ಬೆಂಗಳೂರು : ನಗರದ ಕೆಎಫ್‌ಸಿ ಮಳಿಗೆಯಲ್ಲಿ ಕನ್ನಡ ಹಾಡು ಹಾಕದ ವಿಚಾರದಲ್ಲಿ ಮಹಿಳೆ ಹಾಗೂ ಕೆಎಫ್‌ಸಿ ಸಿಬ್ಬಂದಿಗಳ ನಡುವೆ ಮಾತುಕತೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಬಾರೀ ವೈರಲ್ ಆಗಿದೆ. ಈ ಬೆನ್ನಲ್ಲೇ ಕೆಎಫ್‌ಸಿ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಕನ್ನಡದ ಹಾಡು ಹಾಕೋದಿಲ್ಲ, ಯಾರೂ ಏನೂ ಮಾಡಿಕೊಳ್ಳೋದಿಕ್ಕೆ ಆಗೋದಿಲ್ಲ ಎಂದು ದುರಹಂಕಾರ ತೋರಿದ್ದ ಕೆಎಫ್ ಸಿ ಸಂಸ್ಥೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಬಹಳಷ್ಟು ಜನ ಫೆಸ್ಬುಕ್, ಟ್ವಿಟರ್ ಮೂಲಕ KFC ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕನ್ನಡಪರ ಸಂಘಟನೆಗಳು ಇಂದು KFC ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿವೆ. #KFCಕನ್ನಡಬೇಕು ಎಂಬ ಹ್ಯಾಷ್ಟ್ಯಾಗ್ ಅಡಿ ಅನೇಕರು ಕರ್ನಾಟಕದಲ್ಲಿ ಕನ್ನಡ ಬಳಸಲಿ ಎನ್ನುವ ಧೋರಣೆ ವ್ಯಕ್ತಪಡಿಸಿದ್ದು. ಈ ಹ್ಯಾಷ್ಟ್ಯಾಗ್ ಈಗ ಟ್ರೆಂಡ್ ಆಗಿದೆ.
‘ತಮಿಳನಾಡು ಥರ ನಾವು ಕೂಡ ಕನ್ನಡ ಮಾತನಾಡು, ಇಲ್ಲದಿದ್ದರೆ ಜಾಗ ಖಾಲಿ ಮಾಡು. ಸ್ವಲ್ಪ ದಿನ ಖರೀದಿ ನಿಲ್ಲಿಸಿದ್ರೆ ಒಂದೇ ವಾರದಲ್ಲಿ ಕನ್ನಡ ಕನ್ನಡ ಅಂತ ಬರ್ತಾನೆ. ನಾವು ಒಗ್ಗಟ್ಟಾಗೋಣ’ ಎಂದು ಬನಶಂಕರ್ ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡಿಗರು ಕೆ.ಎಫ್.ಸಿ.ಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿ ಅನೇಕರು ಕೆ.ಎಫ್.ಸಿ. ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಿವ್ಯೂವ್ ನೀಡಿದ್ದಾರೆ. ತಮಿಳಿಗರು ಜೊಮ್ಯಾಟೋಗೆ ಪಾಠ ಕಲಿಸಿದಂತೆ ಕನ್ನಡಿಗರು ಕೆ.ಎಫ್.ಸಿ.ಗೆ ಕಲಿಸುತ್ತಾರೆ ಎಂದು ಟ್ವೀಟ್ ಮಾಡಲಾಗ್ತಿದೆ.
ಕೆಎಫ್‌ಸಿ ನೀತಿಯನ್ನು ಕನ್ನಡಪರ ಸಂಘಟನೆಗಳು ಖಂಡಿಸಿದ್ದು, ಕರ್ನಾಟಕದ ಗಾಳಿ ಬೇಕು, ಇಲ್ಲಿನ ನೀರು ಬೇಕು. ಭಾಷೆ ಬೇಡ ಎಂದರೆ ಹೇಗೆ. ನೀವು ವ್ಯವಹಾರ ಮಾಡಿ ಆದರೆ ಕನ್ನಡ ಮತ್ತು ಕರ್ನಾಟಕಕ್ಕೆ ಬೆಲೆ ಕೊಡಿ. ಇಲ್ಲಿ ಸಿಗುವ ಖಾದ್ಯಗಳ ಹೆಸರು ಹಾಗೂ ಅದರ ದರವನ್ನು ಕನ್ನಡದಲ್ಲಿ ನಮೂದಿಸಿ ಎಂದು ಒತ್ತಾಯಿಸಿವೆ.