11 ಮಂದಿ ಅತ್ಯಾಚಾರಿಗಳ ಬಿಡುಗಡೆ ಮಾನವಕುಲಕ್ಕೆ ಮಾಡಿದ ಅವಮಾನ: ಬಿಜೆಪಿ ನಾಯಕಿ ಖುಷ್ಬು

ಚೆನ್ನೈ: ಗುಜರಾತ್‌ ಸರ್ಕಾರ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳಾಗಿರುವ 11 ಮಂದಿ ಅತ್ಯಾಚಾರಿ ಆರೋಪಿಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಅವರನ್ನು ಸನ್ಮಾನ ಮಾಡಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ತಮಿಳುನಾಡಿನ ಬಿಜೆಪಿ ನಾಯಕಿ, ನಟಿ ಖುಷ್ಬು ಸುಂದರ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಅಪರಾಧಿಗಳ ಬಿಡುಗಡೆ “ಮನುಕುಲಕ್ಕೆ ಮಾಡಿದ ಅವಮಾನ” ಎಂದು ಹೇಳಿದ್ದಾರೆ.

“ಅತ್ಯಾಚಾರ, ಹಲ್ಲೆ, ಕ್ರೌರ್ಯ ಮತ್ತು ಜೀವಮಾನವಿಡೀ ಗಾಯವಾದ ಮಹಿಳೆಗೆ ನ್ಯಾಯ ಸಿಗಬೇಕು. ಅದರಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ ಮುಕ್ತವಾಗಿ ಹೋಗಬಾರದು. ಹಾಗೆ ಮಾಡಿದರೆ ಅದು ಮನುಕುಲಕ್ಕೆ ಮತ್ತು ಹೆಣ್ಣಿಗೆ ಮಾಡಿದ ಅವಮಾನ. ಬಿಲ್ಕಿಸ್ ಬಾನೊ ಅಥವಾ ಯಾವುದೇ ಮಹಿಳೆಗೆ ರಾಜಕೀಯ ಮತ್ತು ಸಿದ್ಧಾಂತಗಳನ್ನು ಮೀರಿ ಬೆಂಬಲದ ಅಗತ್ಯವಿದೆ” ಎಂದು ಖುಷ್ಬು ಟ್ವೀಟ್ ಮಾಡಿದ್ದಾರೆ.

2002ರ ಗೋಧ್ರಾ ಹತ್ಯಾಕಾಂಡದ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ತಪ್ಪಿಸಿಕೊಳ್ಳುವಾಗ 21 ವರ್ಷದ ಬಿಲ್ಕಿಸ್ ಬಾನೊ ಅವರ ಮೇಲೆ ಮಾರ್ಚ್ 3ರಂದು ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಕೋಮು ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಹಾಗೂ ಕುಟುಂಬದ ಏಳು ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಎಲ್ಲಾ 11 ಅಪರಾಧಿಗಳು 2022 ಆಗಸ್ಟ್ 15 ರಂದು, ಗೋದ್ರಾ ಉಪ-ಜೈಲಿನಿಂದ ಬಿಡುಗಡೆಗೊಳಿಸಲಾಯಿತು.

ಜೈಲಿನಿಂದ ಬಿಡುಗಡೆಯಾದ ನಂತರ ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಲಾಯಿತು. ಕ್ಷಮಾದಾನ ನೀತಿಯಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅತ್ಯಾಚಾರದ ಅಪರಾಧಿಗಳನ್ನು ಬಿಡುಗಡೆ ಮಾಡಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊಂದಿದ್ದರೂ, ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಮೂಲಕ ಗುಜರಾತ್‌ನ ಬಿಜೆಪಿ ಸರ್ಕಾರ ತನ್ನ ಅಸೂಕ್ಷ್ಮತೆಯನ್ನು ಪ್ರದರ್ಶಿಸಿದೆ.

Donate Janashakthi Media

Leave a Reply

Your email address will not be published. Required fields are marked *