ಜನಮತ 2023 : ವಿಧಾನಸಭೆ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು – ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣೆಯ ಅಧಿಸೂಚನೆಯಂತೆ ಪ್ರಕಟವಾಗಿರುವ ವೇಳಾಪಟ್ಟಿಯಂತೆ ರಾಜ್ಯದ 224 ವಿಧಾಸಭಾ ಕ್ಷೇತ್ರಗಳಲ್ಲಿ ನಾಳೆಯಿಂದ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಬಹುದಾಗಿದೆ. 16ನೇ ವಿಧಾನಸಭೆ ಚುನಾವಣೆಗೆ ಏ.20ರವರೆಗೂ ನಾಮಪತ್ರ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದಾರೆ. ವಿವಿಧ ರಾಜಕೀಯ ಪಕ್ಷಗಳಿಂದ ಘೋಷಣೆಯಾಗಿರುವ ಅಭ್ಯರ್ಥಿಗಳು ಪ್ರಶಸ್ತವಾದ ದಿನಾಂಕ, ಸಮಯದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪೈಪೋಟಿಗಿಳಿದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೂ ಈತನಕ ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿಲ್ಲ. ಬಿಜೆಪಿ 189, ಕಾಂಗ್ರೆಸ್ 166 ಹಾಗೂ ಜೆಡಿಎಸ್ 93 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಮಾತ್ರ ಪ್ರಕಟಿಸಿವೆ. ಈ ಚುನಾವಣೆಯಲ್ಲಿ ಜನಾಶೀರ್ವಾದ ಪಡೆದು ಅಕಾರಕ್ಕೆ ಬರಲೇಬೇಕೆಂದು ಹರಸಾಹಸ ಪಡುತ್ತಿವೆ. ಹೀಗಾಗಿ ಗೆಲ್ಲುವ ಸಾಮರ್ಥ್ಯವುಳ್ಳವರ ಬಗ್ಗೆ ಸಾಕಷ್ಟು ಹುಡುಕಾಟ ನಡೆಸಿ, ಅಳೆದು ತೂಗಿ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಇದನ್ನೂ ಓದಿ : ಮತ-ಮತದಾರ-ಮತದಾನ ಮತ್ತು ಮತದ ಮೌಲ್ಯ

ರಾಜಕೀಯ ಪಕ್ಷಗಳ ಟಿಕೆಟ್ ವಂಚಿತರಲ್ಲಿ ಈಗಾಗಲೇ ಕೆಲವರು ಬಂಡಾಯವೇಳುತ್ತಿದ್ದರೆ, ಮತ್ತೆ ಕೆಲವರು ಪಕ್ಷಾಂತರಗೊಂಡು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿದ್ದಾರೆ. ಘೋಷಣೆಯಾಗದ ಕ್ಷೇತ್ರಗಳಲ್ಲಿನ ಆಕಾಂಕ್ಷಿಗಳು ತಮ್ಮ ತಮ್ಮ ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದನ್ನೇ ಕಾಯುತ್ತಿದ್ದಾರೆ. ಟಿಕೆಟ್‍ಗಾಗಿ ಶಿಫಾರಸು ಮತ್ತು ಒತ್ತಡ ಹೇರುವ ತಂತ್ರವನ್ನು ಅನುಸರಿಸಿದ್ದಾರೆ. ಕೊನೆ ಗಳಿಗೆಯಲ್ಲಿ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕ ಹಲವು ಆಕಾಂಕ್ಷಿಗಳಲ್ಲಿ ಉಂಟಾಗಿದ್ದು, ಕೆಲವರು ಗೊಂದಲದಲ್ಲಿದ್ದಾರೆ.  ಸಾಧ್ಯವಾದಷ್ಟು ಮಟ್ಟಿಗೆ ಬಂಡಾಯವೇಳುವುದು ಮತ್ತು ಪಕ್ಷಾಂತರಗೊಳ್ಳುವುದನ್ನು ಶಮನಗೊಳಿಸುವ ಉದ್ದೇಶದಿಂದ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸುವುದನ್ನು ರಾಜಕೀಯ ಪಕ್ಷಗಳು ವಿಳಂಬ ಮಾಡುತ್ತಿವೆ. ಪಕ್ಷಾಂತರಗೊಂಡವರಲ್ಲಿ ಕೆಲವರಿಗೆ ಮೂರು ಪಕ್ಷಗಳು ಮಣೆ ಹಾಕಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿವೆ. ಇನ್ನೂ ಕೆಲವರಿಗೆ ಟಿಕೆಟ್ ನೀಡುವ ನಿರೀಕ್ಷೆಯಲ್ಲಿವೆ.

ಅಭ್ಯರ್ಥಿಗಳು ಸಲ್ಲಿಸುವ ನಾಮಪತ್ರಗಳ ಪರಿಶೀಲನೆಯು ಏ.21ರಂದು ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏ.24ರ ಗಡುವು ನೀಡಲಾಗಿದೆ. ಮೇ.10ರಂದು ರಾಜ್ಯದ 224 ಕ್ಷೇತ್ರಗಳಲ್ಲೂ ಏಕಕಾಲಕ್ಕೆ ಮತದಾನ ನಡೆಯಲಿದೆ. ಮೇ.13ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

Donate Janashakthi Media

Leave a Reply

Your email address will not be published. Required fields are marked *