡ ರಿಪಬ್ಲಿಕ್ ಟಿವಿ ಮುಖ್ಯಸ್ಥನನ್ನು ಬಂಧಿಸಿದೆ. ಸದ್ಯ ಅರ್ನಬ್ ಗೋಸ್ವಾಮಿಯನ್ನು ಅಲಿಬಾಗ್‌ಗೆ ಕರೆದೊಯ್ಯುತ್ತಿದ್ದೇವೆ ಎಂದು ಹಿರಿಯಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು 2018ರ ಆತ್ಮಹತ್ಯೆ ಪ್ರಕರಣ?
ಇಂಟೀರಿಯರ್ ಡಿಸೈನರ್ ಆಗಿದ್ದ 53 ರ ಹರೆಯದ ಅನ್ವಯ್ ನಾಯಕ್ ಮತ್ತುಅವರ ತಾಯಿ ಕುಮುದ್ ನಾಯಕ್ ಅವರು 2018ರ ಮೇ ತಿಂಗಳಲ್ಲಿ ಆಲಿಬಾಗ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ದೊರೆತ ಮರಣ ಪತ್ರದಲ್ಲಿ ‘ಅರ್ನಬ್ ಗೋಸ್ವಾಮಿ, ಫಿರೋಜ್ ಶೇಖ್ ಮತ್ತು ನಿತೀಶ್ ಸರ್ದಾ ಅವರು 5.40 ಕೋಟಿ ರೂಪಾಯಿ ಪಾವತಿಸಿಲ್ಲ.ಹೀಗಾಗಿ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಲುತ್ತಿದ್ದೇನೆ ಎಂದು ಬರೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. 2018ರಲ್ಲಿ ಆಲಿಬಾಗ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 2019ರಲ್ಲಿ ರಾಯಗಡ್ ಪೊಲೀಸರು ಕೇಸ್ ಕ್ಲೋಸ್ ಮಾಡಿದ್ದರು.
2020ರ ಮೇ ತಿಂಗಳಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ಸಂಪರ್ಕಿಸಿದ ಅನ್ವಯ್ ನಾಯಕ್ ಅವರ ಮಗಳು ಅದ್ನ್ಯಾ ನಾಯಕ್, ಅರ್ನಬ್ ಗೋಸ್ವಾಮಿ ಹಣ ಪಾವತಿ ಮಾಡದಿರುವ ಬಗ್ಗೆ ಅಲಿಬಾಗ್ ಪೊಲೀಸರು ತನಿಖೆ ನಡೆಸಿಲ್ಲ ಎಂದು ದೂರಿದ್ದರು. ಆ ನಂತರ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಈ ಪ್ರಕರಣದ ಸಿಐಡಿ ತನಿಖೆ ನಡೆಸುವಂತೆ ಆದೇಶಿಸಿದ್ದರು.