ಮೇ 20ಕ್ಕೆ ರೈತ – ಕಾರ್ಮಿಕರಿಂದ ಸಾರ್ವತ್ರಿಕ ಮುಷ್ಕರಕ್ಕೆ ಕರೆ

ಬೆಂಗಳೂರು: ಮೇ 20 ಮಂಗಳವಾರದಂದು ರಾಜ್ಯಾದ್ಯಂತ ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನು ರದ್ದುಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಾಯಿಂಟ್ ಕಮಿಟಿ ಆಫ್ ಟ್ರೇಡ್ ಯೂನಿಯನ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಗಳು ಜಂಟಿಯಾಗಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ.

ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿ ಸಂಯೋಜಕ ಬಡಗಲಪುರ ನಾಗೇಂದ್ರ ಶನಿವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳ ಶಾಹಿಗಳ ಪರವಾಗಿ ರೂಪಿಸಿದ ಕಾರ್ಮಿಕ ವಿರೋಧಿ ನಾಲ್ಕು ಕಾಯ್ದೆಗಳನ್ನು ರದ್ದು ಪಡಿಸಬೇಕು.

ಇಂದಿನ ಬೆಲೆಗೆ ಅನುಗುಣವಾಗಿ ಎಲ್ಲಾ ಸಂಘಟಿತ, ಅಸಂಘಟಿತ ಗುತ್ತಿಗೆ ಕಾರ್ಮಿಕರಿಗೆ ತಿಂಗಳಿಗೆ 36,000 ರೂ. ಕನಿಷ್ಠ ವೇತನ ನಿಗದಿಪಡಿಸಬೇಕು. ಗುತ್ತಿಗೆ, ಹೊರಗುತ್ತಿಗೆ, ಟ್ರೈನಿ ಹೆಸರಲ್ಲಿ ಕಾರ್ಮಿಕರ ನೇಮಕ ಮಾಡಿಕೊಳ್ಳವುದನ್ನು ಸ್ಥಗಿತಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿಝಿಂಜಂ ಬಂದರು ಉದ್ಘಾಟನೆ: ಕೇರಳದ ಎಡ ಸರ್ಕಾರದ ದೊಡ್ಡ ಸಾಧನೆ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ರೈತರ ಬದುಕಿಗೆ ಮಾರಕವಾಗಿರುವ ಭೂ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಜಾನುವಾರು ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸುವ ತೀರ್ಮಾನ ಕೈಗೊಳ್ಳಬೇಕು. ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾನೂನು ರೂಪಿಸಬೇಕು.

ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್ ಮೇಲಿನ ಸಬ್ಸಿಡಿ ಹೆಚ್ಚಿಸಬೇಕು. ಸಮಗ್ರ ಸಾಲ ಮನ್ನಾ ಮತ್ತು ಬೆಳೆ ವಿಮೆ ಯೋಜನೆಗಳನ್ನು ಜಾರಿಗೊಳಿಸಬೇಕು. 2022ರ ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆದು ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು.

ಬಗರ್ ಹುಕುಂ ಸಮಸ್ಯೆ ಬಗೆಹರಿಸಲು ತಕ್ಷಣ ಉನ್ನತ ಮಟ್ಟದ ಸಭೆ ಕರೆದು ತಜ್ಞರ ಸಮಿತಿ ರಚಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌ ವರಲಕ್ಷ್ಮಿ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಾಂತರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ.ಯಶವಂತ್‌, ಕರ್ನಾಟಕ ಜನಶಕ್ತಿಯ ನೂರ್‌ ಶ್ರೀಧರ್‌, ಎಐಯುಟಿಯುಸಿ ಕೆ.ವಿ ಭಟ್‌ ಹಾಜರಿದ್ದರು.

ಇದನ್ನೂ ನೋಡಿ: ವಕ್ಫ್‌ ತಿದ್ದುಪಡಿ ಮಸೂದೆ – 2025 | ಉದ್ದೇಶ – ಪರಿಣಾಮಗಳು – ಒಂದು ಅವಲೋಕನ

Donate Janashakthi Media

Leave a Reply

Your email address will not be published. Required fields are marked *