ಮತಾಂತರ ಆರೋಪ : ವಿಎಚ್‌ಪಿಯಿಂದ ರಸ್ತೆ ತಡೆ – ರಸ್ತೆ ತಡೆಯಲ್ಲಿ ಸಿಲುಕಿದ ಸಾವಿರಾರು ಹಿಂದುಗಳ ಪರದಾಟ

ಹುಬ್ಬಳ್ಳಿ : ಕ್ರೈಸ್ತ ಸಮುದಾಯದವರಿಂದ ಮತಾಂತರ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು 4 ಗಂಟೆಗಳ ರಸ್ತೆ ತಡೆ ನಡೆಸಿದ್ದರಿಂದ ಸಾವಿರಾರು ಜನರು ಪರದಾಡಿದ ಘಟನೆ ನಗರದಲ್ಲಿ ನಡೆದಿದೆ.

ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸುತಗಟ್ಟಿಯ ಸೋಮು ಅವರಾಧಿಯನ್ನು ಬಂಧಿಸುವಂತೆ ಆಗ್ರಹಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಹುಬ್ಬಳ್ಳಿ-ಧಾರವಾಡ ರಸ್ತೆ ಹಾಗೂ ಬಿಆರ್‌ಟಿಎಸ್‌ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಅಂಗಡಿ ಬಂದ್ ಮಾಡುವಂತೆ ಒತ್ತಡ : ಮತಾಂತರ ವಿರೋಧಿಸಿ ನಾವು ಹೋರಾಟ ಮಾಡುತ್ತಿದ್ದೇವೆ. ನೀವು ಕೂಡಲೆ ಅಂಗಡಿಗಳು ಬಂದ್ ಮಾಡಿ ಎಂದು ಸಂಘ ಪರಿವಾರದ ಕಾರ್ಯಕರ್ತರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ ಘಟನೆಯೂ ನಡೆದಿದೆ.

ನವನಗರದ ಅಂಗಡಿಗಳನ್ನು ಬಲವಂತವಾಗಿ ಬಂದ್‌ ಮಾಡಿಸಿದ ಕಾರ್ಯಕರ್ತರು, ನವನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ರಸ್ತೆಯುದ್ದಕ್ಕೂ ವಾಹನಗಳ ಸಾಲು: ಸಂಘಪರಿವಾರದ ಕಾರ್ಯಕರ್ತರು ಧೀರ್ಘ ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು. ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿದಷ್ಟೂ ದೂರ ವಾಹನಗಳ ಸಾಲು ಕಾಣುತ್ತಿತ್ತು.

ಇದನ್ನೂ ಓದಿ : ಪೊಲೀಸರ ದಿರಿಸು ಬದಲಾಯಿಸಿದ್ದು ಯಾಕೆ? ಸಿದ್ದರಾಮಯ್ಯ ಪ್ರಶ್ನೆ

ಬಸ್-ಬೈಕ್-ಕಾರು ಮತ್ತಿತರ ವಾಹನಗಳಲ್ಲಿ ಸಿಲುಕಿಕೊಂಡವರು ಮೂತ್ರ ವಿಸರ್ಜನೆಯೂ ಸಾಧ್ಯವಾಗದೇ ಪರಿತಪಿಸಿದ್ದಾರೆ. ಮಧ್ಯಾಹ್ನವೇ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಯಾವೊಬ್ಬ ಚುನಾಯಿತ ಪ್ರತಿನಿಧಿಯೂ ರಸ್ತೆಯಲ್ಲಿ ಸಿಲುಕಿರುವ ಕನಿಷ್ಠ ಪಕ್ಷ ಹಿಂದೂಗಳ ನೆರವಿಗೂ ಧಾವಿಸಲಿಲ್ಲ ಎಂದು ವಾಹನ ಸವಾರರೊಬ್ಬರು ಆರೋಪಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ವಾಹನಗಳನ್ನು ತಡೆದು ಬಂದ್‌ ಮಾಡುತ್ತಿದ್ದ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ನೂಕಾಟ, ತಳ್ಳಾಟವೂ ಜರುಗಿತು.

ಬಲವಂತದ ಮತಾಂತರ ಆಗಿದ್ದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ಅವರದೆ ಸರಕಾರ ಇರುವಾಗ ಶಾಸಕ ಅರವಿಂದ್ ಬೆಲ್ಲದ್ ರಾಜಕೀಯ ಲಾಭಕ್ಕಾಗಿ ಈ ರಸ್ತೆ ತಡೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಜನ ಯಾಕೆ ಮತಾಂತರ ಆಗ್ತಾರೆ, ಅಥವಾ ಬಲವಂತವಾಗಿ ಮಾಡುತ್ತಾರೆ ಅದನ್ನು ತನಿಖೆ ನಡೆಸಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ. ಪ್ರತಿಭಟನೆ ಅವರ ಹಕ್ಕು ನಡೆಸಲಿ, ಆದರೆ ಸಾರ್ವಜನಿಕರಿಗೆ ತೊಂದರೆ ನೀಡಿ ಪ್ರತಿಭಟನೆ ನಡೆಸುವುದು ಯಾವ ನ್ಯಾಯ? ನಿನ್ನೆ ರಸ್ತೆ ತಡೆ ಸಮಯದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಹಿಂದುಗಳಿಗೆ ಸಮಸ್ಯೆಯಾಗಿದ್ದು ಜನಪ್ರತಿನಿಧಿಗಳ ಕಣ್ಣಿಗೆ, ಸಂಘಪರಿವಾರದವರ ಕಣ್ಣಿಗೆ ಬೀಳಲಿಲ್ಲವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

Donate Janashakthi Media

Leave a Reply

Your email address will not be published. Required fields are marked *