ಹಣಕಾಸು ವ್ಯವಸ್ಥೆಯನ್ನು ಮತ್ತೆ ಅಪಾಯಕಾರಿ ದಿಕ್ಕಿನತ್ತ ತಳ್ಳುವ ‘ಸುಧಾರಣೆ’ಗಳು

ಜಾಗತೀಕರಣಗೊಂಡ ಬಂಡವಾಳದ ಹಿತಾಸಕ್ತಿಗಳೊಂದಿಗೆ ಹೊಂದಿಕೊಳ್ಳುತ್ತಿರುವ ಭಾರತೀಯ ಕಾರ್ಪೊರೇಟ್ ಹಿತಾಸಕ್ತಿಗಳ ವಿನಮ್ರ ಸೇವಕನಾಗಿರುವ ಬಿಜೆಪಿಯು, ಸಾಮ್ರಾಜ್ಯಶಾಹಿಯು ಪಟ್ಟುಹಿಡಿದು ಬಯಸುವ “ಸುಧಾರಣೆ”ಗಳೊಂದಿಗೆ ಮುಂದುವರಿಯಲು ಯೋಜಿಸುತ್ತಿದೆ. ಅಂದರೆ, ಸ್ವಾತಂತ್ರ‍್ಯದ ನಂತರದ ಅವಧಿಯಲ್ಲಿ ಖಾಸಗೀ ಒಡೆತನದಿಂದ ಮತ್ತು ವಿದೇಶಿ ಪ್ರಾಬಲ್ಯದಿಂದ ಪಾರುಮಾಡಿದ ಹಣಕಾಸು ವಲಯವನ್ನು ಈಗ ಮತ್ತೆ ಅದೇ ದಿಕ್ಕಿನಲ್ಲಿ ತಳ್ಳುತ್ತಿದೆ. ವಿಮಾ ವಲಯಯವನ್ನು ಖಾಸಗೀ ಒಡೆತನದಿಂದ ಮತ್ತು ವಿದೇಶಿ ಪ್ರಾಬಲ್ಯದಿಂದ ಪಾರುಮಾಡಲು ಅನೇಕ ಒಳ್ಳೆಯ ಕಾರಣಗಳಿದ್ದವು. ಆದರೆ ಬಿಜೆಪಿ ನೇತೃತ್ವದ ಸರ್ಕಾರವು ವಿಮಾ ವಲಯದಲ್ಲಿ 100ಶೇ. ಎಫ್‍ಡಿಐಗೆ ಅವಕಾಶ ಕಲ್ಪಿಸುವ ಒಂದು ಶಾಸನಕ್ಕೆ ಸಂಸತ್ತಿನ ಅಂಗೀಕಾರ ಪಡೆದಿದೆ.ಇಂತಹ ಕ್ರಮಗಳ ಮೂಲಕ ಈಗಾಗಲೇ ದುರ್ಬಲಗೊಂಡಿರುವ ಭಾರತದ ಹಣಕಾಸು ವ್ಯವಸ್ಥೆಯ ಅಳಿದುಳಿದ ಭಾಗವನ್ನೂ ಅದು ಕೊನೆಗೊಳಿಸ ಬಯಸುತ್ತದೆ.
ಪ್ರೊ.ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್

ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ವಿಮಾ ವಲಯದಲ್ಲಿ ಶೇ. 100ರಷ್ಟು ವಿದೇಶಿ ಹೂಡಿಕೆಯನ್ನು (ಷೇರು-ಮಾಲೀಕತ್ವವನ್ನು) ಅನುಮತಿಸುವ ಒಂದು ಶಾಸನಕ್ಕೆ ಸಂಸತ್ತಿನ ಅಂಗೀಕಾರ ಪಡೆದಿದೆ. ಪ್ರಧಾನ ಮಂತ್ರಿಗಳು ಇದು ಭಾರತದ ಹಣಕಾಸು ವಲಯದ ಒಂದು ಪ್ರಮುಖ “ಸುಧಾರಣೆ”ಯ ಆರಂಭವನ್ನು ಸೂಚಿಸುತ್ತದೆ ಎಂದು ಪ್ರಕಟಿಸಿದ್ದಾರೆ, ಅಂದರೆ ಬಹುಶಃ ಭಾರತದ ಹಣಕಾಸು ಸಂಸ್ಥೆಗಳು ವಿದೇಶಿ ಹಾಗೂ ಖಾಸಗಿ ಒಡೆತನಕ್ಕೆ ಹೆಚ್ಚು ಹೆಚ್ಚು ಒಳಪಡುವ ‘ಸುಧಾರಣೆ’. ಈ “ಸುಧಾರಣೆ”ಯು ವಿಮಾ ವಲಯದ ಬಗ್ಗೆ ಸ್ವಾತಂತ್ರ‍್ಯಾನಂತರದ ಅವಧಿಯಲ್ಲಿ ಅನುಸರಿಸಲಾಗುತ್ತಿದ್ದ ನೀತಿಯನ್ನು ನಿಸ್ಸಂದೇಹವಾಗಿ ತಿರುಗು ಮುರುಗು ಮಾಡುವ ಕ್ರಮವಾಗಿದೆ.

ಈ ರೀತಿಯ ತಿರುಗು ಮುರುಗನ್ನು ಐಎಂಎಫ್, ವಿಶ್ವ ಬ್ಯಾಂಕ್ ಮುಂತಾದ ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಸಂಸ್ಥೆಗಳು ಮತ್ತು ಯುಎಸ್ ಆಡಳಿತವು ಬಹಳ ಸಮಯದಿಂದಲೂ ಒತ್ತಾಯಿಸುತ್ತಲೇ ಬಂದಿವೆ. ಇಡೀ ಹಣಕಾಸು ವಲಯವನ್ನು ತಕ್ಷಣವೇ ಖಾಸಗೀಕರಣ ಮಾಡುವುದು ಒಂದು ವೇಳೆ ಸಾಧ್ಯವಾಗದಿದ್ದರೆ, ಸರ್ಕಾರವು ಕೊನೆಯ ಪಕ್ಷ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಮೂಲಕ ಒಂದು “ಸಂಕೇತವನ್ನು ರವಾನಿಸಬಹುದು” ಎಂದು ಯುಎಸ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಭಾರತ ಸರ್ಕಾರಕ್ಕೆ ಸಲಹೆ ಮಾಡಿದ್ದರು. ಕಾಂಗ್ರೆಸ್ ನೇತೃತ್ವದ ಸರ್ಕಾರವು ನವ-ಉದಾರವಾದಿ “ಸುಧಾರಣೆಗಳ” ಖಯಾಲಿ ಹೊಂದಿದ್ದರೂ ಈ ಸಲಹೆಯನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ಜಾಗತೀಕರಣಗೊಂಡ ಬಂಡವಾಳದ ಹಿತಾಸಕ್ತಿಗಳೊಂದಿಗೆ ಹೊಂದಿಕೊಳ್ಳುತ್ತಿರುವ ಭಾರತೀಯ ಕಾರ್ಪೊರೇಟ್ ಹಿತಾಸಕ್ತಿಗಳ ವಿನಮ್ರ ಸೇವಕನಾಗಿರುವ ಬಿಜೆಪಿಯು, ಸಾಮ್ರಾಜ್ಯಶಾಹಿಯು ಪಟ್ಟುಹಿಡಿದು ಬಯಸುವ “ಸುಧಾರಣೆಗಳೊಂದಿಗೆ” ಮುಂದುವರಿಯಲು ಯೋಜಿಸುತ್ತಿದೆ. ಅಂದರೆ, ಸ್ವಾತಂತ್ರ‍್ಯದ ನಂತರದ ಅವಧಿಯಲ್ಲಿ ಖಾಸಗೀ ಒಡೆತನದಿಂದ ಮತ್ತು ವಿದೇಶಿ ಪ್ರಾಬಲ್ಯದಿಂದ ಪಾರುಮಾಡಿದ ಹಣಕಾಸು ವಲಯವನ್ನು ಈಗ ಮತ್ತೆ ಅದೇ ದಿಕ್ಕಿನಲ್ಲಿ ತಳ್ಳುತ್ತಿದೆ.

ಉತ್ಪಾದನೆ vs ಸಟ್ಟಾಕೋರತನ

ವಿಮಾ ವಲಯಯವನ್ನು ಖಾಸಗೀ ಒಡೆತನದಿಂದ ಮತ್ತು ವಿದೇಶಿ ಪ್ರಾಬಲ್ಯದಿಂದ ಪಾರುಮಾಡಲು ಅನೇಕ ಒಳ್ಳೆಯ ಕಾರಣಗಳಿದ್ದವು. ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ಕಾರಣಗಳನ್ನು ಪರಿಶೀಲಿಸುವುದು ಉಪಯುಕ್ತವಾಗುತ್ತದೆ. ಮೊದಲನೆಯದು, ಹಣಕಾಸು ಮಾರುಕಟ್ಟೆಯು “ಉತ್ಪಾದನೆ” ಮತ್ತು “ಸಟ್ಟಾಬಾಜಿ” ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದಿಲ್ಲ. ಈ ವ್ಯತ್ಯಾಸವನ್ನು ಹೀಗೆ ಅರ್ಥೈಸಿಕೊಳ್ಳಬಹುದು: ಒಂದು ಆಸ್ತಿಯನ್ನು “ಇಟ್ಟುಕೊಂಡಿರಲು” ಸ್ವಾಧೀನಪಡಿಸಿಕೊಂಡರೆ, ಅಂದರೆ, ಒಂದು ನಿರ್ದಿಷ್ಟ ಅವಧಿಯಲ್ಲಿ ಅದು ತರುವ ವರಮಾನದ (ಇಳುವರಿ ನೀಡುವ) ಭರವಸೆಯ ಮೇಲೆ ಸ್ವಾಧೀನಪಡಿಸಿಕೊಂಡರೆ, ಅದು “ಉತ್ಪಾದನೆ”ಗಾಗಿ ಮಾಡಿಕೊಂಡ ಸ್ವಾಧೀನವಾಗುತ್ತದೆ. ಆದರೆ, ಅದೇ ಆಸ್ತಿಯನ್ನು ಶೀಘ್ರವೇ ಒಂದು ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದಲೇ ಸ್ವಾಧೀನಪಡಿಸಿ  ಕೊಂಡಿರಬಹುದು; ಅಂದರೆ, ಖರೀದಿದಾರನಿಗೆ ಅದು ತರುವ ವರಮಾನದಲ್ಲಿ, ಅದರಿಂದಾಗಿ “ಉತ್ಪಾದನೆ”ಯಲ್ಲಿ ಆಸಕ್ತಿ ಇರುವುದಿಲ್ಲ, ಅಂಥಹ ಒಂದು ಸಂದರ್ಭದಲ್ಲಿ ಅದು “ಸಟ್ಟಾಬಾಜಿ”ಯ ಉದ್ದೇಶದಿಂದ ಮಾಡಿಕೊಂಡ ಸ್ವಾಧೀನವಾಗುತ್ತದೆ. ಆದರೆ, ಲಾಭ ಗಳಿಸುವ ಏಕ ಮಾತ್ರ ಉದ್ದೇಶದಿಂದ ನಡೆಸಲ್ಪಡುವ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಈ ಎರಡು ರೀತಿಯ ಚಟುವಟಿಕೆಗಳ ನಡುವಿನ ವ್ಯತ್ಯಾಸ ಮುಖ್ಯವಾಗುವುದಿಲ್ಲ. ಆದ್ದರಿಂದ ಹಣಕಾಸು ಸಂಸ್ಥೆಗಳು ತಮ್ಮ ಬಳಿ ಇರುವ ಸಂಪನ್ಮೂಲಗಳ (ಬಂಡವಾಳದ) ಒಂದು ಭಾಗವನ್ನು “ಸಟ್ಟಾ” ಚಟುವಟಿಕೆಯಲ್ಲಿ ಹೂಡಿಕೆ ಮಾಡುತ್ತವೆ. ಅಂದರೆ, ಲಭ್ಯವಿರುವ ಅಷ್ಟು ಸಂಪನ್ಮೂಲಗಳು “ಉತ್ಪಾದನೆ”ಯ ಚಟುವಟಿಕೆಗಳಲ್ಲಿ ಹೂಡಿಕೆಯಾಗುವುದಿಲ್ಲ. ಆಗ ಉತ್ಪಾದನೆ ಕುಂಠಿತಗೊಳ್ಳುತ್ತದೆ ಮತ್ತು ಅದು ಮೂರನೇ ಜಗತ್ತಿನ ದೇಶವೊಂದರ ಅರ್ಥವ್ಯವಸ್ಥೆಯ ಪರಿಸ್ಥಿತಿಯನ್ನು ಹದಗೆಡಿಸುತ್ತದೆ.

ಎರಡನೆಯದು, ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ನೀಡುವ ವಿಷಯದಲ್ಲಿ ಉತ್ಪಾದನೆಯ ವಲಯದೊಳಗಿನ ಬೇರೆ ಬೇರೆ ಸಾಲಗಾರರ ನಡುವೆ ವ್ಯವಸ್ಥಿತವಾಗಿ ತಾರತಮ್ಯ ಮಾಡುತ್ತವೆ. ವಸಾಹತುಶಾಹಿ ಕಾಲದಲ್ಲಿ ಬಹುತೇಕವಾಗಿ ವಿದೇಶಿ ಒಡೆತನದಲ್ಲಿದ್ದ ಬ್ಯಾಂಕ್‌ಗಳಿಂದ ಹಣಕಾಸು ಪಡೆಯಲು ಭಾರತೀಯ ಉದ್ಯಮಿಗಳು ಪ್ರಯತ್ನಿಸಿದಾಗ ವ್ಯವಸ್ಥಿತವಾಗಿ ಅವರ ವಿರುದ್ಧ ತಾರತಮ್ಯ ಮಾಡಲಾಗುತ್ತಿತ್ತು. ಕಾಲಾನಂತರದಲ್ಲಿ ಭಾರತದ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸ್ವಂತ ವ್ಯವಹಾರಗಳಿಗೆ ಬೇಕಾಗುವ ಹಣಕಾಸನ್ನು ಹೊಂದಿಸಿಕೊಳ್ಳಲು ತಮ್ಮದೇ ಆದ ಬ್ಯಾಂಕ್‌ಗಳನ್ನು ಸ್ಥಾಪಿಸಿದವು. ಆದರೆ, ಈ ಬ್ಯಾಂಕ್‌ಗಳೂ ಸಹ ಇತರ ಸಾಲಗಾರರನ್ನು ಹೊರಗಿಟ್ಟವು. ನಿರ್ದಿಷ್ಟವಾಗಿ ಹೇಳುವುದಾದರೆ, ಕಿರು ಉತ್ಪಾದಕರು, ರೈತರು, ಕುಶಲಕರ್ಮಿಗಳು ಮುಂತಾದವರನ್ನು ಈ ಸಾಂಸ್ಥಿಕ ಹಣಕಾಸಿನ ಮೂಲಗಳಿಂದ ಹೊರಗಿಡಲಾಯಿತು.

ಹಣಕಾಸು, ಬಂಡವಾಳದ ಮೇಲೆ ನಿಯಂತ್ರಣ ಹೊಂದಿರುವುದರಿಂದ, ಈ ಹಣಕಾಸು ಹೇಗೆ ವಿತರಿಸಲ್ಪಡುತ್ತದೆ, ಅಂದರೆ, ಈ ಹಣಕಾಸು ಯಾರಿಗೆ ಸಿಗುತ್ತದೆ, ಅದು ಯಾವ ಪ್ರದೇಶಗಳಿಗೆ ಹೋಗುತ್ತದೆ, ಅದನ್ನು ಯಾವ ಚಟುವಟಿಕೆಗಳಿಗೆ ಬಳಸಲಾಗುತ್ತದೆ ಎಂಬುದು ದೇಶದ ಅಭಿವೃದ್ಧಿಯ ದರವನ್ನು ಮತ್ತು ಅಭಿವೃದ್ಧಿಯ ಮಾದರಿಯನ್ನು ನಿರ್ಧರಿಸುತ್ತದೆ. ಕೆಲವು ವಲಯಗಳನ್ನು ಮತ್ತು ಆ ವಲಯಗಳಲ್ಲಿ ತೊಡಗಿರುವ ಉತ್ಪಾದಕರನ್ನು ಹಣಕಾಸು ಸೌಲಭ್ಯದಿಂದ ವ್ಯವಸ್ಥಿತವಾಗಿ ಹೊರಗಿಟ್ಟಾಗ ಅದು ಅಭಿವೃದ್ಧಿಯ ಮಾದರಿಯನ್ನು ವಿರೂಪಗೊಳಿಸುವುದು ಮಾತ್ರವಲ್ಲದೆ ಅಭಿವೃದ್ಧಿಯನ್ನೇ ನಿರ್ಬಂಧಿಸುತ್ತದೆ.

ಕೃಷಿ ಮತ್ತು ಕಿರು ಉತ್ಪಾದನೆಯಂತಹ ವಲಯಗಳ ಅಭಿವೃದ್ಧಿಗೆ ಬೇಕಾಗುವ ಬಂಡವಾಳವನ್ನು ಒದಗಿಸುವಲ್ಲಿ ಖಾಸಗಿ ಒಡೆತನದ ಹಣಕಾಸು ಸಂಸ್ಥೆಗಳು ಅಸಮರ್ಥವಾಗಿರುವುದರಿಂದ, ಕೆಲವು ಸಾಮಾಜಿಕ ಆದ್ಯತೆಗಳಿಗೆ ಅನುಗುಣವಾಗಿ ಒಂದು ಸಮತೋಲಿತ ರೀತಿಯಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದಕ್ಕಾಗಿ ಹಣಕಾಸು ಸಂಸ್ಥೆಗಳು ಪ್ರಭುತ್ವದ ಒಡೆತನದಲ್ಲಿರುವುದು ಅಗತ್ಯವಾಗುತ್ತದೆ. ಈ ಮೂಲಭೂತ ಒಳನೋಟವು, ನವ-ಉದಾರವಾದಿ “ಸುಧಾರಣೆಗಳು” ಜಾರಿಗೆ ಬರುವ ಮೊದಲು, ಭಾರತದ ಅಭಿವೃದ್ಧಿ ಪಥವನ್ನು ಆವರಿಸಿತ್ತು. ಹಣಕಾಸು ವಲಯವು ಪ್ರಭುತ್ವದ ಒಡೆತನಕ್ಕೆ ಬಂದ ಈ ಬದಲಾವಣೆಯು ಕೃಷಿ ವಲಯದೆಡೆಗೆ ಸಾಂಸ್ಥಿಕ ಹಣಕಾಸು ಒಂದು ಅಭೂತಪೂರ್ವ ಮಟ್ಟದಲ್ಲಿ ಹರಿಯಲು ಕಾರಣವಾಯಿತು ಮತ್ತು ಅದು ಹಸಿರು ಕ್ರಾಂತಿಯನ್ನು ಮತ್ತು ಭಾರತದ ಆಹಾರ ಸ್ವಾವಲಂಬನೆಯನ್ನು ಸಾಧ್ಯವಾಗಿಸಿತು.

ಇದನ್ನೂ ಓದಿ : ಸದಾ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆ, ಈಗಲೂ ಸರಿಗಟ್ಟದ ಸಮಾಜವಾದದ ಅಭೂತಪೂರ್ವ ಸಾಧನೆ : ಪ್ರೊ. ಪಟ್ನಾಯಕ್

ತಿರುಗುಮುರುಗುಗೊಳಿಸುವ ಪ್ರಯತ್ನ

ಅಭಿವೃದ್ಧಿ ಹೊಂದಬೇಕು ಎಂದಾದರೆ, “ಸಟ್ಟಾಕೋರ” ಚಟುವಟಿಕೆಗಳಿಗೆ ಬದಲಾಗಿ “ಉತ್ಪಾದನೆ”ಯ ಚಟುವಟಿಕೆಗಳಲ್ಲಿ ಬಂಡವಾಳವನ್ನು ಹೂಡಬೇಕಾಗುತ್ತದೆ. ಕೃಷಿ ಮತ್ತು ಕಿರು ಉತ್ಪಾದನೆಯಂತಹ ವಲಯಗಳ ಅಭಿವೃದ್ಧಿಗೆ ಬೇಕಾಗುವ ಬಂಡವಾಳವನ್ನು ಒದಗಿಸುವಲ್ಲಿ ಖಾಸಗಿ ಒಡೆತನದ ಹಣಕಾಸು ಸಂಸ್ಥೆಗಳು ಅಸಮರ್ಥವಾಗಿರುವುದರಿಂದ, ಈ ಉದ್ದೇಶಕ್ಕಾಗಿ, ಅಂದರೆ, ಕೆಲವು ಸಾಮಾಜಿಕ ಆದ್ಯತೆಗಳಿಗೆ ಅನುಗುಣವಾಗಿ ಒಂದು ಸಮತೋಲಿತ ರೀತಿಯಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದಕ್ಕಾಗಿ ಹಣಕಾಸು ಸಂಸ್ಥೆಗಳು ಪ್ರಭುತ್ವದ ಒಡೆತನದಲ್ಲಿರುವುದು ಅಗತ್ಯವಾಗುತ್ತದೆ.

ಈ ಮೂಲಭೂತ ಒಳನೋಟವು, ನವ-ಉದಾರವಾದಿ “ಸುಧಾರಣೆಗಳು” ಜಾರಿಗೆ ಬರುವ ಮೊದಲು, ಭಾರತದ ಅಭಿವೃದ್ಧಿ ಪಥವನ್ನು ಆವರಿಸಿತ್ತು. ಹಾಗಾಗಿಯೇ, 1955ರಲ್ಲಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾವನ್ನು, 1956ರಲ್ಲಿ ಜೀವ ವಿಮಾ ವ್ಯವಹಾರವನ್ನು ಮತ್ತು 1969ರಲ್ಲಿ 14 ಪ್ರಮುಖ ಖಾಸಗಿ ಬ್ಯಾಂಕ್‌ಗಳನ್ನು ಮತ್ತು 1980ರಲ್ಲಿ ಆರು ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಹಣಕಾಸು ವಲಯವು ಪ್ರಭುತ್ವದ ಒಡೆತನಕ್ಕೆ ಬಂದ ಈ ಬದಲಾವಣೆಯು ಕೃಷಿ ವಲಯದೆಡೆಗೆ ಸಾಂಸ್ಥಿಕ ಹಣಕಾಸು ಒಂದು ಅಭೂತಪೂರ್ವ ಮಟ್ಟದಲ್ಲಿ ಹರಿಯಲು ಕಾರಣವಾಯಿತು ಮತ್ತು ಅದು ಹಸಿರು ಕ್ರಾಂತಿಯನ್ನು ಮತ್ತು ಭಾರತದ ಆಹಾರ ಸ್ವಾವಲಂಬನೆಯನ್ನು ಸಾಧ್ಯವಾಗಿಸಿತು. ಅರುವತ್ತರ ದಶಕದ ಆರಂಭದಲ್ಲಿ ಅಮೆರಿಕದ ಆಹಾರ ಆಮದುಗಳ ಮೇಲೆ ಅವಲಂಬಿತವಾಗಿದ್ದರಿಂದ ಭಾರತವು ಅಮೆರಿಕ ಸಾಮ್ರಾಜ್ಯಶಾಹಿಯ ಕುತಂತ್ರಗಳಿಗೆ ಗುರಿಯಾಗಿತ್ತು. ಅಂಥಹ ಒಂದು ಸನ್ನಿವೇಶದಲ್ಲಿ ಸಾಧಿಸಿದ ಆಹಾರ ಸ್ವಾವಲಂಬನೆಯು ನಿಜಕ್ಕೂ ಮಹತ್ವಪೂರ್ಣವಾದ ಒಂದು ಸಾಧನೆಯೇ ಸರಿ. ಅದನ್ನು ತಿರುಗು ಮುರುಗು ಮಾಡಲು ಸಾಮ್ರಾಜ್ಯಶಾಹಿಯು ಮಾಡುತ್ತಿರುವ ಪ್ರಯತ್ನಗಳು ಇಂದಿಗೂ ಮುಂದುವರೆಯುತ್ತಿವೆ.

ಅಮೆರಿಕದಲ್ಲಿ ಒಡೆದ ವಸತಿ “ಗುಳ್ಳೆ”ಯು ಬಂಡವಾಳಶಾಹಿ ಜಗತ್ತಿನ ಇಡೀ ಹಣಕಾಸು ವ್ಯವಸ್ಥೆಯನ್ನೇ ಒಂದು ತೀವ್ರ ಬಿಕ್ಕಟ್ಟಿಗೆ ಸಿಲುಕಿಸಿದಾಗ, ಭಾರತದ ಹಣಕಾಸು ವಲಯವು ಪ್ರಭುತ್ವದ ಒಡೆತನದಲ್ಲಿದ್ದ ಕಾರಣದಿಂದಾಗಿಯೇ, ಬಿಕ್ಕಟ್ಟಿನ ಅಡ್ಡ ಪರಿಣಾಮಗಳಿಗೆ ಬಲಿಯಾಗದೇ ಉಳಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಪ್ರಭುತ್ವವು ಬ್ಯಾಂಕ್‌ಗಳ ಒಡೆತನ ಹೊಂದಿದ್ದ ಅಂಶವು ಲಕ್ಷೋಪಲಕ್ಷ ಠೇವಣಿದಾರರ ಹಣ ಅಪಾಯದಲ್ಲಿ ಸಿಲುಕುವುದನ್ನು ತಪ್ಪಿಸಿತು. ಐಸಿಐಸಿಐ ಬ್ಯಾಂಕ್ ಒಂದನ್ನು ಹೊರತುಪಡಿಸಿದರೆ, ಭಾರತದ ಬ್ಯಾಂಕ್‌ಗಳು ತಮ್ಮ ಬಂಡವಾಳ ಹೂಡಿಕೆ ಪಟ್ಟಿಯಲ್ಲಿ ಅತಿ ಕಡಿಮೆ ವಿದೇಶಿ ಸ್ವತ್ತುಗಳನ್ನು ಹೊಂದಿದ್ದವು ಮಾತ್ರವಲ್ಲ, ಯಾವುದೇ ನಂಜಿನ ಸ್ವತ್ತುಗಳನ್ನು ಹೊಂದಿರಲಿಲ್ಲ.

ಕಟ್ಟುಮಸ್ತಾಗಿದ್ದ ಭಾರತದ ಹಣಕಾಸು ವ್ಯವಸ್ಥೆಯನ್ನು ಆರ್ಥಿಕ ಉದಾರೀಕರಣವು ಈಗಾಗಲೇ ಸಾಕಷ್ಟು ದುರ್ಬಲಗೊಳಿಸಿದೆ. ರೈತ ಕೃಷಿಗೆ ನೇರವಾಗಿ ಹರಿಯುತ್ತಿದ್ದ ಸಾಂಸ್ಥಿಕ ಹಣಕಾಸಿನ ಪ್ರಮಾಣವು ಬಹಳ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬ್ಯಾಂಕ್‌ಗಳಿಂದ ರಿಯಾಯ್ತಿ ದರದಲ್ಲಿ ಒದಗಿಸಿಕೊಂಡ ಸಾಲವನ್ನು ರೈತರಿಗೆ ಅತಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ನೀಡುವ ಮಧ್ಯವರ್ತಿಗಳ ಗುಂಪೊಂದು ಹುಟ್ಟಿಕೊಂಡಿದೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ಹಣಕಾಸು ವಲಯದ ಖಾಸಗೀಕರಣ ಮತ್ತು ವಿದೇಶಿ ಪ್ರಾಬಲ್ಯದ ಪ್ರಕ್ರಿಯೆಯನ್ನು ವೇಗಗೊಳಿಸುವ ಮೂಲಕ ಈಗಾಗಲೇ ದುರ್ಬಲಗೊಂಡಿರುವ ಭಾರತದ ಹಣಕಾಸು ವ್ಯವಸ್ಥೆಯ ಅಳಿದುಳಿದ ಭಾಗವನ್ನೂ ಕೊನೆಗೊಳಿಸ ಬಯಸುತ್ತದೆ.

ಕಟ್ಟುಮಸ್ತಾಗಿದ್ದ ಭಾರತದ ಹಣಕಾಸು ವ್ಯವಸ್ಥೆಯನ್ನು ಆರ್ಥಿಕ ಉದಾರೀಕರಣವು ಈಗಾಗಲೇ ಸಾಕಷ್ಟು ದುರ್ಬಲಗೊಳಿಸಿದೆ. ರೈತ ಕೃಷಿಗೆ ನೇರವಾಗಿ ಹರಿಯುತ್ತಿದ್ದ ಸಾಂಸ್ಥಿಕ ಹಣಕಾಸಿನ ಪ್ರಮಾಣವು ಬಹಳ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬ್ಯಾಂಕ್‌ಗಳಿಂದ ರಿಯಾಯ್ತಿ ದರದಲ್ಲಿ ಒದಗಿಸಿಕೊಂಡ ಸಾಲವನ್ನು ರೈತರಿಗೆ ಅತಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ನೀಡುವ ಮಧ್ಯವರ್ತಿಗಳ ಗುಂಪೊಂದು ಹುಟ್ಟಿಕೊಂಡಿದೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ಹಣಕಾಸು ವಲಯದ ಖಾಸಗೀಕರಣ ಮತ್ತು ವಿದೇಶಿ ಪ್ರಾಬಲ್ಯದ ಪ್ರಕ್ರಿಯೆಯನ್ನು ವೇಗಗೊಳಿಸುವ ಮೂಲಕ ಈಗಾಗಲೇ ದುರ್ಬಲಗೊಂಡಿರುವ ಭಾರತದ ಹಣಕಾಸು ವ್ಯವಸ್ಥೆಯ ಅಳಿದುಳಿದ ಭಾಗವನ್ನೂ ಕೊನೆಗೊಳಿಸ ಬಯಸುತ್ತದೆ.

ಟ್ರಂಪ್‌ನ್ನು ಸಮಾಧಾನಪಡಿಲು ಸಾಕಾಗುವುದಿಲ್ಲ

ಭಾರತದ ವಿಮಾ ವಲಯದಲ್ಲಿ ವಿದೇಶಿಯರು ಒಡೆತನ ಹೊಂದಬಹುದಾದ ಷೇರುಗಳ ಶೇಕಡಾವಾರು ಮಿತಿಯನ್ನು ಕೈಬಿಡುವ ಸಂಬಂಧವಾಗಿ ಮಂಡಿಸಲಾದ ಅಧಿಕೃತ ವಾದಗಳು ಸಂಪೂರ್ಣವಾಗಿ ವಿಶ್ವಾಸಾರ್ಹತೆಯ ಕೊರತೆಯಿಂದ ಕೂಡಿವೆ. ಒಂದು ವಾದವೆಂದರೆ, ಅದು ವಿಮಾ ವಲಯಕ್ಕೆ ಹೆಚ್ಚು ನೇರ ವಿದೇಶಿ ಹೂಡಿಕೆಯನ್ನು ತರುತ್ತದೆ, ಅದರಿಂದಾಗಿ ವಿಮಾ ವಲಯದ ವ್ಯಾಪ್ತಿ ಮತ್ತು ಅದರ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಯಾಗುತ್ತದೆ ಮತ್ತು ಆ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂಬುದು. ಆದರೆ, ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ವಿದೇಶಗಳಲ್ಲಿ ಸಟ್ಟಾಕೋರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಒಂದು ವೇಳೆ ಬಳಸಿದರೆ, ಅದು ಭಾರತದ ಅಭಿವೃದ್ಧಿಗೆ ಕೊಡುಗೆಯನ್ನೂ ನೀಡುವುದಿಲ್ಲ ಅಥವಾ ಗ್ರಾಹಕರ ಹಣದ ಸುರಕ್ಷತೆಯನ್ನೂ ಖಾತ್ರಿಪಡಿಸುವುದಿಲ್ಲ. ಅದೇ ರೀತಿಯಲ್ಲಿ, ಗ್ರಾಹಕರು ಇನ್ನು ಮುಂದೆ ಚಿನ್ನ ಅಥವಾ ಭೂಮಿ ಕಾಣಿಯಂಥಹ ಸ್ವತ್ತುಗಳನ್ನು ಹೊಂದುವ ಆಕರ್ಷಣೆಗೆ ಒಳಗಾಗುವುದಿಲ್ಲ, ಬದಲಿಗೆ ಉತ್ಪಾದಕ ಉದ್ದೇಶಗಳಿಗಾಗಿ ಹಣಕಾಸು ಒದಗಿಸುವ ಸಾಧನವಾಗಿರುವ ವಿಮಾ ಪಾಲಿಸಿಗಳನ್ನು ಹೊಂದುತ್ತಾರೆ ಎಂಬ ದಾವೆಯು, ಸಟ್ಟಾಕೋರ ಉದ್ದೇಶಗಳಿಗಾಗಿ ಅಥವಾ ಸಣ್ಣ ಉದ್ಯಮಗಳ ಸ್ವಾಧೀನದ ಮೂಲಕ ಲಾಭದ ಮಟ್ಟವನ್ನು ಹೆಚ್ಚಿಸುವ ಏಕಸ್ವಾಮ್ಯದ ಉದ್ದೇಶಗಳ ಈಡೇರಿಕೆಗಾಗಿ (ಮತ್ತು ಈ ಪ್ರಕ್ರಿಯೆಯಲ್ಲಿ ಹಣದುಬ್ಬರವನ್ನು ಪ್ರಚೋದಿಸಲು) ಹಣವನ್ನು ಒಂದು ವೇಳೆ ತಿರುಗಿಸಿದರೆ, ತನ್ನ ಸಿಂಧುತ್ವವನ್ನು ಕಳೆದುಕೊಳ್ಳುತ್ತದೆ.

ವಿಮಾ ವಲಯದ ಸುಧಾರಣೆಯು ಭಾರತದ ಅರ್ಥವ್ಯವಸ್ಥೆಯಲ್ಲಿ ಅಂತರರಾಷ್ಟ್ರೀಯ ಹಣಕಾಸುದಾರರ “ವಿಶ್ವಾಸದ ಭಾವನೆಯನ್ನು” ಹೆಚ್ಚಿಸುತ್ತದೆ ಮತ್ತು ಭಾರತದ ರೂಪಾಯಿಯನ್ನು ಏಷ್ಯಾದ ಅತ್ಯಂತ ದುರ್ಬಲ ಕರೆನ್ಸಿಯನ್ನಾಗಿ ಮಾಡಿರುವ ಪ್ರಸ್ತುತ ಸಂಭವಿಸುತ್ತಿರುವ ಹಣಕಾಸಿನ ಹೊರಹರಿವನ್ನು ತಡೆಯುತ್ತದೆ ಎಂಬ ನಿರೀಕ್ಷೆಯನ್ನು ಸರ್ಕಾರವು ಹೊಂದಿರಬಹುದು. ಆದರೆ, ಹಣಕಾಸಿನ ಹೊರಹರಿವಿನ ಹತ್ತಿರದ ಕಾರಣವೆಂದರೆ ಅದು ಭಾರತದ ಸರಕುಗಳ ಮೇಲೆ ಡೊನಾಲ್ಡ್ ಟ್ರಂಪ್ ಅತಿ ಹೆಚ್ಚಿನ ಸುಂಕಗಳನ್ನು ವಿಧಿಸಿರುವುದೇ ಆಗಿದೆ. ಇದು ರೂಪಾಯಿ ಮೌಲ್ಯದಲ್ಲಿ ಇಳಿಕೆಯ ನಿರೀಕ್ಷೆಗಳನ್ನು ಸೃಷ್ಟಿಸುತ್ತದೆ ಮತ್ತು ವಾಸ್ತವಿಕವಾಗಿ ಆ ನಿರೀಕ್ಷೆಯ ಕಾರಣದಿಂದಲೇ ರೂಪಾಯಿಯ ಮೌಲ್ಯವು ಇಳಿಕೆಗೆ ಒಳಗಾಗುತ್ತದೆ. ಅಮೆರಿಕದ ಡೈರಿ ಉತ್ಪನ್ನಗಳ ಮುಕ್ತ ಆಮದುಗಳಿಗೆ ಭಾರತದ ಅರ್ಥವ್ಯವಸ್ಥೆಯನ್ನು ತೆರೆದಿಡುವ ಮೂಲಕ ಟ್ರಂಪ್ ಅವರ ಬೇಡಿಕೆಯನ್ನು ಚಾಚೂ ತಪ್ಪದೆ ಅಕ್ಷರಷಃ ಪಾಲಿಸುವವರೆಗೂ ಹಣಕಾಸು ವಲಯವನ್ನು ಎಷ್ಟು ಉದಾರೀಕರಿಸಿದರೂ ಅದು ಹಣಕಾಸಿನ ಈ ಹೊರಹರಿವನ್ನು ನಿಲ್ಲಿಸಲಾಗದು. ಬಿಜೆಪಿ ನೇತೃತ್ವದ ಸರ್ಕಾರವು ಈ ಹಿಂದೆ ಪಾಠ ಕಲಿಸಿದ ರೈತರನ್ನು ಎದುರು ಹಾಕಿಕೊಳ್ಳಲಾರದು. ಈ ಪರಿಸ್ಥಿತಿಯಲ್ಲಿ ಹಣಕಾಸು ವಲಯವನ್ನು ತೆರೆದಿಡುವ ತೆರನ “ಶಾಂತಿ ಸಂದೇಶಗಳು” ಟ್ರಂಪ್ ಅವರನ್ನು ಸಮಾಧಾನಪಡಿಲು ಸಾಕಾಗುವುದಿಲ್ಲ ಮತ್ತು ಹಣಕಾಸಿನ ಹೊರಹರಿವನ್ನು ತಡೆಯಲು ಸಾಕಾಗುವುದಿಲ್ಲ.

ಹಾಗೆ ನೋಡಿದರೆ, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಖಾಸಗಿ ಕಂಪನಿಗಳಿಗೆ ಹಣಕಾಸು ವಲಯವನ್ನು ತೆರೆದಿಡುವುದರಿಂದ ಇನ್ನೂ ಹೆಚ್ಚು ಹಣಕಾಸಿನ ಹೊರಹರಿವು ಸಂಭವಿಸುವ ಒಂದು ವಿರುದ್ಧ ಪರಿಣಾಮ ಬೀರುವ ಸಾಧ್ಯತೆ ಇದೆ ಮತ್ತು ಈ ಹಣಕಾಸಿನ ಹೊರಹರಿವಿನ ಕಾರಣದಿಂದ ರೂಪಾಯಿ ಕುಸಿತವನ್ನು ತಡೆಯುವ ದೃಷ್ಟಿಕೋನದಿಂದಲೂ ಇದು ಪ್ರತಿಕೂಲವಾಗಿರುತ್ತದೆ.

ಹಾಗೆ ನೋಡಿದರೆ, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಖಾಸಗಿ ಕಂಪನಿಗಳಿಗೆ ಹಣಕಾಸು ವಲಯವನ್ನು ತೆರೆದಿಡುವುದರಿಂದ ಇನ್ನೂ ಹೆಚ್ಚು ಹಣಕಾಸಿನ ಹೊರಹರಿವು ಸಂಭವಿಸುವ ಒಂದು ವಿರುದ್ಧ ಪರಿಣಾಮ ಬೀರುವ ಸಾಧ್ಯತೆ ಇದೆ ಮತ್ತು ಈ ಹಣಕಾಸಿನ ಹೊರಹರಿವಿನ ಕಾರಣದಿಂದ ರೂಪಾಯಿ ಕುಸಿತವನ್ನು ತಡೆಯುವ ದೃಷ್ಟಿಕೋನದಿಂದಲೂ ಇದು ಪ್ರತಿಕೂಲವಾಗಿರುತ್ತದೆ. ಇದು ನವ-ಉದಾರವಾದದ ಅನುಸರಣೆಯು ಭಾರತದಲ್ಲಿ ಸೃಷ್ಟಿರುವ ಇಕ್ಕಟ್ಟಿನ ಪರಾಕಾಷ್ಠೆಯನ್ನು ತೋರಿಸುತ್ತದೆ.

ಇದು ನವ-ಉದಾರವಾದದ ಅನುಸರಣೆಯು ಭಾರತದಲ್ಲಿ ಸೃಷ್ಟಿರುವ ಇಕ್ಕಟ್ಟಿನ ಪರಾಕಾಷ್ಠೆಯನ್ನು ತೋರಿಸುತ್ತದೆ. ನವ-ಉದಾರವಾದವು ರೈತರು ಮತ್ತು ಕಿರು ಉತ್ಪಾದಕರಿಗೆ ಹೆಚ್ಚಿನ ಸಂಕಷ್ಟಗಳನ್ನು ತಂದಿದೆ. ಈ ಸಂಕಷ್ಟಗಳು ಮತ್ತಷ್ಟು ವಿಸ್ತರಗೊಳ್ಳಬೇಕೆಂದು ಮತ್ತು ತೀವ್ರಗೊಳ್ಳಬೇಕೆಂದು ಟ್ರಂಪ್ ತಮ್ಮ ಬೇಡಿಕೆಗಳ ಮೂಲಕ ಬಯಸುತ್ತಾರೆ. ಹಾಗೆ ಮಾಡಲು ನಿರಾಕರಿಸಿದರೆ, ಪರ್ಯಾಯವಾಗಿ, ಈಗಾಗಲೇ ಕುಸಿಯುತ್ತಿರುವ ಕರೆನ್ಸಿಯ ಮೌಲ್ಯದಲ್ಲಿ ಮತ್ತಷ್ಟು ಕುಸಿತವನ್ನು ಭಾರತವು ತಕ್ಷಣವೇ ಎದುರಿಸಬೇಕಾಗುತ್ತದೆ. ಇದು ಹಣದುಬ್ಬರವನ್ನು ಹೆಚ್ಚಿಸುತ್ತದೆ ಮತ್ತು ಅಂತಿಮವಾಗಿ ಭಾರತವನ್ನು ದಕ್ಷಿಣ ಏಷ್ಯಾದ ನೆರೆಯ ಹಲವು ದೇಶಗಳಿಗೆ ಸಂಭವಿಸಿದ ರೀತಿಯಲ್ಲಿ ಐಎಂಎಫ್‌ನ ಕಣ್ಗಾವಲಿಗೆ ಒಳಪಡಿಸುತ್ತದೆ.

ಈ ಎರಡು ಆಯ್ಕೆಗಳಲ್ಲಿ ಭಾರತವು ಯಾವುದನ್ನು ಆರಿಸಿಕೊಳ್ಳಬೇಕು ಎಂಬುದು ಮುಖ್ಯವಾದ ವಿಷಯವಲ್ಲ. ಭಾರತದ ಆಯ್ಕೆಯನ್ನು ಈ ಎರಡು ಆಯ್ಕೆಗಳಿಗೆ ಮಾತ್ರ ಸೀಮಿತಗೊಳಿಸುವ ಪರಿಸ್ಥಿತಿಯನ್ನು ನಿವಾರಿಸುವುದೇ ಮುಖ್ಯವಾದ ವಿಷಯ. ಮತ್ತು ಈ ಉದ್ದೇಶದಿಂದ ಅಮೆರಿಕದ ಸರಕುಗಳ ಮೇಲೆ ಅತಿ ಹೆಚ್ಚಿನ ಸುಂಕಗಳನ್ನು ವಿಧಿಸುವ ಮೂಲಕ ಮತ್ತು ಹಣಕಾಸಿನ ಹೊರಹರಿವಿನ ಮೇಲೆ ನಿಯಂತ್ರಣಗಳನ್ನು ವಿಧಿಸುವ ಮೂಲಕ ಟ್ರಂಪ್ ಅವರ ಗೊಡ್ಡು ಬೆದರಿಕೆಗೆ ಸವಾಲು ಎಸೆಯಬೇಕಾಗುತ್ತದೆ. ಮತ್ತು, ನವ-ಉದಾರವಾದದಿಂದ ದೂರಸರಿದು ಹೆಚ್ಚಿನ ಸ್ವಾವಲಂಬನೆಯತ್ತ ಸಾಗುವ ಭವಿಷ್ಯದ ಮುನ್ನರಿವಿನ ದಿಕ್ಪಥ ಬದಲಾವಣೆಯ ನೀತಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆದರೆ, ಅಂತಹ ಒಂದು ದಿಟ್ಟ ಕ್ರಮವನ್ನು ಕೈಗೊಳ್ಳುವಷ್ಟು ಗಟ್ಟಿಯಾದ ಬೆನ್ನುಮೂಳೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ಹೊಂದಿಲ್ಲ. ಬದಲಾಗಿ ಅದು ಅಂತಿಮವಾಗಿ ಟ್ರಂಪ್ ಅವರೊಂದಿಗೆ ಮಾಡಿಕೊಳ್ಳುವ ತನ್ನ ಶರಣಾಗತಿಯನ್ನು ಮುಚ್ಚಿಹಾಕಲು ಫ್ಯಾಸಿಸ್ಟ್ ತೆರನ ವಿಧಾನಗಳನ್ನು ಬಳಸುತ್ತದೆ.

ಇದನ್ನೂ ನೋಡಿ : ವಲಸೆ ಕಾರ್ಮಿಕರ ಮನೆಗೆ ನುಗ್ಗಿ ಆಧಾರ್‌ ಪರಿಶೀಲಿಸಲು ಪುನೀತ್‌ ಕೆರೆಹಳ್ಳಿ ಯಾರು? Janashakthi Media

Donate Janashakthi Media

Leave a Reply

Your email address will not be published. Required fields are marked *