ನವದೆಹಲಿ – ಒಂದೆಡೆ ಕರ್ನಾಟಕದಲ್ಲಿ ವಿಧಾನಸಭೆಯ ಕದನ ಕಾವೇರುತ್ತಿರುವ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ಗಾಂಧಿ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯ ಪೂರ್ವ ತಯಾರಿಗಳಲ್ಲಿ ತೊಡಗಿದ್ದಾರೆ. ಸಂಸತ್ನ ಬಜೆಟ್ ಅವೇಶನದ ಬಳಿಕ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿಸಿಕೊಂಡಿದ್ದರು.ಅದಾಗುತ್ತಿದ್ದಂತೆ ಬಿಡುವಿಲ್ಲದ ಸಭೆಗಳನ್ನು ನಡೆಸುವ ಮೂಲಕ ರಾಷ್ಟ್ರಮಟದಲ್ಲಿ ವಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ 8 ಗಂಟೆಗೆ ಸಂಸತ್ ಭವನಕ್ಕೆ ಭೇಟಿ ನೀಡಿದ ಖರ್ಗೆ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಗೌರವ ಸಲ್ಲಿಕೆಯಲ್ಲಿ ಭಾಗವಹಿಸಿದ್ದರು. 9.30ಕ್ಕೆ ತಮ್ಮ ನಿವಾಸದಲ್ಲಿ ಕರ್ನಾಟಕ ವಿಧಾನಸಭೆ ಚುನಾವನೆಯ ಅಭ್ಯರ್ಥಿಗಳ ಮೂರನೇಯ ಪಟ್ಟಿ ಕುರಿತು ಮತ್ತೊಂದು ಸುತ್ತಿನ ಸಭೆ ನಡೆಸಿದರು. ಅಲ್ಲಿಂದ ಹೈದರಾಬಾದ್ಗೆ ಪ್ರಯಾಣ ಬೆಳೆಸಿ ಅಲ್ಲಿ ಕೆಲ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಮುಂದುವರೆದು 250 ಕಿಲೋ ಮೀಟರ್ ದೂರದ ಮಂಚೇರಿಯಲ್ಗೆ ಪ್ರಯಾಣಿಸಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಸಂಜೆ ಕೆಲ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.
ಅಭ್ಯರ್ಥಿಗಳ 3ನೇ ಪಟ್ಟಿ ತಯಾರಿಗೆ ಕುರಿತು ಸಭೆ :
ಕರ್ನಾಟಕ ಕಾಂಗ್ರೆಸ್ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮೂರನೇ ಪಟ್ಟಿಗಾಗಿ ರಾತ್ರಿ ಎರಡುವರೆವರೆಗೂ ರಣದೀಪ್ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೊಪಾಲ್ ಸೇರಿದಂತೆ ಇತರ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಮಧ್ಯರಾತ್ರಿ ಸಭೆ ಮುಗಿಸಿ ಹೊರ ಬಂದ ಖರ್ಗೆ ಮತ್ತು ಇತರ ನಾಯಕ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ಕಚೇರಿಯ ಉಸ್ತುವಾರಿ ನಾಯಕ ಗುರ್ದೀಪ್ಸಿಂಗ್ ಸಪ್ಪಾಲ್, ಬೆಳಗ್ಗೆಯಿಂದಲೂ ನಿರಂತರವಾಗಿ ಸಭೆಗಳು, ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಖರ್ಗೆ ಅವರ ಮುಖದಲ್ಲಿ ಆಯಾಸದ ಒಂದು ಗೆರೆಯೂ ಕಾಣುವುದಿಲ್ಲ ಎಂದು ಅಚ್ಚರಿ ವ್ಯಕ್ತ ಪಡಿಸಿದ್ದರು.
ಅದರ ಹಿಂದಿನ ದಿನ ಮಹಾರಾಷ್ಟ್ರದ ನಾಯಕ ಶರದ್ ಪವಾರ್ ಜೊತೆ ಖರ್ಗೆ, ರಾಹುಲ್ಗಾಂಧಿ, ಕೆ.ಸಿ.ವೇಣುಗೋಪಾಲ್ ಸಭೆ ನಡೆಸಿದ್ದರು. ಏಪ್ರಿಲ್ 12ರಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜೇಸ್ವಿಯಾದವ್ ಸೇರಿದಂತೆ ಜೆಡಿಯು ಹಾಗೂ ಆರ್ಜೆಡಿ ಮುಖಂಡರ ಜೊತೆ ಸಭೆಗಳನ್ನು ನಡೆಸಿದ್ದರು. ಇತ್ತೀಚೆಗೆ ಬಿಜೆಪಿ ಬಲಿಷ್ಠವಾಗಿರುವ ಜೊತೆಗೆ ವಿರೋಧ ಪಕ್ಷಗಳನ್ನು ಮಣಿಸುವ ಯತ್ನ ನಡೆಸುತ್ತಿದೆ. ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸೇರಿದಂತೆ ಒಕ್ಕೂಟ ತನಿಖಾ ಸಂಸ್ಥೆಗಳ ಮೂಲಕ ರಾಜಕೀಯ ವಿರೋಧಿಗಳನ್ನು ಕೇಂದ್ರ ಸರ್ಕಾರ ಬೆದರಿಸುತ್ತಿದೆ ಎಂದು ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡಿದ್ದವು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಒಂದು ವೇದಿಕೆಯಲ್ಲಿ ನಿಂತು ಹೋರಾಟ ನಡೆಸುವ ಚರ್ಚೆಗಳು ನಡೆದಿವೆ. ಸಂಸತ್ ಅವೇಶನದಲ್ಲಿ ಎನ್ಸಿಪಿ, ಟಿಎಂಸಿ, ಎಎಪಿ ಸೇರಿ ಹಲವು ಪಕ್ಷಗಳು ಕಾಂಗ್ರೆಸ್ ಜೊತೆ ಅಭಿಪ್ರಾಯ ಬೇಧ ಹೊಂದಿದ್ದರೂ ಉಭಯ ಸದನಗಳಲ್ಲಿ ಬಿಜೆಪಿ ವಿರುದ್ಧ ಹೋರಾಟದಲ್ಲಿ ಪರಸ್ಪರ ಕೈ ಜೋಡಿಸಿದ್ದವು.
ಇದನ್ನೂ ಓದಿ : ಜನಮತ 2023 : ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಇಂದು ರಾತ್ರಿ ಬಿಡುಗಡೆ ಸಾಧ್ಯತೆ, ಶೆಟ್ಟರ್ಗೆ ಶೇ 99ರಷ್ಟು ಟಿಕೆಟ್ ಖಚಿತ :ಬಿಎಸ್ವೈ
ಅವೇಶನದ ಬಳಿಕವೂ ಆ ಶಕ್ತಿಯನ್ನು ಕ್ರೋಢಿಕರಿಸಲು ಖರ್ಗೆ ಅವರು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಯುವಕರನ್ನು ನಾಚಿಸುವಂತೆ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಪ್ಪಾಲ್ ಮಾಹಿತಿ ಹಂಚಿಕೊಂಡಿದ್ದಾರೆ.