ಗೋವಾ ಬಿಜೆಪಿಗೆ ಎಂಜಿಪಿ-ಪಕ್ಷೇತರರು ಬೆಂಬಲ: ಸರ್ಕಾರ ರಚಿಸಲು ನಿರ್ಧಾರ

ಪಣಜಿ: ಗೋವಾ ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷ(ಬಿಜೆಪಿ) ಮುಂದಾಗಿದೆ. ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ತೋರಿದ್ದರೂ, ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ವಿಧಾನಸಭೆಯ 40 ಕ್ಷೇತ್ರಗಳಲ್ಲಿ ಬಿಜೆಪಿ 20 ಕ್ಷೇತ್ರಗಳು ಗೆದ್ದುಕೊಂಡಿದೆ. ಆದರೆ ಬಹುಮತಕ್ಕೆ 21 ಸೀಟುಗಳ ಅವಶ್ಯಕತೆಯಿದೆ.

ಎರಡನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿರುವ ಕಾಂಗ್ರೆಸ್‌ 11 ಸ್ಥಾನಗಳನ್ನು ಗಳಿಸಲು ಸಫಲವಾಗಿದೆ. ಉಳಿದಂತೆ, ಆಮ್‌ ಆದ್ಮಿ ಪಾರ್ಟಿ(ಎಎಪಿ) 2 ಕ್ಷೇತ್ರದಲ್ಲಿ, ಪ್ರಾದೇಶಿಕ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ(ಎಂಜಿಪಿ) 2 ಕ್ಷೇತ್ರಗಳಲ್ಲಿ, ಗೋವಾ ಫಾರ್ವಡ್‌ ಪಾರ್ಟಿ 1 ಕ್ಷೇತ್ರದಲ್ಲಿ, ಆರ್‌ಜಿಪಿ 1 ಕ್ಷೇತ್ರದಲ್ಲಿ ಹಾಗೂ ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಪ್ರಾದೇಶಿಕ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ(ಎಂಜಿಪಿ) ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡಿದೆ. ಎಂಜಿಪಿ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಆಂಟೋನಿಯೊ ವಾಸ್, ಚಂದ್ರಕಾಂತ್ ಶೆಟ್ಟಿ ಮತ್ತು ಅಲೆಕ್ಸ್ ರೆಜಿನಾಲ್ಡ್ ಎಂಬ ಮೂವರು ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಈಗ 25 ಸ್ಥಾನಗಳನ್ನು ಹೊಂದಿದ್ದು, 40 ಸದಸ್ಯ ಬಲದ ಸದನದಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನವನ್ನು ಪಡೆದಿವೆ.

ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಾಗಿ ಗೋವಾ ಬಿಜೆಪಿ ಹೇಳಿದೆ.  ಮಾರ್ಚ್‌ 14ರಂದು(ಸೋಮವಾರ) ಪ್ರಮಾಣ ವಚನ ಸ್ವೀಕಾರ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷವು‌ ಗೋವಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಎಂಜಿಪಿಯ ಬಿಜೆಪಿ ಬೆಂಬಲದ ನಡೆ ಆ ಮೈತ್ರಿಯನ್ನು ದೂರ ಮಾಡಿದೆ.

ಗೋವಾ ಫಲಿತಾಂಶದ ಬಗ್ಗೆ ಪ್ರತಿಕ್ರಿಸಿದ ಕಾಂಗ್ರೆಸ್ ನಾಯಕ ಪಿ ಚಿದಂಬರಂ “ನಾವು ಗೋವಾದ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. 11 ಸ್ಥಾನಗಳಲ್ಲಿ ನಮಗೆ ಮತ ಹಾಕಿದ ಗೋವಾದ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ನಮ್ಮ ಕೆಲವು ನಾಯಕರನ್ನು ಗೋವಾದ ಜನರು ಒಪ್ಪಿಕೊಳ್ಳದಿರುವುದು ಬೇಸರದ ಸಂಗತಿ. ಮುಂಬರುವ ಚುನಾವಣೆಯಲ್ಲಿ ಗೋವಾದ ಜನತೆಗಾಗಿ ಇವರು ಉತ್ತಮ ಅಭ್ಯರ್ಥಿಗಳು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *