ಬೆಂಗಳೂರು : ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯಬೇಕೆಂದು ಪಣ ತೊಟ್ಟು ಹೆಚ್ಡಿ ಕುಮಾರಸ್ವಾಮಿ ರಾಜ್ಯದೆಲ್ಲೆಡೆ ಸುತ್ತಾಡುತ್ತಿದ್ದಾರೆ. ಆದ್ರೆ, ಜೆಡಿಎಸ್ಗೆ ಆರಂಭ ಆಘಾತವಾಗಿದೆ.
ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಫರ್ ಅಲಿ ನಾಮಪತ್ರ ತಿರಸ್ಕೃತಗೊಂಡಿದೆ. ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದ ಜಾಫರ್ ಅಲಿ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲದಿರುವುದರಿಂದ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ನಾಮಪತ್ರ ತಿರಸ್ಕೃತ ಆಗಿರುವುದನ್ನು ಶಿವಾಜಿನಗರ ಆರ್ಓ ಬಸವರಾಜ್ ಸೋಮಣ್ಣನವರ್ ದೃಢಪಡಿಸಿದ್ದಾರೆ.
ಇನ್ನು ಶಿವಾಜಿನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಾಫರ್ ಅಲಿ ಅವರು ಬಹಳ ವರ್ಷಗಳ ಕಾಲ ವಿದೇಶದಲ್ಲಿ ವಾಸವಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿತ್ತು. ಆದರೆ, ಇತ್ತೀಚೆಗೆ ಭಾರತಕ್ಕೆ ಮರಳಿ ಬಂದಿದ್ದ ಜಾಫರ್ ಅಲಿ ರಾಜಕೀಯಕ್ಕೆ ಬರುವ ಉದ್ದೇಶದಿಂದ ಜೆಡಿಎಸ್ನಿಂದ ಬಿ-ಫಾರಂ ಪಡೆದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ ಈ ನಾಮಪತ್ರ ಊರ್ಜಿತ ಆಗುವುದಿಲ್ಲ ಎಂದು ಅರಿತು ಮತ್ತೊಬ್ಬ ಅಭ್ಯರ್ಥಿಗೆ ಬಿ-ಫಾರಂ ನೀಡುವಂತೆ ಪಕ್ಷಕ್ಕೆ ತಿಳಿಸಿದ್ದರು.
ಇದನ್ನೂ ಓದಿ : ಜನಮತ 2023 : ವಿಧಾನಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳಲ್ಲಿ 3.044 ಸ್ವೀಕೃತ, 406 ತಿರಸ್ಕೃತ
ಇದೀಗ ಜೆಡಿಎಸ್ ಅಭ್ಯರ್ಥಿ ವಿಕೆಟ್ ಬಿದ್ದಿದ್ದರಿಂದ ಶಿವಾಜಿನಗರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ನಿಂದ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಕಣದಲ್ಲಿದ್ದರೆ, ಬಿಜೆಪಿಯಿಂದ ಎನ್ ಚಂದ್ರ ಸ್ಪರ್ಧೆಯಲ್ಲಿದ್ದಾರೆ.
ಕಾಂಗ್ರೆಸ್ಗೆ ಪ್ಲಸ್, ಬಿಜೆಪಿಗೆ ನಿರಾಸೆ :
ಶಿವಾಜಿನಗರದಲ್ಲಿ ಅಲ್ಪಸಂಖ್ಯಾತರ ಮತಗಳಲು ಅಧಿಕವಾಗಿದ್ದು, ಜೆಡಿಎಸ್ ಸಹ ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇದರಿಂದ ಮುಸ್ಲಿಂ ಮತಗಳು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ಗೆ ಕೈತಪ್ಪುವ ಭೀತಿ ಇತ್ತು. ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಮುಸ್ಲಿಂ ಸಮುದಾಯದವರಾಗಿದ್ದರಿಂದ ಅಲ್ಪಸಂಖ್ಯಾತ ಮತಗಳು ಹರಿದು ಹಂಚಿಹೋಗಲಿದ್ದು, ತಮಗೆ ಪ್ಲಸ್ ಆಗಲಿದೆ ಎಂದು ಬಿಜೆಪಿ ವಿಶ್ವಾಸದಲ್ಲಿತ್ತು. ಆದ್ರೆ, ಇದೀಗ ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ರಿಜೆಕ್ಟ್ ಆಗಿದ್ದರಿಂದು ಕಾಂಗ್ರೆಸ್ ಅಭ್ಯರ್ಥಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇನ್ನು ಬಿಜೆಪಿಗೆ ಕೊಂಚ ನಿರಾಸೆಯಾದಂತಾಗಿದೆ.
ಶಿವಾಜಿನಗರ ಕ್ಷೇತ್ರದಲ್ಲಿ ಒಟ್ಟು 191528 ಮತದಾರರು ಇದ್ದು, ಇದರಲ್ಲಿ ಮಹಿಳೆಯರು 94085, ಪುರುಷರು 97441. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್ 59742 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು 44702 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿದ್ದರು. ಬಳಿಕ ರೋಷನ್ ಬೇಗ್ ರಾಜೀನಾಮೆಯಿಂದ ತೆರವಾಗಿದ್ದರಿಂದ ಶಿವಾಜಿನಗರ ಕ್ಷೇತ್ರಕ್ಕೆ 2019ರಲ್ಲಿ ಉಪ ಚುನಾವಣೆ ನಡೆದಿತ್ತು. ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಜಯ ಗಳಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಎಂ ಸರವಣ 13521 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.